ಜಾನಪದ ಪ್ರೇಮಿಗಳೇ,

ಇದು ಬನಹಟ್ಟಿ; ಬನದ ಮಧ್ಯದಲ್ಲಿ ಹಟ್ಟಿಗಳು ಇದ್ದುದರಿಂದ ಈ ಊರಿಗೆ ಈ ಹೆಸರು ಬಂದಿರಬೇಕು ಎನಿಸುತ್ತದೆ. ಇಂದು ಬನವೂ ಇಲ್ಲ; ಹಟ್ಟಿಗಳೂ ಇಲ್ಲ. ಆದರೂ ಬನಹಟ್ಟಿ ಎನ್ನುವ ಹೆಸರು ಮಾತ್ರ ಸ್ಥಿರವಾಗಿ ನಿಂತಿದೆ. ಕಾಲಾನುಕ್ರಮದಲ್ಲಿ ನಾಗರಿಕತೆಯ ಗಾಳಿ ಹಳೆಯದನ್ನು ಕೊಚ್ಚಿಕೊಂಡು ಹೋಯಿತೋ ಏನೋ. ಇಂದು ಬನಹಟ್ಟಿ ಔದ್ಯೋಗಿಕ ಕೇಂದ್ರವಾಗಿ ಬೆಳೆದು ನಿಂತಿದೆ. ಪಟ್ಟಣವೆನಿಸಿಕೊಂಡು ಮೆರೆಯುತ್ತಲಿದೆ. ಈ ಹೆಮ್ಮೆರದ ತಳಬೇರು ಜನಪದವಾಗಿರುವುದರಿಂದ ಇಲ್ಲಿ ಗ್ರಾಮ್ಯತೆಯ ವಾಸನೆ ಹೋಗಿಲ್ಲ. ಇಂತಹ ಈ ಊರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠವು ನಡೆಯಿಸಿಕೊಂಡು ಬರುತ್ತಿರುವ ಈ ಜಾನಪದ ಸಮ್ಮೇಳನವು ನಾಲ್ಕೈದು ವರ್ಷಗಳ ಹಿಂದೆಯೇ ನಡೆಯಬೇಕಾಗಿತ್ತು. ನೀವು ಕೇಳಿದಾಗ ನಾವು ಸಿದ್ಧ- ಎನ್ನುವ ಸ್ಥಿರ ಆಮಂತ್ರಣವನ್ನು ಬನಹಟ್ಟಿಯ ಮಹಾಜನರು ಕೊಟ್ಟಿದ್ದರು. ಎಲ್ಲದಕ್ಕೂ ಕಾಲಬರಬೇಕು. ಈ ವರ್ಷ ಅದು ಸಾಧ್ಯವಾಗಿದೆ; ಅದಕ್ಕಾಗಿ ನನಗೆ ಸಂತೋಷ. ಕನ್ನಡ ಅಧ್ಯಯನ ಪೀಠದ ಬಲವು ಬನಹಟ್ಟಿಯ ಮಹಾಜನತೆಯ ಬಲದೊಂದಿಗೆ ಬೆರೆತಿರುವುದರಿಂದ ಈ ಜಾನಪದ ಸಮ್ಮೇಳನ ಯಶಸ್ವಿಯಾಗುವುದರಲ್ಲಿ ಯಾವ ಸಂದೇಹವೂ ಇಲ್ಲ.

ಇಂದು ನಡೆಯುತ್ತಲಿರುವುದು ಅಖಿಲ ಕರ್ನಾಟಕ ಒಂಬತ್ತನೆಯ ಜಾನಪದ ಸಾಹಿತ್ಯ ಸಮ್ಮೇಳನ. ಈ ಹಿಂದೆ ನಡೆದು ಹೋದ ಸಮ್ಮೇಳನಗಳ ಅಧ್ಯಕ್ಷರನ್ನು ಆಯ್ಕೆ ಮಾಡಿ, ಬರಮಾಡಿಕೊಂಡು ಸ್ವಾಗತಿಸುವುದು ನನ್ನ ಭಾಗ್ಯವಾಗಿತ್ತು. ಇಂದು ಕ್ರಮದಲ್ಲಿ ವ್ಯತ್ಯಾಸವಾಗಿದೆ, ಅಧ್ಯಯನ ಪೀಠದ ಹೊರಗೆ ಕಾಲಿಟ್ಟ ನನ್ನನ್ನು ಅಧ್ಯಕ್ಷರೆಂದು ಹೆಸರಿಸಿ, ಪುನಃ ಒಳಗೆ ಬರಮಾಡಿಕೊಂಡಿದ್ದೀರಿ. ಇದು ಹಿರಿಯ ತನದ ಅರಿವು; ಕನ್ನಡ ಸಂಸ್ಕೃತಿಯ ಕುರುಹು, ಈ ಪಟ್ಟವನ್ನು ನನಗೆ ಕೊಟ್ಟ ಕನ್ನಡ “ಅಧ್ಯಯನ ಪೀಠದ ಸರ್ವಸದಸ್ಯರಿಗೂ ಬನಹಟ್ಟಿಯ ನಾಗರಿಕರಿಗೂ ನಾನು ತುಂಬಾ ಆಭಾರಿಯಾಗಿದ್ದೇನೆ.

ಈ ಜಾನಪದ ಸಮ್ಮೇಳನಕ್ಕೆ ನನ್ನನ್ನೇಕೆ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದರೋ ನನಗೆ ತಿಳಿಯದು. ನಮ್ಮವರು ಬೆಸಗೊಂಡರೆ ಒಲ್ಲೆನ್ನುವ ಧೈರ್ಯ ನನಗಿಲ್ಲ. ಮೇಲಾಗಿ ಹಿತ್ತಲದ ಗಿಡ ಮದ್ದಲ್ಲ-ಎನ್ನುವ ಗಾದೆಯನ್ನು ಆಹ್ವಾನಿತರ ನೆನಪಿಗೆ ತಂದುಕೊಟ್ಟೆ. “ನಮಗೆ ಮುಖ್ಯವಾಗಿ ಬೇಕಾದುದು ಮದ್ದು. ಅದು ಗುಣಕಾರಿಯಾದರೆ ಸಾಕು; ಅದು ಹಿತ್ತಲದಲ್ಲಿದ್ದರೂ ಅಷ್ಟೆ; ಕತ್ತಲದಲ್ಲಿದ್ದರೂ ಅಷ್ಟೆ – ನಮ್ಮಿಷ್ಟಕ್ಕೆ ಒಲ್ಲೆನ್ನಬಾರದು” – ಎನ್ನುವ ಬಲವಂತಕ್ಕೆ ತಲೆಬಾಗಿ ನಿಂತಿದ್ದೇನೆ. ತಮ್ಮೆಲ್ಲರಿಗೂ ನಮಸ್ಕಾರ!

ಕಳೆದ ಒಂದೆರಡು ದಶಕಗಳಲ್ಲಿ ಜಾನಪದ ಅಧ್ಯಯನ ಅಧ್ಯಾಪನಗಳಿಗೆ ಮಿತಿ ಮೀರಿದ ಪ್ರೋತ್ಸಾಹ ದೊರೆಯತೊಡಗಿದೆ. ಮೊದಮೊದಲು ವ್ಯಕ್ತಿಗತವಾಗಿ ನಡೆಯುತ್ತಿದ್ದ ಜಾನಪದ ಅಭ್ಯಾಸಕ್ಕೆ ಅನೇಕ ಸಂಘ ಸಂಸ್ಥೆಗಳು ತಮ್ಮ ಸಹಾಯ ಹಸ್ತವನ್ನು ಮುಂದೆ ಚಾಚತೊಡಗಿವೆ. ಆದುದರಿಂದ ಎಲ್ಲೆಲ್ಲಿಯೂ ಉತ್ಸಾಹ ಬರತೊಡಗಿದೆ. ಕರ್ನಾಟಕದಲ್ಲಿರುವ ಪಂಚ ವಿಶ್ವವಿದ್ಯಾಲಯಗಳು ಜಾನಪದ ಸಾಹಿತ್ಯ ಸಂವರ್ಧನೆಗೆ ನೆರವು ನೀಡಲು ಸಿದ್ಧವಾದುದು ಶುಭಸೂಚನೆಯೆಂದೇ ಹೇಳಬೇಕು. ಅವು ಮುಂದೆ ಬಂದು, ಜಾನಪದ ಪ್ರಪಂಚವನ್ನೇ ಆಕ್ರಮಿಸಿದವು. ಇದರಿಂದ ಜಾನಪದ ಅಭ್ಯಾಸಕ್ಕೆ ಬಲ ಬರತೊಡಗಿತು. ಸಂಗ್ರಹ ಕಾರ್ಯಕ್ಕೆ ಪ್ರೋತ್ಸಾಹ ಸಿಕ್ಕಿತು. ಸಭೆ ಸಮ್ಮೇಲನಗಳು ನಡೆಯತೊಡಗಿ, ಕಲಾಕಾರರಿಗೂ, ಪಂಡಿತರಿಗೂ ದರ್ಶನ ಪ್ರದರ್ಶನಗಳ ಲಾಭ ಲಭಿಸತೊಡಗಿತು. ತಮ್ಮದನ್ನೇ ತಾವು ಮರೆತಿದ್ದ ಜನತೆಗೆ ತಮ್ಮ ಹಳಮೆಯ ಹಿರಿಮೆಗರಿಮೆಗಳು ಅರಿವು ನೀಡಲಾರಂಭಿಸಿದವು. ನವನಾಗರಿಕತೆಯ ಕೀಸರ ಬೇಸರಕ್ಕೆ ಬೇಸತ್ತಿದ್ದ ಸಾಹಿತಿಗಳು, ಜನಪದ ಸಾಹಿತ್ಯ, ಶಾಸ್ತ್ರ, ಸಂಸ್ಕೃತಿಯತ್ತ ತಮ್ಮ ದೃಷ್ಟಿಯನ್ನು ಹೊರಳಿಸತೊಡಗಿದರು. ಹೀಗಾಗಿ ಜಾನಪದ ಕ್ಷೇತ್ರ ಹುಲುಸಾಗಿ ಬೆಳೆಯಲು ಅನುಕೂಲವಾಯಿತು. ಜಾನಪದ ಚಟುವಿಕೆಗಳು ಚೇತರಿಸಿಕೊಂಡವು. ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಎಚ್. ಎಲ್. ನಾಗೇಗೌಡ ಜಾನಪದ ಟ್ರಸ್ಟ್ ಮುಂತಾದ ಸಂಘ ಸಂಸ್ಥೆಗಳು ಜಾನಪದ ಕಾರ್ಯಕ್ಕಾಗಿ ನೆರವು ನೀಡುತ್ತ ನಡೆದಿವೆ. ಅವುಗಳಿಗೆ ಸರಕಾರವು ಹಣದ ಸಹಾಯ ಮಾಡುತ್ತಲಿದೆ. ಅಲ್ಲದೆ ಕಾರ್ಯ ಬಹಳವಿದ್ದುದರಿಂದ, ಎಷ್ಟು ಸಂಘ ಸಂಸ್ಥೆಗಳು ಹುಟ್ಟಿಕೊಂಡು ಕೆಲಸ ಮಾಡಿದರೂ ಕಡಿಮೆಯೆಂದೇ ಹೇಳಬೇಕು. ಇವುಗಳ ಜೊತೆಗೆ ನಮ್ಮ ಸರಕಾರವು ಧೈರ್ಯದ ಹೆಜ್ಜೆಯನ್ನಿಟ್ಟು ‘ಕರ್ನಾಟಕ ಜಾನಪದ ಪರಿವೀಕ್ಷಣಾ ಸಂಸ್ಥೆ’ ಯೊಂದನ್ನು ಸ್ಥಾಪಿಸುವುದು ಅತ್ಯಾವಶ್ಯಕವಾಗಿದೆ. ಈ ಸಂಸ್ಥೆ ವಿಶ್ವವಿದ್ಯಾಲಯದಿಂದ ಅಭ್ಯಾಸ ಜಾನಪದ ಮಾಡಿ, ಉತ್ತೀರ್ಣರಾದವರ ನೆರವು ಪಡೆದು, ಜಾನಪದ ಕ್ಷೇತ್ರದಲ್ಲಿ ನಡೆಯಬೇಕಾದ ಎಲ್ಲ ಕಾರ್ಯಗಳನ್ನೂ ಮಾಡಿಮುಗಿಸಲು ಸಾಧ್ಯವಿದೆ. ಎಲ್ಲದಕ್ಕೂ ಹಣಬೇಕು; ಮಾಡಿಯೇ ತೀರುವ ಪಣಬೇಕು. ಅಂದಾಗ ಮಾತ್ರ ಜಾನಪದ ಜಗತ್ತು ಗುಣಮುಖವಾಗಬಲ್ಲದು.

ಪ್ರಪಂಚದ ಯಾವುದೇ ಪ್ರದೇಶದ ಜಾನಪದವನ್ನು ಅವಲೋಕಿಸಿದರೂ ಮೊದಲು ಜನಪದ ಸಾಹಿತ್ಯವನ್ನು ಅಭ್ಯಾಸಕ್ಕೆ ಎತ್ತಿಕೊಂಡುದು ಕಂಡುಬರುತ್ತದೆ. ನಂತರ ಜಾನಪದ ಶಾಸ್ತ್ರ ಹಾಗೂ ಸಂಸ್ಕೃತಿಯ ಅಭ್ಯಾಸಕ್ಕೆ ಗಮನಕೊಟ್ಟುದನ್ನು ಕಾಣುತ್ತೆವೆ. ಈ ಮಾತಿಗೆ ಕನ್ನಡ ಜಾನಪದ ಅಧ್ಯಯನ ಹೊರತಾಗಿಲ್ಲ. ಕನ್ನಡ ಜನಪದ ಸಾಹಿತ್ಯದ ಹುರುಳು ತಿರುಳಿಗೆ ಮಾರುಹೋದ ಕನ್ನಡಿಗರು ಅಂತಹ ಸಾಹಿತ್ಯವನ್ನು ಸಂಗ್ರಹಿಸಿ ಪ್ರಕಟಿಸುವ ಕಾರ್ಯಕ್ಕೆ ಕೈಹಾಕಿದರು. ಹಲಸಂಗಿಯ ಮಿತ್ರ ತ್ರಯರು ಪ್ರಕಟಿಸಿದ ಮಲ್ಲಿಗೆ ದಂಡೆ, ಜೀವನ ಸಂಗೀತ-ಸಂಗ್ರಹಗಳು ಜನತೆಯ ಮನಸ್ಸನ್ನು ಸೂರೆಗೊಂಡವು. ಸಂಗ್ರಹಕಾರರಿಗೆ ಅವರೇ ಆದರ್ಶಪ್ರಾಯರಾಗಿ ನಿಂತರೆನ್ನಬಹುದು. ಅನೇಕರು ಜನಪದ ಹಾಡುಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ನಿರತರಾದರು. ಕಾರ್ಯ ಮಾತ್ರ ಕುಂಟುತ್ತ ಸಾವಕಾಶ ನಡೆಯತೊಡಗಿತು. ಇತ್ತಿತ್ತಲಾಗಿ ಸಾಕಷ್ಟು ಸಂಗ್ರಹಗಳು ಹೊರಬಿದ್ದಿವೆ. ಸಂಗ್ರಹಮಾಡಿ ಪ್ರಕಟಿಸುವುದು ನಮ್ಮವರಿಗೆ ಹಗುರು ಕೆಲಸವೆನಿಸಿಬಿಟ್ಟಿದೆ. ಅಲ್ಲಲ್ಲಿ ಹಾಡುವವರನ್ನು ಹಿಡಿದು, ಅವರಿಂದ ಹಾಡುಗಳನ್ನು ಸಂಗ್ರಹಿಸಿ, ನೂರಾರು ಹಾಡು ಕೂಡುವುದೇ ತಡ; ಪ್ರಕಟಿಸಲು ಅಣಿಯಾಗುವವರೇ ಹೆಚ್ಚು. ಸಂಗ್ರಹದೊಡನೆ ಸಂಶೋಧನೆಯೂ ನಡೆಯಬೇಕೆಂಬುದನ್ನು ಅವರು ಮರೆತಂತೆ ಕಾಣುತ್ತದೆ. ಒಂದು ಸಂಗ್ರಹ ಸತ್ಯ ಶುದ್ಧವಾಗಿ ಪ್ರಕಟಗೊಳ್ಳಬೇಕಾದರೆ ಸಂಗ್ರಹಕಾರನು ಸಂಶೋಧನೆಯ ಆಳಕ್ಕಿಳಿದು ಆಯಾ ಹಾಡಿನ ಹಿನ್ನೆಲೆ, ವಸ್ತು, ಉದ್ದೇಶ, ಶೈಲಿ, ಸಾಮಾಜಿಕ ಪರಿಸರ, ಜೀವನ ಮೌಲ್ಯ- ಮುಂತಾದವುಗಳನ್ನು ಗಮನಿಸಬೇಕಾಗುವುದು. ಅಂತಹ ಯಾವ ಅರ್ಹತೆ ಇಲ್ಲದವರೂ ಸಂಗ್ರಹಕಾರರಾದರೆ ಸಾಹಿತ್ಯದ ಗತಿಯೇನು? ನಮ್ಮಲ್ಲಿ ಒಳ್ಳೆಯ ಸಂಗ್ರಹಗಳು ಬಂದಿಲ್ಲವೆಂದಲ್ಲ; ಕೆಲವಾದರೂ ಬಂದಿವೆ. ಉಳಿದುವು ಅಷ್ಟೊಂದು ಕ್ರಮಬದ್ಧವಾಗಿ ಪ್ರಕಟವಾಗಿಲ್ಲ. ಹೀಗೆಂದಾಕ್ಷಣವೇ ಮಾಡಿದ್ದೆಲ್ಲ ವ್ಯರ್ಥವೆಂದು ಯಾರೂ ತಿಳಿಯಬಾರದು ನಡೆವರೆಡಹದೆ ಕುಳಿತರೆಡಹುವರೆ?

ವ್ಯಕ್ತಿಗತ ಸಂಗ್ರಹಕಾರ್ಯ ದುಸ್ತರವಾದುದು. ಅಲ್ಲೊಂದು ಇಲ್ಲೊಂದು ಹಾಡು ಸಂಗ್ರಹಿಸಿಕೊಂಡು ಅವನು ಬರುತ್ತಾನೆ. ಒಂದೇ ಹಳ್ಳಿಯಲ್ಲಿ ಕುಳಿತು, ಹಾಡುಗಾರರೊಡನೆ ಬೆರೆತು, ಅವರ ಮನವೊಲಿಸಿ ಸಂಗ್ರಹ ಮಾಡುವುದಕ್ಕೆ ಸಂಗ್ರಹಕಾರನಿಗೆ ಅನುಕೂಲತೆಗಳಿಲ್ಲ; ಆರ್ಥಿಕ ನೆರವೂ ಇಲ್ಲ. ಆದ್ದರಿಂದ ಕೈಗೆ ಬಂದ ಹಾಡುಗಳನ್ನು ಬರೆದುಕೊಳ್ಳುವುದೊಂದೇ ಅವನ ಕಾರ್ಯವಾಗಿಬಿಟ್ಟಿದೆ. ಕ್ಷೇತ್ರಕಾರ್ಯ ನಿರ್ದಿಷ್ಟವಾಗಿ ನಡೆಯದಿದ್ದರೆ, ಸಾಹಿತ್ಯ ಸಂಗ್ರಹ ಹೇಗೆ ಸತ್ಯ ಶುದ್ಧವಾದೀತು? ವ್ಯಕ್ತಿಗತ ವಿವಿಧ ಸಾಹಿತ್ಯ ಪ್ರಕಾರದ ಸಂಗ್ರಹಗಳು ಬರುತ್ತಿವೆ, ಬರಲಿ. ಒಳ್ಳೆಯದು ಬಂದರೆ ಅದು ಬಹುಕಾಲ ನಿಲ್ಲುತ್ತದೆಂಬುದರಲ್ಲಿ ಸಂದೇಹವಿಲ್ಲ.

ಇದರ ಜೊತೆಗೆ ಸಮಗ್ರ ಸಂಗ್ರಹ ಯೋಜನೆಯೊಂದನ್ನು ಹಾಕಿಕೊಳ್ಳುವುದು ಒಳ್ಳೆಯದು. ಸರಕಾರ ಮನಸ್ಸು ಮಾಡಿ. ಅದನ್ನು ಕೈಕೊಂಡ ಸಂಘ ಸಂಸ್ಥೆಗೆ ದೊಡ್ಡ ಮೊತ್ತದಲ್ಲಿ ಹಣ ನೀಡಿದರೆ ಮಾತ್ರ ಅದು ಸಾಧ್ಯ. ನಿಯೋಜಿತ ಸಂಸ್ಥೆ ಒಂದೊಂದು ಹಳ್ಳಿಯನ್ನೇ ಒಂದು ಘಟಕವೆಂದು ಭಾವಿಸಿ ಅಲ್ಲಿಗೆ ಇಬ್ಬಿಬ್ಬರು ಕ್ಷೇತ್ರ ಕಾರ್ಯಕರ್ತರನ್ನು ಕೆಲಸ ಮುಗಿಯುವವರೆಗೆ ಕಳಿಸಿಕೊಡಬೇಕು. ಕೇವಲ ಹಾಡುಗಳನ್ನು ಸಂಗ್ರಹಿಸುವುದು ಅವರ ಕಾರ್ಯವಾಗಬಾರದು. ಅದರ ಜೊತೆಗೆ ಸಾಹಿತ್ಯದ ಇತರ ಪ್ರಕಾರಗಳನ್ನೂ ಒಂದೂ ಬಿಡದೆ ಸಂಗ್ರಹಿಸಬೇಕು. ಅದರೊಡನೆ ಜಾನಪದ ವಿಜ್ಞಾನಕ್ಕೆ ಸಂಬಂಧಿಸಿದ ಎಲ್ಲ ಅಂಶಗಳನ್ನೂ ನಮೂದಿಸಿಕೊಳ್ಳಬೇಕು. ಒಟ್ಟಾರೆ ಆ ಗ್ರಾಮದ ಸಾಂಸ್ಕೃತಿಕ ಅಧ್ಯಯನ ನಡೆಯಿಸಬೇಕು. ಆ ಊರವರ ಸಂಪ್ರದಾಯ ನಡೆನುಡಿ, ನಂಬಿಕೆ, ಆಚಾರ ವಿಚಾರಗಳ ವಿಷಯದಲ್ಲಿ ಅಭ್ಯಾಸ ಮಾಡಬೇಕು. ಇಷ್ಟಾದರೆ ಒಂದು ಹಳ್ಳಿಯ ಕ್ಷೇತ್ರಕಾರ್ಯ ಮುಗಿಯಬಲ್ಲುದು. ಹೀಗೆ ಒಂದು ತಾಲೂಕಿನಲ್ಲಿರುವ ಎಲ್ಲ ಹಳ್ಳಿಗಳ ಮಾಹಿತಿಯನ್ನು ಸಂಗ್ರಹಿಸಿ, ತಾಲೂಕಿಗಾಗಿ ನಿಯಮಿಸಿದ ಪಂಡಿತ ಮಂಡಳಿಗೆ ಒಪ್ಪಿಸಬೇಕು. ಅವರು ಜಾನಪದ ಪ್ರಪಂಚದ ವಿವಿಧ ವಿಷಯಗಳನ್ನು ಅರಿತವರಾಗಿರಬೇಕೆಂದು ಬೇರೆ ಹೇಳಬೇಕಾಗಿಲ್ಲ. ಅವರೆಲ್ಲ ಕೂಡಿಕೊಂಡು ಬಂದ ವಿಷಯವನ್ನೆಲ್ಲ ಕ್ರೋಢೀಕರಿಸಿ, ಶಾಸ್ತ್ರೋಕ್ತವಾಗಿ ವಿಭಜಿಸಿ, ಒಂದೊಂದು ವಿಷಯವನ್ನು ಕುರಿತು ತೌಲನಿಕ ಅಭ್ಯಾಸ ನಡೆಯಿಸಿ ತೀರ್ಮಾನಿಸಬೇಕು. ಹೀಗೆ ಹಳ್ಳಿಯಿಂದ ತಾಲೂಕಿಗೆ, ತಾಲೂಕಿನಿಂದ ಜಿಲ್ಲೆಗೆ ಒಟ್ಟಾರೆ ಇಡೀ ನಾಡಿಗೆ ಅನ್ವಯಿಸುವಂತೆ ಕಾರ್ಯಮಾಡಿದರೆ ಸಮಗ್ರ ಕಾರ್ಯ ಸಾಧ್ಯವಿದೆ. ತೌಲನಿಕ ಅಭ್ಯಾಸದಿಂದ ಒಂದು ಹಾಡು, ಒಂದು ಗಾದೆ, ಒಂದು ಕಥೆ, ಒಂದು ಒಗಟು ಹಲವಾರು ರೀತಿಯಲ್ಲಿ ಬಂದಿರುವುದನ್ನು ಕಾಣಬಹುದು. ಆಗ ನಮಗೆ ಮೂಲ ರೂಪವನ್ನರಿಯಲು ಅನುಕೂಲವಾಗುತ್ತದೆ. ಪಾಠಾಂತರಗಳೂ ಸಿಗುತ್ತವೆ. ಕ್ಷಣ ಕ್ಷಣಕ್ಕೆ ಬದಲಾಗುವ ಹೂಸರವಳ್ಳಿಯಂತೆ ಬದಲಾಗುತ್ತ ಬಂದ ಸಾಹಿತ್ಯದ ಮೂಲವನ್ನು ಅರಿಯಲು ಸಾಧ್ಯವಾಗುತ್ತದೆ. ಹೀಗೆ ಮಾಡಿದಲ್ಲಿ ಗ್ರಾಮೀಣ ಕವಿ ಹಾಕಿಕೊಂಡ ಮೂಲವನ್ನು ಕಾಣಬಹುದು ಎನಿಸುತ್ತದೆ. ಈ ರೀತಿಯಲ್ಲಿ ಸಂಗ್ರಹಿಸಿದ ಎಲ್ಲ ವಿಷಯಗಳನ್ನು ಕ್ರಮಬದ್ಧವಾಗಿ ಒಂದೊಂದು ಪ್ರಕಾರವಿಡಿದು ಪ್ರಕಟಿಸಿದರೆ ಉತ್ತಮ ಸಾಹಿತ್ಯಸಿಗುವುದು ಸಾಧ್ಯವಿದೆ. ಅಂತಹ ಸಂಗ್ರಹಗಳು ಸರ್ವರಿಂದಲೂ ಗ್ರಾಹ್ಯವಾಗುವುದರಲ್ಲಿ ಸಂದೇಹವಿಲ್ಲ.

ನಮ್ಮ ಸಂಗ್ರಹಕಾರರು ಕೈಗೆ ಸಿಕ್ಕುದನ್ನು ಸಂಗ್ರಹಿಸಿ ಪ್ರಕಟಿಸಿದರೆ ಅದು ಸತ್ಯ ಶುದ್ಧ ಸಾಹಿತ್ಯವೆನಿಸದು. ಇದನ್ನೆಲ್ಲ ನಮ್ಮ ಸಂಗ್ರಹಕಾರರು ಅರಿಯಬೇಕು. ಒಬ್ಬೊಬ್ಬ ಸಂಗ್ರಹಕಾರ ಜಾನಪದದ ಒಂದೊಂದು ಅಂಶಕ್ಕೆ ಮಾತ್ರ ಅಂಟಿಕೊಳ್ಳಬೇಕು. ಲಾವಣಿಯ ಸಂಗ್ರಹಕಾರ ಯಾವಾಗಲೂ ಲಾವಣಿಯ ಸಾಹಿತ್ಯವನ್ನೇ ಗಮನದಲ್ಲಿಟ್ಟುಕೊಳ್ಳಬೇಕು. ಅದರಲ್ಲಿಯೇ ದೀರ್ಘ ವ್ಯವಸಾಯ ನಡೆಯಿಸುವುದು ಎಲ್ಲ ದೃಷ್ಟಿಯಿಂದಲೂ ಒಳ್ಳೆಯದು. ಅಲ್ಲಿರುವ ಪದ ಪ್ರಯೋಗಗಳನ್ನೂ ಅರ್ಥ ವಿಶೇಷಗಳನ್ನೂ ಭಿನ್ನಾರ್ಥ ಪ್ರಯೋಗಗಳನ್ನೂ ತಿಳಿಸುವುದು ಅತ್ಯಗತ್ಯ. ಪ್ರತಿಯೊಂದು ಸಂಗ್ರಹಕ್ಕೆ ಹಾಳತವಾದ, ಶಾಸ್ತ್ರಬದ್ಧವಾದ, ವಿಚಾರ ಪರಿಪ್ಲುತವಾದ ಮುನ್ನುಡಿ ಬರೆದರೆ ಅಭ್ಯಾಸಿಗಳಿಗೆ ಅನುಕೂಲವಾಗುವುದು. ’ಹತ್ತು ಕಟ್ಟುವಲ್ಲಿ ಒಂದು ಮುತ್ತು ಕಟ್ಟು’ ಎನ್ನುವ ಹೇಳಿಕೆ ಗಾದೆಯಾಗಿದೆ. ಹತ್ತು ಸಂಗ್ರಹ ಹೊರ ತರುವುದಕ್ಕಿಂತಲೂ ಒಂದು ಮುತ್ತಿನಂತಹ ಸಂಗ್ರಹ ತಂದರೆ ಸಾಕು. ಹುಲ್ಲಿನ ಬಣವೆ ಒಟ್ಟುವುದಕ್ಕಿಂತ ಚಿನ್ನದ ಗಣಿಯನ್ನು ತೋಡುವುದು ಲೇಸು. ಅಂತಹ ಕಾಲ ಎಂದು ಬರುವುದೋ ನೋಡಬೇಕು; ಬಾರದೆ ಹೋದಲ್ಲಿ ಸರ್ವನಾಶ ಕಟ್ಟಿಟ್ಟದ್ದು, ಕಾಪಸೆ ರೇವಪ್ಪನವರ ಮಲ್ಲಿಗೆ ದಂಡೆಯನ್ನು ಅನುಸರಿಸಿ ಹಲವಾರು ತ್ರಿಪದಿ ಸಂಗ್ರಹಗಳು ಬಂದಿವೆ; ಆದರೆ ಅದನ್ನು ಮೀರಿಸುವ ಸಂಗ್ರಹ ಮತ್ತೊಂದು ಬಂದಿಲ್ಲವೆಂದೇ ಹೇಳಬೇಕು. ಜನಪದ ಸಾಹಿತ್ಯ ಹುಟ್ಟುವುದಕ್ಕಿಂತಲೂ ಸಾಯುವುದೇ ಹೆಚ್ಚೆಂದು ಕಾಣುತ್ತದೆ. ಕೈಬಿಟ್ಟರೆ ಜಾನಪದ ಸರ್ವನಾಶವಾಗುವ ಕಾಲ ಬರಬಹುದು.

ಮನಗೆದ್ದು ಮಾರುಗೆದೆ ಎಂದಿದ್ದಾರೆ. ಹಿರಿಯರು, ನಾವು ನಮ್ಮ ನಾಡಿನ ಜಾನಪದ ವಿಷಯ ಅರಿತುಕೊಳ್ಳುವುದರ ಜೊತೆಗೆ ಹೊರನಾಡುಗಳಲ್ಲಿರುವ ವಿಷಯ ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಅದರಲ್ಲಿಯೂ ನಮ್ಮ ಹಾಡನ್ನು ಸುತ್ತುವರಿದ ತಮಿಳು, ತೆಲುಗು, ಮಲೆಯಾಳಂ ಮತ್ತು ಮರಾಠಿ ಲೋಕಸಾಹಿತಯ್ದ ಪರಿಚಯ ನಮಗೆ ಆಗಬೇಕು. ಒಂದರ ಪ್ರಭಾವ ಇನ್ನೊಂದರ ಮೇಲೆ ಬೀಳುವುದು ಪ್ರಕೃತಿಯ ಗುಣ. ಕೇವಲ ನಮ್ಮದಷ್ಟನ್ನೇ ಓದಿಕೊಂಡು ನಮ್ಮದೇ  ಮೇಲು ಎನ್ನುವ ಕೂಪ ಮಂಡೂಕ ವೃತ್ತಿ ಸಲ್ಲದು. ನಮ್ಮದು ದ್ರಾವಿಡ ಭಾಷೆಗಳಲ್ಲೊಂದು ಭಾಗ. ದ್ರಾವಿಡ ಭಾಷೆಗಳು ನಮ್ಮನ್ನು ಸುತ್ತುಗಟ್ಟಿವೆ. ಮೂಲದ ದ್ರಾವಿಡ ಭಾಷೆ ಕವಲೊಡೆದು ಇತರ ದ್ರಾವಿಡ ಭಾಷೆಗಳು ಹುಟ್ಟಿಕೊಂಡಂತೆ ಕನ್ನಡದಲ್ಲಿರುವ ಕೆಲವು ಜಾನಪದ ಅಂಶಗಳು ಇತರ ದ್ರಾವಿಡ ಭಾಷೆಗಳಲ್ಲಿ ಇರಬಹುದಾಗಿದೆ. ಉಳಿದ ದ್ರಾವಿಡ ಭಾಷೆಗಳಲ್ಲಿರುವ ಸತ್ವಯುತ ಪ್ರಭಾವ ನಮ್ಮ ಮೇಲೂ ಆಗಿರಬಹುದು. ಮೂಲ ದ್ರಾವಿಡರ ಅನಿಸಿಕೆ ಎಲ್ಲ ದ್ರಾವಿಡ ಭಾಷೆಗಳಲ್ಲಿಯೂ ಸಮನಾಗಿ ಹರಿದು ಹಂಚಿ ಹೋಗುವುದು ಸ್ವಾಭಾವಿಕವಾಗಿದೆ. ತೌಲನಿಕ ಅಭ್ಯಾಸಕ್ಕೆ ನೆರವು ದೊರೆತಾಗಲೇ, ಒಟ್ಟಿನಲ್ಲಿ ದ್ರಾವಿಡ ಜನಾಂಗದ ಜಾನಪದ ಐತಿಹ್ಯ, ಸಂಪ್ರದಾಯ, ಪೌರಾಣಿಕ ಪ್ರಜ್ಞೆ, ಸಂಸ್ಕೃತಿ ಮುಂತಾದವನ್ನು ಅರಿಯಲು ಅನುವು ದೊರೆಯುತ್ತದೆ. ಇದೇ ರೀತಿಯಲ್ಲಿ ಆರ್ಯ ಸಂಸ್ಕೃತಿಯ ಮೂಲ ಅಂಶಗಳನ್ನು ಅರಿಯಬೇಕಾದುದು ಅಗತ್ಯವಾಗಿದೆ.

ಈ ಮಾತಿಗೆ ನಿದರ್ಶನವಾಗಿ ಒಂದು ಉದಾಹರಣೆ ಇಲ್ಲಿ ಹೇಳಬಯಸುತ್ತೇನೆ. ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿರುವ ರಂಗಭೂಮಿಗಳ ತುಲನಾತ್ಮಕ ಅಭ್ಯಾಸ ಮಾಡತೊಡಗಿದ ನನಗೆ ಯಕ್ಷಗಾನ ನಮ್ಮಲ್ಲಿರುವುದಕ್ಕಿಂತ ಮೊದಲೇ ಆಂಧ್ರಪ್ರದೇಶದಲ್ಲಿದ್ದುದು ತಿಳಿದುಬಂದಿತು. ಅದು ತೆಲುಗಿನಿಂದ ಬಂದು ಇಡೀ ಕನ್ನಡ ನಾಡಿನಲ್ಲಿ ಪಸರಿಸಿ ವಿಜಯನಗರ ಸಾಮ್ರಾಜ್ಯ ಹಾಳಾದ ಮೇಲೆ ಮಾಂಡಳಿಕ ದೊರೆಗಳ ಆಶ್ರಯ ಪಡೆದು ಕರಾವಳಿ ಪ್ರದೇಶದಲ್ಲಿ ನೆಲೆಗೊಂಡುದು ತಿಳಿದುಬಂದಿದೆ. ಇದನ್ನರಿಯದೆ ಯಕ್ಷಗಾನ ಬಯಲಾಟ ಕರಾವಳಿಯ ಸ್ವತ್ತು, ಅದಕ್ಕೆ ನಾವೇ ಜನ್ಮದಾತರು ಎಂದು ಅಭಿಮಾನದಿಂದ ಹೇಳುವವರ ಕಣ್ಣು ತೆರೆಯಿಸಬೇಕಾಗಿದೆ. ಇದಲ್ಲದೆ ಕನ್ನಡ ಯಕ್ಷಗಾನ ಪ್ರಭಾವದಿಂದಲೇ ಮರಾಠೀ ರಂಗಭೂಮಿ ಹುಟ್ಟಿಕೊಂಡಿತೆಂಬುದು ತಿಳಿದು ಬಂದಿದೆ. ಹೀಗೆಯೇ ರಾಧಾನಾಟ ನಮ್ಮದಾದರೆ, ಶ್ರೀಕೃಷ್ಣ ಪಾರಿಜಾತ ಆಂಧ್ರದ ಕೊಡುಗೆಯೆಂಬುದನ್ನು ಮರೆಯಬಾರದು. ಇಂತಹ ಪರಸ್ಪರ ಕೊಡುಕೊಳ್ಳುವಿಕೆ ಮೊದಲಿನಿಂದಲೂ ನಡೆದುಬಂದಿರುವುದರಿಂದ ಜಾನಪದ ಪ್ರಪಂಚದಲ್ಲಿ ನಡೆದ ಸ್ಥಿತ್ಯಂತರಗಳನ್ನು ತಿಳಿದುಕೊಳ್ಳುವುದು ಸಾಧ್ಯವಿದೆ. ಈ ಬಗೆಯ ತೌಲನಿಕ ಅಭ್ಯಾಸಕ್ಕೆ ಮುಖ್ಯವಾದ ತೊಂದರೆಯೆಂದರೆ ಭಾಷೆಯನ್ನು ಅರಿಯುವ ಪೇಚಾಟ, ದುಭಾಷಿಗಳಾದವರು ಗಡಿನಾಡಿನಲ್ಲಿ ಈಗಲೂ ಇದ್ದಾರೆ. ಅಂಥವರು ಮನಸ್ಸು ಮಾಡಿದರೆ ಇಂತಹ ಅಭ್ಯಾಸಕ್ಕೆ ಅನುಕೂಲವಾಗುವುದು. ಅಲ್ಲದೆ ಕರ್ನಾಟಕದ ಅನೇಕ ವಿಶ್ವವಿದ್ಯಾಲಯಗಳಲ್ಲಿ ನೆರೆಹೊರೆಯ ಭಾಷೆಗಳ ಪ್ರಾಧ್ಯಾಪಕರನ್ನು ನಿಯಮಿಸತೊಡಗಿದ್ದಾರೆ. ಭಾಷಾ ಬಾಂಧವ್ಯಕ್ಕಾಗಿ ಪರಸ್ಪರ ತಿಳುವಳಿಕೆಗಾಗಿ ಈ ಕ್ರಮ ಅಗತ್ಯವಾದುದು. ಇಂತಹ ಪ್ರಾಧ್ಯಾಪಕರು ಜಾನಪದ ದೃಷ್ಟಿಯಿಂದಲೂ ಕಾರ್ಯ ಪ್ರವರ್ತರಾದರೆ ಅನುಕೂಲವಾಗುವುದೆಂದು ಬೇರೆ ಹೇಳಬೇಕಾಗಿಲ್ಲ.

ಪ್ರಾದೇಶಿಕ ಶಬ್ದಗಳು ಹಾಗೂ ಪಾರಿಭಾಷಿಕ ಶಬ್ದಗಳು ಜಾನಪದ ಅಭ್ಯಾಸಿಗಳಿಗೆ ಯಾವಾಗಲೂ ಕಾಲ್ತೊಡಕು ಹಾಕುವುದನ್ನು ಅರಿತಿದ್ದೇವೆ, ಅನುಭವಿಸುತ್ತಲಿದ್ದೇವೆ. ಅದರಲ್ಲಿಯೂ ಜನಪದ ಸಾಹಿತಿಗಳು, ಜಾನಪದ ವಿಜ್ಞಾನಿಗಳು ಈ ತೊಂದರೆಗಳನ್ನು ಪ್ರತಿನಿತ್ಯದಲ್ಲಿಯೂ ಎದುರಿಸುತ್ತಿದ್ದಾರೆ. ಕನ್ನಡಿಗರಿಗೇ ಕನ್ನಡ ಶಬ್ದಗಳ ಅರ್ಥ ಹೊಳೆಯದ ಸ್ಥಿತಿಯಿದೆ. ನಮ್ಮಲ್ಲಿ ಗ್ರಾಂಥಿಕ ಶಬ್ದಾರ್ಥವರಿಯಲು ಶಬ್ದಕೋಶಗಳಿವೆ. ಆದರೆ ಜನಪದ ನುಡಿಗಳ ಅರ್ಥವನ್ನರಿಯಲು ಇನ್ನೂ ಅನುಕೂಲತೆಯಾಗಿಲ್ಲ. ಗ್ರಾಮೀಣರು ಒಂದೊಂದು ವಸ್ತುವಿಗೆ ಅನೇಕ ಶಬ್ದಗಳನ್ನು ಉಪಯೋಗಿಸುವುದನ್ನು ಕಾಣುತ್ತೇವೆ. ಕನ್ನಡದಲ್ಲಂತೂ ಒಂದುತನವೆಂಬುದೇ ಕಡಿಮೆ. ಮೈಸೂರು ಜನಪದ ಭಾಷೆಗಿಂತಲೂ ಉತ್ತರ ಕರ್ನಾಟಕದ ಜನಪದ ಭಾಷೆ ಬಹಳ ಭಿನ್ನವಾಗಿದೆ. ಹೈದರಾಬಾದ ಪ್ರಾಂತದ ಜನಪದ ಭಾಷೆಯಂತೂ ಅವರಪ್ಪನಿಗೂ ತಿಳಿಯದು; ಕರಾವಳಿಯ ಭಾಷೆ ಯಾರಪ್ಪನಿಗೂ ತಿಳಿಯದು. ಹೀಗಿರುವಲ್ಲಿ ಒಂದು ಪ್ರದೇಶದ ಜನಪದ ಸಾಹಿತ್ಯವನ್ನು ಇನ್ನೊಂದು ಪ್ರದೇಶದವರು ತಿಳಿದುಕೊಳ್ಳುವುದು ಕಠಿಣಕಾರ್ಯವಾಗಿಬಿಟ್ಟಿದೆ. ಕರಾವಲಿಯ ಹಾಗೂ ಹೈದರಾಬಾದ ಕರ್ನಾಟಕದ ಜನಪದ ಸಾಹಿತ್ಯ ಸಂಗ್ರಹಗಳನ್ನು ಓದುವ ಇತರ ಭಾಗದವರು ಗಾಬರಿಗೊಳ್ಳುವ ಪ್ರಸಂಗವೇ ಹೆಚ್ಚು. ಆದಿಶೇಷನಿಗೂ ಈ ಪ್ರಾದೇಶಿಕ ಶಬ್ದಾರ್ಥಗಳನ್ನು ಅರಿಯಲು ಅಸಾಧ್ಯವೆಂದು ನನ್ನ ಭಾವನೆ. ಇದನ್ನು ಹೋಗಲಾಡಿಸಲು ನಮ್ಮವರು ಜಾನಪದ ವಿಶ್ವಕೋಶವೊಂದನ್ನು ರಚಿಸಿಕೊಳ್ಳದೆ ಗತ್ಯಂತರವಿಲ್ಲ. ಇಂತಹ ಅಮೂಲ್ಯ ಕಾರ್ಯವನ್ನು ಕೈಗೆತ್ತಿಕೊಂಡು ಮಾಡಿ ಮುಗಿಸದೆ, ಕೇವಲ ಒಂದೆರಡು ಜನಪದ ಹಾಡುಗಳನ್ನು ಸಂಗ್ರಹಿಸಿ ಜನಪದ ಸಾಹಿತಿ ಎನಿಸಿಕೊಳ್ಳುವಲ್ಲಿ ಯಾವ ಪುರುಷಾರ್ಥವಿದೆ?  ಜನಪದ ಸಾಹಿತಿ ಎನಿಸಿಕೊಳ್ಳಲು ಅರ್ಹನಾಗಬೇಕಾದರೆ ಇಂತಹ ಘನಕಾರ್ಯಗಳನ್ನು ಮಾಡಿ ಮುಗಿಸಬೇಕು. ಅಂತಹ ಯೋಗ್ಯತೆಯುಳ್ಳವರು ನಮ್ಮಲ್ಲಿ ಎಷ್ಟು ಜನರಿದ್ದಾರೆ?

ನಮ್ಮ ತುತ್ತನ್ನು ನಮ್ಮ ಕೈಯಿಂದ ಉಂಡ ರೂಢಿಯೇ ನಮಗೆ ಕಡಮೆ. ಅನ್ಯರು ಅಡುಗೆ ಮಾಡಿ ತುತ್ತು ಮಾಡಿ ಉಣಿಸಿದಾಗಲೇ ನಮ್ಮ ಹೊಟ್ಟೆ ತುಂಬ ಬೇಕು. ಆಗ ಹಸಿವೆಯ ಪ್ರಜ್ಞೆ ನಮಗಾಗ ತೊಡಗುವುದು. ಈ ಹೇಳಿಕೆ ನಮ್ಮ ಜಾನಪದ ಅಭ್ಯಾಸಿಗಳ ವಿಷಯದಲ್ಲೂ ಸರಿಹೊಂದುತ್ತದೆ. ಜಾನಪದ ಸಂಗ್ರಹ, ವಿವರಣೆ ನೀಡಲು ನಮಗೆ  ಮೊಟ್ಟಮೊದಲು ಕಲಿಸಿದವರು ಪಾಶ್ಚಾತ್ಯರು. ಅದಲ್ಲದೆ ಜಾನಪದಕ್ಕೆ ಸಂಬಂಧಿಸಿದ ಅನೇಕ ಪಾಂಡಿತ್ಯಪೂರ್ಣ ಕೃತಿಗಳನ್ನು ರಚಿಸಿ ನಮಗೆ ಮಾರ್ಗದರ್ಶನ ಮಾಡಿಸುವವರೂ ಅವರೇ ಆಗಿದ್ದಾರೆ. ಅವರು ಬರೆದ ಜಾನಪದ ವೈಜ್ಞಾನಿಕ ಕೃತಿಗಳನ್ನು ಓದಿ ನಾವು ಮುಂದಿನ ಮಾರ್ಗ ಕಂಡುಕೊಳ್ಳಬೇಕಾಗಿದೆ. ಇಂತಹ ಪ್ರಸಂಗದಲ್ಲಿ ನಮ್ಮ ಜಾನಪದ ವೈಜ್ಞಾನಿಕ ಅಭ್ಯಾಸಿಗಳು ಪಾರಿಭಾಷಿಕ ಖಚಿತ ಶಬ್ದಗಳನ್ನು ಬಳಕೆಯಲ್ಲಿ ತರಬೇಕಾದುದು ಆವಶ್ಯಕವಾಗಿದೆ. ಪಾರಿಭಾಷಿಕ ಶಬ್ದಗಳನ್ನು ಸಾಧ್ಯವಿದ್ದಷ್ಟು ನಿರ್ಮಿಸಿಕೊಳ್ಳಬೇಕು; ಮಿಕ್ಕುವನ್ನು ಅಪಭ್ರಂಶಮಾಡಿಯಾದರೂ ಉಪಯೋಗಿಸಿಕೊಳ್ಳಬೇಕು. ಕ್ರಮೇಣ ಅವೇ ನಮ್ಮ ಪಾರಿಭಾಷಿಕ ಶಬ್ದಗಳಾಗುವುದರಲ್ಲಿ ಆಶ್ಚರ್ಯವಿಲ್ಲ. ಕೆಲವರು Folklore ಶಬ್ದ ಬಳಸಿದರೆ ಮಿಕ್ಕವರು Folklife ಎಂಬ ಶಬ್ದವನ್ನು ಬಳಸಬೇಕೆಂದು ಹೇಳುತ್ತಿದ್ದಾರೆ.

ಯಾವುದನ್ನು ಹಿಡಿಯಬೇಕು; ಯಾವುದನ್ನು ಬಿಡಬೇಕು- ಎನ್ನುವುದೇ ಪಾಶ್ಚಾತ್ಯರಲ್ಲಿ ಗೊಂದಲವನ್ನುಂಟುಮಾಡಿದೆ. ಇನ್ನು ಭಾರತೀಯರ ಗತಿಯೇನು? ನಮ್ಮಲ್ಲಿ ಜನಪದ ಸಾಹಿತ್ಯವೆಂದರೆ ಕೆಲವರು ಲೋಕ ಸಾಹಿತ್ಯವೆಂದರೆ ಕರೆಯತೊಡಗಿದ್ದಾರೆ. ಇಡೀ ಭರತ ಖಂಡಕ್ಕಾದರೂ ಒಂದೇ ಬಗೆಯ ಪಾರಿಭಾಷಿಕಗಳಿರುವುದು ಒಳ್ಳೆಯದು.ಇಲ್ಲದಿದ್ದರೆ ನಮ್ಮಲ್ಲಿಯೇ ಗಲಾಟೆಯುಂಟಾಗದಿರದು. Ministrel ಶಬ್ದಕ್ಕೆ ಕನ್ನಡದಲ್ಲಿ ಯಾವ ಪಾರಿಭಾಷಿಕ ಶಬ್ದವಿಡಬೇಕು – ಎನ್ನುವುದೊಂದು ಸಮಸ್ಯೆ. ವೃತ್ತಿ ಗಾಯಕ, ಕಥೋಪ ಜೀವಿಯೆಂದು ಡಾ. ಜೀ.ಶಂ.ಪ. ಪ್ರಾರಂಭಿಸಿದರು. ಸರಿ ಇರಲಿ, ಇಲ್ಲದಿರಲಿ- ಆ ಶಬ್ದ ಬಳಕೆಗೆ ಬಂದುಬಿಟ್ಟಿದೆ. ಆದ್ದರಿಂದ ನಡೆದುದೇ ಮಾರ್ಗವಾಗುವುದರಲ್ಲಿ ಯಾವ ಸಂದೇಹವಿಲ್ಲ. ಧೈರ್ಯದಿಂದ ಮುನ್ನಡೆಯುವುದು ನಮ್ಮ ಕರ್ತವ್ಯವಾಗಬೇಕು.

ಜಾನಪದರಲ್ಲಿ ಕುತೂಹಲವನ್ನು ಹುಟ್ಟಿಸುವ, ಮನರಂಜನೆ ನೀಡುವ ಭಾಗವೆಂದರೆ ಕಲಾದರ್ಶನ, ಜನಪದ ಕಲೆಗಳು ಎಂದರೆ ಉಳಿಮುಟ್ಟದ ಪ್ರತಿಮೆಗಳಿದ್ದಂತೆ. ಅವುಗಳಲ್ಲಿ ನಯನಾಜೂಕು ಕಡಮೆ ಇದ್ದರೂ ಅಂತಸ್ಸತ್ವ ಹಿರಿದಾಗಿದೆ. ಜೀವಂತ ಜನತೆಯ ಉಸಿರಾಗಿ, ತಾಳಕ್ಕೆ ಮೇಳವಾಗಿ ಸಮೃದ್ಧವಾಗಿ ಬೆಳೆದುಬಂದುದೇ ಜನಪದ ಕಲೆ ಎನಿಸಿಕೊಂಡಿದೆ. ಅನಾದಿಕಾಲದಿಂದಲೂ ಶ್ರೀಸಾಮಾನ್ಯರು ಹಾಡಿಕುಣಿದು, ಕುಣಿದುಹಾಡಿ ಆನಂದ ಪಡೆಯುವುದರ ಜೊತೆಗೆ ಜನಮನವನ್ನು ತಣಿಸಲು ಯತ್ನಿಸುತ್ತ ಬಂದಿದ್ದಾರೆ. ಮನವು ಹಿಗ್ಗಿದಾಗ ಹಾಡಿನ ಬುಗ್ಗೆ ಚಿಮ್ಮಿಬರುತ್ತದೆ. ಆ ತಾಳಬದ್ಧವಾಗಿ ಹಾಡಿಕೊಂಡರೆ ಮನವು ಹಿಗ್ಗಿ ಹೀರಿಯಕಾಯಿಯಾಗುತ್ತದೆ. ಕೇವಲ ಮನರಂಜನೆ ಕಲೆಯ ಗುರಿಯಾಗಿಲ್ಲ, ಹಿಗ್ಗಿನ ಒಡಲಲ್ಲಿ ಜನತಯೆ ಸಂಸ್ಕೃತಿ ಅರಳಿ ಜನಪದ ನಿಲ್ಲುವುದನ್ನು ಮರೆಯಬಾರದು. ನಮ್ಮ ಸಾಂಸ್ಕೃತಿಕ ಪರಂಪರೆಯ ತಿರುಳು ಜನಪದ ಸಾಹಿತ್ಯದಲ್ಲಿ, ಕಲೆಗಳಲ್ಲಿ ಹುದುಗಿರುವುದನ್ನು ಅರಿಯಬೇಕು. ನಮ್ಮ ಪೂರ್ವಜರ ಶ್ರದ್ಧೆ, ರೀತಿ-ನೀತಿ, ಅನುಭವ ಕಲೆಯಲ್ಲಿ ಹಾಸುಹೊಕ್ಕಾಗಿ ನಿಂತಿರುವುದುಂಟು. ಕಲಾಸಂಪತ್ತು ಸಕಲ ಸಂಪತ್ತಿನ ಮೂಲ ಸಂಪತ್ತು. ಇಂತಹ ಅಮೂಲ್ಯ ಸಂಪತ್ತನ್ನು ಹೊಂದದ ಜೀವಿ, ಅನುಭವಿಸುವ ಪ್ರಾಣಿ ಇದ್ದರೂ ಸತ್ತಂತೆಯೇ ಸರಿ. ಇದನ್ನರಿತ ಜನಪದ ಕಲಾಪ್ರೇಮಿಗಳು ಆಗಾಗ, ಅಲ್ಲಲ್ಲಿ ರಂಗಪ್ರದರ್ಶನಗಳನ್ನು ಏರ್ಪಡಿಸಿ ತೃಪ್ತರಾಗುತ್ತಿದ್ದಾರೆ.

ರಂಗದರ್ಶನಗಳಷ್ಟೇ ಮಹತ್ವಪೂರ್ಣವಾದುವು ವಿಚಾರ ಸಂಕೀರ್ಣಗಳು. ಕಲೆ ಹೃದಯಕ್ಕೆ ಸಂಬಂಧಿಸಿದ್ದರೆ ವಿಚಾರವೇದಿಕೆ ಬುದ್ಧಿಗೆ ಸಂಬಂಧಿಸಿದೆ. ಮಾತು ಮಾತು ಮಸೆದರೆ ಅರಿವಿನ ಸಾಕ್ಷಾತ್ಕಾರವೂ ಸಾಧ್ಯ; ವ್ಯಾಜ್ಯದ ವಿಪತ್ಕಾರವೂ ಸಾಧ್ಯ. ನಮಗೆ ಮುಖ್ಯವಾಗಿ ಬೇಕಾದುದು ಅರಿವಿನ ಆರಾಧನೆ. ಆದ್ದರಿಂದ ವ್ಯಾಜ್ಯ ತ್ಯಾಜ್ಯವಾಗಿರುವುದೇ ಶ್ರೇಯಸ್ಕರ. ನಾವಿಂದು ನಡೆಸುತ್ತಿರುವ ವಿಚಾರ-ಸಂಕಿರಣಗಳು ವಿಷಯ ಜ್ಞಾನ ಮಾಡಿಕೊಡುವ ಕೈಂಕರ್ಯ ಪಡೆದುಕೊಂಡಿವೆ. ಜಾನಪದ ಸಂಪತ್ತು ಮರೆತರೂ ಮರೆಯಾಗದ ಸಂಪತ್ತು. ನಮ್ಮ ಜನ ಒಂದು ಕಾಲಕ್ಕೆ ಅದನ್ನೆಲ್ಲ ಅರಿತಿದ್ದರು. ಅದನ್ನಿಗ ಮರೆಯುತ್ತಲಿದ್ದಾರೆ. ಮರೆತುದನ್ನು ಅರಿವಿಗೆ ತಂದುಕೊಳ್ಳುವುದೇ ಸಂಶೋಧನೆ. ಇಂದಿನ ನಮ್ಮ ವಿಚಾರ ಸಂಕಿರಣಗಳಲ್ಲಿ ಸಂಶೋಧನೆಯ ಸತ್ವವನ್ನು ಕಂಡರಿಯುವ ಪ್ರಮಾಣಿಕತೆ ಬೇಕು. ಆದ್ದರಿಂದ ನಡೆಯಲಿರುವ ವಿಚಾರ ಸಂಕಿರಣಗಳು ಸತ್ಯ ಶುದ್ಧ ತತ್ವಗಳನ್ನು ಒಳಗೊಂಡಿರುವುದು ಸರ್ವರಿಗೂ ಹಿತಕರ. ರಂಗ ದರ್ಶನದಲ್ಲಿ ಹೃದಯ ಅರಳಿದರೆ ವಿಚಾರ ಸಂಕಿರಣದಲ್ಲಿ ಬುದ್ಧಿ ಮಸೆದ ಚೂರಿಯಾಗುತ್ತದೆ ಮಾನವನ ಅಭಿವೃದ್ಧಿಗೆ ಇವೆರಡೂ ಬೇಕು.

ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠವು ಕಳೆದ ಎಂಟು ವರ್ಷಗಳಿಂದ ಅಖಿಲ ಕರ್ನಾಟಕ ಜಾನಪದ ಸಮ್ಮೇಳನಗಳನ್ನು ಹಮ್ಮಿಕೊಂಡು ರಂಗ ಪ್ರದರ್ಶನಗಳನ್ನೂ ವಿಚಾರ ಸಂಕಿರಣಗಳನ್ನೂ ಏರ್ಪಡಿಸುತ್ತ ಬಂದುದು ಸ್ತುತ್ಯವಾಗಿದೆ. ರಾತ್ರಿಯಲ್ಲಿ ರಂಗದರ್ಶನ ಪ್ರದರ್ಶನಗೊಂಡರೆ ಹಗಲಿನಲ್ಲಿ ವಿಚಾರ ಸಂಕಿರಣಗಳು ನಡೆಯುತ್ತ ಬಂದಿವೆ. ಕಲಾದರ್ಶನಕ್ಕೆ ಜನ ಕ್ಕಿಕ್ಕಿರಿದು ತುಂಬುವರು. ವಿಚಾರ ಸಂಕಿರಣಕ್ಕೆ ವಿರಳವಾಗಿ ಬರುವರು. ಇದೆಲ್ಲ ನಮ್ಮ ಅನುಭವಕ್ಕೆ ವೇದ್ಯ ವಾದ ಸಂಗತಿ. ರಂಗದರ್ಶನದಲ್ಲಿ ನಾಡಿನ ನಾನಾಭಾಗದ ಕಲಾವಿದರ ಪಾಲುಗೊಳ್ಳುವರು. ಹಾಡು, ಕುಣಿತ, ಬಯಲಾಟ, ವಾದ್ಯಮೇಳ ಹೀಗೆ ಹಲವಾರು ಕಲೆಗಳ ಸಂಗಮವಾಗಿ ಕಲಾ ಪ್ರದರ್ಶನ ಮೂರು ತಾಸಿನ ಮೋಜಿನ ಜಾತ್ರೆಯಾಗಿ ಪರಿಣಮಿಸುವುದು. ಇದರಲ್ಲಿ ಪಾಲುಗೊಳ್ಳುವ ಕಲಾಕಾರರನ್ನು ಕುರಿತು ಒಂದು ಮಾತು ಹೇಳುವುದು ವಿಹಿತ. ಜನಪದ ಕಲೆಗಳು ನಾವು ತಿಲಿದಷ್ಟು ಅಪಾರವಾಗಿಲ್ಲ ಉಳಿದುಕೊಂಡಂಥವು ಸಹ ಅಷ್ಟಕಷ್ಟೆ. ಯಾವ ಸಮ್ಮೇಳನಕ್ಕೆ ಹೋದರೂ ಅವೆ ಕಲೆಗಳನ್ನೇ ಕಾಣುತ್ತೇವೆ. ಅದೇ ಕಲಾಕಾರರನ್ನೇ ಭೇಟಿಯಾಗುತ್ತೇವೆ. ಕೆಲವು ಕಲಾವಿದರು ಸಮ್ಮೇಳನದಲ್ಲಿ ಭಾಗವಹಿಸುವುದಕ್ಕಾಗಿಯೇ ಹುಟ್ಟಿಬಂದಂತೆ ವರ್ತಿಸುವುದನ್ನು ಕಂಡು ಬೇಸರವಾಗುತ್ತಿದೆ. ಕಲಾಪ್ರದರ್ಶನವನ್ನು ಅವರೊಂದು ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಅವರ ದೃಷ್ಟಿಯಲ್ಲಿ ಕಲೆ ಬೆಲೆಯಿಲ್ಲ; ಬರುವ ಹಣಕ್ಕೆ ಬೆಲೆಯುಂಟಾಗಿದೆ. ಈ ಪ್ರವೃತ್ತಿ ನಮ್ಮ ಜನಪದ ಕಲಾವಿದರಿಂದ ತೊಲಗಬೇಕು. ಕಲೆಗೆ ಬೆಲೆಯಿಲ್ಲವೆಂಬುದನ್ನು ಅವರು ಅರಿಯಬೇಕು, ಅಂದಾಗಲೇ ಕಲೋದ್ಧಾರ ಸಾಧ್ಯ.

ವಿಚಾರ ಸಂಕಿರಣಗಳು ಜಾನಪದ ಅಧ್ಯಯನ ದೃಷ್ಟಿಯಿಂದ ಬಹು ಮುಖ್ಯ ಪಾತ್ರವಹಿಸಿವೆ. ಪ್ರತಿಯೊಂದರಲ್ಲಿ ನಾಲ್ಕೋ ಐದೋ ಜನ ಪಂಡಿತರು ಭಾಗವಹಿಸುವರು. ಕನಿಷ್ಠಪಕ್ಷ ಮೂರು ವಿಚಾರ ಸಂಕಿರಣಗಳು ಪ್ರತಿಯೊಂದು ಸಮ್ಮೇಳನದಲ್ಲಿ ನಡೆಯುವುದು ಸಂಪ್ರದಾಯವಾಗಿದೆ. ಒಂದು ಮಹತ್ತರ ಜಾನಪದ ವಿಷಯವನ್ನು ಆಯ್ದುಕೊಂಡು, ಅದರ ಅಂಗಾಂಗಗಳನ್ನು ಕುರಿತು ವಿವೇಚನೆ ಮಾಡಲಾಗುವುದು. ವಿಷಯ ವಿವೇಚನೆ ಯಾವಾಗಲೂ ಸತ್ಯಶುದ್ಧವಾಗಿ ನಡೆಯುವುದೆಂದು ಹೇಳಲಾಗದು. ಕೆಲವರಿಗೆ ಸಮಯದ ಅಭಾವ; ಹಲವರಿಗೆ ವಿಷಯದ ಅಭಾವ. ಮಿಕ್ಕವರಿಗೆ ಅಭಾವದ ಅಭಾವ. ಕೆಲವರು ಮಾತ್ರ ಕೊಟ್ಟ ವಿಷಯವನ್ನು ಸರಿಯಾಗಿ ಪರಿಶೀಲಿಸಿ, ಯೋಗ್ಯ ಸಂಶೋಧನೆ ನಡೆಯಿಸಿ ಪ್ರಬಂಧವನ್ನು ಬರೆದುಕೊಂಡು ಬಂದು ಓದುತ್ತಾರೆ. ಅಂಥವರು ಹೆಚ್ಚಾಗಬೇಕು. ಈ ಪ್ರಬಂಧಗಳನ್ನೆಲ್ಲ ಕ್ರೋಢೀಕರಿಸಿ ಕನ್ನಡ ಅಧ್ಯಯನ ಪೀಠವು ’ಜಾನಪದ ಸಾಹಿತ್ಯ ದರ್ಶನ’ ಮಾಲಿಕೆಯಲ್ಲಿ ಪ್ರಕಾಶಪಡಿಸುತ್ತ ಬಂದಿದೆ. ನಿಜವಾಗಿ ಇದೊಂದು ಸ್ತುತ್ಯಕಾರ್ಯ. ಇದನ್ನು ಇಷ್ಟು ಅಚ್ಚುಕಟ್ಟಾಗಿ ಯಾರೂ ಮಾಡಿಲ್ಲವೆಂದೇ ಹೇಳಬೇಕು. ಕರ್ನಾಟಕ ವಿಶ್ವವಿದ್ಯಾಲಯ ಹಾಕಿಕೊಟ್ಟಿರುವ ಈ ಮಾರ್ಗವನ್ನು ಇತರರೂ ಅನುಸರಿಸಿದರೆ ಜಾನಪದ ಅಧ್ಯಯನಕ್ಕೆ ಅನುಕೂಲವಾಗುವುದರಲ್ಲಿ ಸಂದೇಹವಿಲ್ಲ. ರಂಗದರ್ಶನದಲ್ಲಿ ಭಾಗವಹಿಸುವ ಕಲಾವಿದರ ಪರಿಚಯ ಹಾಗೂ ಕಲೆಗಳ ವಿವರಣೆಗಳನ್ನೊಳಗೊಂಡ ಒಂದು ಕೃತಿ ಹೊರಬರುವುದು ಅಗತ್ಯವಾಗಿದೆ. ಕೇಳಿದ್ದು ಕಂಡದ್ದು ಭಾವೀ ಪೀಳಿಗೆಗೆ ಉಳಿದು ಬರುವಂತೆ ಏರ್ಪಾಡು ಮಾಡುವುದು ಅವಶ್ಯವಾಗಿದೆ. ’ಸಾಹಿತ್ಯ ದರ್ಶನ’ ದೊಡನೆ ’ಕಲಾಪ್ರದರ್ಶನ’- ಎನ್ನುವ ಕೃತಿಯನ್ನು ಬೆಳಕಿಗೆ ತರುವುದು ಅವಶ್ಯಕ. ಹಾಡುಗಾರರ ಧ್ವನಿ ಮುದ್ರಣ ನಡೆಯಬೇಕಾದುದು ಮೊದಲ ಕರ್ತವ್ಯ. ಅವುಗಳ ಧಾಟಿ, ತಾಳ, ರಭಸ ಮುಂದಿನ ಪೀಳಿಗೆಗೆ ಉಳಿಯುವಂತೆ ಧ್ವನಿ ಮುದ್ರಿಸಿ ಇಡಬೇಕಾದುದು ಅಗತ್ಯವಾಗಿದೆ. ಎರಡನೆಯದಾಗಿ ಕುಣಿತಮಣಿತಗಳ, ಹಾವಭಾವಗಳ ಗತಿಯನ್ನು ಉಳಿಸಿಕೊಳ್ಳಲು ಚಿತ್ರೀಕರಣ ನಡೆಯುವುದು ವಿಹಿತ. ಒಂದೆರಡು ಸಲ ಇಂತಹ ಪ್ರಯತ್ನಗಳನ್ನು ಮಾಡಿದ್ದೂ ಆಯಿತು. ಆದದ್ದೆಲ್ಲ ಹಳೆಯಲ್ಲಿ ಹುಣಸೆಯ ಹಣ್ಣು ತೊಳೆದಂತಾಯಿತು. ಅದಕ್ಕೆ ಮೂಲಕಾರಣ ಹಣದ ಕೊರತೆ, ವಿಶ್ವವಿದ್ಯಾಲಯದ ಅಧಿಕಾರಿಗಳು ಈ ಕಡೆಗೆ ಗಮನಹರಿಸಬೇಕು.

ವಿಚಾರ ಸಂಕಿರಣಗಳಿಗೆ ಪ್ರತಿವರ್ಷ ಆಯ್ದುಕೊಳ್ಳುವ ವಿಷಯ ನೇರವಾಗಿ ಜಾನಪದಕ್ಕೆ ಸಂಬಂಧಪಟ್ಟುದಾಗಿರಬೇಕು. ಈ ಮಾತನ್ನೇನೋ ಸಮ್ಮೇಳನದ ಕಾರ್ಯಕರ್ತರು ಅರಿತು ಆಚರಿಸುತ್ತ ಬಂದಿದ್ದಾರೆ. ಪ್ರತಿ ಸಮ್ಮೇಳನಕ್ಕೆ ಹೊಸ ವಿಷಯವನ್ನೇ ಆಯ್ದುಕೊಳ್ಳುವ ನಡೆದಿದೆ. ಹೋದ ವರ್ಷ ಸಮ್ಮೇಳನದಲ್ಲಿ ಸ್ತ್ರೀ ದೇವತೆಗಳನ್ನು ಕುರಿತು ವಿಚಾರ, ಪ್ರಚಾರ ನಡೆಯಿತು. ಇಂದಿನ ಸಮ್ಮೇಳನದಲ್ಲಿ ಪುರುಷ ದೇವತೆಗಳನ್ನು ಕುರಿತು ಪಂಡಿತರು ವಿವೇಚಿಸಲಿದ್ದಾರೆ.

ಮೂಲ ಮಾನವನ ತಲೆಯಲ್ಲಿ ದೇವರ ಕಲ್ಪನೆ ಬಂದುದೇ ಒಂದು ದೊಡ್ಡ ಸಂಶೋಧನೆ. ಒಬ್ಬನೆ ಅನಿಸಿಕೆ ಇನ್ನೊಬ್ಬನ ಅನಿಸಿಕೆ ಆಗಬೇಕೆಂಬ ನಿಯಮವಿಲ್ಲ. ಆದರೆ ಎರಡೂ ಅನಿಸಿಕೆ ಒಂದೇ ಆದರೆ ಅದೊಂದು ಸಾರ್ವತ್ರಿಕ ಗುಣವುಳ್ಳ ಅನಿಸಿಕೆ ಎನಿಸುವುದು ಅನಿವಾರ್ಯ. ಅನಿಸಿಕೆ ಗಟ್ಟಿಗೊಂಡಾಗಲೇ ಅದಕ್ಕೊಂದು ನಿಶ್ಚಿತ  ಸ್ವರೂಪ ಬರುತ್ತದೆ. ಆಕಾಶಲೋಕದ ಅದ್ಭುತಗಳೆನಿಸಿದ ಸೂರ್ಯ, ಚಂದ್ರ ನಕ್ಷತ್ರಾದಿಗಳು ಆದಿಯಿಂದಲೂ ಮಾನವನ ಕುತೂಹಲವನ್ನು ಕೆರಳಿಸುತ್ತ ಬಂದಿವ್ಯ ಮಾನವನು ಇನ್ನೂ ಚಿಂತನೆಯ ಶೈಶವಾವಸ್ಥೆಯಲ್ಲಿದ್ದಾಗ ಆ ಆಕಾಶಲೋಕದ ಅದ್ಭುತಗಳು ಆಶ್ಚರ್ಯ ಹುಟ್ಟಿಸುವುದರ ಜೊತೆಗೆ ಭೀತಿಯನ್ನೂ ಬಿತ್ತಿರಬೇಕು. ಆದಿಮಾನವನ ತಲೆಯಲ್ಲ, ಅಂದೇ ಆ ಭೀತಿ ಭೂತವಾಗಿ ಪರಿಣಮಿಸಿತು. ಪ್ರಕೃತಿಯ ಆಗುಹೋಗುಗಳು ಯಾವುದೋ ಒಂದು ಸರ್ವಚೇತನದ ಅಡಿಯಾಳಾಗಿ ವರ್ತಿಸುವುದೆಂದು ಅವನಿಗೆ ಅನಿಸತೊಡಗಿತು. ಆಗ ಮಾನವರು ಪ್ರಕೃತಿಯ ಸರ್ವವಸ್ತು – ವೈಚಿತ್ರ‍್ಯಗಳಿಗೂ ರೂಪಾರೋಪಣೆ ಮಾಡಿ ಆರಾಧಿಸಲು ಪ್ರಾರಂಭಿಸಿದ. ಪ್ರತಿ ಆರಾಧಿಸಲು ಪ್ರಾರಂಭಿಸಿದ. ಪ್ರತಿಯೊಂದು ಅದ್ಭುತಕ್ಕೂ ಪುರಾಣ ಕಥೆ ಹೇಳತೊಡಗಿದ. ಹುಟ್ಟಿದ ಸೂರ್ಯ ಸಾಯುತ್ತಾನೆಯೇ? ನಿಜವಾಗಿ ಸತ್ತರೆ ಹುಟ್ಟುವುದು ಹೇಗೆ? ಇಂತಹ ಪ್ರಶ್ನೆಗಳು ಕೆಲಕಾಲ ಆದಿಮಾನವನ ತಲೆಯನ್ನೇ ತಿಂದಿರಬೇಕು. ಅದಕ್ಕಾಗಿ ಒಂದು ಕಥೆ ಹೆಣೆದು ಆತ ಸಮಾಧಾನ ತಂದುಕೊಂಡಿರಲು ಸಾಧ್ಯವಿದೆ. ಹೀಗೆ ಅದ್ಭುತರಮ್ಯ ಕಥೆಗಳು ಬೆಲೆಯುತ್ತ ಬಂದು ಪುರಾಣ ದೃಷ್ಟಿಗೆ ಆದಿಯಾಯಿತು. ಹೀಗೆ ದೇವತಾ ಕಲ್ಪನೆಯನ್ನು ಮೂಡಿಸಿದ ರಹಸ್ಯವನ್ನು ಸಾಮಾನ್ಯವಾಗಿ ನಾವು ಪುರಾಣಗಳಲ್ಲಿ ಅರಿಯುತ್ತೇವೆ. ಆಕಾಶವೇ ಪತಿ, ಭೂಮಿಯೇ ಸತಿ ಎನ್ನುವ ಭಾವ ಮೂಡಿದ್ದು ಸಹ ಜಾನಪದರ ಪುರಾಣದಲ್ಲಿಯೇ. ಅದಕ್ಕೂ ಒಂದು ಕಥೆ ನಿರ್ಮಾಣವಾಗಿದೆ. ಹೀಗೆ ಉದ್ಭೂತವಾಗಿರುವ ಅದ್ಭುತ ಕಥೆಗಳ ಹಿನ್ನೆಲೆಯಲ್ಲಿ ನಾವು ಆದಿಮಾನವನಲ್ಲಿ ದೈವೀಶಕ್ತಿ ರೂಹುಗೊಂಡುದನ್ನು  ಕಾಣುತ್ತೇವೆ. ತನ್ನ ಪ್ರಕೃತಿಯಂತೆಯೇ ಪರ ಪ್ರಕೃತಿಯೆಂದು ಭಾವಿಸಿದಾಗಲೇ ಗಂಡು ಹೆಣ್ಣಿನ ದೇವತಾ ಕಲ್ಪನೆ ಅವನಿಗಾಗಿರಲು ಸಾಕು. ಆದ್ದರಿಂದಲೇ ತನಗೂ ಹೆಂಡರು ಮಕ್ಕಳು ಇರುವಂತೆ ದೇವನಿಗೂ ಇದ್ದಾರೆಂದು ಭಾವಿಸಿ ತಾನು ನಿರ್ಮಿಸಿಕೊಂಡ ಪುರಾಣವನ್ನೇ ಹಿಗ್ಗಿಸುತ್ತ ಬಂದಿದ್ದಾನೆ. ಅಂದಿನಿಂದ ದೇವರಲ್ಲಿ ಗಂಡು ದೇವರು, ಹೆಣ್ಣು ದೇವರು, ಅವನ ಸಂಸಾರ, ಮಕ್ಕಳು ಮರಿ ಕುರಿತು ವಿಚಾರಿಸುತ್ತ, ಮಹಾ ಶಕ್ತಿಯ ಅದ್ಭುತ ಕಲ್ಪನೆಗೆ ಮಾನವ ಮಾರುಹೋಗಿದ್ದಾನೆ. ಇಂತಹ ಗ್ರಾಮೀಣ ಪುರಾಣಗಳನ್ನು ಆಧರಿಸಿ ಹಿಂದುಗಡೆಯಲ್ಲಿ ಶಿಷ್ಟಪುರಾಣಗಳು ಮೂಡಿಬಂದಿವೆ. ಆದ್ದರಿಂದ ನಮ್ಮ ಪಂಡಿತರು ಜಾನಪದ ಪುರಾಣಗಳನ್ನು ಆಧರಿಸಿ ವಿಚಾರ ವಿವೇಚನೆಗೆ ಕೈಹಾಕುವುದು ಸರಿಯೆನಿಸುತ್ತದೆ. ಇದು ಶ್ರಮದ ಕೆಲಸ. ದ್ರಾವಿಡ ಪುರಾಣಗಳು ಆರ್ಯ ಪುರಾಣಗಳಿಗಿಂತ ಹೇಗೆ ಭಿನ್ನವೆಂಬುದನ್ನು ನಿರ್ಧರಿಸದೆ, ಜನಪದ ಪುರಾಣಗಳ ಸತ್ವವನ್ನರಿಯದೆ, ಸ್ತ್ರೀದೇವತೆಗಲು, ಪುರುಷ ದೇವತೆಗಳು ಎಂದು ವಿವೇಚಿಸುವುದು ದುಸ್ತರವಾದುದೇ ಸರಿ.

ಸಾಮಾನ್ಯವಾಗಿ ಗ್ರಾಮೀನ ಪ್ರದೇಶದಲ್ಲಿ ಸ್ತ್ರೀದೇವತೆಗಳು ಗ್ರಾಮದೇವತೆಗಳಾಗಿ, ಪುರುಷದೇವತೆಗಳು ಕುಲದೇವತೆಗಳಾಗಿ ಪೂಜೆಗೊಳ್ಳುವುದನ್ನು ಕಾಣುತ್ತೇವೆ. ಗ್ರಾಮದೇವತೆಯ ಆರಾಧನೆ ನಿತ್ಯದಲ್ಲಿ ನಡೆಯುತ್ತದೆ; ಕುಲದೇವತೆಯ ಆರಾಧನೆ ವಿಶಿಷ್ಟ ಪ್ರಸಂಗಗಳಲ್ಲಿ ಮಾತ್ರ ನಡೆಯುತ್ತದೆ. ಹೀಗೇಕೆ ಆಗಿರಬೇಕು? ಪುರುಷನಿಗಿಂತಲೂ ಪ್ರಕೃತಿಯೇ ಮೇಲೆಂದು ಗ್ರಾಮೀಣರು ಏಕೆ ಭಾವಿಸಿದರು? ಇಂತಹ ಪ್ರಶ್ನೆಗಳಿಗೆ ಅವರಲ್ಲಿ ಉತ್ತರಗಳು ಇದ್ದೇ ಇವೆ. ಕೂಸು ಹಸಿದಾಗ ತಾಯಿಯನ್ನು ಬೇಡಿ ಪಡೆಯುತ್ತದೆ. ತಾಯಿಯ ಕರುಳು ತಂದೆಗಿಲ್ಲ; ಏನಾದರೂ ಬೇಡಿದರೆ ತಂದೆಯಾದವನು ಸಹಜವಾಗಿ ಕೊಡುವುದಿಲ್ಲ. ಆದ್ದರಿಂದ ಕೂಸು ನಂಬಿ ಕರೆದಾಗ ಓಗೊಡುವವಳು ತಾಯಿಯೇ ಹೊರತು ತಂದೆಯಲ್ಲ ಎನ್ನುವುದನ್ನು ಮಾವನ ಅರಿತಿದ್ದಾನೆ. ಅದಕ್ಕಾಗಿಯೇ ಅವನು ಸ್ತ್ರೀದೇವತೆಗಳ ಕಡೆಗೆ ಒಲೆದಿರಬೇಕು ಎನಿಸದೆ ಇರದು.

ಜಾನಪದ ಪುರಾಣಪ್ರಜ್ಞೆ ಇಲ್ಲದೆ ಗ್ರಾಮ್ಯದೇವತೆಗಳ ಬಗೆಗೆ ಮಾತಾಡುವುದು. ವಿವೇಚಿಸುವುದು ಸರಿಯೆನಿಸದು. ಇದನ್ನೆಲ್ಲ ಮನದಂದು. ವಿಚಾರ ಸಂಕಿರಣಗಳಲ್ಲಿ ಭಾಗವಹಿಸುವ ನಮ್ಮ ಮಿತ್ರರು ಕಿರಣದಂತಹ ವಿಚಾರಗಳನ್ನು ಮಂಡಿಸುವರೆಂದು ಭಾವಿಸಿದ್ದೇನೆ. ಜಾನದಪ ಲೋಕದಲ್ಲಿ ಮಾಡಬೇಕಾದುದು ಅಪಾರವಾಗಿದೆ; ಮಾಡುವವರು ಹೆಚ್ಚಾಗಿ ಬೇಕಾಗಿದ್ದಾರೆ – ಎಂದು ನಮ್ರವಾಗಿ ಹೇಳಿ ಜನಪದಕ್ಕೆ ಕೈಜೋಡಿಸುತ್ತೇನೆ ನಮಸ್ಕಾರ.

* * *