ಇತ್ತೀಚಿನ ದಿನಗಳಲ್ಲಿ ಜಾನಪದ ಸಾಹಿತ್ಯದ ಅಧ್ಯಯನ ವಿಸ್ತಾರವಾಗಿಯೇ ನಡೆಯುತ್ತಿದೆ; ಸಶಾಸ್ತ್ರೀಯವಾಗಿಯೂ ಬೆಳೆದುಬರುತ್ತಿದೆ. ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳೂ ಈ ಕಾರ್ಯದಲ್ಲಿ ನಿರತವಾಗಿವೆ. ಶ್ರೀಸಾಮಾನ್ಯರಲ್ಲಿಯೂ ಈ ಬಗೆಗೆ ಆಸಕ್ತಿ ಮೂಡಿಬರುತ್ತಿದೆ. ರಾಜ್ಯಮಟ್ಟದ, ರಾಷ್ಟ್ರಮಟ್ಟದ ಉತ್ಸವಗಳಲ್ಲಿ ಜಾನಪದ ಸಾಹಿತ್ಯ ಮತ್ತು ಕಲೆಗಳ ಬಗೆಗೆ ಗೌರವ ಸಲ್ಲುತ್ತಿದೆ. ಶೀಘ್ರಗತಿಯ ಬದಲಾವಣೆಯ ಪ್ರಭಾವಕ್ಕೊಳಗಾಗಿರುವ ಇಂದಿನ ಸಮಾಜದಲ್ಲಿ ಪರಂಪರೆಯ ಜಾನಪದ ಸಾಹಿತ್ಯ ಪ್ರಕಾರಗಳು ಮಾಸಿ ಹೋಗುವುದಕ್ಕಿಂತ ಮೊದಲೇ ಈ ಸಾಹಿತ್ಯ ಶ್ರೀಯನ್ನು ಹಿಡಿದಿಟ್ಟುಕೊಳ್ಳುವ, ವಿಶ್ಲೇಷಣೆ-ವಿಮರ್ಶೆ ವ್ಯಾಖ್ಯಾನ ಮಾಡುವ ಕಾರ್ಯ ಕ್ಷಿಪ್ರಗತಿಯಲ್ಲಿ ನಡೆಯಬೇಕಾಗಿದೆ. ಇತ್ತೀಚೆಗೆ ಅಸ್ತಿತ್ವ ತಳೆದ ರಾಜ್ಯದ ಜಾನಪದ ಅಕ್ಯಾಡೆಮಿ ಈ ಕಾರ್ಯಗಳಿಗೆ ವಿಶೇಷ ಚಾಲನೆ ನೀಡಬೇಕೆಂದು ನಾವಿಲ್ಲಿ ಸೂಚಿಸಬಯಸುತ್ತೇವೆ.

ಅಖಿಲ ಕರ್ನಾಟಕ ಜಾನಪದ ಸಮ್ಮೇಳನಗಳನ್ನು ಈ ಏಳೆಂಟು ವರ್ಷಗಳಿಂದ ನಾಡಿನ ಬೇರೆ ಬೇರೆ ಸ್ಥಳಗಳಲ್ಲಿ ನಡೆಸಿ ಜನಸಾಮಾನ್ಯರಲ್ಲಿಯೂ ಈ ಸಾಹಿತ್ಯ ಮತ್ತು ಕಲೆಗಳ ಬಗ್ಗೆ ಕುತೂಹಲ ರೂಪಿಸಿ, ಜಾನಪದ ಅಧ್ಯಯನಕ್ಕೆ ಮಹತ್ವದ ಸೇವೆಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನಪೀಠ ಸಲ್ಲಿಸುತ್ತ ಬಂದಿರುವದು ಸರ್ವಶ್ರುತವಾಗಿದೆ. ಸಮ್ಮೆಳನದ ಸ್ಮರಣೆಗಾಗಿ ಪ್ರಕಟಿಸುತ್ತ ಬಂದಿರುವ ಎರಡು ಸಾವಿರಕ್ಕೂ ಮಿಕ್ಕಿದ ಪುಟಗಳ ಮೌಲಿಕ ಜಾನಪದ ಸಾಮಗ್ರಿಗಳನ್ನೊಳಗೊಂಡ ಎಂಟು ಸಂಪುಟಗಳನ್ನು ಈಗಾಗಲೇ ಪ್ರಕಟಿಸಿದ ಶ್ರೇಯಸ್ಸು ಕನ್ನಡ ಅಧ್ಯಯನ ಪೀಠಕ್ಕಿದೆ. ಜಾನಪದ ಕ್ಷೇತ್ರದಲ್ಲಿ ಇರುವ ಆಸಕ್ತಿ ಸಂಶೋಧಕರಿಗೆ ಮೂಲ ಸಾಮಗ್ರಿಯನ್ನು ಈ ಸಂಪುಟಗಳು ಒದಗಿಸಿಕೊಡುತ್ತವೆ.

ಪ್ರಸ್ತುತ ಸಂಪುಟ ’ಜಾನಪದ ಸಾಹಿತ್ಯ ದರ್ಶನ ಭಾಗ-೯’ ಕರ್ನಾಟಕದ ಗ್ರಾಮದೇವತೆಗಳು ಕುರಿತಾಗಿದೆ. ಇದರಲ್ಲಿ ನಾಡಿನ ಹಲವಾರು ವಿದ್ವಾಂಸರು ಮಂಡಿಸಿದ ಪ್ರಬಂಧಗಳಿವೆ. ಸಾಕಷ್ಟು ಪರಿಶ್ರಮ ವಹಿಸಿ ಈ ಪ್ರಬಂಧಗಳನ್ನು ಸಿದ್ಧಗೊಳಿಸಿಕೊಂಡು ಬಂದು ಗೋಷ್ಠಿ ಮತ್ತು ಚರ್ಚೆಯಲ್ಲಿ ಭಾಗವಹಿಸಿ ಈ ಸಂಪುಟ ಈ ರೀತಿ ಬರಲು ಕಾರಣರಾಗಿರುವ ಈ ಎಲ್ಲ ವಿದ್ವಾಂಸರಿಗೂ ನಮ್ಮ ಉಪಕೃತಿಗಳು.

ಬನಹಟ್ಟಿಯಲ್ಲಿ ಜರುಗಿದ ಈ ಸಮ್ಮೇಳನಕ್ಕೆ ಪ್ರೇರಕ ಶಕ್ತಿಯಾಗಿ ನಿಂತು ಇಡೀ ಸಮ್ಮೇಳನ ತಮ್ಮ ಕರ್ತೃತ್ವ ಶಕ್ತಿಯ ಸಾಕಾರವಾಗುವಂತೆ ನೆರವೇರಲು ಹಗಲು-ರಾತ್ರಿ ಶ್ರಮಿಸಿದ ಕನ್ನಡ ಅಧ್ಯಯನಪೀಠದ ಭಾಷಾವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಜಯವಂತ ಕುಳ್ಳಿ, ಮತ್ತು ’ಡಾ. ಫ.ಗು.ಹಳಕಟ್ಟಿ ಹಾಗೂ ಪೂಜ್ಯ ತಮ್ಮಣ್ಣಪ್ಪ ಚಿಕ್ಕೋಡಿ ಮೂರ್ತಿ ಪ್ರತಿಷ್ಠಾಪನಾ ಸಮಿತಿ’ಯ ಪದಾಧಿಕಾರಿಗಳು ಈ ಜಾನಪದ ಸಮ್ಮೇಳನದ ಸ್ವಾಗತಾಧ್ಯಕ್ಷರಾದ ಶ್ರೀ ಡಿ. ಭದ್ರಣ್ಣವರ ಮತ್ತು ಕಾರ್ಯಾಧ್ಯಕ್ಷ ಶ್ರೀ ಜಿ.ಡಿ.ಭದ್ರಣ್ಣವರ ಮುಂತಾದ ಇತರ ಎಲ್ಲ ಬನಹಟ್ಟಿಯ ಮಿತ್ರರಿಗೆ ನಮ್ಮ ಕೃತಜ್ಞತೆಗಳು.

ಈ ಸಂಪುಟ ’ಅಚ್ಚಾಗುವ ಸಮಯದಲ್ಲಿ ನಮ್ಮ ಸ್ನೇಹಿತರಾದ ಡಾ.ಕುಳ್ಳಿ ನಮ್ಮ ಮಧ್ಯದಲ್ಲಿಲ್ಲ. ಡಾ. ಜಯವಂತಿ ಕುಳ್ಳಿ, ದೇವರು ತನಗೆ ಬೇಕೆಂದು ಎತ್ತಿಕೊಂಡ ಹೂವಿನಂತೆ ಕಣ್ಮರೆಯಾದರು. ಈ ಸಂದರ್ಭದಲ್ಲಿ ಅವರನ್ನು ನಾವು ಗೌರವ ದಿಂದ ಸ್ಮರಿಸುತ್ತೇವೆ; ಈ ಮೂಲಕ ನಮ್ಮ ಶ್ರದ್ಧಾಂಜಲಿಯನ್ನೂ ಅರ್ಪಿಸುತ್ತೇವೆ. ಈ ಕೃತಿಯನ್ನು ದಿ|| ಮಿತ್ರರ ಮರೆಯಲಾಗದ ನೆನಪಿನ ದ್ಯೋತಕವಾಗಿ ಅವರಿಗೆ ಅರ್ಪಿಸಲಾಗಿದೆ.

ಈ ಸಮ್ಮೇಳನವನ್ನು ತಮ್ಮ ಬಿಡುವಿಲ್ಲದ ಕಾರ‍್ಯದಲ್ಲಿಯೂ ಅವಕಾಶ ಮಾಡಿ ಕೊಂಡು ಉದ್ಘಾಟಿಸಿದ ಸುಪ್ರಸಿದ್ಧ ಸಾಹಿತಿಗಳಾದ ಡಾ. ರಾ.ಯ. ಧಾರವಾಡಕರ ಅವರಿಗೆ, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಡಾ. ಎಂ.ಎಸ್. ಸುಂಕಾಪುರ ಅವರಿಗೆ. ಈ ಕೃತಿಯನ್ನು ಪ್ರಕಟಿಸುವಲ್ಲಿ ಮತ್ತು ಈ ಸಮ್ಮೇಳನದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಬಗೆಗೆ ವಿಶೇಷ ಆಸಕ್ತಿ ಪ್ರೋತ್ಸಾಹ ನೀಡುತ್ತಿರುವ ಕರ್ನಾಟಕ ವಿಶ್ವವಿದ್ಯಾಲಯದ ಇಂದಿನ ಕುಲಪತಿಗಳಾದ ಮಾನ್ಯ ಡಾ. ಡಿ.ಎಂ. ನಂಜುಂಡಪ್ಪ ಅವರಿಗೆ ನಮ್ಮ ಕೃತಜ್ಞತೆಗಳು.

ಬನಹಟ್ಟಿಯ ವಾಣಿಜ್ಯ ಮಹಾವಿದ್ಯಾಲಯದ ಪ್ರಿ. ಪಿ.ಜಿ. ಇಟ್ನಾಳ ಅವರಿಗೂ, ಉಳಿದ ಪ್ರಾಧ್ಯಾಪಕ ಮಿತ್ರರಿಗೂ, ಮಹಾವಿದ್ಯಾಲಯದ ಸಿಬ್ಬಂದಿ ವರ್ಗಕ್ಕೂ ನಮ್ಮ ವಂದನೆಗಳು ಸಲ್ಲಬೇಕು. ಈ ಸಮ್ಮೇಳನವನ್ನು ಯಶಸ್ವಿಗೊಳಿಸುವಲ್ಲಿ ಇವರೆಲ್ಲರ ಜೊತೆಗೆ ಪರಿಶ್ರಮಿಸಿದ ಬನಹಟ್ಟಿಯ ಶ್ರೀ ಭದ್ರಣ್ಣವರ ಸೋದರರು. ಡಾ. ಜಿ.ಆರ್.ತಮಗೊಂಡ, ಪ್ರಿ. ಎಂ.ಎಸ್.ಮುನವಳ್ಳಿ, ಶ್ರೀ ಎಂ.ಎಸ್.ಮಂಡಿ, ಶ್ರೀ. ಆರ್.ಎಸ್. ಹುಲಗಬಾಳಿ, ಮುಂತಾದವರಿಗೆ ನಮ್ಮ ವಂದನೆಗಳು.

ಈ ಸಮ್ಮೇಳನ ಏರ್ಪಡಿಸಿದ ವಿವಿಧ ಗೋಷ್ಠಿಗಳಿಗೆ ಅಧ್ಯಕ್ಷರಾಗಿ ಆಯಾಗೋಷ್ಠಿಗಳನ್ನು ನಡೆಸಿಕೊಟ್ಟ ಮುದ್ದೇಬಿಹಾಳದ ಮಾತೋಶ್ರೀ ಗಂಗಮ್ಮಾ ಚಿನಿವಾರ ಮಹಾವಿದ್ಯಾಲಯದ ಪ್ರಿ. ಸಿ.ವಿ. ಮುಳಗುಂದ, ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಪ್ರೊ. ಗುಂಡ್ಮಿ ಚಂದ್ರಶೇಖರ ಐತಾಳ, ಕನ್ನಡ ಅಧ್ಯಯನಪೀಠದ ಪ್ರಾಧ್ಯಾಪಕರಾದ ಡಾ. ಎಸ್. ಎಂ. ವೃಷಭೇಂದ್ರಸ್ವಾಮಿ ಅವರಿಗೂ, ಈ ಎಲ್ಲ ಗೋಷ್ಠಿಗಳಲ್ಲಿ ವಿದ್ವತ್‌ಪೂರ್ಣ ಸಂಪ್ರಬಂಧಗಳನ್ನು ಮಂಡಿಸಿದ ಎಲ್ಲ ವಿದ್ವಾಂಸರಿಗೂ, ಗೋಷ್ಠಿಗಳ ನಿರ್ವಹಣಾ ಕಾರ‍್ಯ ಮಾಡಿದವರಿಗೂ ನಮ್ಮ ಕೃತಜ್ಞತೆಗಳು.

ಈ ಸಮ್ಮೇಳನದ ಅಂಗವಾಗಿ ಜರುಗಿದ ರಂಗದರ್ಶನ ಆರಂಭೋತ್ಸವವನ್ನು ನೆರವೇರಿಸಿಕೊಟ್ಟ ಜಮಖಂಡಿಯ ಶ್ರೀರಾವಬಹಾದ್ದೂರ ಅವರಿಗೆ ನಾವು ಕೃತಜ್ಞರಾಗಿದ್ದೇವೆ.

ನಾಡಿನ ಬೆರೆ ಬೇರೆ ಭಾಗಗಳಿಂದ ಜಾನಪದ ಕಲೆಯ ಅಭಿಮಾನವಿರಿಸಿಕೊಂಡು ನಮ್ಮ ಆಮಂತ್ರಣವನ್ನು ಸ್ವೀಕರಿಸಿ ಬಂದು ತಮ್ಮ ಪರಂಪರಾಗತ ಕಲಾಪ್ರೌಢಿಮೆ ಯನ್ನು ತೋರಿಸಿ ಜನ-ಮನವನ್ನು ರಂಜಿಸಿದ ಎಲ್ಲ ಜಾನಪದ ಕಲಾವಿದರಿಗೂ ರಂಗ ದರ್ಶನವನ್ನು ಸಮರ್ಥವಾಗಿ ನಡೆಸಿಕೊಟ್ಟ ಸರ್ವರಿಗೂ ನಮ್ಮ ಕೃತಜ್ಞತೆಗಳು.

ಸಮ್ಮೇಳನದ ಸಹಾಯಕ ಕಾರ್ಯದರ್ಶಿಗಳಾಗಿ ಎಲ್ಲ ಕಾರ್ಯಗಳಲ್ಲಿ ಸಹಕರಿಸಿದ ಅಧ್ಯಾಪಕ ಶ್ರೀ.ಕೆ. ಅನ್ಬನ್ ಅವರಿಗೂ ಮತ್ತು ಈ ಎಲ್ಲ ಕಾರ್ಯಗಳಿಗೆ ನೆರವು, ಸಹಕಾರ ನೀಡಿದ ಕನ್ನಡ ಅಧ್ಯಯನಪೀಠದ ಪ್ರಾಧ್ಯಾಪಕ ವೃಂದಕ್ಕೂ, ಸಿಬ್ಬಂದಿಯವರಿಗೂ ನಮ್ಮ ವಂದನೆಗಳು.

ಈ ಕೃತಿಯನ್ನು ಇಷ್ಟು ಸುಂದರವಾಗಿ ಮುದ್ರಿಸಿದ ವಿಶ್ವವಿದ್ಯಾಲಯ ಮುದ್ರಣಾಲಯದ ಸಿಬ್ಬಂದಿ ಅವರಿಗೂ ನಮ್ಮ ನೆನಕೆಗಳು.

ಡಾ.ಎಸ್.ಎಂ. ವೃಷಭೇಂದ್ರಸ್ವಾಮಿ
ಮುಖ್ಯಸ್ಥರು ಮತ್ತು ಪ್ರಾಚಾರ್ಯರು
ಕನ್ನಡ ಅಧ್ಯಯನ ಪೀಠ,
ಕರ್ನಾಟಕ ವಿಶ್ವವಿದ್ಯಾಲಯ,
ಧಾರವಾಡ.