ಅಧ್ಯಕ್ಷರಾದ ಡಾ. ಸುಂಕಾಪೂರ ಅವರೇ, ಉದ್ಘಾಟಕರಾದ ಡಾ. ಧಾರವಾಡಕರ ಅವರೇ, ಜಾನಪದ ವಿದ್ವಾಂಸರೇ, ಕಲಾವಿದರೇ, ಹಿರಿಯರೇ ಹಾಗೂ ಸ್ನೇಹಿತರೇ.

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಹಾಗೂ “ಡಾ. ಫ.ಗು.ಹಳಕಟ್ಟಿ ಮತ್ತು ಪೂಜ್ಯ ತಮ್ಮಣ್ಣಪ್ಪಾ ಚಿಕ್ಕೋಡಿ ಮೂರ್ತಿ ಪ್ರತಿಷ್ಠಾಪನಾ ಸಮಿತಿ” ಬನಹಟ್ಟಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಬನಹಟ್ಟಿಯಲ್ಲಿ ನಡೆಯುತ್ತಿರುವ ೯ನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನಕ್ಕೆ ತಮ್ಮೆಲ್ಲರನ್ನು ತುಂಬು ಹೃದಯದಿಂದ ಸ್ವಾಗಿಸುತ್ತೇನೆ. ಕರ್ನಾಟಕ ವಿಶ್ವವಿದ್ಯಾಲಯದ ಪ್ರಥಮ ಜಾನಪದ ಸಮ್ಮೇಳವನ್ನು ಸಂಘಟಿಸಿದ ವರ್ಷದಿಂದಲೂ ಬನಹಟ್ಟಿಯಲ್ಲಿ ಈ ಸಮ್ಮೇಳನ ಜರುಗಿಸಬೇಕೆಂಬ ಬಯಕೆ ನಮ್ಮೆಲ್ಲರಲ್ಲಿ ಇತ್ತು, ಅದು ಇಷ್ಟು ವರ್ಷಗಳ ನಂತರವಾದರೂ ಈಡೇರುತ್ತಿರುವುದಕ್ಕೆ ನಮಗೂ ನಮ್ಮ ಭಾಗದ ಜನರಿಗೂ ತುಂಬ ಸಂತೋಷವಾಗಿದೆ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ.

ಜನಸಾಮಾನ್ಯರ ಸಾಹಿತ್ಯ ಈ ಜನಪದ ಸಾಹಿತ್ಯ. ಅವರು ವಿದ್ಯೆ ಕಲಿತು, ಶಾಸ್ತ್ರ ತಿಳಿದು, ಸುಶಿಕ್ಷಿತರೆನಿಸಿಕೊಳ್ಳದಿದ್ದರೂ ತಮ್ಮ ಭಾವನೆಗಳನ್ನು ನೇರವಾಗಿ ಪ್ರಕಟಿಸುವ ಈ ಜನಪದ ಸಾಹಿತ್ಯ ಬಾಳಿಗೆ ತೀರ ಸಮೀಪವಾದ ಸಾಹಿತ್ಯ. ಸಾಮಾನ್ಯ ಜನರಿಂದ ಸಾಮಾನ್ಯ ಜನರಿಗಾಗಿ ಸೃಷ್ಟಿಸಲ್ಪಟ್ಟ ಈ ಸಾಹಿತ್ಯ ನಿರಂತರವೂ ಬಾಳುವಂತಹುದು. ಜನರು ತಮ್ಮ ಸಂತೋಷ ವ್ಯಕ್ತಪಡಿಸಲು, ದುಃಖ-ದುಮ್ಮಾನ ಮರೆಯಲು ಹಾಡಿದರು, ಕಥೆ ಹೇಳಿದರು, ಒಗಟು, ಗಾದೆಗಳನ್ನು ಹೆಣೆದರು. ಕೆಲಸದ ಆಯಾಸವನ್ನು ಮರೆಯಲು ಒಂದು ಹಾಡು ಹಾಡಿದರೆ, ಆ ಕೆಲಸದ ಸವಿಫಲ ಉಣ್ಣಲು ಒಂದು ಹಾಡು, ವಿಫಲತೆ ಮರೆಯಲು ಇನ್ನೊಂದು ಹಾಡು ಹಾಡಿದ್ದಾರೆ. ಹಾಗೆಯೇ ಮದುವೆ, ಶೋಭನ, ಕುಬಸ ಮುಂತಾದ ಬಾಳಿನ ಸುಮಧುರ ಕ್ಷನಗಳನ್ನು ಹಾಡುಗಳ ಮೂಲಕ ಮತ್ತಷ್ಟು ರಸವತ್ತಾಗಿ ಮಾಡಲು ಆನಂದವನ್ನು ಹೆಚ್ಚಿಸಿಕೊಂಡಿದ್ದಾರೆ. ಕರ್ನಾಟಕದ ಜನಪದ ಸಾಹಿತ್ಯವನ್ನು ಅವಲೋಕಿಸಿದಾಗ ಉತ್ತರ ಕರ್ನಾಟಕದ ಸಾಹಿತ್ಯ ವೈವಿಧ್ಯದ ಮುಂದೆ ಉಳಿದ ಭಾಗಗಳ ಸಾಹಿತ್ಯ ಸಪ್ಪೆಯಾಗಿ ಕಾಣುತ್ತದೆ. ಗಾತ್ರ ಹಾಗು ಗುಣ ಎರಡರಲ್ಲಿಯೂ ಉತ್ತರ ಕರ್ನಾಟಕದ ಈ ಜನಪದ ವೈವಿಧ್ಯವೆಲ್ಲ ಬಿಜಾಪುರ ಜಿಲ್ಲೆಯಲ್ಲಿ ಕಂಡು ಬರುತ್ತದೆ. ಈ ವೈವಿಧ್ಯವನ್ನೆಲ್ಲ ಪ್ರಾತಿನಿಧಿಕ ರೂಪದಲ್ಲಾದರೂ ತಾವು ಎರಡು ದಿನಗಳ ರಂಗದರ್ಶನದಲ್ಲಿ ಕಾಣಬಹುದು.

ಜನಪದ ಸಾಹಿತ್ಯ ಬೆಳೆದು ಬರಲು ಜನ ತಮ್ಮ ಬಾಳಿನ ಪ್ರತಿಕ್ಷಣದಲ್ಲಿಯೂ ಹಾಡುವ ರೂಢಿ ಒಂದು ಕಾರಣವಾದರೆ, ಕುಟುಂಬಗಳ ವೃತ್ತಿಗಳ ಇನ್ನೊಂದು ಕಾರಣವಾದವು. ಹಾಗೆಯೇ ಧಾರ್ಮಿಕ ಸಂಪ್ರದಾಯಗಳು ಇದಕ್ಕೆ ಪೋಷಕವಾದವು. ಕಾರಣಗಳು ಏನೇ ಇರಲಿ ಇಲ್ಲಿಯವರೆಗೆ ಬೆಳೆದು ಬಂದ ಜನಪದ ಸಾಹಿತ್ಯ ಅಪಾರವಾಗಿದೆ, ಗುಣದಲ್ಲಿಯೂ ಮೌಲಿಕವಾಗಿದೆ.

ಆದರೆ ಬದಲಾದ ಬದಲಾಗುತ್ತಿರುವ ಪರಿಸರದಲ್ಲಿ ಜನಪದ ಸಾಹಿತ್ಯ ಸೃಷ್ಟಿಗೆ ಕಾರಣವಾದ ಸನ್ನಿವೇಶಗಳು ಒಂದೊಂದಾಗಿ ಕಣ್ಮರೆಯಾಗುತ್ತಿವೆ. ಹೀಗಾಗಿ ಜನಪದ ಸಾಹಿತ್ಯ ಸೃಷ್ಟಿ ಕುಂಠಿತವಾಗುತ್ತಿದೆ. ಇಂಥ ನಿರಾಶಾದಾಯಕ ಸನ್ನಿವೇಶದಲ್ಲಿ ಈಗ ಉಳಿದಿರುವ ಸಾಹಿತ್ಯವನ್ನಾದರೂ ಕಳೆದು ಹೋಗದಂತೆ ನೋಡಿಕೊಳ್ಳಬೇಕಾದುದು ಎಲ್ಲರ ಕರ್ತವ್ಯವಾಗಿದೆ ಮತ್ತು ಇಂಥ ಪ್ರಯತ್ನಗಳು ಎಲ್ಲ ಕಡೆಗೂ ನಡೆದಿರುವುದು ನಿಜವಾಗಿಯೂ ಸಂತೋಷದ ಸಂಗತಿಯಾಗಿದೆ. ವೈಯಕ್ತಿಕ ಪ್ರಯತ್ನಗಳು ಬೇಕಾದಷ್ಟು ನಡೆದಿದ್ದು, ಸಂಸ್ಥೆಗಲು ಇದಕ್ಕಾಗಿ ಮುಂದಾಗಿರುವುದು ಇನ್ನೂ ಶುಭ ಸೂಚನೆಯಾಗಿದೆ. ಹೀಗೆ ಜನಪದ ಸಾಹಿತ್ಯ ಸಂಗ್ರಹ, ಪ್ರಕಟಣೆಗಳ ಕಾರ್ಯ ಒಂದು ರೀತಿಯಿಂದ ನಡೆದಿದ್ದರೆ, ಈ ಹೊತ್ತು ನಡೆಯುವ ಇಂಥ ಸಮ್ಮೇಳನಗಳು ಅದಕ್ಕೆ ಶಾಸ್ತ್ರೀಯ ಸುಸಂಬದ್ಧ ಚೌಕಟ್ಟನ್ನು ಒದಗಿಸುತ್ತವೆ. ಅದಕ್ಕಾಗಿ ಇಂಥ ಸಮ್ಮೇಳನಗಳು ಎಷ್ಟು ನಡೆದರೂ ಅವು ಸ್ವಾಗಾರ್ಹ. ಈ ಹಿನ್ನೆಲೆಯಲ್ಲಿ ಜಾನಪದ ಸಮ್ಮೇಳನ ಬನಹಟ್ಟಿಯಲ್ಲಿ ನಡೆಯುತ್ತಿರುವದು ನಮ್ಮೆಲ್ಲರಿಗೆ ಸಂತೋಷವನ್ನುಂಟು ಮಾಡಿದೆ. ಸೀರೆಯ ಉದ್ಯಮಿಗಾಗಿ, ಕರ್ನಾಟಕ -ಮಹಾರಾಷ್ಟ್ರಗಳಲ್ಲಿ ಪ್ರಸಿದ್ಧಿ ಪಡೆದ ಬನಹಟ್ಟಿ ನಗರ ಮೊದಲಿನಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿಯೂ ತುಂಬ ಪ್ರಸಿದ್ಧವಾಗಿದೆ. ದಿ. ತಮ್ಮಣ್ಣಪ್ಪ ಚಿಕ್ಕೋಡಿಯವರಿಂದ ಪ್ರಾರಂಭವಾದ ಈ ಸಾಂಸ್ಕೃತಿಕ ಜಾಗೃತಿ ತನ್ನ ಕಾವನ್ನು ಇನ್ನೂ ಆರಲು ಬಿಟ್ಟಿಲ್ಲ. ಯಾವ ಸಾಂಸ್ಕೃತಿಕ ಚಟುವಟಿಕೆಯಲ್ಲಿಯೂ ಅದು ಯಾರಿಗೂ ಹಿಂದೆ ಬಿದ್ದಿಲ್ಲ. ಈಗ ನಡೆದಿರುವ ನಾಲ್ಕು ದಿನಗಳ ಕಾರ್ಯಕ್ರಮ ಇದಕ್ಕೆ ಇನ್ನೊಂದು ನಿದರ್ಶನ.

ಬನಹಟ್ಟಿ ಹಳ್ಳಿಯಂತೂ ಅಲ್ಲ; ನಗರವೂ ಅಲ್ಲ, ಕಾರಣ ದೊಡ್ಡ ದೊಡ್ಡ ಸಭೆ-ಸಮಾರಂಭಗಳನ್ನು ನಡೆಸಲು ನಮ್ಮ ಜನರ ಉತ್ಸಾಹವೊಂದನ್ನು ಬಿಟ್ಟು, ಉಳಿದ ಅನುಕೂಲತೆಗಳು ಅಷ್ಟಾಗಿ ಇಲ್ಲ. ಆದರೂ ಇದ್ದುದರಲ್ಲಿ ಮಾಡಬೇಕಾದುದನ್ನು ಮಾಡುವ ಪ್ರಯತ್ನ ಮಾಡಿದ್ದೇವೆ. ಇದ್ದುದನ್ನೇ ದೊಡ್ಡದು ಮಾಡಿಕೊಂಡು, ನೀವೆಲ್ಲ ಸಹಕರಿಸಬೇಕೆಂದು ಕೇಳಿಕೊಳ್ಳುತ್ತೇನೆ.

ಎರಡು ದಿನಗಳ ಈ ಜನಪದ ಸಮ್ಮೇಳನಕ್ಕೆ ತಮ್ಮೆಲ್ಲರನ್ನು ಮತ್ತೊಮ್ಮೆ ಸ್ವಾಗತಿಸುತ್ತೇನೆ.

* * *