ಮಲೆನಾಡಿನ ಭಾಗದ ದೀವರು ಗೌರಿಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ಪ್ರತಿ ವರ್ಷ ಭಾದ್ರಪದ ಶುಕ್ಲಪಕ್ಷದ ತೃತೀಯ ದಿನ ಗೌರಿ ಹಬ್ಬವನ್ನು ಆಚರಿಸುತ್ತಾರೆ. ಗಣೇಶ ಹಬ್ಬದ ಮೊದಲ ದಿನ ಬರುವ ಗೌರಿಯನ್ನು ಅರಮನೆ ಗೌರಿಯೆಂದು, ತಡವಾಗಿ ಬರುವ ಗೌರಿಯನ್ನು ಹಳ್ಳಿ ಗೌರಿಯೆಂದು ಕರೆಯುತ್ತಾರೆ. ಹಬ್ಬದ ದಿನ ದೀವರ ಹೆಣ್ಣು ಮಕ್ಕಳು ಸಮೀಪದ ಬಾವಿಯಿಂದ ನೀರನ್ನು ಕಲಶದಲ್ಲಿ ತುಂಬಿ ಭಕ್ತಿಯಿಂದ ಪೂಜಿಸುತ್ತಾರೆ. ಹೀಗೆ ಪೂಜಿಸುವುದರಿಂದ ಮನೆ ಮಂದಿಗೆಲ್ಲ ಶ್ರೇಯಸ್ಸು ಆಗುವುದರ ಜೊತೆಗೆ ಹೆಣ್ಣು ಮಕ್ಕಳಿಗೆ ಒಳಿತಾಗುವುದೆಂದು ನಂಬುತ್ತಾರೆ. ಸಾಂಪ್ರದಾಯಿಕವಾಗಿ ಆಚರಣೆಗೊಳ್ಳುತ್ತಾ ಬಂದ ಈ ಹಬ್ಬ ಮೂರು ಅಥವಾ ಐದು ದಿನಗಳವರೆಗೆ ನಡೆಯುತ್ತದೆ. ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಪೂಜಿಸಿ, ಕೊನೆಯ ದಿನ ಎಲ್ಲಾ ಮುತ್ತೈದೆಯರು ಸಡಗರ ಸಂಭ್ರಮದಿಂದ ಸಮೀಪದ ಹೊಳೆಯಲ್ಲಿ ವಿಸರ್ಜಿಸಿ ಬಿಡುತ್ತಾರೆ. ಗೌರಿಗೆ ಇಂದ್ರನ ಹೂವು, ಗೌರಿ ಹೂವು ಅತ್ಯಂತ ಪ್ರಿಯವಂತೆ. ದೀವರ ಹೆಣ್ಣು ಮಕ್ಕಳಿಗೆ ಈ ಹಬ್ಬ ಅತ್ಯಂತ ವಿಶೇಷವಾದದ್ದು. ಆದ್ದರಿಂದ ಎಲ್ಲೇ ಇದ್ದರೂ ಹಬ್ಬಕ್ಕೆ ತವರಿಗೆ ಬರುವುದು ತಪ್ಪಿಸುವುದಿಲ್ಲ. ಅಂದು ಹಬ್ಬಕ್ಕೆ ಬಂದ ಹೆಣ್ಣು ಮಕ್ಕಳಿಗೆ ಹೊಸ ಬಟ್ಟೆ, ಬಳೆ ಕಡ್ಡಾಯವಾಗಿ ಉಡುಗೊರೆಯಾಗಿ ನೀಡುತ್ತಾರೆ. ಈ ಉಡುಗೊರೆ ತವರಿನ ಸ್ಥಿತಿ-ಗತಿಗೆ ತಕ್ಕಂತೆ ಇರುತ್ತದೆ.

ಗೌರಿ ಹಬ್ಬದಲ್ಲಿ ಮಾಂಸಹಾರ ನಿಷಿದ್ಧ. ಎಡೆಗಾಗಿ ಕಜ್ಜಾಯ, ಉಂಡೆ, ಚಕ್ಕುಲಿ ಇತ್ಯಾದಿ ತಿನಿಸುಗಳನ್ನು ಸಿದ್ಧಪಡಿಸುತ್ತಾರೆ. ಈ ತಿನಿಸುಗಳನ್ನು ತವರಿನಿಂದ ಗಂಡನ ಮನೆಗೆ ಹೋಗುವ ಹೆಣ್ಣುಮಕ್ಕಳಿಗೆ ಕೊಟ್ಟು ಕಳುಹಿಸಬೇಕು ಎಂಬ ಕಟ್ಟಳೆ ಇದೆ. ಗೌರಿಯ ವಿಸರ್ಜನೆಯ ನಂತರ ಒಂದು ದಿನ ರಾತ್ರಿ ಗಂಗೆಯನ್ನು ಪೂಜಿಸುವ ಸಂಪ್ರದಾಯವಿದೆ. ಅಂದು ಸಂಜೆ ಕತ್ತಲಾವರಿಸುವ ಮುನ್ನ ಬಾವಿಯಿಂದ ಗಂಗೆಯನ್ನು ತಂದು ಪೂಜಿಸಿ, ಬೆಳಗಾಗುವುದರೊಳಗೆ ಮನೆಯ ಪುರುಷರು ಹಾಸಿಗೆ ಬಿಡುವ ಮುನ್ನವೇ ಗಂಗೆಯನ್ನು ಹೊರ ಚೆಲ್ಲುತ್ತಾರೆ. ಗಂಗೆಗೆ ಯಾವುದೇ ವಿಶೇಷ ಆತಿಥ್ಯ ನೀಡುವುದಿಲ್ಲ. ಬದಲಾಗಿ ಗೌರಿಗೆ ತೊಡಿಸಿದ ಸೀರೆ, ಮುಡಿದ ಹೂ, ಗೌರಿಗೆ ನೈವೇದ್ಯ ಮಾಡಿದ ತಿನಿಸುಗಳೇ ಎಡೆಗೆ ಬಳಕೆಯಾಗುತ್ತವೆ. ಗಂಗೆ ಶಿವನ ಎರಡನೇ ಹೆಂಡತಿ. ಆದ್ದರಿಂದ ಹೆಂಗಸರು ಗಂಗೆಯನ್ನು ಗೌರಿಯಂತೆ ಪೂಜಿಸುವುದಿಲ್ಲ. ಗಂಗೆಯ ವಿಸರ್ಜನೆಯಲ್ಲಿ ಮನೆಯ ಗಂಡಸರು ಭಾಗವಹಿಸಬಾರದೆಂಬ ಉದ್ದೇಶ ಸ್ಪಷ್ಟವಾಗಿದೆ.