ಮಲೆನಾಡಿನ ಒಕ್ಕಲಿಗರಲ್ಲಿರುವ ಮಳೆಸಂಬಂಧಿ ಆಚರಣೆ. ಪ್ರತಿ ವರ್ಷ ಮುಂಗಾರು ಮಳೆಗಾಲದ ಆರಂಭದಲ್ಲಿ ಊರ ದೇವಿಗೆ ಸಲ್ಲಿಸುವ ಪೂಜೆ. ಊರೊಟ್ಟಿನ ಹರಕೆಯ ಪೂಜೆಯಾದ್ದರಿಂದ ಹಿರಿಯರ ಸಮ್ಮುಖದಲ್ಲಿ ಸಭೆ ಸೇರಿ ನಿಗದಿತ ಪೂಜಾ ದಿನವನ್ನು ಗೊತ್ತು ಮಾಡುತ್ತಾರೆ. ಪೂಜೆಯ ದಿನ ಹರಕೆಯ ಎಡೆಯ ಅಡುಗೆಗಾಗಿ ಊರಿನ ಪ್ರತಿಯೊಂದು ಮನೆಯಿಂದಲೂ ಒಂದು ತೆಂಗಿನಕಾಯಿ, ಎರಡು ಸೇರು ಅಕ್ಕಿ ಅಲ್ಲದೇ ಎರಡು ಸೇರು ಅಕ್ಕಿಹಿಟ್ಟನ್ನು ಸಂಗ್ರಹಿ ಸುತ್ತಾರೆ.

ನಿಗದಿತ ದಿನದಂದು ಊರಿನ ಜನರೆಲ್ಲ ಸೇರಿ ದೇವಾಲಯ ಹಾಗೂ ಅದರ ಸುತ್ತಲಿನ ಸ್ಥಳವನ್ನು ಸಗಣಿಯಿಂದ ಸಾರಿಸಿ, ತಳಿರು ತೋರಣಗಳಿಂದ ಅಲಂಕರಿಸುತ್ತಾರೆ. ದೇವಿಗೆ ಅರ್ಪಿಸಲು ತೆಂಗಿನಕಾಯಿ, ಹಣ್ಣು, ಹೂ ಹಾಗೂ ಕೋಳಿ ಕುರಿಗಳನ್ನು ಹಿಡಿದು ತರುತ್ತಾರೆ. ಭಕ್ತರು ತಂದ ಹಣ್ಣು ಹೂಗಳಿಂದ ದೇವಿಯನ್ನು ಸಿಂಗರಿಸಿ, ಪೂಜಿಸಿದ ನಂತರ ಬಲಿಗಾಗಿ ತಂದ ಪ್ರಾಣಿಗಳನ್ನು ತಳವಾರನು ಬಲಿ ನೀಡುತ್ತಾನೆ. ಬಲಿಯನ್ನು ಒಂದೇ ಏಟಿಗೆ ಕತ್ತರಿಸಬೇಕು; ಬಲಿ ಪ್ರಾಣಿಯ ರಕ್ತ ಹೆಚ್ಚು ಹರಿದರೆ ಮಳೆಯ ಪ್ರಮಾಣ ಹೆಚ್ಚಾಗುತ್ತದೆಂದು, ಕಡಿಮೆ ಹರಿದರೆ ಕಡಿಮೆ ಎಂಬ ನಂಬಿಕೆ ಇದೆ.

ಬಲಿಯಾದ ಪ್ರಾಣಿಯನ್ನು ಸ್ವಚ್ಛಗೊಳಿಸಿ, ಅದರ ಮಾಂಸದಲ್ಲಿ ಕಾಲುಭಾಗವನ್ನು ಅಂದಿನ ಎಡೆ ಹಾಗೂ ಸಂತರ್ಪಣೆಗಾಗಿ ತಮ್ಮ ಪಾಲಿನಲ್ಲಿ ಪ್ರತಿಯೊಬ್ಬರು ದೇವಾಲಯಕ್ಕೆ ಅರ್ಪಿಸುತ್ತಾರೆ. ಹೀಗೆ ಬಲಿ ಅರ್ಪಿಸಿದ ವಾರಸುದಾದರೂ ನೀಡಿದ ಮಾಂಸ ಹಾಗೂ ದವಸಧಾನ್ಯಗಳಿಂದ ಅಲ್ಲಿಯೇ ಅಡುಗೆ ತಯಾರಿಸುತ್ತಾರೆ. ಎಡೆಯನ್ನು ಬಲಿಯಾದ ಪ್ರಾಣಿಗಳ ಸಂಖ್ಯೆಗನುಗುಣವಾಗಿ ಎಲೆಗಳನ್ನಿಟ್ಟು ಮೀಸಲು ಅಡುಗೆಯನ್ನು ಬಡಿಸುತ್ತಾರೆ. ಪ್ರತಿ ಎಡೆಯ ಮುಂದೆಯೂ ಕಕ್ಕಡ ಎಂದು ಕರೆಯುವ ಎಣ್ಣೆಬಟ್ಟೆ ಸುತ್ತಿದ ಕೋಲನ್ನು ನಿಲ್ಲಿಸಿ, ದೀಪ ಹತ್ತಿಸುತ್ತಾರೆ. ಪೂಜಾರಿಯು ಎಡೆಗಳಿಗೆ ಮಂಗಳಾರತಿ ಮಾಡಿ, ನೈವೇದ್ಯ ಅರ್ಪಿಸುತ್ತಾನೆ. ಎಡೆಗಳ ಮುಂದೆ ನಿಂತ ಭಕ್ತರು ಕ್ಷಣ ಕಾಲ ಎಡೆಗಳಿಗೆ ಬೆನ್ನು ಮಾಡಿ ನಿಲ್ಲುತ್ತಾರೆ. ನಂತರ ಎಡೆಗಳನ್ನು ಎತ್ತಿ, ಅಂದಿನ ಊಟಕ್ಕೆ ಸಿದ್ಧತೆ ನಡೆಸುತ್ತಾರೆ. ಎಲ್ಲರೂ ಸೇರಿ ಸಹಭೋಜನ ಮಾಡುತ್ತಾರೆ.