ಪೂಜಾರಿಯು ಮಂತ್ರಿಸಿ ಕೊಡುವ ತೆಂಗಿನಕಾಯಿ. ಈ ಆಚರಣೆಯನ್ನು ಉತ್ತರ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಕಾಣಬಹುದು. ಯಲಬುರ್ಗಾದ ಕುದ್ರಿಮೋತಿಯ ಜನ ಕಟ್ಟುವ ಅಂತ್ರಗಾಯಿ ವಿಶಿಷ್ಟವಾಗಿದೆ. ಊರಿನ ಅಗಸೆ ಬಾಗಿಲಿನ ಎದುರು ಇರುವ ಕಂಬವೇ ಕಾಯಿಯನ್ನು ಕಟ್ಟಿಸಿಕೊಂಡು, ಅವರ ಕಷ್ಟಗಳನ್ನು ಪರಿಹರಿಸುವ ದೈವ. ಊರಿನ ದೇವರು ಹನುಮಪ್ಪ, ದ್ಯಾಮವ್ವ, ಮಾರೆಮ್ಮಗಳ ಪೂಜಾರಿ ಮಂತ್ರಿಸಿ ಕೊಟ್ಟ ಕಾಯಿಯನ್ನು ಅಗಸೆ ಕಂಬಕ್ಕೆ ಕಟ್ಟಿದರೆ ಅವರ ಸಂಕಷ್ಟಗಳು ದೂರವಾಗುತ್ತವೆಂದು ನಂಬುತ್ತಾರೆ.

ಕೃಷಿ ಬದುಕಿನಲ್ಲಿ ಎದುರಾದ ತೊಂದರೆಗಳ ಪರಿಹಾರಕ್ಕಾಗಿ ಜನರು ದೇವರಲ್ಲಿ ಹರಕೆ ಹೊರುತ್ತಾರೆ. ಬೆಳೆಯಲ್ಲಿ ಕಾಳುಕಟ್ಟದಿದ್ದರೆ; ಬೆಳೆ ಬಾಡಿದಾಗ, ಜನ ಜಾನುವಾರುಗಳಿಗೆ ಕಾಯಿಲೆ ಬಂದಾಗ ಹರಕೆ ಹೊರುತ್ತಾರೆ. ಒಂದೊಂದು ಸಮಸ್ಯೆ ಪರಿಹಾರಕ್ಕೆ ಒಂದೊಂದು ಕಾಯಿ. ಚೇಷ್ಟೆ ಬೇನೆಯಾಗಿದ್ದರೆ; ಕೆಂಪು ಅರಿವೆಯಲ್ಲಿ, ಬಾಯಿ ಬೇನೆಯಾದರೆ ಮುಸುಡಿಗೆ ಕಟ್ಟುವ  ‘ಚಿಕ್ಕ’ ಎಂಬ ಬಲೆಯಲ್ಲಿ, ನರ ಬೇನೆಯಾಗಿದ್ದರೆ ಸಣ್ಣ ತಂತಿಯ ಬೋನಿನಲ್ಲಿ, ನೀಲಿ ನಾಲಿಗೆ ರೋಗ ಆಗಿದ್ದರೆ, ನೀಲಿಯ ಅರಿವೆಯಲ್ಲಿ ಸುತ್ತಿದ ತೆಂಗಿನ ಕಾಯಿಗಳು ಸಿದ್ಧವಾಗುತ್ತವೆ. ಅಗಸೆ ಬಾಗಿಲಿಗೂ ಅಂತ್ರಗಾಯಿ ಕಟ್ಟುತ್ತಾರೆ. ಹೆಚ್ಚಾಗಿ ನವೆಂಬರ್, ಡಿಸೆಂಬರ್ ತಿಂಗಳುಗಳಲ್ಲಿ ಅತಿ ಹೆಚ್ಚು ಕಾಯಿಗಳು ಅಗಸೆ ಕಂಬವನ್ನು ಸಿಂಗರಿಸುತ್ತವೆ. ಕಾರಣ ಬೇಸಿಗೆಯಲ್ಲಿ ರೋಗ ಇತ್ಯಾದಿಗಳು ಬರುವುದು ಹೆಚ್ಚು. ಹೀಗಾಗಿ ಜನರು ಅಂತ್ರಗಾಯಿಗೆ ಮೊರೆಹೋಗುತ್ತಾರೆ.