ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕಂಚೀಪುರದಲ್ಲಿ ಮಹಾಲಯ ಅಮಾವಾಸ್ಯೆಗೆ ಮುನ್ನಿನ ಉತ್ತರೆ ಮಳೆಯ ಅವಧಿಯಲ್ಲಿ ನಡೆಯುವ ಬಿಲ್ಲು ಬಾಣದ ಉತ್ಸವ. ಕಂಚೀಪುರದ ದೇವರು ಕಂಚೀವರದ. ಈ ದೈವದಿಂದ ವರ್ಷಕ್ಕೆ ಒಂದು ಬಾರಿ ವಿಜಯದಶಮಿಗೆ ಮೊದಲು ಉತ್ತರೆ ಮಳೆ ಅವಧಿಯಲ್ಲಿ ವಿವಿಧ ಸ್ಥಳಗಳಲ್ಲಿ ಅಂಬು ಹೊಡೆಯುವ ಆಚರಣೆ ನಡೆಯುತ್ತದೆ. ಈ ಉತ್ಸವಕ್ಕೆ ವಿವಿಧ ಜಿಲ್ಲೆಗಳಿಂದ ಭಕ್ತಾದಿಗಳು ಬರುತ್ತಾರೆ. ಭಕ್ತರು ದೇವರಿಗೆ ಅರ್ಪಿಸಿದ ಸಹಸ್ರಾರು ಹಣವನ್ನು ಭಕ್ತರಿಗೆ ‘ಸೊರೆ’ ಬಿಡುವ ವಿಶಿಷ್ಟ ಬಗೆಯ ಪದ್ಧತಿ ಇದೆ. ಜೊತೆಗೆ ಪಾಷಾಣದೆಡೆಯನ್ನು ಕೇಳುವ ಹಾಗೂ ಸೊರಗಂಬಲಿ ಸೇವೆ ಸ್ವೀಕರಿಸುವ ಪದ್ಧತಿಯು ನಡೆಯುತ್ತದೆ.

ಹರಕೆ ಹೊತ್ತ ಭಕ್ತರು ಹಣವನ್ನು ದೇವರ ಮೇಲಕ್ಕೆ ಸುರಿಯುತ್ತಾರೆ. ಹೀಗೆ ಎರಚಲ್ಪಟ್ಟ ಹಣವು ನೆಲದ ಮೇಲೆ ಬೀಳುತ್ತಿದ್ದಂತೆಯೆ ಬಡಬಗ್ಗರು, ಮಕ್ಕಳು ಮುಂತಾದವರು ಆ ಹಣವನ್ನು ಪ್ರಸಾದವೆಂಬಂತೆ ಆರಿಸಿಕೊಂಡು ಧನ್ಯರಾಗುತ್ತಾರೆ. ಭಕ್ತರು ದೇವರ ಮುಡುಪಿನ ದುಡ್ಡನ್ನು ಹೀಗೆ ತೂರಿ ಧನ್ಯರಾಗುತ್ತಾರೆ. ರಥೋತ್ಸವ ಹಾಗೂ ಅಂಬಿನೋತ್ಸವದ ಸಂದರ್ಭದಲ್ಲಿ ಈ ಬಗೆಯ ಹರಕೆಗಳನ್ನು ಕಾಣಬಹುದು. ಹಣಕ್ಕೆ ಆಸೆ ಪಡುವ ತಿಮ್ಮಪ್ಪ ದೇವರು ದುಡ್ಡು ಆಯುವುದಕ್ಕೆ ಕಂಚೀಬೆಟ್ಟಕ್ಕೆ ಬಂದಿದ್ದನೆಂದು ದಂತಕತೆ ಇದೆ. ಇದಕ್ಕೆ ಸಾಕ್ಷಿಯೆಂಬಂತೆ ಆ ಬೆಟ್ಟದಲ್ಲಿ ತಿಮ್ಮಪ್ಪನ ವಿಗ್ರಹವೂ ಇದೆ.

ಉತ್ತರ ಮಳೆಯಲ್ಲಿ ಕೆಲವು ಕಾಲ ಪಟ್ಟಕ್ಕೆ ಕೂರುವ ಕಂಚೀವರದ ಉತ್ತರೆ ಮಳೆ ಮುಗಿಯುವಷ್ಟರಲ್ಲಿ ಉತ್ತರೇಗಡ್ಡ, ಕಂಚೀಪುರ, ದೊಡ್ಡವಜ್ರ, ಕಾನುಬೇಹಳ್ಳಿ, ದಾಸಣ್ಣನ ಕಾವಲು, ಧೂಪದಕಣ, ಕಣಿವೆ ರಂಗಸ್ವಾಮಿ ವಜ್ರ, ಕಗ್ಗಲಕಟ್ಟೆ, ಹಾಳು ಸಂಗಾಪುರ ಗೊಲ್ಲರಹಳ್ಳಿ ಇತ್ಯಾದಿ ಕೆರೆಗಳಲ್ಲಿ ಅಂಬು ಹೊಡೆಯುತ್ತಾರೆ. ಹಿಂದಿನ ರಾತ್ರಿ ಮಡಿಯಿಂದ ತಯಾರಿಸಿದ ಅಕ್ಕಿಯ ಬಾನವನ್ನು ತಯಾರಿಸುತ್ತಾರೆ. ಅಕ್ಕಿ, ಹೆಸರು ಬೇಳೆ, ಹಾಲು, ತುಪ್ಪ, ಮೊಸರು, ಈರುಳ್ಳಿ, ಬೆಳ್ಳುಳ್ಳಿ ಮುಂತಾದ ಪದಾರ್ಥಗಳನ್ನು ಹರಕೆ ಹೊತ್ತ ಭಕ್ತರು ಬುತ್ತಿಬಾನ ಮಾಡುವುದಕ್ಕಾಗಿ ತಂದು ಒಪ್ಪಿಸುತ್ತಾರೆ. ಈ ಎಡೆಯನ್ನು ನರುವುಗಲ್ಲು, ಓಟಿಕೆರೆ, ಹುಳಿಯಾರು ಹಾಗೂ ಕೆಂಕೆರೆ ಗ್ರಾಮಗಳ ಭಕ್ತರು ತಯಾರಿಸುತ್ತಾರೆ. ಎಡೆಯನ್ನು ದೊಡ್ಡ ಬುಟ್ಟಿಗಳಲ್ಲಿ ತುಂಬಿಸಿಡುತ್ತಾರೆ. ಹರಕೆ ಸಲ್ಲಿಸುವ ಭಕ್ತರು ಬುಟ್ಟಿಗಳನ್ನು ಹೊತ್ತು ಹರಕೆ ಸಲ್ಲಿಸುತ್ತಾರೆ. ನಂತರ ಅಲ್ಲಿ ನೆರೆದ ಭಕ್ತರಿಗೆ ಹಂಚುತ್ತಾರೆ. ಇದೇ ಸಂದರ್ಭದಲ್ಲಿ ತೋಪಿನ ಭೂತಪ್ಪನಿಗೆ ‘ಮರಿ’ ಸೇವೆ ಮಾಡುತ್ತಾರೆ.  ಕಾರ್ನಿಕ ಹೋಮದ ನಂತರ ಬೆಳಗಿನ ಜಾವದಲ್ಲಿ ಕಂಚೀದೇವರ ಪರವಾಗಿ ದೊಡ್ಡ ದೇವರು ಎಂಬ ಜೋಡಿ ಅಲಗುಗಳ ದೇವರನ್ನು ಹೊತ್ತು ಬುತ್ತಿಬಾನದ ಗೂಡೆಯನ್ನು ತಲೆಯ ಮೇಲೆ ಹೊತ್ತು ಉತ್ತರ ಗುಡ್ಡವನ್ನು ಏರುತ್ತಾರೆ. ಸಿದ್ಧರ ಲಿಂಗಗಳಿಗೆ ಪೂಜಿಸಿ, ಬುತ್ತಿಬಾನ ಸಡಿಲಿಸಿ, ಮೂರು ಮಡಿಕೆ ಎಡೆ ಹಿಡಿದು, ಹಳೆಯ ಬಿಲ್ಲು, ಬಾಣಗಳಿಂದ ಅಂಬು ಆಚರಿಸುತ್ತಾರೆ. ಬಾಣ ಬಿಟ್ಟ ಸ್ಥಳಕ್ಕೆ ಕೂಡಲೇ ತೆಂಗಿನಕಾಯಿ ಒಡೆದು ಅದರ ತೀರ್ಥಬಿಡುತ್ತಾರೆ. ಹೀಗೆ ಉತ್ತರೆ ಮಳೆಯಲ್ಲಿ ಮೊದಲು ಅಂಬು ನಡೆಯುವುದರಿಂದಾಗಿ ಬೆಟ್ಟಕ್ಕೆ ಉತ್ತರ ಬೆಟ್ಟ ಎಂದು ಹೆಸರು ಬಂದಿದೆ ಎಂದು ಹೇಳುತ್ತಾರೆ. ಇದೇ ಸಂದರ್ಭದಲ್ಲಿ ಕಂಚೀವರದ ದೇವರು ದೊಡ್ಡವಜ್ರ ಕ್ಷೇತ್ರದಲ್ಲಿ ಗಂಗಾಸ್ನಾನ ಮಾಡಿ, ಅಭಿಷೇಕ ಹೊಂದಿ, ಪವಿತ್ರಗೊಂಡು ತನ್ನ ಪ್ರಿಯ ಅಲಂಕಾರ ಸಂಕೇತವಾದ ನಾಮವನ್ನು ಹಚ್ಚಿಸಿಕೊಳ್ಳುತ್ತದೆ. ಇದು ಆ ವರ್ಷದಲ್ಲಿ ದೇವರು ಹಚ್ಚಿಸಿಕೊಳ್ಳುವ ತಿಲಕವಾಗಿರುತ್ತದೆ. ಅದಕ್ಕಾಗಿ ಅಂದು ಅನ್ನ ಸಂತರ್ಪಣೆ ಹಾಗೂ ಧೂಪದ ಸೇವೆ ನಡೆಯುತ್ತದೆ.

ಕಂಚೀಪುರದ ಉತ್ಸವದಲ್ಲಿ ಮೂರು ಭೂತಪ್ಪಗಳು, ಸೋಮ, ದೊಡ್ಡಬಾಣಗಳು ಇರುತ್ತವೆ. ಯಜಮಾನ ದೇವರಿಲ್ಲದೆ ಕಂಚೀವರದ ಹೊರಡುವುದಿಲ್ಲ. ಯಜಮಾನ ದೇವರನ್ನು ಗೊಲ್ಲರ ಚಿತ್ರಪ್ಪದೈವವೆಂದು ನಂಬಲಾಗಿದೆ. ಎರಡು ಉದ್ದವಾದ ಎರಡು ಬಾಣಗಳನ್ನು ಜೋಡಿಸಿ ಹೊಸ ರೇಷ್ಮೆ ವಸ್ತ್ರದಿಂದ ಸುತ್ತಿ ಕಟ್ಟಲಾಗಿರುತ್ತದೆ.  ಇದಕ್ಕೆ ಮೇಲುಭಾಗದಲ್ಲಿ ಬೆಳ್ಳಿಯ ಮುಖಪದ್ಮ ಹಾಕಲಾಗಿರುತ್ತದೆ. ಮಡಿಯಿಂದ ಇರುವವರು ಈ ಅಸ್ತ್ರ ದೇವರನ್ನು ಭುಜದ ಮೇಲೆ ಹೊತ್ತು, ದೇವರಿಗಿಂತ ಮುಂದೆ ನಡೆಯುತ್ತಾರೆ. ಕಂಚೀದೇವರ ಸಕಲ ಕಾರ್ಯಭಾರವನ್ನು ನಿಭಾಯಿಸುವ ರಾಯಭಾರಿ, ಈ ಬಾಣದೇವರು ಆಗಿರುತ್ತಾನೆ.

ಕಂಚೀಬೆಟ್ಟದಲ್ಲಿ ಹರವಿಬಾನ ಹಾಗೂ ಪಾಷಾಣದೆಡೆ ಸೇವೆಗಳು ನಡೆಯುತ್ತವೆ. ಕುಂಚಿಟಿಗ ಜನಾಂಗದ ಭಕ್ತರು ಮಣ್ಣಿನ ಮಡಕೆಯಲ್ಲಿ ಮಡಿಯಿಂದ ಅನ್ನ ಮಾಡಿ, ಮಡಕೆಯಲ್ಲಿಯೆ ದೇವರಿಗೆ ನೈವೇದ್ಯ ಹಿಡಿಯುವ ಸೇವೆಗೆ ಹರವಿ ಬಾನ ಸೇವೆ ಎಂದು ಕರೆಯುತ್ತಾರೆ. ಹಿಂದೆ ದೇವರನ್ನು ಪರೀಕ್ಷಿಸಲು ಎಡೆಗೆ ವಿಷ ಹಾಕಿ ನೈವೇದ್ಯ ಮಾಡಿದರಂತೆ. ಕಂಚೀದೇವರು ಆ ಕಿಡಿಗೇಡಿಗಳನ್ನು ಹಿಡಿದು ಆ ವಿಷದ ನೈವೇದ್ಯವನ್ನು ಅವರಿಗೆ ತಿನ್ನುವಂತೆ ಮಾಡಿದರಂತೆ. ಅದರ ಪ್ರಾಯಶ್ಚಿತ್ತವಾಗಿ ಇಂದಿಗೂ ಗೊಲ್ಲರು, ಬೆಸ್ತ ನಾಯಕರು ದೇವರಿಗೆ ರಥೋತ್ಸವದ ನಾಲ್ಕು ದಿನ ಮೊದಲು ಪಾಷಾಣದೆಡೆಯನ್ನು ಮಡಿಯಿಂದ ತಯಾರಿಸಿ, ಅರ್ಪಿಸುತ್ತಾರೆ. ಕೆಲವು ನಿರ್ದಿಷ್ಟ ಭಕ್ತರು ಈ ವಿಷದ ಎಡೆಯನ್ನು ಕೈಯಲ್ಲಿ ಮುಟ್ಟದೇ ಪ್ರಾಣಿಗಳಂತೆ ನೇರವಾಗಿ ಎಡೆಗೆ ಬಾಯಿ ಹಾಕಿ ತಿನ್ನುತ್ತಾರೆ. ವಿಷದೆಡೆಯಿಂದ ತೊಂದರೆಯಾಗದಿರಲೆಂದು ದೇವರ ತೀರ್ಥ ಹಾಕುತ್ತಿರುತ್ತಾರೆ. ವಿಷದೆಡೆಯನ್ನು ಯಾವ ಪದಾರ್ಥಗಳಿಂದ ತಯಾರಿಸುತ್ತಾರೆ ಎಂಬುದನ್ನು ಹೇಳುವುದಿಲ್ಲ. ಆದರೆ ಪ್ರಸಾದದಂತೆ ಸೇವಿಸಿದ ಭಕ್ತರಿಗೆ ಯಾವ ತೊಂದರೆಯೂ ಆಗುವುದಿಲ್ಲ.

ಹಳ್ಳಿಕಾರ್ ಒಕ್ಕಲಿಗ ಭಕ್ತರು ರಾಗಿಹಿಟ್ಟು ಮತ್ತು ಮಜ್ಜಿಗೆ ಸೇರಿಸಿ ತಯಾರಿಸಿದ ಅಂಬಲಿಯನ್ನು ರಥೋತ್ಸವದ ಹಿಂದಿನ ದಿನ ದೇವರಿಗೆ ಅರ್ಪಿಸುತ್ತಾರೆ. ಇದನ್ನು ಸೊರಗಂಬಲಿ ಸೇವೆ ಎಂದು ಕರೆಯುತ್ತಾರೆ. ಇದಕ್ಕೊಂದು ಕಥೆ ಇದೆ. ಹಿಂದೆ ದೇವರು ನೆಲೆಯಾಗಲು ಸ್ಥಳ ಅರಸುತ್ತಿರುವ ಸಂದರ್ಭದಲ್ಲಿ ಈಗಿನ ಕಂಚೀಪುರದಲ್ಲಿ ನಿತ್ರಾಣನಾಗಿ ಬಿದ್ದನಂತೆ. ಆಗ ರಾಗಿ ಅಂಬಲಿ ಕೊಡಿಸಿ ಸಂತೈಸಿದರಂತೆ. ಅಂದಿನಿಂದ ರಾಗಿ ಅಂಬಲಿ ಸೇವೆ ನಡೆಯುತ್ತಾ ಬಂದಿದೆ ಎಂದು ಹೇಳುತ್ತಾರೆ. ಅಂದಿನ ಹಬ್ಬದಡುಗೆಯೂ ರಾಗಿ ಅಂಬಲಿಯೇ ಆಗಿರುತ್ತದೆ.

ಒಡಮಾವು ಮುಡಿದು ಸುಗಂಧಭರಿತನಾದ ಕಂಚೀವರನು ಮದಾಲ್ಸಿಯಲ್ಲಿ ತನ್ನ ಮನದನ್ನೆಯ ಸನಿಹಕ್ಕೆ ಹೀಗೆ ಸಾಗುವ ಮಾರ್ಗದಲ್ಲಿ ಭಕ್ತರು ದಿಂಡುರುಳು ಸೇವೆ ಸಲ್ಲಿಸುತ್ತಾರೆ. ಮಧ್ಯರಾತ್ರಿಯಲ್ಲಿ ಯಾವುದೇ ವಾದ್ಯದ ಸದ್ದಿಲ್ಲದೆ ಸೂಳೆ ಮಂಟಪ ಸೇರುತ್ತಾನೆ. ಅಲ್ಲಿ ಭಕ್ತರು ಕಂಚೀವರನಿಗಾಗಿ ವೀಳ್ಯದೆಲೆ ಮತ್ತು ಅಡಿಕೆಯನ್ನು ತಟ್ಟೆಯಲ್ಲಿಟ್ಟಿರುತ್ತಾರೆ. ಬೆಳಿಗ್ಗೆ ಮಂಟಪದ ಸುತ್ತ ದೇವರು ಅಗಿದುಗಿದ ತಾಂಬೂಲವಿರುತ್ತದೆಂದು ಹೇಳುತ್ತಾರೆ.