ಮಂಡ್ಯ ಜಿಲ್ಲೆಯ ಅಲಕೆರೆ ವೀರಭದ್ರ ದೇವಸ್ಥಾನದ ಎದುರು ನಡೆಯುವ ಅಗ್ನಿಕೊಂಡದ ಮಹೋತ್ಸವ. ಹಿಂದೆ ವರ್ಷಕ್ಕೆ ಒಂದು ಬಾರಿ ನಡೆಯುವ ಈ ಅಗ್ನಿಕೊಂಡದ ಆಚರಣೆ ಈಗ ನಿಯಮಿತವಾಗಿ ನಡೆಯುತ್ತಿಲ್ಲ. ಈ ಹಬ್ಬ ವರ್ಷದ ಮೇ ತಿಂಗಳಿನಲ್ಲಿ ನಡೆಯುತ್ತದೆ. ಹಬ್ಬದ ತಯಾರಿ ಆ ವರ್ಷದ ಜನವರಿಯಿಂದಲೇ ಆರಂಭವಾಗುತ್ತದೆ. ಸುತ್ತಲಿನ ಊರಿನವರು ಸಭೆ ಸೇರಿ ಹಬ್ಬದ ಆಚರಣೆಯ ತೀರ್ಮಾನ ತೆಗೆದುಕೊಳ್ಳುತ್ತಾರೆ. ಊರಿನ ಪ್ರತಿ ದೇವಾಲಯ ಹಾಗೂ ಗೋಪುರಗಳು ಸುಣ್ಣಬಣ್ಣದಿಂದ ಅಲಂಕೃತಗೊಳ್ಳುತ್ತವೆ. ಅಗ್ನಿಕೊಂಡಕ್ಕೆ ಮರಗಳನ್ನು ಕಡಿಯುವ ದಿನ ಪೂಜಿಸಿ, ವಿಧಿವಿಧಾನಗಳನ್ನು ಅನುಸರಿಸುತ್ತಾರೆ. ಅರಳಿ, ಗೊಬ್ಬಳಿ, ಹುಣಸೆ ಮರಗಳನ್ನು ಕಡಿಯುವಂತಿಲ್ಲ. ಇನ್ನುಳಿದ ಮರಗಳ ಕಟ್ಟಿಗೆಗಳನ್ನು ದೇವಾಲಯದ ಬಯಲಿಗೆ ತಂದು ರಾಶಿ ಹಾಕುತ್ತಾರೆ. ಹಬ್ಬಕ್ಕೆ ಹನ್ನೆರಡು ದಿನ ಮುಂಚಿತವಾಗಿ ಕಂಬಿಕ್ಕುವ ಮೂಲಕ ಹಬ್ಬದ ಕಾರ್ಯ ವಿಧಿವತ್ತಾಗಿ ಆರಂಭವಾಗುತ್ತದೆ. ದೇವಾಲಯದ ಎದುರು ಕೊಂಡಕ್ಕಾಗಿಯೇ 74 ಅಡಿ ಉದ್ದ, 5 ಅಡಿ ಅಗಲ, 4 ಅಡಿ ಆಳವಾದ ಹೊಂಡ ತೋಡುತ್ತಾರೆ. ದೇವಾಲಯದ ಪ್ರಾಂಗಣದ ಪ್ರವೇಶದ್ವಾರದ ಮೇಲಿನ ಬಸವ ಮೂರ್ತಿಯ ಕೊಂಬಿಗೆ ಸೂತ್ರಕಟ್ಟಿ ಅದರ ಎತ್ತರಕ್ಕೆ ಮರದ ದಿಮ್ಮಿಗಳನ್ನು ಅಗ್ನಿಕೊಂಡಕ್ಕೆ ಜೋಡಿಸುತ್ತಾರೆ.

ಭಕ್ತಾದಿಗಳು ಕೊಂಡ ಹಾಯುವ ಗುಡ್ಡರನ್ನು ಭೇಟಿ ಮಾಡಿ ಕಾಣಿಕೆ ನೀಡುತ್ತಾರೆ. ಸೌದೆ ರಾಶಿಗೆ ಪೂಜೆ ಸಲ್ಲಿಸುತ್ತಾರೆ. ಕೊಂಡ ಹಾಯುವ ಮೊದಲು ಎರಡು ದಿನಗಳು ಪೂಜಾ ವಿಧಿಗಳು ನಡೆಯುತ್ತವೆ. ಬಂಡಿ ಉತ್ಸವ ಮುಗಿದ ನಂತರ ಸಂಜೆ ಇಳಿಹೊತ್ತಿನಲ್ಲಿ ಲಿಂಗಾಯಿತ ಪೂಜಾರಿಯಿಂದ ಕರ್ಪೂರ ಜ್ಯೋತಿ ಪಡೆದ ಹರಿಜನ ಮುಖಂಡ ಅಗ್ನಿ ಕುಂಡದ ಮರದ ದಿಮ್ಮಿಗಳ ರಾಶಿಗೆ ಅಗ್ನಿ ಸ್ಪರ್ಶ ಮಾಡುತ್ತಾನೆ. ದಿಮ್ಮಿಗಳು ಇಡೀ ರಾತ್ರಿ ಉರಿದು ಕೆಂಡವಾಗುತ್ತದೆ. ಸೂರ್ಯೋದಯದ ಮುನ್ನ ವೀರಭದ್ರನ ಹಲಗೆ ಹಾಗೂ ಪೂಜೆ ಹೊತ್ತ ಇಬ್ಬರು ಲಿಂಗಾಯಿತರು ಕೊಂಡ ಹಾಯುವ ಮೂಲಕ ಆಚರಣೆ ಆರಂಭವಾಗುತ್ತದೆ.

ಧಾರ್ಮಿಕ ಆಚರಣೆಯ ಹೆಸರಿನಲ್ಲಿ ಯಾರು ಸರಿಪಡಿಸಲಾರದಂತಹ ಪೆಟ್ಟು ಪರಿಸರಕ್ಕಾಗುತ್ತದೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ನೂರಾರು ಟನ್ ತೂಕದ ದಿಮ್ಮಿಗಳು ಉರಿದು ನಾಶವಾಗುತ್ತವೆ. ಈ ಬಗೆಯ ಆಚರಣೆಗಳು ನಡೆಯದಿರುವುದೇ ಒಳ್ಳೆಯದು. ಹೀಗೆ ಮರಗಿಡಗಳನ್ನು ಸುಡುವ ಆಚರಣೆಯನ್ನು ಬದಲಿಸಿ ಸಾವಿರಾರು ಗಿಡಗಳನ್ನು ನೆಡುವುದರ ಆಚರಣೆ ಮಾಡಿದರೆ ಪರಿಸರಕ್ಕೆ ಒಳಿತಾಗಿ, ನಮ್ಮ ಬದುಕು ಹಸನಾಗುವುದು.