ದೇವರಿಗೆ ಅರ್ಪಿಸುವ ವಿಶಿಷ್ಟ ಬಗೆಯ ನೈವೇದ್ಯ. ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ಜಗನ್ನಾಥಸ್ವಾಮಿ ದೇವಾಲಯವಿದೆ. ಪ್ರತಿ ವರ್ಷ ದೇವರ ರಥೋತ್ಸವವು ಒರಿಸ್ಸಾದ ‘ಪುರಿ’ಯ ಜಗನ್ನಾಥ ರಥೋತ್ಸವದಂದೇ ಜರುಗುವುದು ಇಲ್ಲಿಯ ವಿಶೇಷ. ದೇಶದಲ್ಲಿನ ನಾಲ್ಕು ಜಗನ್ನಾಥ ಮಂದಿರಗಳಲ್ಲಿಯು ನಿತ್ಯ ನೈವೇದ್ಯ ನಡೆಯುತ್ತದೆ. ಆದರೆ ಗುಳೇದಗುಡ್ಡದ ಸ್ವಾಮಿಗೆ ನಡೆಯುವ ಪೂಜೆ, ನೈವೇದ್ಯ ಇತ್ಯಾದಿಗಳು ವಿಶಿಷ್ಟವೂ ವೈವಿಧ್ಯಪೂರ್ಣವೂ ಆಗಿದೆ.

ದೇವರ ಕೃಪೆಯಿಂದ ಕಷ್ಟ ಪರಿಹಾರಕ್ಕೆ ಭಕ್ತರು ಹರಕೆ ಸಲ್ಲಿಸುವ ವಿಶಿಷ್ಟ ಪದ್ಧತಿ ನಿತ್ಯವೂ ನಡೆಯುತ್ತದೆ. ಹರಕೆ ಹೊತ್ತ ಭಕ್ತರು ಅಕ್ಕಿ, ಸಕ್ಕರೆ ಹಾಗೂ ಹಾಲಿನಿಂದ ಮಾಡಿದ ನೈವೇದ್ಯವನ್ನು ಹೊಸ ಮಡಕೆಯಲ್ಲಿ ತುಂಬಿಸಿ, ದೇವರ ಪೂಜಾ ಸಂದರ್ಭದಲ್ಲಿ ಒಪ್ಪಿಸುತ್ತಾರೆ. ನೈವೇದ್ಯದ ಹರಕೆಗೆ ‘ಅಟಕಾ’ ಎಂದು ಕರೆಯುತ್ತಾರೆ. ಪೂಜಾರಿಯು ದೇವರನ್ನು ಪೂಜಿಸಿ, ಭಕ್ತರು ತಂದ ನೈವೇದ್ಯವನ್ನು ಅರ್ಪಿಸುತ್ತಾರೆ. ಭಕ್ತರು ಸೇವೆಗಾಗಿ ಹೊತ್ತು ತಂದ ನೈವೇದ್ಯದ ಹೊಸ ಮಡಕೆಯನ್ನು ದೇವರ ಮುಂದೆ ಇಡುವಾಗಲೇ ಮಡಕೆ ನಾಲ್ಕು ಭಾಗವಾಗಿ ಒಡೆಯುತ್ತದೆ. ಪ್ರತಿದಿನಕ್ಕೆ ದೇವಾಲಯದಲ್ಲಿ ಸುಮಾರು 30ಕ್ಕೂ ಹೆಚ್ಚು ಅಟಕಾ ಸೇವೆಗಳು ನಡೆಯುತ್ತವೆ. ‘ಅಟಕಾ’ ಸಲ್ಲಿಸಿದ ಭಕ್ತರು ದೇವಾಲಯದಲ್ಲಿ ನೆರೆದ ಭಕ್ತರಿಗೆ ನೈವೇದ್ಯವನ್ನು ಪ್ರಸಾದವಾಗಿ ಹಂಚುತ್ತಾರೆ.