ಕೃಷಿಸಂಬಂಧೀ ಆಚರಣೆಯಾದ ಇದು ಉತ್ತರ ಕರ್ನಾಟಕದಲ್ಲಿ ಕಂಡುಬರುತ್ತದೆ. ಮುಂಗಾರು ಮತ್ತು ಹಿಂಗಾರು ಮಳೆಗೆ ಸಂಬಂಧಿಸಿದ ಗಾದೆ ಮಾತು ಆಚರಣೆಯ ಪ್ರಾಮುಖ್ಯವನ್ನು ಪ್ರಜ್ವಲಿಸಿದೆ. “ಕಾರಹುಣ್ಣಿಮೆ ಕರಕೊಂಡು ಬಂತು, ಹೋಳಿ ಹುಣ್ಣಿಮೆ ಉಡಿಕ್ಕೊಂಡು ಹೋತು” ಬಿತ್ತುವುದಕ್ಕೆ ಭೂಮಿಯನ್ನು ಮೊದಲು ಅಣಿಗೊಳಿಸುವುದಕ್ಕೆ ಮುನ್ನ ಪೂಜೆ ಮಾಡುವುದು ಅಡಿಪೂಜೆ ಎಂದು ಕರೆಯಿಸಿ ಕೊಂಡಿದೆ.

ಕುರುಬ ರೈತನೊಬ್ಬ ಹಸಿ ಜಾಲಿ ಕಟ್ಟಿಗೆಯ ತುಂಡನ್ನು ಕಮ್ಮಾರನ ಮನೆಗೆ ಒಯ್ದು ಇಂದು ಅಡಿಪೂಜೆ ಮಾಡೋಣ ಎಂದು ಹೇಳಿದ ತಕ್ಷಣ ಇಡೀ ಊರು ಅಡಿಪೂಜೆಗೆ ಸಿದ್ಧವಾಗುತ್ತದೆ. ಬಡಿಗ, ಕಮ್ಮಾರ ಹಾಗೂ ಊರಿನ ಜನರೆಲ್ಲ ಅಡಿಪೂಜೆಗೆ ಸಿದ್ಧತೆ ನಡೆಸುತ್ತಾರೆ. ಅಡಿಗಲ್ಲನ್ನು ಕಮ್ಮಾರನು ತಮ್ಮ ಅಧಿದೇವತೆಯಾದ ಕಾಳಿಯ ಸ್ವರೂಪವೆಂದು ತಿಳಿದು ಪೂಜಿಸುತ್ತಾರೆ.

ಅಡಿಪೂಜೆಯ ದಿನ  ಕುರುಬರು  ಬಿತ್ತುವ ಬೀಜ, ನೈವೇದ್ಯ ಮತ್ತು ಪೂಜಾ ಸಾಮಗ್ರಿಗಳನ್ನು ಅಡಿಗಲ್ಲಿನ ಬಳಿ ತರುತ್ತಾನೆ. ಅಡಿಗಲ್ಲಿನ ಮುಂದೆ ಹಾಸಿದ ಕರಿಕಂಬಳಿಯ ಮೇಲೆ ಜಾಲಿಕಟ್ಟಿಗೆಯಿಂದ ಕತ್ತರಿಸಿದ ಮೂರುಗೇಣಿನ ನಾಲ್ಕು ತುಂಡುಗಳನ್ನು, ಬಡಗಿತನದ ಮತ್ತು ರೈತನ ಸಲಕರಣೆಗಳನ್ನು ಇಟ್ಟು, ಕುಂಕುಮ, ಹೂಗಳಿಂದ ಅಲಂಕರಿಸುತ್ತಾನೆ. ಎಲೆ, ಅಡಿಕೆ, ನೆಲಗಡಲೆ ಇತ್ಯಾದಿ ನೈವೇದ್ಯಗಳಿಂದ ಪೂಜಿಸಿ, ಕಾಯಿ ಒಡೆದು ಆರತಿ ಎತ್ತಿ ಪೂಜಿಸುತ್ತಾನೆ. ಪರಸ್ಪರರು ಕುಂಕುಮ ವಿತರಿಸಿಕೊಂಡು, ನೈವೇದ್ಯದ ಪ್ರಸಾದ ಸ್ವೀಕರಿಸುತ್ತಾರೆ.

ಪೂಜೆ ನಂತರ ಕಮ್ಮಾರನು ಕೂರಿಗೆ ತಾಳಿಗಾಗಿ ಹಾಕುವ ಮೊದಲ ಕಚ್ಚನ್ನು ಭಕ್ತಿಯಿಂದ ನೋಡುತ್ತಾರೆ. ಬಾಚಿ ಏಟಿನಿಂದ ಕೆಳಗೆ ಬೀಳುವ ಮೊದಲ ಚಕ್ಕೆ ಆ ವರ್ಷದ ಕೃಷಿ ಚಟುವಟಿಕೆಯ ಶುಭ ಮತ್ತು ಅಶುಭ, ಸಮೃದ್ದಿ ಮತ್ತು ಬರಗಾಲದ ಬಗ್ಗೆ ಸಂಕೇತ ನೀಡುತ್ತದೆ. ಬಿದ್ದ ಜಾಲಿಯ ಚಕ್ಕೆ ಚೂರು ಬೋರಲಾಗಿ ಬಿದ್ದರೆ ಆ ವರ್ಷ ಮಳೆ ಬೆಳೆ ಪ್ರಮಾಣ ಕಡಿಮೆಯಾಗುವುದೆಂದೂ, ಅಂಗಾತ ಬಿದ್ದರೆ ಸಮೃದ್ದಿಯೆಂದು ಅರ್ಥೈಸಿಕೊಳ್ಳುತ್ತಾರೆ.

ಪೂಜಾ ಕಾರ್ಯಗಳು ಮುಗಿದ ಮೇಲೆ ಬಡಿಗನು ದಿಂಡು, ತಾಳು, ಈಸು, ಚಕ್ಕೆ ಎಲ್ಲವನ್ನು ಹೊಸದಾಗಿ ಮಾಡುತ್ತಾನೆ. ಕೂರಿಗೆಗೆ ಹೊಸದಾದ ಕಟ್ಟುವ ದಾರ, ಮಂಡಿ, ಯಾಸಿದಾರ ಇತ್ಯಾದಿಗಳಿಂದ ಸಿದ್ಧಗೊಳಿಸಿ, ಹಾಸಿದ ಕರಿಗಂಬಳಿಯ ಮೇಲೆ ಇರಿಸುತ್ತಾರೆ. ಸಿದ್ಧಗೊಂಡ ಕೂರಿಗೆಗೆ ಪರೀಕ್ಷಾರ್ಥವಾಗಿ ಬಿತ್ತುವ ಬೀಜ ಹಾಕಿ ನೋಡಿಕೊಳ್ಳುತ್ತಾರೆ.

ಬಡಗಿ ಮನೆಯವರೆಗೂ ಸಾಮೂಹಿಕವಾಗಿ ಜರುಗಿದ ಆಚರಣೆಯು ನಂತರದ ಹಂತದಲ್ಲಿ ವ್ಯಕ್ತಿಗತವಾಗಿ ಮುಂದುವರೆಯುತ್ತದೆ. ರೈತ ಕೂರಿಗೆಯನ್ನು ಬಡಗಿಯ ಮನೆಯಿಂದ ತನ್ನ ಮನೆಗೆ ಹೊತ್ತು ತರುತ್ತಾನೆ. ಮನೆಯ ಅಂಗಳದಲ್ಲಿ ಕೂರಿಗೆಯನ್ನು ಇರಿಸಿ, ತನ್ನ ಕುಟುಂಬದರೊಂದಿಗೆ ಅದಕ್ಕೆ ಹೊಸ ಸೀರೆ, ಕುಪ್ಪಸ ತೊಡಿಸಿ, ತಳಿರು ತೋರಣ, ಆಭರಣಗಳಿಂದ ಅಲಂಕರಿಸುತ್ತಾರೆ. ಹೀಗೆ ಸಿಂಗರಿಸಿದ ಕೂರಿಗೆಗೆ ಐದು ಜನ ಮುತ್ತೈದೆಯರು ಉಡಿ ತುಂಬುತ್ತಾರೆ. ನಂತರ ಊರಿನ ಗ್ರಾಮದೇವತೆಗೆ ಎಣ್ಣೆ ದೀಪ ಉರಿಸಿ, ಬೀಜರಿ ನೈವೇದ್ಯ ಅರ್ಪಿಸುತ್ತಾರೆ. ಕೂರಿಗೆಯನ್ನು ಹೊಲಕ್ಕೆ ಒಯ್ದು, ಅಲ್ಲಿ ಲಕ್ಷ್ಮಿ ಪೂಜಿಸಿ, ಬಿತ್ತನೆಗೆ ಆರಂಭಿಸುವುದರ ಮೂಲಕ ಕೂರಿಗೆ ಪೂಜೆ ಮುಗಿಯುತ್ತದೆ.