ಕಾರವಾರದ ಸಮೀಪದ ಹಣಕೋಣದ ಸಾತೇರಿ ಅಮ್ಮನ ದೇವಾಲಯವನ್ನು ವರ್ಷಕ್ಕೆ ಒಂದು ಬಾರಿ ಮಾತ್ರ ತೆರೆಯುವ ರೂಢಿಯಿದೆ. ಇದನ್ನು ಹೊಸಹಬ್ಬ ಎಂತಲೂ ಕರೆಯುತ್ತಾರೆ. ಗಣೇಶ ಚತುರ್ಥಿಯ ಮೂರನೇ ದಿನ ದೇವಾಲಯದ ಬಾಗಿಲನ್ನು ತೆರೆದು, ಆರು ದಿನಗಳವರೆೆಗೆ ಭಕ್ತಾದಿಗಳು ಪೂಜೆ, ಪುನಸ್ಕಾರ, ಜಾತ್ರೆ ಅಲ್ಲದೆ ಹತ್ತಾರು ಆಚರಣೆಗಳನ್ನು ಆ ಸಂದರ್ಭದಲ್ಲಿ ನಡೆಸುತ್ತಾರೆ. ಆ ದಿನಗಳಲ್ಲಿ ಹುಡುಗಿಯರು ಋತುಮತಿಯಾದರೆ ಮದುವೆಗೆ ಅರ್ಹರು ಎಂದು ಪರಿಗಣಿಸುವ ಪದ್ಧತಿ ಇದೆ. ಊರಿನ ಹುಡುಗಿಯರು ಜಾತ್ರೆಯಂದು ‘ಅಡೀಚಿಕೆ’ಯನ್ನು ಅರ್ಪಿಸಬೇಕಾಗುತ್ತದೆ. ಅಕ್ಕಿ, ತೆಂಗಿನಕಾಯಿ, ವೀಳ್ಯದೆಲೆ, ಎಣ್ಣೆ ಮುಂತಾದವುಗಳನ್ನು ಪುಟ್ಟ ಬೆತ್ತದ ಬುಟ್ಟಿಯಲ್ಲಿಟ್ಟು ಅಡೀಚಿಕೆ ಅರ್ಪಿಸುತ್ತಾರೆ. ಆ ಊರಿಗೆ ಮದುವೆಯಾಗಿ ಬಂದ ಹೆಣ್ಣುಮಕ್ಕಳು ವರ್ಷದೊಳಗೆ ಅಡೀಚಿಕೆ ಅರ್ಪಿಸುವುದು ಕಡ್ಡಾಯ.

ಏಳು ದಿನಗಳು ನಡೆಯುವ ಜಾತ್ರೆಯಲ್ಲಿ ಮೊದಲ ದಿನ ಊರ ಪ್ರಮುಖರ ಸಮ್ಮುಖದಲ್ಲಿ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಎರಡನೇ ದಿನ ಸರಿ ರಾತ್ರಿ ಪೂಜೆ ಸಲ್ಲಿಸಲಾಗುತ್ತದೆ. ನಂತರದ ದಿನಗಳಲ್ಲಿ ಮಹಿಳೆಯರು ಅಡೀಚಿಕೆಯನ್ನು ಸಲ್ಲಿಸಿದರೆ, ಪುರುಷರು ‘ತಳಿ’ ಎಂಬ ಆಚರಣೆಯನ್ನು ನಡೆಸುತ್ತಾರೆ. ದೇವಿಯ ದರ್ಶನವನ್ನು ಭಕ್ತರು ಏಳು ದಿನವೂ ನೋಡಿ ಕಣ್ಣು, ಮನಸ್ಸುಗಳಲ್ಲಿ ತುಂಬಿಕೊಳ್ಳುತ್ತಾರೆ. ದೇವಾಲಯದ ಬಾಗಿಲು ಹಾಕಿದ ಮೇಲೆ ದೇವಿಯ ದರ್ಶನದ ಭಾಗ್ಯ ಮುಂದಿನ ಜಾತ್ರೆಯವರೆಗೆ ಕಾಯಬೇಕು. ದೇವಿಯ ಛಾಯಾಚಿತ್ರ, ಮೂರ್ತಿಗಳನ್ನು ಇಟ್ಟುಕೊಳ್ಳುವಂತಿಲ್ಲ. ಏಳನೇ ದಿನ ದೇವಾಲಯದ ಬಾಗಿಲನ್ನು ಪೂಜೆ ಸಲ್ಲಿಸಿ, ವಿಧಿವತ್ತಾಗಿ ಮುಚ್ಚುತ್ತಾರೆ.