ಕರ್ನಾಟಕದ ಎಲ್ಲ ಕಡೆ ಕಂಡು ಬರುತ್ತಾದಾದರೂ, ಆಚರಣೆಯಲ್ಲಿ ವ್ಯತ್ಯಾಸವಿದೆ. ಮಲೆನಾಡಿನಲ್ಲಿ ಕೃಷಿ ಸಂಬಂಧಿ ಆಚರಣೆಯಾದರೆ, ಬಯಲು ನಾಡಿನಲ್ಲಿ ಊರೊಟ್ಟಿನ ರಕ್ಷಣಾ ಸಂಬಂಧಿ ಆಚರಣೆಯಾಗಿದೆ. ಮಲೆನಾಡಿನಲ್ಲಿ ಕೃಷಿಕರು ಬತ್ತದ ಬೆಳೆಗೆ ರೋಗ ಅಂಟಿಕೊಂಡಾಗ ನಿವಾರಣ ಕ್ರಮವಾಗಿ ಮಾಡುತ್ತಾರೆ. ಮಾರಿಯ ಸಂಕೇತವಾದ ಅಜ್ಜಿಯನ್ನು ಸ್ಥಾಪಿಸಿ, ಪೂಜಿಸುತ್ತಾರೆ. ಮನೆ ಮನೆಯಿಂದ ಅಕ್ಕಿ ರೊಟ್ಟಿ, ರಾಗಿರೊಟ್ಟಿ ಮತ್ತು ತೌಡು ಹಿಟ್ಟಿನ ರೊಟ್ಟಿಗಳನ್ನು ಸಿದ್ಧಪಡಿಸಿಕೊಂಡು ಹಂದಿ ಮಾಂಸ ಜೊತೆಗೆ ಇಟ್ಟು ಎಡೆ ಮಾಡುತ್ತಾರೆ. ಅದರಲ್ಲಿ ಸ್ವಲ್ಪ ಗದ್ದೆಗೆ ಚೆಲ್ಲಿ, ಉರಿಯುವ ಕೊಳ್ಳಿಯೊಂದರಿಂದ ಧೂಪ ಹಾಕಿಕೊಳ್ಳುತ್ತಾರೆ. ನಂತರ ಎಡೆಯನ್ನು ಎಲ್ಲರೂ ಹಂಚಿ ತಿನ್ನುತ್ತಾರೆ. ನಂತರ ‘ಅಜ್ಜಿ’ಯನ್ನು ತಮ್ಮ ಕೋಗಿನಾಚೆಗೆ ಹೊತ್ತು, ಒಡೆದು ನೀರಿನಲ್ಲಿ ತೇಲಿ ಬಿಡುತ್ತಾರೆ. ಈ ಆಚರಣೆಯಲ್ಲಿ ಊರಿನ ಎಲ್ಲರೂ ಸೇರಿರುತ್ತಾರೆ.

ಉತ್ತರ ಕರ್ನಾಟಕದ  ‘ಅಜ್ಜಿ ಆಚರಣೆ’ ಮಲೆನಾಡಿನ ಅಜ್ಜಿ ಪೂಜೆಗಿಂತ ಭಿನ್ನವಾಗಿದೆ. ಒಂದು ಗೊತ್ತಾದ ದಿನ ಊರಿನವರೆಲ್ಲ ಒಂದು ಕಡೆ ಸೇರಿ ಹಬ್ಬದ ದಿನವನ್ನು ಗೊತ್ತು ಮಾಡುತ್ತಾರೆ. ಪ್ರತಿವರ್ಷ ಜೂನ್-ಜುಲೈ ತಿಂಗಳಲ್ಲಿ ಆಚರಿಸುತ್ತಾರೆ. ಹಬ್ಬಕ್ಕೆ ಗೊತ್ತು ಮಾಡಿದ ದಿನ ಊರಿನ ಪ್ರತಿ ಮನೆಯವರು ಅವರವರ ಮನೆಗಳನ್ನು ಹಾಗೂ ಅಂಗಳವನ್ನು ಸ್ವಚ್ಛ ಮಾಡುತ್ತಾರೆ. ಸ್ವಚ್ಛ ಮಾಡಿದ ನಂತರ ಸಂಗ್ರಹಿತವಾಗಿರುವ ಕಸಕಡ್ಡಿ ಹಾಗೂ ಹರಿದು ಹಾಳಾದ ಗೃಹೋಪ ಯೋಗಿ ವಸ್ತುಗಳನ್ನು ಊರಿನ ಅಂಚಿಗೆ ಇರುವ ಮರದ ತೋಪಿನ ಕೆಳಗೆ ತಂದು ರಾಶಿ ಹಾಕುತ್ತಾರೆ. ಹೀಗೆ ಸಂಗ್ರಹಿತವಾದ ಎಲ್ಲಾ ಮನೆಯ ಕಸದ ರಾಶಿಯೇ  ‘ಅಜ್ಜಿ’. ಹಬ್ಬದ ದಿನ ‘ಅಜ್ಜಿ’ಗೆ ವಿವಿಧ ಬಗೆಯ ತಿನಿಸುಗಳ ಎಡೆಯನ್ನು ಅರ್ಪಿಸಿ, ಭಕ್ತಿಯಿಂದ ಪೂಜಿಸುತ್ತಾರೆ. ಈ ಆಚರಣೆ ಯಲ್ಲಿ ಊರಿನ ಕೊಳೆಯನ್ನು ಕಳೆಯುವ ತಂತ್ರಗಾರಿಕೆ ತುಂಬಿದೆ. ಈ ಆಚರಣೆಯ ಸಾಲಿನಲ್ಲಿ ಮಲೆನಾಡಿನ ಗಡಿ ಮಾರಿ, ಕಟ್ಟಜ್ಜಿ, ದಕ್ಷಿಣ ಕನ್ನಡ ಜಿಲ್ಲೆಯ ಚುಣ್ಣ, ಆಟಿ ಕಳೆಂಜ ಇತ್ಯಾದಿಗಳನ್ನು ಸೇರಿಸಬಹುದು.