ಮುಮ್ಮಟ್ಟಿ ಗುಡ್ಡ ಬಿಜಾಪುರದಿಂದ 13.ಕಿ.ಮೀ. ದೂರದಲ್ಲಿದೆ. ಹನ್ನೆರಡನೇ ಶತಮಾನದಲ್ಲಿದ್ದವೆಂದು ಹೇಳಲಾಗುವ ಅಮೋಘಸಿದ್ಧನ ಮೂಲ ನೆಲೆ ಮುಮ್ಮಟ್ಟಿಗುಡ್ಡ. ಅಲ್ಲಿನ ಜನ ಅಮೋಘಸಿದ್ಧನ ಬಗೆಗೆ ಅನೇಕ ಕಥೆಗಳನ್ನು ಹೇಳುತ್ತಾರೆ. ಆತನ ವಂಶಸ್ಥರು ನೂರೊಂದು ಜನ. ಆರುನೂರ ಒಂದು ಜನರಿಂದ ಈ ವಂಶ ಸಾವಿರದ ಒಂದಾಗಿ ಬೆಳೆಯಿತು ಇತ್ಯಾದಿ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದ ಗಡಿ ಭಾಗಗಳಲ್ಲಿ ಅವನ ವಂಶಸ್ಥರ ಸಮಾಧಿಗಳಿವೆ. ಅಲ್ಲಿ ದೇವಾಲಯಗಳಿದ್ದು, ಅವುಗಳಲ್ಲಿ ಅಮೋಘಸಿದ್ಧನ ಸಂಪ್ರದಾಯಕ್ಕೆ ಸೇರಿದ ಒಡೆಯರುಗಳು ಪೂಜಾರಿಗಳಾಗಿದ್ದಾರೆ. ಸಮಾಧಿ ದೈವಗಳು ಪಲ್ಲಕ್ಕಿ ಏರಿ ಛಟ್ಟಿ ಅಮಾವಾಸ್ಯೆಯ ದಿವಸ ವರ್ಷಕ್ಕೆ ಒಂದು ಬಾರಿ ಅಮೋಘನ ಆಶೀರ್ವಾದ ಪಡೆದು ಮುಮ್ಮಟ್ಟಿ ಗುಡ್ಡದ ಕೆಳಗಡೆ ಬಂದು ಸೇರುವ ವಿಶಿಷ್ಟ ಬಗೆಯ ಆಚರಣೆ. ಈ ಆಚರಣೆಯನ್ನು ‘ಭೇಟಿ ಆಚರಣೆ’ ಎಂದು ಕರೆಯುತ್ತಾರೆ.

ಗುರು ಅಮೋಘಸಿದ್ಧನ ಪಲ್ಲಕ್ಕಿಗೆ ಒಂದು ಸ್ಥಳವನ್ನು ಗುರುತಿಸಿಕೊಂಡಿರುತ್ತಾರೆ. ಸಿದ್ಧನ ಪಲ್ಲಕ್ಕಿ ಬರುವ ಮುನ್ನ ಬೇರೆ ಪಲ್ಲಕ್ಕಿಗಳು ಅಲ್ಲಿಗೆ ಬರುವಂತಿಲ್ಲ. ಸುತ್ತಲಿನ ಗ್ರಾಮಗಳ ಸುಮಾರು 150ಕ್ಕೂ ಹೆಚ್ಚು ಪಲ್ಲಕ್ಕಿಗಳು ಅಂದು ಮುಮ್ಮಟ್ಟಿ ಗುಡ್ಡದ ಕೆಳಭಾಗದಲ್ಲಿ ಕೂಡಿರುತ್ತವೆ. ಛಟ್ಟಿ ಅಮಾವಾಸ್ಯೆಯ ಇಳಿ ಹೊತ್ತಿನ ಸುಮಾರು ನಾಲ್ಕು ಗಂಟೆಯ ವೇಳೆಗೆ ಅಮೋಘ ಸಿದ್ಧನ ಪಲ್ಲಕ್ಕಿ ಗುಡ್ಡ ದಿಂದ ಕೆಳಗೆ ಬಂದು ನಿಗದಿತ ಸ್ಥಳವನ್ನು ಸೇರುತ್ತದೆ. ಆಗಲೇ ಭೇಟಿಗಾಗಿ ಕಾಯುತ್ತಿರುವ ಸಮಾಧಿ ದೈವಗಳ ಪಲ್ಲಕ್ಕಿಗಳು ಅಮೋಘನ ಕಡೆಗೆ ನಾಲ್ಕು ದಿಕ್ಕಿನಿಂದ ನುಗ್ಗುತ್ತವೆ. ಈ ಸಂದರ್ಭದಲ್ಲಿ ವಾದ್ಯ ಪರಿವಾರ, ಛತ್ರ ಛಾಮರದವರು ಹಾಗೂ ಭಕ್ತ ವೃಂದ ನೃತ್ಯ ಮಾಡುತ್ತಿರುತ್ತಾರೆ. ಅಲ್ಲಿಯ ಅಪಾರ ಸಂಖ್ಯೆಯ ಭಕ್ತರು ಪಲ್ಲಕ್ಕಿಗಳ ಮೇಲೆ ಭಂಡಾರ, ಕುರಿ ಎಣ್ಣೆ, ಉತ್ತುತ್ತೆಗಳನ್ನು ಎರಚಿ ತಮ್ಮ ಭಕ್ತಿ ಪ್ರದರ್ಶನ ಮಾಡುತ್ತಾರೆ. ದೇವರಿಗೆ ಎರಚಿದ ವಸ್ತುಗಳು ಮೈಮೇಲೆ ಬಿದ್ದರೆ ಒಳಿತಾಗುವುದೆಂದು ನಂಬಿಕೆ ಇದೆ. ಭಂಡಾರವನ್ನು ಎರಚುವುದೇ ಒಂದು ವಿಶೇಷ. ಕೆಲವರು ತಮ್ಮ ದೇಹ ತೂಕದಷ್ಟು ಭಂಡಾರವನ್ನು ಎರಚಿ ಹರಕೆ ತೀರಿಸುತ್ತಾರೆ. ಈ ಭಂಡಾರದ ಕಣಗಳು ಶಿವನ ಸನ್ನಿಧಾನಕ್ಕೆ ತಲುಪುತ್ತವೆ ಎನ್ನುವ ನಂಬಿಕೆ ಜನರಲ್ಲಿದೆ.

ಮುಮ್ಮಟ್ಟಿ ಗುಡ್ಡದ ಈ ಆಚರಣೆ ಸೂರ್ಯ ಮುಳುಗುವವರೆಗೂ ನಡೆಯುತ್ತದೆ. ಸೂರ್ಯಾಸ್ತದ ನಂತರ ಸಮಾಧಿ ದೈವಗಳ ಪಲ್ಲಕ್ಕಿಗಳು ಗುಡ್ಡವನ್ನು ಏರಿ, ಅಮೋಘನ ಆಶೀರ್ವಾದವನ್ನು ಪಡೆದು ಅದು ಅಲ್ಲಿಯೇ ತಂಗುತ್ತವೆ. ಆ ಸಂದರ್ಭದಲ್ಲಿ ಕಲಾವಿದರು ಡೊಳ್ಳು ವಾದನದೊಂದಿಗೆ ಅಮೋಘಸಿದ್ಧನ ಕಾವ್ಯವನ್ನು ಹಾಡುತ್ತಾರೆ. ಮೂರು ರಾಜ್ಯಗಳ ಜನರು ಸೇರಿ ಆಚರಿಸುವುದೇ ಇಲ್ಲಿನ ವಿಶೇಷ.