ಮಲೆನಾಡು ಪ್ರದೇಶದ ಕಡೆ ದೀಪಾವಳಿ ಹಬ್ಬದಂದು ಆಚರಣೆಗೊಳ್ಳುವ ಗೀತ ಪ್ರಧಾನವಾದ ಜ್ಯೋತಿ ಸಂಪ್ರದಾಯ. ದೀಪಾವಳಿಯ ಐದು ರಾತ್ರಿಗಳಲ್ಲಿ ಮನೆ ಮನೆಗಳಿಗೂ ದೀಪಧಾರಿಗಳ ತಂಡ ದೀಪ ನೀಡುವುದರ ಮೂಲಕ ಹಾಡುತ್ತಾರೆ. ದೀಪಧಾರಿಗಳನ್ನು ತೀರ್ಥಹಳ್ಳಿ ಹಾಗೂ ಚಿಕ್ಕಮಗಳೂರು ಭಾಗಗಳಲ್ಲಿ ‘ಅಂಟಿಕೆ-ಪಂಚಿಕೆ’ ತಂಡದವರೆಂದು, ಉತ್ತರ ಕನ್ನಡದ ಶಿರಸಿ, ಸಿದ್ಧಾಪುರಗಳಲ್ಲಿ ‘ಭಿಂಗಿ’ ಪದಗಳೆಂದು, ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ‘ಬಲ್ಲಾಳಿ’ ಪದಗಳೆಂದು, ಸಾಗರ – ಹೊಸನಗರದ ಭಾಗಗಳಲ್ಲಿ ‘ಹಬ್ಬ ಹಾಡುವುದು’ ಅಥವಾ ‘ದೀಪ ನೀಡು ವುದು’ ಎನ್ನುತ್ತಾರೆ. ಇದಲ್ಲದೆ ಈ ಸಂಪ್ರದಾಯಕ್ಕೆ ಅವಂಟಿಗ್ಯೋ – ಪವಂಟಿಗ್ಯೂ; ಅಡೀ-ಪೀಡೀ; ‘ಅಂಟಿ ಸುಂಟಿ’, ‘ಅವಟಿಗೋ – ಪಾವಟಿಗೂ’, ಔಂಟಿಗ್ಯೋ ಸುಂಟಿಗ್ಯೋ ಇತ್ಯಾದಿ ಹೆಸರುಗಳಿಂದ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಕರೆಯುತ್ತಾರೆ. ದೀಪಧಾರಿ ಗಳ ತಂಡದಲ್ಲಿ ಒಕ್ಕಲಿಗರು, ಅಗಸರು, ಕುಂಬಾರರು, ಅಕ್ಕಸಾಲಿಗರು, ವಿಶ್ವ ಕರ್ಮರು. ದೀವರು, ಹಸಲರು, ವೀರಶೈವರು, ಅಲ್ಲದೇ ಮಲೆನಾಡಿನ ಆಶಕ್ತ  ಇತರ ಜನವರ್ಗದವರು ಸೇರಿರುತ್ತಾರೆ. ದೀಪಧಾರಿಗಳ ತಂಡ ಜಾತ್ಯಾತೀತವಾಗಿ ರುತ್ತದೆ. ಮೇಳದಲ್ಲಿ ಗಂಡಸರು ಮಾತ್ರ ಇರುತ್ತಾರೆ. ಹೆಂಗಸರಿಗೆ ಹಾಡುಗಳು ಕಂಠಪಾಠವಾಗಿದ್ದರೂ ಅವರು ಮೇಳವನ್ನು ಕಟ್ಟುವುದಿಲ್ಲ. ಇದು ಪುರುಷಪ್ರಧಾನ ಸಂಪ್ರದಾಯವಾಗಿದೆ. ಬಲಿಪಾಡ್ಯಮಿಯ ರಾತ್ರಿ ಊರಿನ ತರುಣರು ದೇವಾಲಯದ ಆವರಣದಲ್ಲಿ ಸೇರುತ್ತಾರೆ. ದೇವರಿಗೆ ಹಣ್ಣು ಕಾಯಿಗಳಿಂದ ಪೂಜೆ ಸಲ್ಲಿಸಿ, ನಂದಾದೀಪದಿಂದ ತಮ್ಮ ದೊಡ್ಡ ಹಣತೆ ಹಚ್ಚಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಮುಮ್ಮೇಳದ ಇಬ್ಬರೂ ಜ್ಯೋತಿಪದ ಆರಂಭಿಸುತ್ತಾರೆ. “ಮಣ್ಣಲ್ಲಿ ಹುಟ್ಟೋಳೆ ಮಣ್ಣಲಿ ಬೆಳೆಯೋಳೆ, ಮಣ್ಣಲ್ಲಿ ಕಣ್ಣ ಬಿಡವೋಳೆ, ಮಣ್ಣಲ್ಲಿ ಕಣ್ಣ ಬಿಡವೋಳೆ ಜಗಜ್ಯೋತಿ, ಸತ್ಯಾದಿಂದುರಿಯೆ ನಮಗಾಗಿ”, ಹಿಮ್ಮೇಳದ ಇಬ್ಬರು ಹೀಗೆಯೆ ಹಾಡುತ್ತಾರೆ. ಜ್ಯೋತಿ ಸತ್ಯದಿಂದ, ಆಯಾದಿಂದ, ಬೆಳಗುವಂತೆ ಮತ್ತು ಪದವನ್ನು ಹೇಳುವ ಶಕ್ತಿಯನ್ನು ಕೊಡುವಂತೆ ಪ್ರಾರ್ಥಿಸಿಕೊಳ್ಳುತ್ತಾರೆ.

ದೀಪಧಾರಿಗಳು ದೇವಾಲಯದಿಂದ ದೀಪವನ್ನು ಹಿಡಿದು ಹೊರಡುತ್ತಾರೆ. ಊರವರಿಗೆ ದೀಪಧಾರಿಗಳು ಬರುವ ಸೂಚನೆ ಕೊಡುವ ಉದ್ದೇಶದಿಂದ ‘ದೀಪ್ ದೀಪೋಳ್ಗೆ’ ಎಂದು ಒಕ್ಕೊರಲಿನಿಂದ ಕೂಗುತ್ತಾರೆ. ದೀಪಧಾರಿಗಳು ಊರಿನ ದೇವಾಲಯದ ಮುಂದೆ ತಮ್ಮ ಕಲಾ ಪ್ರದರ್ಶನವನ್ನು ನೀಡಿ, ನಂತರ ಪ್ರತಿ ಮನೆಗಳಿಗೂ ಹೋಗುತ್ತಾರೆ. ಮನೆಯ ಅಂಗಳದಲ್ಲಿ ನಿಂತ ದೀಪಧಾರಿಗಳು.

“ಬಾಗಿಲು ಬಾಗಿಲು ಚಂದ ಈ ಮನೆಯ ಬಾಗಿಲು ಚಂದ, ಬಾಗಿಲ ಮ್ಯಾಲೇನು ಬರೆದಾರೆ, ಬಾಗಿಲ ಮ್ಯಾಲೇನು ಬರೆದಾರೆ ಸಿರಿಕೈಲಿ, ಕೊಚ್ಚು ಪಾಲುವಾಣದ ಗಿಳಿವಿಂಡು, ಅಂದುಳ, ಮನೆಗೆ ಚಂದುಳ್ಳ ಕದವು, ಚಂದುಳ್ಳ ಕದಕ ಚಿನ್ನದ ಅಗಣಿಯ,ತೆಗೆ ಸೈ ವಜ್ರದ ಅಗಣೀಯ! ಆ ಮನೆ ದೀಪಧಾರಿಗಳಿಗೆ ಅಂದದ ಅರಮನೆಯಾಗಿ, ಚಿನ್ನದ ಬಾಗಿಲಾಗಿ, ವಜ್ರದ ಅಗಣಿಯಾಗಿ ಹಾಡುಗಳಲ್ಲಿ ವರ್ಣಿತವಾಗುತ್ತವೆ. ಬಾಗಿಲನ್ನು ತೆರೆದು ದೀಪಧಾರಿಗಳನ್ನು ಬರಮಾಡಿಕೊಳ್ಳುತ್ತಾರೆ. ಮನೆಯ ಒಡತಿ ದೀಪಕ್ಕೆ ಎಣ್ಣೆ ಎರೆದು, ದೀಪದಿಂದ ತನ್ನ ಹಣತೆಗೆ ಅಂಟಿಸಿಕೊಂಡು ಒಲೆಯ ಬೆಂಕಿಯಲ್ಲಿ ಅಗ್ನಿ ಗೂಡಿಸುತ್ತಾಳೆ. ಹಣತೆಯನ್ನು ದೇವರ ಮುಂದೆ ಇಟ್ಟು ಕೈ ಮುಗಿಯುತ್ತಾಳೆ. ದೀಪಧಾರಿಗಳು “ರನ್ನಾದಟ್ಟಾಕೆ ಬಣ್ಣದೇಣಿಯಾ ಚಾಚಿ, ಸಾಲೆಣ್ಣೆ ಕೊಡುವ ಬಾಯಿಬಿಚ್ಚಿ, ಸಾಲೆಣ್ಣೆ ಕೊಡವ ಬಾಯಿಬಿಚ್ಚಿ ಎಣ್ಣೆಯ ಬಗಸಿ, ಜ್ಯೋತಮ್ಮ ಗೆಣ್ಣೆ ಎರೆ ಬನ್ನಿ, ಎಣ್ಣೆಯ ನೆರೆದಾರೆ ಪುಣ್ಯಾದ ಫಲ ನಿಮಗೆ, ಮುಂದಣ ದೇವರಿಗೊಂದರಿಕ್ಯಾದ, ಮುಂದಣ ದೇವರಿಗೊಂದರಿಕ್ಯಾದ ಕಾರಣದಿಂದ, ಕಾಮನುಡುಗಾರು ನುಡಿಸ್ಯಾರು, ಕಾಮನುಡುಗಾರು ಏನೆಂದು ನುಡಿಸ್ಯಾರು, ಕಂದಯ್ಯರ ಫಲವೇ ತಮಗಾದು ಕಾರಣದಿಂದ, ಸಾವಿರ ಕಾಲ ಸುಖಿಬಾಳಿ” ಎಂದು ಹಾಡುತ್ತಾರೆ.

ದೀಪಧಾರಿಗಳ ಮೇಳದಲ್ಲಿ ತಂಡದ ನಾಯಕತ್ವವನ್ನು ಊರಿನ ಹಿರಿಯ ಯಜಮಾನರು ವಹಿಸಿಕೊಳ್ಳುತ್ತಾರೆ. ತಂಡದಲ್ಲಿ ಹತ್ತರಿಂದ ಐವತ್ತು ಜನರವರೆಗೂ ಇರುತ್ತಾರೆ. ಹಾಡುಗಾರರು ನಾಲ್ಕು ಮಂದಿ ಇದ್ದು, ಅವರಲ್ಲಿ ಇಬ್ಬರು ಮುಮ್ಮೇಳಧಾರಿಗಳು, ಮತ್ತೆ ಇಬ್ಬರು ಹಿಮ್ಮೇಳಧಾರಿಗಳಿರುತ್ತಾರೆ. ತಂಡದಲ್ಲಿ ದೀಪಧಾರಿಗಳು, ದೀವಟಿಕೆಯವರು, ಸಂಭಾವನೆ ಹೊರುವವರು. ಊರುಗಳ ದಾರಿಬಲ್ಲವರು, ತರುಣರು, ವಯಸ್ಸಾದವರು, ಲೈಟು ಹಿಡಿದವರು ಇನ್ನು ಮುಂತಾದವರಿರುತ್ತಾರೆ. ಪಂಚೆ, ಶರ್ಟ್, ಮೇಲೊಂದು ಕೋಟು, ಟವಲ್, ಇನ್ನು ಕೆಲವರು ಪ್ಯಾಂಟು-ಶರ್ಟ್, ಟವಲ್ ತೊಟ್ಟಿರುತ್ತಾರೆ. ಹಾಡುಗಾರರು ಕೈಯಲ್ಲಿ ದೊಣ್ಣೆ ಹಿಡಿದಿರುತ್ತಾರೆ. ಎರಡು ಮೇಳಗಳು ಎದುರಾಗಬಾರದೆಂದು ಕಟ್ಟುಪಾಡಿದೆ. ತಂಡಗಳು ಎದುರಾದಾಗ ಹಾಡುಗಳಿಂದ ಸೋಲಿಸುವ ಸಂಪ್ರದಾಯವಿದೆ.

ದೀಪಾವಳಿ ಹಬ್ಬದ ರಾತ್ರಿಗಳಲ್ಲಿ ಮಾತ್ರ ತಂಡ ಕಟ್ಟಬೇಕು. ದೇವಾಲಯದಲ್ಲಿ ಹೊತ್ತಿಸಿಕೊಂಡ ದೀಪವನ್ನು ಅಗ್ನಿ ಗೂಡಿಸುವವರೆಗೂ ನಂದುವಂತಿಲ್ಲ. ಬಾಗಿಲಿಗೆ ಬಂದ ಜ್ಯೋತಿಯನ್ನು ಸ್ವಾಗತಿಸಿ, ಎಣ್ಣೆ ಎರೆಯಬೇಕು. ಜ್ಯೋತಿ ಹಿಡಿದವರು ಕಾಲಿಗೆ ಚಪ್ಪಲಿ ಧರಿಸುವಂತಿಲ್ಲ. ಮಲಮೂತ್ರ ವಿಸರ್ಜನೆ ಮಾಡುವಂತಿಲ್ಲ. ಸೂತಕವಿದ್ದವರು ಮೇಳದಲ್ಲಿ ಭಾಗವಹಿಸುವಂತಿಲ್ಲ. ಸೂತಕದವರ ಮನೆಗೆ ದೀಪ ನೀಡುವಂತಿಲ್ಲ. ಒಮ್ಮೆ ಸೂತಕವಾದರೆ, ಮೂರು ವರ್ಷಗಳವರೆಗೆ ಮೇಳದಲ್ಲಿ ಭಾಗವಹಿಸುವಂತಿಲ್ಲ.

“ಅಂಟಿಕೆ-ಪಂಟಿಕೆ ಔಂತ್ಲ” ಎಂದು ಕರೆಯುವ  ಸಾಮೂಹಿಕ ಔತಣಕೂಟವನ್ನು ಏರ್ಪಡಿಸುತ್ತಾರೆ. ಮೇಳದಲ್ಲಿ ಸಂಗ್ರಹಿಸಿದ ದವಸ-ಧಾನ್ಯ ಹಾಗೂ ಹಣದಿಂದ ಔತಣಕೂಟದ ಖರ್ಚುಗಳನ್ನು ಭರಿಸುತ್ತಾರೆ. ಅಂದು ಊರಿನವರಲ್ಲದೆ ಸುತ್ತಲಿನ ಊರಿನವರನ್ನು ಸ್ವಾಗತಿಸುತ್ತಾರೆ. ಜ್ಯೋತಿ ಕಳುಹಿಸಲು ಒಂದು ನಿಗದಿತ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಊರಿನ ಹಲಸಿನ ತೋಪಿನ ದೊಡ್ಡ ಬಯಲೇ ಸಮಾರಂಭದ ಸ್ಥಳವಾಗಿರುತ್ತದೆ. ಹಾಲು ಸುರಿಸುವ ಆಲ, ಹಲಸು ಮರಗಳ ಬುಡದಲ್ಲಿ ಜ್ಯೋತಿಯನ್ನು ಇಟ್ಟು, ಎಡೆ ಮಾಡಿ, ಪೂಜೆ ಸಲ್ಲಿಸುತ್ತಾರೆ.

ಈ ಸಂದರ್ಭದಲ್ಲಿ ದೀಪ ಹಿಡಿದ ದೀಪಧಾರಿಗಳು ಜ್ಯೋತಿ ಕಳುಹಿಸುವ ಪದಗಳನ್ನು ಹಾಡುತ್ತಾರೆ. “ಒಂದೇ ಬಟ್ಟಲು ಒಂದೇ ಬೆಲ್ಲದಚ್ಚು, ಒಂದೆಲೆ ಹಲಸು ಬಲಬಂದು, ಒಂದೆಲೆ ಹಲಸು ಬಲಬಂದು ಜ್ಯೋತಮ್ಮ ತಾಯಿ, ಒಂದೆ ದೀವಿಗೆಲೆ ಗುಡಿದುಂಬಿ, ಒಂದೆ ದೀವಿಗೆಲೆ ಗುಡಿದುಂಬಿ ಜ್ಯೋತಮ್ಮ ತಾಯಿ, ಇಂದ್ಹೋಗಿ ಮುಂದೆ ಬರಬೇಕು” ಎಂದು ಹಾಡುತ್ತಾರೆ.

ಜ್ಯೋತಿಗೆ ಎಡೆ ಸಲ್ಲಿಸಿ, ಪೂಜಿಸಿದ ನಂತರ ಪ್ರಸಾದ ಸ್ವೀಕರಿಸುತ್ತಾರೆ. ಎಲ್ಲರೂ ಸಾಲಾಗಿ ಕುಳಿತು ಸಹಭೋಜನ ಮಾಡುತ್ತಾರೆ. ಅಂದಿನ ಊಟ ಮಾಂಸಹಾರವಾಗಿರುತ್ತದೆ. ಈಚೆಗೆ ಈ ಸಂಪ್ರದಾಯವನ್ನು ಸರಳವಾಗಿ ಮಾಡಿ, ಉಳಿದ ಹಣದಿಂದ ಸಾರ್ವಜನಿಕ ಕೆಲಸಗಳಾದ ಶಾಲೆ, ದೇವಸ್ಥಾನ, ರಸ್ತೆ ಹಾಗೂ ಇತ್ಯಾದಿಗಳ ದುರಸ್ತಿ ಕಾರ್ಯಗಳಿಗೆ ಬಳಸುತ್ತಾರೆ.

ಗೀತ ಸಂಪ್ರದಾಯವು ದೀಪ ಮತ್ತು ಅದಕ್ಕೆ ಸಂಬಂಧಿಸಿದ ನಂಬಿಕೆಯ ಅಂಶ ಎದ್ದು ಕಾಣುತ್ತದೆ. ದೀಪ ಅಂಟಿಸುವ ಕ್ರಿಯೆ ಪ್ರಧಾನವಾಗಿಯೂ, ಸುಗ್ಗಿ ಒಳ್ಳೆಯದನ್ನು ಹೊತ್ತು ತರಲಿ ಎಂಬ ಹಾರೈಕೆ ವ್ಯಕ್ತವಾಗಿದೆ. ಮಲೆನಾಡಿನ ಸಾಂಸ್ಕೃತಿಕ ಕನ್ನಡಿಯಂತಿರುವ ಈ ಸಂಪ್ರದಾಯವು ಅಜ್ಞಾನವನ್ನು, ಕತ್ತಲನ್ನು ಆ ಮೂಲಕ ಸಂಕಷ್ಟಗಳನ್ನು ಕಳೆಯುವ ಮುಖ್ಯ ಆಶಯವನ್ನು ಹೊಂದಿದೆ.