ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ ತಾಲೂಕುಗಳಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ದೀವರು ಆಚರಿಸುವ ಈ ಹಬ್ಬದಲ್ಲಿ ಹಲಸಿನಹಣ್ಣು ಮತ್ತು ಕೋಳಿ ಸಾರು ಎಡೆಗಾಗಿ ತಯಾರಿಸುತ್ತಾರೆ. ಹಬ್ಬದ ಆಚರಣೆಯಾಗಿ ಪ್ರತಿ ವರ್ಷ ಜೂನ್ ತಿಂಗಳಲ್ಲಿ ಯಾವುದಾದರೂ ಒಂದು ದಿನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕುಮಾರರಾಮ ಮಲೆನಾಡಿನ ಕೃಷಿಕರ ಗ್ರಾಮದೈವವಾಗಿ ಆರಾಧನೆಗೊಳ್ಳುತ್ತಾನೆ. ಆದ್ರೆ ಮಳೆ ಹಬ್ಬದಂದು ಊರಿನ ಗಂಡಸರು ಮಡಿ ಯಿಟ್ಟು, ಕುಮಾರರಾಮನ ಮುಖವಾಡ ಧರಿಸಿ, ಊರಿನ ಬೀದಿಗಳಲ್ಲಿ ಮೆರವಣಿಗೆ ಹೊರಡುತ್ತಾರೆ. ಡೊಳ್ಳುಮೇಳಗಳೊಂದಿಗಿನ ಮೆರವಣಿಗೆ ಮನೆ ಮನೆಗೂ ಹೋಗುತ್ತದೆ. ಆಯಾಯ ಮನೆಯ ಹೆಣ್ಣುಮಕ್ಕಳು ಮುಖವಾಡದ ಕುಮಾರರಾಮನಿಗೆ ಆರತಿ ಬೆಳಗಿ, ಕೈಮುಗಿಯುತ್ತಾರೆ. ಹರಕೆ ಹೊತ್ತ ಭಕ್ತರು ಹರಕೆಯನ್ನು ಸಲ್ಲಿಸುತ್ತಾರೆ.

ಅಂದು ಸಂಜೆ   ‘ಬಿಂಗಿ’ ಎಂದು ಕರೆಯುವ ಕೊಂಡ ಹಾಯುವ ಆಚರಣೆ ನಡೆಯುತ್ತದೆ. ದೇವಾಲಯದ ಎದುರು ಹಾಕಿದ ಕೆಂಡದ ರಾಶಿಯನ್ನು ಮುಖವಾಡ ಹಾಕಿದವರು, ಹರಕೆ ಹೊತ್ತ ಭಕ್ತರು, ಡೊಳ್ಳಿನವರು ಹಾಯುತ್ತಾರೆ. ನಂತರ ಗ್ರಾಮದ ಒಳಿತಿಗಾಗಿ, ಕಾಲಕಾಲಕ್ಕೆ ಮಳೆ ಬರಲೆಂದು ದೈವಗಳಿಗೆ, ಕುರಿ-ಕೋಳಿ ಬಲಿ ನೀಡುತ್ತಾರೆ. ಬಲಿ ನೀಡಿದ ಪ್ರಾಣಿಗಳ ತಲೆ ಕಾಲುಗಳಿಂದ ಎಡೆ ತಯಾರಿಸಿ, ನೈವೇದ್ಯ ಅರ್ಪಿಸಿ ಎಲ್ಲರೂ ಪ್ರಸಾದದಂತೆ ಸ್ವೀಕರಿಸುತ್ತಾರೆ.