ನವಣಕ್ಕಿಯನ್ನು ಕುಟ್ಟಿ ಬೆಲ್ಲದ ಪುಡಿ ಸೇರಿಸಿ ನಿರ್ದಿಷ್ಟ ಗಾತ್ರದ ಆರತಿ ತಯಾರಿಸಿ ಹೂವುಗಳಿಂದ ಅದನ್ನು ಅಲಂಕರಿಸಿ, ಮೇಲ್ತುದಿಗೆ ಹಣತೆಯಿಟ್ಟು ಹರಕೆ ಅರ್ಪಿಸುವ ಪದ್ಧತಿ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ದೇವಪುರ ಅಧಿದೇವತೆ ಕೆರಳಮ್ಮ. ಸೀಮೆಯ ಸುತ್ತಾ ಮೂವತ್ಮೂರು ಹಳ್ಳಿಯ ಮನೆದೇವತೆಯಾಗಿದ್ದಾಳೆ. ಕೆರಳಮ್ಮ ಮೊದಲು ದೇವಪುರದ ಪಕ್ಕದ ಹಳ್ಳಿಯ ಹೊನ್ನೇಹಳ್ಳಿಯಲ್ಲಿದ್ದು, ಅಲ್ಲಿಂದ ದೇವಪುರದ ಕೇದಿಗೆಯ ಕಂಪಿಗೆ ಮನಸೋತು, ಅಲ್ಲಿಗೆ ಹೋಗಿ ಕೆರೆಯಂಗಳದಲ್ಲಿ ನೆಲೆಸಿದಳೆಂಬ ದಂತಕಥೆ ಇದೆ. ಹೀಗೆ ಕೆರೆ ಅಂಗಳದಲ್ಲಿ ನೆಲೆನಿಂತ ದೇವತೆಗೆ ಕೆರೆಯಾಗಳಮ್ಮ ಅರ್ಥಾತ್ ಕೆರಳಮ್ಮ ಎಂಬ ಹೆಸರು ಬಂದಿತೆಂದು ಹೇಳುತ್ತಾರೆ.

ಕೆರಳಮ್ಮ ವರ್ಷದಲ್ಲಿ ಒಂದು ಬಾರಿ ಆರತಿಬಾನ ಸ್ವೀಕರಿಸಲು ಹೊನ್ನೇಹಳ್ಳಿಗೆ ಹೊರಡುತ್ತದೆ. ರಾತ್ರಿಯಿಡೀ ವಿಜೃಂಭಿಸುವ ಕೆರಳಮ್ಮ ದೇವರ ಆರತಿ ಬಾನ ಬೆಳಗಿನ ಎಂಟರ ಹೊತ್ತಿಗೆ ಮುಗಿಯುತ್ತದೆ. ಆರತಿ ಬಾನದಲ್ಲಿ ಸೋಮನ ಕುಣಿತ ವಿಶೇಷ ಮೆರಗನ್ನು ಪಡೆದು ರಂಜನೀಯವಾಗಿ ರುತ್ತದೆ. ಆರತಿ ಬಾನದ ಹರಕೆ ಹೊತ್ತವರು ನವಣಕ್ಕಿಯ ಮೇಲೆ ಹಣತೆಯನ್ನು ಬೆಳಗಿಸಿ, ತಲೆಯ ಮೇಲೆ ಹೊತ್ತು ಮೆರವಣಿಗೆ ಹೊರಡುತ್ತಾರೆ. ವಿಶೇಷವಾಗಿ, ಹೆಂಗಸರು ಆರತಿಯನ್ನು ಹೊತ್ತು ಮೆರವಣಿಗೆಗೆ ರಂಗುತರುತ್ತಾರೆ. ಒಡವೆ ವಸ್ತ್ರಗಳಿಂದ ಅಲಂಕೃತಗೊಂಡ ಸಹಸ್ರಾರು ಮಹಿಳೆಯರ ಮುಡಿ, ನಕ್ಷತ್ರದಂತೆ ಮಿನುಗುತ್ತದೆ. ಅಂದು ಹಣತೆಗಳ ಮಾಯಾಲೋಕ ಸೃಷ್ಟಿಯಾಗುತ್ತದೆ.

ದೇವರ ಆರತಿ ಬಾನ ನಡೆದು ಸರಿಯಾಗಿ ಹದಿನೈದು ದಿನಗಳಿಗೆ, ಕೆರಳಮ್ಮನ ರಥೋತ್ಸವ ನಡೆಯುತ್ತದೆ. ಅದು ಶುಕ್ರವಾರವೇ ಆಗಿರುತ್ತದೆ. ಆರತಿಬಾನದ ಉತ್ಸವಕ್ಕೆ ಸೇರಿದಂತೆ ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ರಥೋತ್ಸವಕ್ಕೂ ಸೇರಿರುತ್ತಾರೆ. ಹತ್ತು ದಿನಗಳ ಕಾಲ ನಡೆಯುವ ರಥೋತ್ಸವದಲ್ಲಿ ಮದುವಣಿಗಶಾಸ್ತ್ರ, ಬಾನುತ್ಸವ, ಕೇಲು ಭಾನೋತ್ಸವ, ಹೂವಿನಪಲ್ಲಕ್ಕಿ ಉತ್ಸವ, ಹಗಲು ಪಲ್ಲಕ್ಕಿ, ಬೆಲ್ಲದರಾಶಿ ಇತ್ಯಾದಿ ಸೇವೆಗಳು ನಡೆಯುತ್ತವೆ. ಕೊನೆಯ ದಿನ ದೇವರನ್ನು ಗುಡಿ ತುಂಬಿಸಿ ‘ಗುಡಿಬಾಗಿಲು ಹಾಕುವ ಕಾರ್ಯ’ ನಡೆಯುತ್ತದೆ. ಆರತಿಬಾನ ನಡೆದ ಒಂದು ತಿಂಗಳಿಗೆ ಗುಡಿ ಬಾಗಿಲು ತೆಗೆಯುತ್ತಾರೆ. ಇದನ್ನು ತಿಂಗಳ ಪೂಜೆ ಎಂದು ಕರೆಯುತ್ತಾರೆ. ಹಿಂದೆ ಸಿಡಿ ಆಚರಣೆಯೂ ಇಲ್ಲಿ ನಡೆಯುತ್ತಿತ್ತು ಎನ್ನುವುದಕ್ಕೆ ಉಯ್ಯಲೆ ಕಂಬಗಳು ಸಾಕ್ಷಿ ನೀಡುತ್ತವೆ. ಗೌಡರು ಹಾಗೂ ಉಪ್ಪಾರ ಜನಾಂಗದವರು ಪೂಜಾರಿಗಳಾಗಿದ್ದು, ಸೋಮನಬಂಟ ಹಾಗೂ ಚಾಕಪೋತರು, ನಾಯಕರು, ಛಲವಾದಿಗಳು ಉರುಮೆ ಮತ್ತು ವಾಲಗ-ವಾದ್ಯದವರಾಗಿರುತ್ತಾರೆ. ಅಸಾದಿಗಳು, ಕೈಪಂಜಿನವರು, ಮಡಿವಾಳರು. ಜೋಗಪ್ಪ-ದಾಸಯ್ಯಗಳು, ಕುರುಬರಾಗಿರುತ್ತಾರೆ. ಉತ್ಸವ-ಜಾತ್ರೆ ಇತ್ಯಾದಿಗಳಲ್ಲಿ ಮೇಲಿನ ಕೈವಾಡದಾರರು ಕೆಲವು ನಡೆಮಡಿಗಳನ್ನು ಶ್ರದ್ಧಾಭಕ್ತಿಗಳಿಂದ ಪಾಲಿಸುತ್ತಾರೆ.

ದೇವಪುರದ ವಿಶೇಷವೆಂದರೆ ಅಲ್ಲಿ ಕೆರಳಮ್ಮ ದೇವತೆಯಲ್ಲದೆ ಗಣೇಶ, ಆಂಜನೇಯ, ಬನಶಂಕರಿ, ಜಂಬಗಲ್ಲಮ್ಮ, ಮಾರಮ್ಮ, ವೀರಭದ್ರ, ರಾಮದೇವರು, ಭೈರದೇವರು, ಚೌಡಮ್ಮ, ಬ್ಯಾಟೀ ಲಕ್ಷ್ಮಿನಾರಾಯಣ ಮುಂತಾದ ದೇವರ ಗುಡಿಗಳಲ್ಲದೆ, ಊರ ಹೊರಗೆ ದೊಡ್ಡಮ್ಮ, ಮಾತಂಗಿ ಮರುಳಮ್ಮ, ಬೀರದೇವರ ಗುಡಿಗಳಿವೆ. ಈ ಎಲ್ಲ ದೇವರುಗಳಿಂದಲೇ ಊರಿಗೆ ದೇವಪುರ ಎಂಬ ಹೆಸರು ಬಂದಿತೆಂದು ಹೇಳುತ್ತಾರೆ.