ಉತ್ತರ ಕರ್ನಾಟಕದ ಭಾಗಗಳಲ್ಲಿ ಮದುವೆ ದೇವರ ಊಟದ ದಿನ ನಡೆಯುವ ಸಂದರ್ಭದ ವಿಶಿಷ್ಟ ರೀತಿಯ ಆಚರಣೆ. ಗಂಗೆ ಸ್ಥಳಕ್ಕೆ ಹೋಗುವುದು, ಹಂದರಗೋಳು ತರುವುದು, ದಂಡಿ, ಬಾಸಿಂಗ, ತಾಳಿ ತರುವುದು, ಐರಾಣಿ ಹೊರುವುದು, ಮದುಮಕ್ಕಳಿಗೆ ಅರಿಶಿಣ ಹಚ್ಚುವುದು ಇತ್ಯಾದಿ ಆಚರಣೆಗಳಂತೆ ಆಲಗಂಬ ತರುವುದು ಒಂದು.

ತೆಂಗಿನ ಗರಿಗಳಿಂದ ಮಾಡಿದ ಚಪ್ಪರದ ಕೆಳಗೆ ಆಲಗಂಬ ಆಚರಣೆ ನಡೆಯುತ್ತದೆ. ಈ ಆಚರಣೆಯಲ್ಲಿ ಮನೆಯ ಹಿರಿಯ ಅಳಿಯ ಮುಖ್ಯ ಕೇಂದ್ರಬಿಂದುವಾಗಿರುತ್ತಾನೆ. ಉಳಿದಂತೆ ಮುತ್ತೈದೆಯರು, ಮಕ್ಕಳು ಹಾಗೂ ಹೆಣ್ಣುಮಕ್ಕಳು ಪ್ರಮುಖ ಪಾತ್ರ ವಹಿಸುತ್ತಾರೆ. ಕರಿ ಕಂಬಳಿ ಹೆಗಲಿಗೇರಿಸಿಕೊಂಡು ಕೈಯಲ್ಲಿ ಕುಡುಗೋಲು ಹಿಡಿದ ಮನೆಯಳಿಯನ ಜೊತೆ ಯುವಕರು, ಯುವತಿಯರು, ಮುತ್ತೈದೆಯರು ಉಲುಪಿ ತಟ್ಟೆ, ಪೂಜಾ ಸಾಮಗ್ರಿ, ಅಡ್ಡೋಣಗಿ, ನೀರಿನ ತಂಬಿಗೆ, ಹೂವಿನ ಬಟ್ಟಲು ಹಿಡಿದು ಮೆರವಣಿಗೆಯೊಂದಿಗೆ ಆಲದ ಮರದ ಬಳಿ ಹೋಗುತ್ತಾರೆ. ಆಲದ ಮರದ ಕೆಳಗೆ ಕರಿಕಂಬಳಿಯನ್ನು ಗದ್ದುಗೆಯಾಗಿ ಹಾಕಿ ಅದರ ಮೇಲೆ ಅಕ್ಕಿಯ ಹಿಟ್ಟಿನಿಂದ ಪಟ ಬರೆಯುತ್ತಾರೆ. ಮನೆಯಳಿಯ ಕುಡುಗೋಲು ಹಿಡಿದು ಮರವೇರಿ ಒಂದು ಆಲದ ಟೊಂಗೆಯನ್ನು ಕತ್ತರಿಕೊಂಡು ಬಂದು ಕಂಬಳಿಯ ಗದ್ದುಗೆಯ ಮೇಲೆ ಕೂರುತ್ತಾನೆ. ಕೈಯಲ್ಲಿ ಆಲದ ಟೊಂಗೆಯನ್ನು ಹಿಡಿದು ಕುಳಿತ ಅಳಿಯನಿಗೆ ಮುತ್ತೈದೆಯರು ಆರತಿ ಮಾಡುತ್ತಾರೆ. ನಂತರ ಬಣ್ಣದ ಓಕುಳಿಯಾಡುತ್ತಾರೆ.

ಆಲದ ಕೊಂಬೆಯನ್ನು ಹಿಡಿದು ಮನೆಯ ಅಳಿಯ ಮೆರವಣಿಗೆಯಲ್ಲಿ ಮದುವೆಯ ಹಂದರವನ್ನು ಪ್ರವೇಶ ಮಾಡುತ್ತಾನೆ. ಆಗಲೇ ತಗ್ಗು ತೆಗೆದು ಅದರಲ್ಲಿ ಟೊಂಗೆಯನ್ನು ನೆಟ್ಟು ನೀರು ಹಾಕಿ, ಪೂಜಿಸುವಾಗ ಹೆಣ್ಣು ಮಕ್ಕಳು ಹಾಡುಗಳನ್ನು ಹೇಳುತ್ತಾರೆ. ಟೊಂಗೆಯಿಂದ ಬೆಳೆಯುವ ಆಲ ಮನೆಗೆ ನೆರಳಾಗಿ, ಪಶುಗಳಿಗೆ ಮೇವಾಗಿ, ಕಲ್ಪವೃಕ್ಷವೇ ಆಗುತ್ತದೆ. ಇದೊಂದು ಅರ್ಥಪೂರ್ಣ ಆಚರಣೆಯಾಗಿದೆ.