ಉತ್ತರ ಕರ್ನಾಟಕದ ಭಾಗಗಳಲ್ಲಿ ಆಷಾಢ ಮಾಸದಲ್ಲಿ ಮಾಡುವ ದೋಸೆ ಊಟ. ವಾರದಲ್ಲಿ ಒಂದು ದಿನಪೂರ್ತಿ ದೋಸೆ ಊಟ ಮಾಡುವ ವಿಶಿಷ್ಟ ಆಚರಣೆಯಾಗಿ ರೂಢಿಯಲ್ಲಿದೆ. ಜೋಳ ಅಥವಾ ಗೋಧಿ ಹಿಟ್ಟಿನಿಂದ ದೋಸೆಗಳನ್ನು ತಯಾರಿಸುತ್ತಾರೆ. ದೋಸೆಯೊಂದಿಗೆ ತಿನ್ನಲು ಆಲೂಗಡ್ಡೆ ಅಥವಾ ಈರುಳ್ಳಿ ಪಲ್ಯಗಳನ್ನು ಮಾಡಿಕೊಳ್ಳುತ್ತಾರೆ. ಅಲ್ಲದೆ ವಿಶೇಷವಾಗಿ ‘ಚೊಂಚಲ’ ಎಂಬ ಸಿಹಿ ಗಿಣ್ಣವನ್ನು ತಯಾರಿಸಿಕೊಳ್ಳುತ್ತಾರೆ. ಕುದಿಯುವ ನೀರಿನಲ್ಲಿ ಬೆಲ್ಲವನ್ನು ಕರಗಿಸಿ, ಗೋದಿ ಹಿಟ್ಟನ್ನು ಸೇರಿಸಿ, ಪರಿಮಳಕ್ಕಾಗಿ ಶುಂಠಿ ಹಾಗೂ ಏಲಕ್ಕಿ ಪುಡಿಗಳನ್ನು ಹಾಗೆ ಚೆನ್ನಾಗಿ ಕಾಯಿಸಿ ಗಿಣ್ಣದಂತೆ ಮಾಡಿಕೊಳ್ಳುತ್ತಾರೆ.

ಒಂದೊಂದು ಮನೆಯಲ್ಲಿ ಒಂದೊಂದು ದಿನ ದೋಸೆ ಊಟವಿರುತ್ತದೆ. ಇದು ಮಕ್ಕಳಿಗೆ ಬಲು ಪ್ರೀತಿ ಹಾಗೆ ದೊಡ್ಡವರಿಗೂ ಅಷ್ಟೇ. ದೋಸೆ ಮಾಡುವ ಮನೆಗಳಿಗೆ ಅಕ್ಕಪಕ್ಕದ ಮನೆ ಮಕ್ಕಳು ಸೇರಿಕೊಳ್ಳುತ್ತಾರೆ. ದೋಸೆ ಮಾಡಿದವರು ಮೊದಲ ದೋಸೆಯನ್ನು ಮನೆಯ ಮಕ್ಕಳಿಗೆ ದೃಷ್ಟಿ ತೆಗೆದು ದೋಸೆಯಿಂದಲೇ ಮಕ್ಕಳ ಬೆನ್ನಿಗೆ ಗುದ್ದಿ, ಮನೆಯ ಹೊರಬಂದು ದೋಸೆಯನ್ನು ಮನೆಯ ಮೇಲೆ ಎಸೆಯುತ್ತಾರೆ. ನಂತರ ಎಲ್ಲಾ ಮಕ್ಕಳಿಗೂ ದೋಸೆ ಊಟ ನೀಡುತ್ತಾರೆ.

ಬಿತ್ತನೆಯಾಗಿ ಉಳಿದ ಕಾಳುಕಡ್ಡಿಗಳಿಂದಲೇ ದೋಸೆ ತಯಾರಾಗುತ್ತದೆ. ಆಷಾಢದ ಚಳಿಗೆ ದೋಸೆ ಊಟ ಹಿತ ನೀಡಿ ಆರೋಗ್ಯವಾಗಿರಲು ಸಾಧ್ಯ ಎಂದು ಹೇಳುತ್ತಾರೆ.