ತುಳುನಾಡಿನ ನಲಿಕೆ ಜನವರ್ಗದವರ ಕುಣಿತ ಪ್ರಧಾನವಾದ ಆಚರಣಾತ್ಮಕ ಕಲಾ ರೂಪ. ಆಷಾಢ ಅಥವಾ ಆಟಿ ತಿಂಗಳಿನಲ್ಲಿ ಜರಗುವ ಈ ಕಲೆಗೆ ಆಟಿಕಳೆಂಜ ಎಂದು ಕರೆಯುತ್ತಾರೆ. ಮಾಂತ್ರಿಕ ಶಕ್ತಿಯನ್ನು ಹೊಂದಿದ ಈ ಕಳೆಂಜ ಊರಿನ ದಾರಿದ್ರ್ಯವನ್ನು, ಬರವನ್ನು ಉಚ್ಚಾಟಿಸುತ್ತದೆಂದು ನಂಬುತ್ತಾರೆ.

ವೇಷ ಹಾಕಿದ ನಲಿಕೆಯವನು ಮನೆ ಮನೆಗೂ ಹೋಗಿ, ಕುಣಿದು, ಮನೆಯವರು ನೀಡುವ ದವಸಧಾನ್ಯ, ಹಣ ಇತ್ಯಾದಿಗಳನ್ನು ಪಡೆಯುತ್ತಾನೆ. ಕಾಲಿಗೆ ಚಿಕ್ಕ ಗಗ್ಗರ, ಸೊಂಟಕ್ಕೆ ಕಟ್ಟಿದ ಕೆಂಪು ಮತ್ತು ಬಿಳಿ ಪಟ್ಟಿಗಳಿರುವ ಲಂಗ, ಅದರ ಮೇಲೆ ಎಳೆಯ ತೆಂಗಿನ ಗರಿಯ ಜಾಲರಿಯಂತಹ ಅಲಂಕಾರ, ತಲೆಗೆ ಅಡಿಕೆ ಹಾಳೆಯಿಂದ ಮಾಡಿದ ಉದ್ದನೆಯ ಟೊಪ್ಪಿಗೆ, ಹಣೆಗೆ ಕಂಚಿನ ಕೇದಗೆ ಮುಂದಲೆ, ಮೈಗೆ ಹಾಗೂ ಮುಖಕ್ಕೆ ಬಳಿದ ಕೆಂಪು ಹಾಗೂ ಬಿಳಿ ಬಣ್ಣದ ರೇಖೆಗಳು, ಮುಖಕ್ಕೆ ಕಪ್ಪು ಮೀಸೆ, ಕೈಯಲ್ಲಿ ತಾಳೆಗರಿಯ ಕೊಡೆ ಇತ್ಯಾದಿಗಳಿಂದ ಅಲಂಕಾರ ಮಾಡಿಕೊಂಡಿರುತ್ತಾನೆ. ಆಟಿ ಕಳೆಂಜ ವೇಷಧಾರಿ ಕೊಡೆಯನ್ನು ತಿರುಗಿಸುತ್ತಾ ಪ್ರದರ್ಶನ ನೀಡುತ್ತಾನೆ. ಕೈಯಲ್ಲಿ ತೆಂಬರೆ ಎಂಬ ವಾದ್ಯ ಪರಿಕರವನ್ನು ನುಡಿಸುತ್ತಾ ಹೆಣ್ಣೊಬ್ಬಳು ಆಟಿಕಳೆಂಜನ ಹಾಡನ್ನು ಹಾಡುತ್ತಾಳೆ. ವೇಷಧಾರಿ ತೆಂಬರೆಯ ನಾದದ ಗತಿಗೆ ಕುಣಿಯುತ್ತಾನೆ. ಮನುಷ್ಯರಿಗೆ, ಜಾನುವಾರುಗಳಿಗೆ, ಬೆಳೆಗಳಿಗೆ ಬಂದ ಮತ್ತು ಬರುವ ರೋಗವನ್ನು ನಿವಾರಿಸುವ ಕೆಲಸವನ್ನು ಮಾಂತ್ರಿಕ ಕಳೆಂಜ ಮಾಡುತ್ತಾನೆ ಎಂದು ನಂಬುತ್ತಾರೆ. ಬೇಸಿಗೆ ಮತ್ತು ಮಳೆಯಂತಹ ಹವಾಮಾನದ ವ್ಯತ್ಯಾಸ ಮನುಷ್ಯನ ಬದುಕಿನ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಸೂರ್ಯನ ಬಿಸಿಲಿನಲ್ಲಿ ಇರಲು ಅಸಾಧ್ಯವಾದ ಸೂಕ್ಷ್ಮ ಕ್ರಿಮಿಗಳು ಮಳೆಗಾಲದ ನೀರಿನ ತೇವದಲ್ಲಿ ಕ್ರಿಯಾಶೀಲವಾಗಿ ರೋಗ ಹರಡುವಂತೆ ಮಾಡುತ್ತವೆ. ರೋಗಗಳನ್ನು ನಿವಾರಿಸಿಕೊಳ್ಳಲು ಮಂತ್ರ ವಿದ್ಯೆಯ ಮೊರೆ ಹೋಗುತ್ತಿದ್ದ ಜನಪದ ಸಂತೃಪ್ತಿಗಾಗಿ ಆಟಿ ಕಳೆಂಜ ಕಲಾ ಪ್ರಕಾರ ಹುಟ್ಟಿಕೊಂಡಿದೆ. ಜನಪದ ಮನಸ್ಸಿನ ವೈರುಧ್ಯಗಳನ್ನು  ನಿವಾರಿಸಿ, ಮಾನಸಿಕ ಸಮಸ್ಥಿತಿಯನ್ನು ಉಂಟುಮಾಡುವುದು ಆಟಿಕಳೆಂಜ ಕುಣಿತ ಆಚರಣೆಯ ಪ್ರಧಾನ ಉದ್ದೇಶವಾಗಿದೆ.