ಕೋಲಾರದ ವಕ್ಕಲಗೇರಿಯಲ್ಲಿ ಜನರು ಪೂಜಿಸುವ ರಾವಣ ಆರಾಧನೆ. ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ನಂತರ ಈ ಹಬ್ಬ ನಡೆಯುತ್ತದೆ. ಇಲ್ಲಿಯ ವಿಶೇಷತೆ ಎಂದರೆ ರಾತ್ರಿ ಪೂಜೆ ಮತ್ತು ಉತ್ಸವ ನಡೆಯುವುದು. ಅಂದು ಬೆಳಗಿನ ಹೊತ್ತು ಪಾರ್ವತಿ ಸಮೇತ ಮಾರ್ಕಂಡೇಶ್ವರ ಸ್ವಾಮಿ ರಥೋತ್ಸವ ನಡೆಯುತ್ತದೆ. ಅದೇ ದಿನ ಅರ್ಚಕರೊಬ್ಬರು ರಾವಣನ ಗುಡಿಯೊಳಗೆ ಮೂರ್ತಿಗೆ ಅಲಂಕರಿಸಿ, ಪೂಜಿಸುತ್ತಾರೆ. ಪೂಜೆಯ ನಂತರ ಕುರಿಯೊಂದನ್ನು ಬಲಿ ಕೊಡುತ್ತಾರೆ. ನಂತರ ಮಧ್ಯಾಹ್ನದ ವೇಳೆಗೆ ತಂಬಿಟ್ಟಿನ ದೀಪದ ಆರತಿ ಮಾಡಿ, ಗುಂಡಿಯ ಬಾಗಿಲನ್ನು ಮುಚ್ಚುತ್ತಾರೆ. ಹಗಲಿನಲ್ಲಿ ಸಾರ್ವಜನಿಕ ಭಕ್ತವೃಂದಕ್ಕೆ ರಾವಣ ದೇವರ ದರ್ಶನದ ಅವಕಾಶವಿಲ್ಲ. ಉಗ್ರ ಸ್ವರೂಪಿಯಾದ ಹತ್ತು ತಲೆಗಳ ರಾವಣನನ್ನು ಹಗಲಲ್ಲಿ ಯಾರೂ ನೋಡಬಾರದು ಎನ್ನುವ ನಂಬಿಕೆ ಇದೆ. ಕಡ್ಡಾಯವಾಗಿ ಗರ್ಭಿಣಿಯರು ನೋಡಲೇಬಾರದೆಂಬ ಕಟ್ಟಲೆ ಇದೆ.

ಅಂದು ರಾತ್ರಿ ಸುಮಾರು ಸರಿ ಸುಮಾರಿಗೆ ರಾವಣ ಗುಡಿಯನ್ನು ತೆರೆಯುತ್ತಾರೆ. ಆಗಲೇ ರಾವಣನ ಉತ್ಸವಮೂರ್ತಿ ಅಲಂಕೃತಗೊಂಡಿರುತ್ತದೆ. ಅಂದು ಹಗಲಿನಲ್ಲಿ ನಡೆದ ಮಾರ್ಕಂಡೇಶ್ವರ ಸ್ವಾಮಿಯ ಉತ್ಸವಮೂರ್ತಿಗಿಂತ ರಾತ್ರಿಯಲ್ಲಿ ನಡೆಯುವ ರಾವಣನ ಉತ್ಸವಮೂರ್ತಿ ದೊಡ್ಡದಾಗಿರುತ್ತದೆ. ಅಂದು ರಾವಣನಿಗೆ ಸಲ್ಲಿಸುವ ಇರುಳು ಪೂಜೆಯು ವಿಶೇಷವಾಗಿರುತ್ತದೆ. ಹಗಲಲ್ಲಿ ಮಾಡುವುದಾಗಲಿ, ನೋಡುವುದಾಗಲಿ ಒಳ್ಳೆಯದಲ್ಲ ಎಂಬ ನಂಬಿಕೆ  ಇದೆ. ಈ ಹಿನ್ನೆಲೆಯಲ್ಲಿ ಪೂಜೆ ರಾತ್ರಿಯಲ್ಲಿ ನಡೆಸುತ್ತಾರೆ.  ರಾವಣ ಹಾಗೂ ಮಾರ್ಕಂಡೇಯ ಇಬ್ಬರು ಶಿವನ ಪರಮಭಕ್ತರು. ಪರಮಸಾಧಕರಾದ ಇಬ್ಬರ ಪೂಜೆಯನ್ನು ಒಟ್ಟಿಗೆ ಆರಾಧಿಸುತ್ತಾ ಬರಲಾಗಿದೆ ಎಂದು ಹೇಳುತ್ತಾರೆ.