ಗಣೇಶ ಚತುರ್ಥಿಯ ಮರುದಿನ ವಿಶೇಷವಾಗಿ ಇಲಿಗಳನ್ನು ಪೂಜಿಸುವ ಪದ್ಧತಿ. ಇದನ್ನು ಇಲಿಹಬ್ಬ ಅಥವ ಇಲಿ ಪಂಚಮಿ ಎಂತಲೂ ಕರೆಯುತ್ತಾರೆ. ನೇಕಾರ ಹಾಗೂ ಚಿತ್ರಗಾರ ಜನವರ್ಗಗಳಿಗೆ ಈ ಹಬ್ಬ ಚೈತನ್ಯದ ಹಬ್ಬ. ಇದನ್ನು ಭಾರಿ ಉಮೇದಿಯಿಂದ, ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಉತ್ತರ ಕರ್ನಾಟಕದ ಹಲವೆಡೆ ಈ ಆಚರಣೆ ಕಂಡುಬರುತ್ತದೆ. ವಿಶೇಷವಾಗಿ ಹಗರಿಬೊಮ್ಮನಹಳ್ಳಿ, ಭಾಗ್ಯನಗರ, ಬೆಟಗೇರಿ, ಹುಬ್ಬಳ್ಳಿ, ಕಿನ್ನಾಳ, ಹನುಮಸಾಗರ ಇತ್ಯಾದಿ ಊರುಗಳಲ್ಲಿ ಆಚರಣೆ ಇದೆ.

ಗಣೇಶ ಚತುರ್ಥಿಗಾಗಿ ತಿಂಗಳಿಂದ ಚಂದಾ ಹಣ ಎತ್ತಿ, ಗಣಪತಿ ಮಾಡಿಸಿ, ಮಂಟಪ ಶೃಂಗರಿಸಿ, ಪಟಾಕಿ ಸಿಡಿಸುತ್ತಾ ಗಣಪತಿಯನ್ನು ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪಿಸಿ ಮೊದಲ ಪೂಜೆ ಮಾಡಿ, ಸಾರ್ವಜನಿಕ ದರ್ಶನಕ್ಕೆ ಬಿಡುತ್ತಾರೆ. ಹೀಗೆ ಗಣಪತಿಯನ್ನು ಮೊದಲು ಪೂಜಿಸಿದ ನೇಕಾರರು ಮರುದಿನದ ಇಲಿವಾರಕ್ಕೆ ಸಿದ್ದ ವಾಗುತ್ತಾರೆ.

ಆಗಲೇ ಸಿದ್ಧಪಡಿಸಿಕೊಂಡ ಮಣ್ಣಿನ ಇಲಿ ಮೂರ್ತಿಗಳನ್ನು ಚಿತ್ರ ಗಾರರ ಮಕ್ಕಳು ಬುಟ್ಟಿಯಲ್ಲಿ ತುಂಬಿಸಿ ಕೊಂಡು ನೇಕಾರರ ಬೀದಿಗಳಲ್ಲಿ ‘ಇಲಿಬೇಕೆನ್ರೀ ಇಲಿ’ ಎಂದು ಕೂಗುತ್ತಾ ಬೀದಿ ಬೀದಿ ತಿರುಗುತ್ತಾರೆ. ನೇಕಾರರು ಲಗುಬಗೆಯಿಂದ ಭಕ್ತಿ‑ಗೌರವಗಳಿಂದ ಇಲಿಗಳನ್ನು ಕೊಳ್ಳುತ್ತಾರೆ. ಹೀಗೆ ಕೊಂಡ ಇಲಿಗಳನ್ನು ಮನೆಯ ಅಟ್ಟದ ಮೇಲೆ ಇಡುತ್ತಾರೆ. ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದ ನೇಕಾರರು ಗಣೇಶನ ಎರಡು ಬದಿ ಇಲಿಗಳನ್ನು ಇಟ್ಟು ಪೂಜಿಸುತ್ತಾರೆ. ಮೂರ್ತಿ ಪ್ರತಿಷ್ಠಾಪನೆ ಮಾಡಿದ ವ್ಯಕ್ತಿಗಳು, ಮಂಟಪವನ್ನು ಮಾಡಿ, ಅದರಲ್ಲಿ ಇಲಿಗಳನ್ನು ಇಟ್ಟು ಪೂಜಿಸುತ್ತಾರೆ. ಗಣಪತಿಗೆ ಸಲ್ಲಿಸುವ ಎಲ್ಲಾ ನೈವೇದ್ಯಗಳು ಇಲಿಗೆ ಸಲ್ಲುತ್ತವೆ. ನೂಲು, ಬಟ್ಟೆ ಹಾಗೂ ಮಗ್ಗಗಳನ್ನು ಕಡಿಯದೇ ಇರಲಿ ಎನ್ನುವ ಉದ್ದೇಶದಿಂದ ಈ ಆಚರಣೆ ನಡೆಯುತ್ತದೆ. ಆದರೆ ಅದೇ ದಿನ ಜೀವಂತ ಇಲಿ ಕಂಡರೇ ಬಡಿದು ಸಾಯಿಸುತ್ತಾರೆ. ಇಲಿಗಳಿಂದ ದೇವರು ಪಜೀತಿ ಪಟ್ಟ ಕತೆಯೊಂದು ಹೀಗಿದೆ. ದ್ವಾಪರ ಯುಗದಲ್ಲಿ ವೈಕುಂಠದೊಳಗೆ ಇಲಿಗಳಿಗೂ ಜಯವಿಜಯರಿಗೂ ಭೀಕರ ಜಗಳ ನಡೆಯಿತಂತೆ. ಜಯ ವಿಜಯರು ವಿಷ್ಣುವಿನ ಮೊರೆಹೊಕ್ಕರಂತೆ. ಆಗ ವಿಷ್ಣು ವೀರಾವೇಷದಿಂದ ಚಕ್ರಹಿಡಿದು ಇಲಿಗಳನ್ನು ಕೊಲ್ಲಲು ಬಂದು ಕಾದಾಡಿ ಬಳಲಿ ಪ್ರಜ್ಞೆ ತಪ್ಪಿದನಂತೆ. ಇಲಿಗಳು ಆಗಲೂ ಅವನನ್ನು ಬಿಡದೆ ಆತನ ಮೈಮೇಲಿನ ಪೀತಾಂಬರ ಹರಿದು, ಆತನ ಚಕ್ರದ ಹಲ್ಲು ಮುರಿದವಂತೆ.

ಪೂಜಿಸಿದ ಇಲಿಗಳನ್ನು ಮರುದಿನ ತಿಪ್ಪೆಯಲ್ಲಿ ವಿಸರ್ಜನೆ ಮಾಡುತ್ತಾರೆ. ಈಚಿನ ದಿನಗಳಲ್ಲಿ ಮಗ್ಗಗಳು ಕಡಿಮೆಯಾಗಿವೆ. ಆದರೆ ಈ ಇಲಿ ಪಂಚಮಿ ಆಚರಣೆ ಉಳಿದುಕೊಂಡಿದೆ.