ತುಳುವರು ದೀಪಾವಳಿಯಲ್ಲಿ ಆಚರಿಸುವ ಇದ್ದವರ ಹಬ್ಬ. ಬಲೀಂದ್ರನನ್ನು, ತುಳಸಿಯನ್ನು ಹಾಗೂ ಭೂಮಿ ಪೂಜೆ ಮಾಡುವುದರ ಮೂಲಕ ಹಬ್ಬ ಆಚರಿಸುತ್ತಾರೆ. ಅಂದು ಬೆಳಿಗ್ಗೆ ಸ್ನಾನಮಾಡಿ, ಮಡಿಯಿಂದ ಕೆರೆಯಲ್ಲಿ ಅರಳಿದ ಕುಮುದದ ಹೂವು ಹಾಗೂ  ದಂಟುಗಳಿಂದ ವಿಶಿಷ್ಟ ಬಗೆಯ ಹಾರಗಳನ್ನು ತಯಾರಿಸುತ್ತಾರೆ. ಈ ಹಾರವನ್ನು ಕಾಡಿನ ನಾನಾ ಬಗೆಯ ಹೂವುಗಳಿಂದ ಅಲಂಕರಿಸಿರುತ್ತಾರೆ. ದೀಪದ ಕೋಲುಗಳಿಗೆ ಎಣ್ಣೆಯ ಬಟ್ಟೆಗಳನ್ನು ಸುತ್ತಿ ಕೋಲು ಬತ್ತಿ ತಯಾರಿಸಿಕೊಳ್ಳುತ್ತಾರೆ. ಜೊತೆಗೆ ತಮ್ಮ ಜಮೀನಿಗೆ ಬೇಕಾದಷ್ಟು ಕಬ್ಬಿನ ಸುಳಿಯನ್ನು ಕತ್ತರಿಸಿ ಇಟ್ಟುಕೊಂಡು ಜೊತೆಗೆ ಹತ್ತಾರು ಬಗೆಯ ಹೂವುಗಳನ್ನು ಇಟ್ಟುಕೊಳ್ಳುತ್ತಾರೆ.

ಸಂಜೆ ತೆಂಗಿನ ಮರದ ದಬ್ಬೆಯಿಂದ ಮಾಡಿದ ದೊಡ್ಡ ಕೋಲು ದೀಪ ಹಾಗೂ ಕಬ್ಬಿನ ಸುಳಿಗಳನ್ನು ನೆಟ್ಟು, ಉರಿಹಚ್ಚಿ, ಹೂವುಗಳಿಂದ ಅಲಂಕರಿಸಿ, ಕೈಮುಗಿಯುತ್ತಾರೆ. ಕೃಷಿಕರು ತಮ್ಮ ಗದ್ದೆಗಳಿಗೆ ಹೋಗಿ ಮೂಲೆಯೊಂದರಲ್ಲಿ ಕೋಲುದೀಪ ಹಾಗೂ ಕಬ್ಬಿನ ಸುಳಿ ಊರಿ, ಬುಡಕ್ಕೆ ಹೂವು ಹಾಕಿ, ದೀಪಕ್ಕೆ ಉರಿ ಹಚ್ಚುತ್ತಾ, ಪೊಲಿಕೊಟ್ಟರು, ಬಲಿಕೊಟ್ಟರು, ಬಲಿಯೇಂದ್ರ ದೇವ್ರ, ತಮ್ಮ ರಾಜ್ಯಕ್ಕೆ ತಾವೇ ಬಂದ್ರು ಕೂ …… ಎಂದು ಕೂಗುತ್ತಾರೆ. ಹೀಗೆ ಧಾನ್ಯದ ರಾಶಿ, ಕೊಟ್ಟಿಗೆ, ಕಣ, ಗೊಬ್ಬರದ ರಾಶಿ, ತೋಟ ಇತ್ಯಾದಿಗಳಲ್ಲಿ ದೀಪಗಳನ್ನು ಬೆಳಗುತ್ತಾರೆ.

ಬಲಿಯೇಂದ್ರನನ್ನು ತುಳಸಿಯಲ್ಲಿ ಕಾಣುವುದಲ್ಲದೇ, ತಿರುಪತಿ ತಿಮ್ಮಪ್ಪನ ರೂಪದಲ್ಲಿ ಕಂಡು, ಮುಡಿಪು ಕಟ್ಟುತ್ತಾರೆ. ಸಂಗ್ರಹವಾದ ಮುಡಿಪನ್ನು ತಿರುಪತಿಗೆ ಮುಟ್ಟಿಸುತ್ತಾರೆ. ಅಂದಿನ ಅಡುಗೆಯಲ್ಲಿ ‘ತೊಂದ್ರೆದಡ್ಯೆ’ ಎಂಬ ಇಡ್ಲಿ ಇರಲೇಬೇಕು. ಮಾಂಸಾಹಾರ ನಿಷಿದ್ಧವಾಗಿದ್ದು, ಕಳ್ಳು ಇರಲೇಬೇಕೆಂಬ ನಿಯಮವಿದೆ.