ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಬಳುವನೇರಲು ಗ್ರಾಮದ ದೇವತೆ ಉಡಸಲಮ್ಮ. ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ನಡೆಯುವ ಅಮ್ಮನ ಜಾತ್ರೆಯಲ್ಲಿ ದೇವಿಯ ಆವಾಹನೆಗೆ ಒಳಗಾದ ಭಕ್ತನೊಬ್ಬ ಆ ಈಚಲು ಮರ ಏರುವ ಸೇವೆ ನಡೆಯುತ್ತದೆ.  ಯುಗಾದಿ ನಂತರದ ಮೊದಲ ಶುಕ್ರವಾರ ಜಾತ್ರೆ ಮಾಡಲು ದೇವಿಯ ಅಪ್ಪಣೆ ಕೇಳಿ ಹದಿನೈದು ದಿನಕ್ಕೆ ಜಾತ್ರೆ ನಡೆಸುವುದಾಗಿ ‘ಸಾರು’ ಹಾಕುತ್ತಾರೆ. ಜಾತ್ರೆಯ ಜವಾಬ್ದಾರಿಗಳನ್ನು ಗ್ರಾಮದ ಎಲ್ಲಾ ಜನ ವರ್ಗದವರು ಚಾಚೂ ತಪ್ಪದೆ ಮಾಡುತ್ತಾರೆ. ಬಳುವನೇರಲಿನ ಸುತ್ತಲಿನ ಹದಿನಾರು ಗ್ರಾಮಗಳ, ಪ್ರತಿ ಮನೆಗೂ ದೇವಿ ಉಡುಸಲಮ್ಮ  ಹೋಗಿ ‘ಸೋಬಲಕ್ಕಿ’ ಪಡೆಯುತ್ತಾಳೆ.

ಜಾತ್ರೆಯನ್ನು ಸಾರಿದ ಹದಿನಾಲ್ಕನೇ ದಿನ ದೇವತೆಯನ್ನು ಅಯ್ಯನಕೆರೆಯಲ್ಲಿ ಸ್ನಾನ ಇತ್ಯಾದಿಗಳಿಂದ ಪವಿತ್ರಗೊಳಿಸಿ ಹೊಸ ಸೀರೆ ಆಭರಣಗಳಿಂದ ಸಿಂಗರಿಸಿ, ಮದುವಣಗಿತ್ತಿಯನ್ನಾಗಿಸಿ ಕರೆತರುತ್ತಾರೆ. ದಾರಿಯಲ್ಲಿ ಸೋಬಾನೆ ಹಾಡುಗಳನ್ನು ಹಾಡಿ ಆರಾಧಿಸುತ್ತಾರೆ. ಮರುದಿನ ‘ಬಾನ’ ದೇವಿಗೆ ತಂಬಿಟ್ಟಿನ ಆರತಿ ಮಾಡಿ ಸುಮಂಗಲಿಯರು ಭಕ್ತಿ ಭಾವದಿಂದ ಪೂಜೆ ಮಾಡುತ್ತಾರೆ. ಚೌಡಮ್ಮ ಹಾಗೂ ಭೂತರಾಯನಿಗೆ ಬಲಿ ಹಾಕಿದ ನಂತರ ಎಡೆ ನೈವೇದ್ಯವಾಗುತ್ತದೆ. ದೇವಿಗೆ ‘ಸಿಡಿ’ ಉತ್ಸವವು ನಡೆಯುತ್ತದೆ. ಊರಿನ ಪ್ರಮುಖ ರಾಜಬೀದಿಗಳಲ್ಲಿ ರಾತ್ರಿಯೆಲ್ಲ ದೇವಿಯ ಮೆರವಣಿಗೆ ಹೊರಡುತ್ತದೆ. ಮೆರವಣಿಗೆಯಲ್ಲಿ ಸೋಮನ ಕುಣಿತ, ಡೊಳ್ಳುಕುಣಿತ, ಧ್ವಜಕುಣಿತ, ಕೋಲಾಟ ಸೇರಿದಂತೆ ವಿವಿಧ ಜನಪದ ಕಲಾತಂಡಗಳು ಭಾಗವಹಿಸುತ್ತವೆ. ದೇವಿಯ ಸ್ನಾನವನ್ನು ಗಂಗಾ ಸ್ನಾನವೆಂದು ಕರೆಯುತ್ತಾರೆ. ಇಡೀ ಜಾತ್ರೆಯ ವಿಶೇಷ ಈಚಲ ಮರವನ್ನು ದೇವಿಯ ನಿರೂಪ ಬಂದವರು ಹತ್ತುವರು. ಜಾತ್ರೆಯ ಬೆಳಿಗ್ಗೆ ದೇವಿಯ ಉತ್ಸವ ಎಲ್ಲರ ಮನೆಗಳಿಗೂ ಹೋಗಿ ರಥೋತ್ಸವಕ್ಕೆ ಬರುವಂತೆ ಆಹ್ವಾನಿಸುತ್ತದೆ. ಬೆಳಗ್ಗಿನ ಹತ್ತಕ್ಕೆ ದೇವಿಯ ಮೂರ್ತಿಯನ್ನು ರಥದಲ್ಲಿರಿಸಿ, ರಥೋತ್ಸವ ಮಾಡುತ್ತಾರೆ.

ದೇವಾಲಯದ ಪಕ್ಕದಲ್ಲಿರುವ ಈಚಲ ಮರವನ್ನು ಬನ್ನಿಮರವೆಂದು ಕರೆಯುತ್ತಾರೆ. ರಥದಿಂದಿಳಿದ ದೇವತೆ ದೇವಾಲಯದ ಸುತ್ತ ಮೆರವಣಿಗೆ ಬರುತ್ತಾಳೆ. ಈಚಲ ಮರ ಏರುವವರ ಮೇಲೆ ದೇವಿ ಆವಾಹನೆಯಾಗಿ ನಿರೂಪ ಬಂದು ಅವರು ನಿಂತಲೇ ನೆಲಕ್ಕೆ ಉರುಳಿ ಹೊರಳಾಡುತ್ತಾರೆ. ದೇವಿಯ ಮೆರವಣಿಗೆ ಊರಿನ ಬ್ರಾಹ್ಮಣ ಹಾಗೂ ವೀರಶೈವ ಮನೆಗಳಿಗೆ ತೆರಳಿ ಸೋಬಲಕ್ಕಿ ಪಡೆದು ಬಂದ ನಂತರ ಈಚಲು ಮರ ಹತ್ತುವ ಸಾಹಸ ಆರಂಭವಾಗಿರುತ್ತದೆ.

ಈಚಲು ಮರವೇರುವ ದೇವಿ ನಿರೂಪನಿಗೆ ಕಚ್ಚೆಪಂಜೆ ಹಾಕಿಸಿ, ಅರಿಶಿಣ, ಕುಂಕುಮ ಬಳಿದು, ಮರದ ಹತ್ತಿರ ಕರೆತಂದು ಬಿಡುತ್ತಾರೆ. ಅತ್ಯಂತ ಕಷ್ಟಕರವಾದ ಮರ ಹತ್ತುವ ಕೆಲಸವನ್ನು ದೇವಿ ನಿರೂಪಕರು ರಣ ವಾದ್ಯಗಳ ಸದ್ದಿನೊಂದಿಗೆ ಮರವೇರಿ ಸುಳಿಯಲ್ಲಿ ನಿಂತು ದರ್ಶನ ನೀಡುತ್ತಾ ಕುಣಿಯುತ್ತಾನೆ. ಊರಿನ ಮುಖಂಡರ ಸೂಚನೆಯ ಮೇರೆಗೆ ಮರವನ್ನು ಇಳಿದು, ದೇವಿಗೆ ನಮಸ್ಕರಿಸುತ್ತಾರೆ. ಆ ಮುಳ್ಳಿನ ಮರವೇರಿದರೂ ಮುಳ್ಳುಗಳಿಂದ ಚುಚ್ಚಿಸಿಕೊಳ್ಳದೇ ಇರುವುದು ಕುತೂಹಲಕರವಾಗಿದೆ. ನಂತರ ಓಕುಳಿ ಹಾಗೂ ಉತ್ಸವದೊಡನೆ ಜಾತ್ರೆ ಮುಗಿಯುತ್ತದೆ.