ಕಾರ್ತಿಕಮಾಸದಲ್ಲಿ ಆಚರಣೆಗೊಳ್ಳುವ ಕೃಷಿಸಂಬಂಧೀ ಹಬ್ಬ. ಇದು ದೀಪಾವಳಿ ಹಬ್ಬವನ್ನು ಹೋಲುತ್ತದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ನಿಡುಗಲ್ಲು ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರಚಲಿತವಿದೆ. ಇದನ್ನು ರೈತಾಪಿ ವರ್ಗದವರು ಆಚರಿಸುತ್ತಾರೆ. ಶಿಷ್ಟವರ್ಗ ಆಚರಿಸುವ ದೀಪಾವಳಿಗೂ ಇದಕ್ಕೂ ವ್ಯತ್ಯಾಸವಿದೆ. ವೈವಿಧ್ಯದಿಂದ ಕೂಡಿದ ಇದನ್ನು ಎತ್ತಿನ ಹಬ್ಬವೆಂತಲೂ ಕರೆಯುತ್ತಾರೆ.

ಕಾರ್ತಿಕ ಮಾಸದ ಹುಣ್ಣಿಮೆ ನಂತರ ಊರಿನ ಹಿರಿಯರು, ಮುಖ್ಯಸ್ಥರು ಒಂದೆಡೆ ಸೇರಿ ಹಬ್ಬದ ದಿನವನ್ನು ಗೊತ್ತುಮಾಡುತ್ತಾರೆ. ಹಬ್ಬದ ದಿನವನ್ನು ಹೂವು ಚೆಲ್ಲುವ ಪದ್ಧತಿ ಮೂಲಕ ಮನೆ ಮನೆಗೂ ಮುಟ್ಟಿಸುತ್ತಾರೆ. ಸೂರ್ಯ ಹುಟ್ಟುವ ಮೊದಲೇ ಒಬ್ಬನು ಕಾಡಿನಿಂದ ತಂಗಟೆ ಹೂವುಗಳನ್ನು ಸಂಗ್ರಹಿಸಿ, ಪ್ರತಿ ಮನೆ ಬಾಗಿಲ ಬಳಿ ಚೆಲ್ಲಿ, ಹಬ್ಬದ ದಿನ ತಿಳಿಸಿ ಬರುತ್ತಾನೆ. ಒಮ್ಮೆ ಹಬ್ಬ ಸಾರಿದ ಮೇಲೆ ಯಾವುದೇ ಕಾರಣಕ್ಕೂ ನಿಲ್ಲಿಸುವಂತಿಲ್ಲ. ಹೂವು ಚೆಲ್ಲಿದ ಮೇಲೆ ಊರಿನ ಹುಡುಗರು ಅಂಟಿ-ಪಿಂಟಿ ಹಾಡುವುದು, ಹೆಣ್ಣುಮಕ್ಕಳು ಬಸವನನ್ನು  ಆರಾಧಿಸುವುದು, ದನಗಾಹಿಗಳು ಈಡುಹಾಕುವುದು ಇತ್ಯಾದಿ ಆಚರಣೆಗಳು ನಡೆಯುತ್ತವೆ. ಈ ಎಲ್ಲಾ ಆಚರಣೆಗಳು ಹಬ್ಬ ಆರಂಭದ ದಿನದವರೆಗೆ ನಡೆದು ಮುಕ್ತಾಯವಾಗುತ್ತವೆ. ಹೂ ಚೆಲ್ಲಿದ ರಾತ್ರಿಯಿಂದ ಅಂಟಿ-ಪಿಂಟಿ ಎಂಬ ದೀಪದಾನ ಸಂಪ್ರದಾಯ ಆರಂಭವಾಗುತ್ತದೆ. ಮಣ್ಣಿನ ದೀಪವೊಂದನ್ನು ಸಗಣಿಯ ಮೇಲಿಟ್ಟು ಅದನ್ನು ಅರಿಶಿಣ, ಕುಂಕುಮ, ಹೂಗಳಿಂದ ಅಲಂಕರಿಸಿ, ಒಬ್ಬನು ಹಿಡಿದಿರುತ್ತಾನೆ. ದೀಪ ಹಿಡಿದವನು ದೊಡ್ಡ ಗುಂಪೊಂದನ್ನು ಕಟ್ಟಿಕೊಂಡು ಮನೆ ಮನೆಗೂ ಹೋಗಿ ಒಬ್ಬ ಹೇಳಿದ ಪದವನ್ನು ಇನ್ನೊಬ್ಬ ಹೇಳಿದಾಗ ಉಳಿದವರೆಲ್ಲ ಹಾಗೇ ಹಾಡುತ್ತಾರೆ.

ಹೆಣ್ಣು ಮಕ್ಕಳು ಮೊದಲೇ ಸಂಗ್ರಹಿಸಿ, ವಿಧಿವತ್ತಾಗಿ ಪೂಜಿಸಿದ ಮಣ್ಣಿನ ರಾಶಿಯಿಂದ ಬಸವನ ಮೂರ್ತಿಯನ್ನು ಮಾಡುತ್ತಾರೆ. ಬಸವನ ಮೂರ್ತಿಯನ್ನು ಎತ್ತರವಾದ ಸ್ಥಳದಲ್ಲಿ ಇರಿಸಿ, ತಾವು ಬೆಳೆದ ವಿವಿಧ ತರಕಾರಿಗಳಿಂದ ಸಿಂಗರಿಸುತ್ತಾರೆ. ಜೋಳದ ತೆನೆ, ಚೆಂಡು ಹೂ, ಹುಲ್ಲಿನ ನಾನಾ ಬಗೆಗಳನ್ನು ಹೆಣೆದು ಕೊರಳ ಮಾಲೆ ಮಾಡಿ ಬಸವನಿಗೆ ಹಾಕುತ್ತಾರೆ. ತಾವೇ ಬೆಳೆದ ಹುಲ್ಲು, ತರಕಾರಿ ಇತ್ಯಾದಿಗಳಿಂದ ಪೂಜಿಸುವುದು ಇಲ್ಲಿಯ ವಿಶೇಷ. ಬಸವನಿಗೆ ಆರತಿ ಮಾಡಿದ ಹೆಣ್ಣು ಮಕ್ಕಳು ಆರತಿ ತಟ್ಟೆಗೆ ಕಾಣಿಕೆ ಹಾಕುವಂತೆ ಒತ್ತಾಯಿಸಿ ಪಡೆಯುತ್ತಾರೆ. ಹೀಗೆ ಸಂಗ್ರಹವಾದ ಹಣದಿಂದ ಊರಿನ ಗ್ರಾಮದೇವತೆಗೆ ಆಭರಣ, ವಸ್ತ್ರ ಇತ್ಯಾದಿಗಳನ್ನು ಕೊಂಡು ಸಿಂಗರಿಸುತ್ತಾರೆ. ಅಲ್ಲದೇ ಪ್ರತಿ ಮನೆಯಿಂದಲೂ ಭತ್ತ, ಅಕ್ಕಿ ಸಂಗ್ರಹಿಸಿ, ಅದರಿಂದಲೇ ಬಸವನಿಗೆ ನೈವೇದ್ಯ ಅರ್ಪಿಸಿ, ಅಲ್ಲಿ ಬಂದವರಿಗೆಲ್ಲ ಊಟ ನೀಡುತ್ತಾರೆ.

ಊರಿನ ದನಗಾಹಿಗಳು ಒಂದೆಡೆ ಸೇರಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಜಾಲಿ, ಬೇಲ, ರೋಜಿ, ಉಡಿಗೆ ಇತ್ಯಾದಿ ಗಿಡಗಳನ್ನು ಕಡಿದು ಕುಂಬಳಕಾಯೊಂದರ ಮೇಲೆ ರಾಶಿ ಹಾಕುತ್ತಾರೆ. ಒಟ್ಟು ಈ ರಾಶಿಯನ್ನೇ ‘ಈಡು’ ಎಂದು ಕರೆಯುತ್ತಾರೆ. ಹೂ ಚೆಲ್ಲಿದ ದಿನದಿಂದ ‘ಬಾನ’ ಮಾಡುವ ದಿನದವರೆಗೆ ದನಗಾಹಿಗಳು ತಮ್ಮ ಭಾಗದ ಕೆಲಸವನ್ನು ಭಕ್ತಿಯಿಂದ ಮಾಡುತ್ತಾರೆ.

ರೈತ ಮಕ್ಕಳು ತಮ್ಮ ತಮ್ಮ ದನಕರುಗಳನ್ನು ಕೆರೆ ಅಥವಾ ಹೊಳೆಯಲ್ಲಿ ಚೆನ್ನಾಗಿ ಮೈತೊಳೆದು, ಕೊಂಬುಗಳಿಗೆ ಬಣ್ಣ ಹಚ್ಚಿ, ಮೈಗೆ ಬಣ್ಣದ ಜರತಾರಿ ವಸ್ತ್ರವನ್ನು ಹೊದಿಸುತ್ತಾರೆ. ಕೊಂಬಿಗೆ ಕೊಡು ಹಣಸು, ಟೇಪು, ಆಭರಣಗಳನ್ನು ಹಾಕಿ, ಕೊರಳಿಗೆ ಹೂವಿನ ಹಾರ, ಕಾಲಿಗೆ ಗೆಜ್ಜೆ ಇತ್ಯಾದಿಗಳಿಂದ ಸಿಂಗರಿಸಿ, ಹರೆ, ಡೋಲು, ತಮಟೆ ಮುಂತಾದ ವಾದ್ಯಗಳ ಸಹಿತ ದನಗಾಹಿಗಳು ಸಿದ್ಧಮಾಡಿದ ಈಡಿನ ಬಳಿ ಬಂದು ಸೇರುತ್ತಾರೆ. ಈಡಿನ ರಾಶಿಗೆ ವಿಧಿವತ್ತಾಗಿ ಪೂಜಿಸಿ, ಗೊಲ್ಲರು ತಯಾರಿಸಿಕೊಂಡು ಬಂದಿದ್ದ ಅಕ್ಕಿ ಬೆರೆಸಿದ ರಾಗಿ ಮುದ್ದೆಗಳನ್ನು ಜಾನುವಾರುಗಳ ಮೇಲೆ ಎಸೆಯುತ್ತಾರೆ. ಈ ವಿಧಿಕ್ರಿಯೆಗೆ ‘ಮುದ್ದೆ ಎಸೆಯುವುದು’ ಎಂದು ಕರೆಯುತ್ತಾರೆ. ಪಟಾಕಿ, ಬಾಣ, ಬಿರುಸು, ಕೇಕೆಗಳಿಂದ ತುಂಬಿ, ನೋಡಲು ಮನೋಹರವಾಗಿರುತ್ತದೆ. ಊರ ಗೌಡನಿಂದ ಈಡಿನ ರಾಶಿಗೆ ಕಿಚ್ಚು ಹಾಕಲು ಒಪ್ಪಿಗೆಯಾದ ಮೇಲೆ ದೊಂದಿ ಹಿಡಿದ ಹೊಲೆಯನು ಗೌಡನ ಆಜ್ಞೆಯಂತೆ ರಾಶಿಗೆ ಬೆಂಕಿ ಹಚ್ಚುತ್ತಾನೆ. ಉರಿಯ ಸುತ್ತಲೂ ತಮ್ಮ ತಮ್ಮ ದನಕರುಗಳನ್ನು ಪ್ರದಕ್ಷಿಣೆ ಮಾಡಿಸಿ, ವಾದ್ಯದೊಂದಿಗೆ ಪ್ರತಿ ಮನೆಗಳಿಗೂ ಬರುತ್ತಾರೆ. ಸಂಬಂಧಿಸಿದ ಮನೆಯರು ತಮ್ಮ ಎತ್ತುಗಳನ್ನು ಆರತಿ ಮಾಡಿ, ಎತ್ತು ಹಿಡಿದವನಿಂದ ಕಾಣಿಕೆ ಪಡೆದು, ಒಳಗೆ ಕರೆದುಕೊಳ್ಳುತ್ತಾರೆ. ಹೆಣ್ಣು ಮಕ್ಕಳು ಆಗಲೇ ಸಿದ್ಧಪಡಿಸಿದ ಅಡುಗೆಯನ್ನು ಎಡೆ, ಮಾಡಿ, ದನಕರುಗಳಿಗೂ ಎಡೆ ತೋರಿಸಿ, ಮನೆಯ ಎಲ್ಲರೂ ಹಬ್ಬದಡುಗೆಯನ್ನು ಸವಿಯುತ್ತಾರೆ.