ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಒಂದೊಂದು ಆಚರಣೆಗಳು ಸಡಗರ ಸಂಭ್ರಮದ ಆಗರಗಳು. ಮದುವೆ ನಂತರ ತವರಿನವರು ಹೆಣ್ಣನ್ನು ಗಂಡಿನ ಮನೆಗೆ ಕಳುಹಿಸುವಾಗ ಮಡಿಲು ತುಂಬುವುದು ಮೊದಲ ಕಾಣಿಕೆ. ಅವುಗಳಲ್ಲಿ ಹೆಣ್ಣು ಮಕ್ಕಳ ಬದುಕಿನ ಒಡನಾಡಿಯಾಗಿ ಹರಿದು ಬಂದಿರುವ ಭಾವಗೀ, ಒಳಕಲ್ಲು ಪೂಜೆ, ಅರಿಶಿಣ ಹಚ್ಚೋದು, ಐರಾಣಿ ತರೋದು, ಸಂಡಿಗೆ ಕರಿಯೋದು, ನೂಲು ಸುತ್ತೋದು, ಅಡಿಕೆ ಆಡುವುದು, ಭೂಮಿ ಮಾಡುವುದು, ಬೀಗರು ಕರೆಯುವುದು, ಕೂಸು ಒಪ್ಪಿಸುವುದು, ಬಯಕೆ ಮಾಡೋದು, ಹಾಲುಂಬ ದಂಡಿ, ಬಾಸಿಂಗ, ಗಂಗೆಸ್ಥಳ,  ದೀಡು ನಮಸ್ಕಾರದಂತಹ ಆಚರಣೆಗಳು ಸಡಗರ ಸಂಭ್ರಮದ ಪ್ರತೀಕಗಳಾಗಿ ಕಂಡುಬರುತ್ತವೆ. ಉಡಿಯಕ್ಕಿಶಾಸ್ತ್ರ ದುಃಖದ ಸನ್ನಿವೇಶವಾಗಿ ಕಂಡುಬರುತ್ತದೆ. ತಾನು ಹುಟ್ಟಿ ಬೆಳೆದ ಮನೆ, ತಂದೆ, ತಾಯಿ, ಅಣ್ಣ, ತಮ್ಮ, ತಂಗಿ ಎಲ್ಲರನ್ನು ಬಿಟ್ಟು ಬೇರೊಂದು ಮನೆಗೆ ಹೋಗುವ ಕ್ಷಣ. ಒಂದು ರೀತಿಯಲ್ಲಿ ಉಡಿಯಕ್ಕಿ ಕರುಳಿನ ಕುಡಿಯನ್ನು ಕಳುಹಿಸುವ ಕಣ್ಣೀರಿನ ಮಡುವೆಂದರೂ ತಪ್ಪಾಗಲಾರದು.

ಮದುವೆ ಮುಗಿದು ಹದಿನಾರನೇ ದಿನ ಉಡಿಯಕ್ಕಿ ಶಾಸ್ತ್ರ ನಡೆಯುತ್ತದೆ. ಅಂದಿನ ಊಟಕ್ಕೆ ಹೋಳಿಗೆ, ಸಂಡಿಗೆ, ಹಪ್ಪಳ, ಬದನೆಕಾಯಿ ಪಲ್ಲೆ, ಕೋಸಂಬರಿ, ಬೇಳೆ, ತುಪ್ಪ, ಅನ್ನಸಾರು, ಪುಟಾಣಿ ಚಟ್ನಿ, ಉಪ್ಪಿನಕಾಯಿ ಇತ್ಯಾದಿಗಳಿರುತ್ತವೆ. ಬೀಗರ ಊಟವಾದ ನಂತರ ತವರಿನವರು ತಂದ ಹೊಸಸೀರೆಯನ್ನು ಹೆಣ್ಣಿಗೆ ತೊಡಿಸುತ್ತಾರೆ. ಮನೆಯ ಪಡಸಾಲೆಯಲ್ಲಿ ಮಣೆಹಾಕಿ ಕುಳ್ಳಿರಿಸಿ, ನಂತರ ಹಿತ್ತಾಳೆಯ ಪಾತ್ರೆಯೊಂದರಲ್ಲಿ ಅಕ್ಕಿ ತಂದು ಕುಂಕುಮದ ಬಟ್ಟಲಿನಿಂದ ಬೊಟ್ಟು ಅದ್ದಿ, ಹಣೆಗೆ, ಮಾಂಗಲ್ಯಕ್ಕೆ ಹಚ್ಚಿ ಮುಗಿಸುತ್ತಿದ್ದಂತೆ, ನೀರೆಯು ಶೃಂಗಾರದ ಉಡಿಯನ್ನು ಮುಂದೊಡ್ಡುತ್ತಾಳೆ. ಆಗ ಪಾತ್ರೆಯಿಂದ ಶಾಸ್ತ್ರದಂತೆ ಐದು ಹಿಡಿ ಅಕ್ಕಿ ಹಾಕಿ, ನಂತರ ಎಲ್ಲವನ್ನೂ ಸುರುವುತ್ತಾಳೆ. ಬರಿದಾದ ಪಾತ್ರೆಗೆ ನೀರೆ ಹಿಡಿ ಅಕ್ಕಿ ಹಾಕಿ, ಮೇಲೆದ್ದು ಸಂಪ್ರದಾಯದಂತೆ ಮುಂದಿನ ಮನೆಗೆ ಹೋಗುತ್ತಾಳೆ. ಮುತ್ತೈದೆಯರು, ತರುಣಿಯರು ಮಕ್ಕಳು-ಮರಿಗಳು ಅವಳ ಜೊತೆಗೆ ಇರುತ್ತಾರೆ. ಉಡಿಯಕ್ಕಿ ತುಂಬಿ ಹರಸುವ ಗೀತೆಯೊಂದು ಹೀಗಿದೆ.

“ಅತ್ತಿ ಕಾಯಿ ತಂದು ಅತ್ತೆ ಉಡಿಯಲಿ ತುಂಬಿ, ಅತ್ತೆದ್ದು ಹರಕೆ ಕೊಡತಾಳ ತಂಗೆವ್ವನ,  ಅತ್ತೆದ್ದು ಹರಕಿ ಕೊಡತಾಳ ತಂಗೆವ್ವನ, ಹತ್ತು ಮಕ್ಕಳ ಹಡೆಯೆಂದು ಸೋ….”. ಹೀಗೆ ಹಾಡುತ್ತಾ ಬಳಿಗಾರ, ಗೌಡರ, ಹಿರೇಮಠ, ಬಡಿಗಾರು, ಶೆಟ್ಟರ ಮುಂತಾದ ಒಂಬತ್ತು ಮನೆ ಮುಗಿಸಿ ಅಗಸಿಯ ಹತ್ತಿರ ಬರುವಾಗ ಸಂಜೆಯಾಗಿರುತ್ತದೆ. ಅಷ್ಟರಲ್ಲಿ ಹೆಣ್ಣಿನ ಅಣ್ಣ ಅಥವಾ ತಮ್ಮ ಒಬ್ಬರು ಶಾಲು ಹಾಕಿಕೊಂಡು, ತುಂಬಿದ ತಂಬಿಗೆಯಿಂದ ತಂಗಿಯರ ಕಾಲು ತೊಳೆದು ಬಾಯಲ್ಲಿ ಸಕ್ಕರೆ ಹಾಕುತ್ತಾನೆ. ತನ್ನ ಶಾಲು ಮುಂದೆ ಮಾಡಿ ಉಡಿಯಕ್ಕಿಯನ್ನು ಹಾಕಿಸಿಕೊಂಡು ಗಂಡಿನವರಿಗೆ ಅದನ್ನು ಒಪ್ಪಿಸುತ್ತಾನೆ. ಅಲ್ಲಿ ನೆರೆದವರಿಗೆ ಎಲೆ ಅಡಿಕೆ ನೀಡುತ್ತಾರೆ. ಹೆಣ್ಣಿಗಾಗಿ ಗಾದಿ, ತಲೆದಿಂಬು, ಚಾದರ, ಕರಜೀಕಾಯಿ, ಮೊಸರು, ಹೆಸರುಕಾಳು, ಚಟ್ನಿ, ರೊಟ್ಟಿಯ ಬುತ್ತಿಗಂಟು ಇತ್ಯಾದಿಗಳನ್ನು ಕಳುಹಿಸುತ್ತಾರೆ.