ದನಗಾಹಿಗಳ ದೈವ. ಪ್ರತಿ ವರ್ಷ ಸಂಕ್ರಾಂತಿಯಂದು ಈ ದೈವವನ್ನು ಪೂಜಿಸುವ ಪದ್ಧತಿ ಇದೆ. ಬೆಂಗಳೂರಿನ ಸುತ್ತಮುತ್ತಲಿನ ಹಳ್ಳಿಗಳು ಹಾಗೂ ಒಳಗೆ ಇರುವ ಹಳ್ಳಿಗಳಲ್ಲಿ ಈ ಆಚರಣೆಯನ್ನು ಕಾಣಬಹುದು. ಉಣ್ಣೆಕಟ್ಟಿ ದೈವವನ್ನು ಕಾಟಮ್ಮರಾಯ, ಕಾಟಮರಾಯ, ಕಾಟಮಲಿಂಗ, ಸಂಕ್ರಾಂತಮ್ಮ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಸಂಕ್ರಾಂತಿ ದಿನ ಈ ದೈವವನ್ನು ಪೂಜಿಸಿ, ಎಡೆ ಅರ್ಪಿಸಿದರೆ ದನಗಳಿಗೆ ಉಣ್ಣೆ ಕಾಟ ತಪ್ಪುತ್ತದೆ ಎಂಬ ನಂಬಿಕೆಯು ಈ ಹಬ್ಬಕ್ಕೆ ಕಾರಣವಾಗಿದೆ.

ಉಣ್ಣೆಕಟ್ಟಿ ದೈವ, ಹುತ್ತದ ದೇವರು. ಹುತ್ತವನ್ನು ಮಣ್ಣು ಮೆತ್ತಿ ಗೋಪುರದಂತೆ ಮಾಡಿ, ಅಣ್ಣೆ ಹೂ, ಉತ್ತರಾಣಿ, ಹಂಚೀಕಡ್ಡಿ ಇತ್ಯಾದಿಗಳಿಂದ ಅಲಂಕರಿಸುತ್ತಾರೆ. ನೈವೇದ್ಯವನ್ನು ಅಲ್ಲಿಯೇ ತಯಾರಿಸುತ್ತಾರೆ. ಬೇಯಿಸಿದ ಕಾಳು ಮತ್ತು ಮೊಸರನ್ನವನ್ನು ಎಡೆ ಅರ್ಪಿಸಿ, ಮೊಟ್ಟೆ ಇಟ್ಟು, ಕೋಳಿ ಬಲಿ ಅರ್ಪಿಸುತ್ತಾರೆ. ಅನ್ನದ ಉಂಡೆಯಲ್ಲಿ ದನಗಳ ಮೈಮೇಲಿನ ಒಂದೆರಡು ಉಣ್ಣೆಗಳನ್ನು ಇಟ್ಟು ದಾನಗಾಹಿ ಹುಡುಗನಿಗೆ ತಿನ್ನಲು ಕೊಟ್ಟರೆ ದನಗಳಿಗೆ ಉಣ್ಣೆ ಕಾಟ ತಪ್ಪುತ್ತದೆ ಎಂದು ನಂಬುತ್ತಾರೆ. ಅಂದು ದನಕರುಗಳನ್ನು ಮೈತೊಳೆದು, ಕೊಂಬಗಳಿಗೆ ಬಣ್ಣ ಹಚ್ಚಿ, ಹಣಸು ಹಾಕಿ, ಹಣೆ ಪಟ್ಟಿಯಿಂದ ಸಿಂಗರಿಸುತ್ತಾರೆ. ಕೊರಳಿಗೆ ಗೆಜ್ಜೆ ಕಟ್ಟಿ, ಹೂಹಾರಗಳಿಂದ ಅಲಂಕರಿಸುತ್ತಾರೆ. ಹೀಗೆ ಸರ್ವಾಂಗವಾಗಿ ಅಲಂಕರಿಸಿದ ದನಕರುಗಳನ್ನು ಉಣ್ಣೆ ಕಟ್ಟಿ ದೇವರ ಗೋಪುರದ ಬಳಿ ತರುತ್ತಾರೆ. ಅವುಗಳಿಗೆ ದೇವರ ತೀರ್ಥ ಹಾಕಿಸಿ, ಊರ ಬಾಗಿಲಿಗೆ ಎತ್ತುಗಳೊಂದಿಗೆ ಬರುತ್ತಾರೆ. ಆಗಲೇ ಸಿದ್ಧವಾದ ಕಿಚ್ಚಿಗೆ ಬೆಂಕಿ ತಗುಲಿಸಿ, ಅದರ ಮೇಲೆ ದನಕರುಗಳನ್ನು ಹಾರಿಸಿ, ಕ್ರಿಮಿಕೀಟಗಳು ತೊಲಗಲಿ ಎಂದು ಹೇಳಿಕೊಳ್ಳುತ್ತಾರೆ. ಇದನ್ನು ‘ಈಡು’ ಸುಡುವುದೆಂದು ಕರೆಯುತ್ತಾರೆ. ಈ ಬಗೆಯ ಆಶಯಗಳಿರುವ ಆಚರಣೆಗಳನ್ನು ಮಲೆನಾಡಿನ ದೀಪಾವಳಿ, ಬಯಲು ನಾಡಿನ ಸಂಕ್ರಾಂತಿ, ಉತ್ತರ ಕರ್ನಾಟಕದ ಅಣಿಪೀಣಿ, ದಕ್ಷಿಣ ಕನ್ನಡದ ಕಾಡ್ಯನಾಟ ಹಾಗೂ ಕೋಲಾರದ ಕೆಲವು ಆಚರಣೆಗಳಲ್ಲಿ ಕಾಣಬಹುದು.