ತುಳುನಾಡಿನ ಜನ ಆಷಾಢದ ಅಮಾವಾಸ್ಯೆಯಂದು ಸಪ್ತಮಣಿ ಮರದ  (ಏಳೆಲೆಮರ) ತೊಗಡೆಯಿಂದ ತಯಾರಿಸಿದ ಔಷಧಿ ಗುಣವುಳ್ಳ ರಸವನ್ನು ಕುಡಿಯುತ್ತಾರೆ. ವರ್ಷಕ್ಕೊಮ್ಮೆ ರಸ ಕುಡಿದರೆ ವರ್ಷವಿಡೀ ಔಷಧಿಯೇ ಬೇಕಿಲ್ಲವೆಂಬ ನಂಬಿಕೆಯಿದೆ. ಆಷಾಢದ ಅಮಾವಾಸ್ಯೆ ದಿನ ನಸುಕಿನಲ್ಲಿ ಎದ್ದು ಏಳೆಲೆಮರದ ತೊಗಟೆಯನ್ನು ಕತ್ತಿಯಿಂದ ಕೆತ್ತಿ ತರುತ್ತಾರೆ. ಕಾಳು ಮೆಣಸು, ಜೀರಿಗೆ ಉಪ್ಪುನ್ನು ತೊಗಟೆಯ ಜೊತೆ ಸೇರಿಸಿ, ಅರೆದು ರಸ ತೆಗೆದು ನಸುಕಿನಲ್ಲಿಯೇ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಾರೆ. ಔಷಧೀಯ ಗುಣಧರ್ಮವನ್ನು ಹೆಚ್ಚಿಸಿ, ಕಹಿ ಕಡಿಮೆ ಮಾಡಿಕೊಳ್ಳಲು ಮೇಲಿನ ಮಿಶ್ರಣಗಳನ್ನು ಮಾಡುತ್ತಾರೆ. ಮತ್ತೆ ಕೆಲವು ಭಾಗಗಳಲ್ಲಿ ತೊಗಟೆಯನ್ನು ಜಜ್ಜಿ ರಸ ತೆಗೆದು ಯಾವುದೇ ಮಿಶ್ರಣ ಮಾಡದೆ ನೇರ ಕುಡಿಯುತ್ತಾರೆ. ಆ ದಿನ ಪ್ರತಿಯೊಬ್ಬರು ಈ ಮರದ ರಸವನ್ನು ಸುಮಾರು ೭೫ ರಿಂದ ೧೦೦ ಮಿಲಿ ಲೀಟರ್‌ನಷ್ಟು ಕುಡಿಯುತ್ತಾರೆ. ಹೊಟ್ಟೆ ಸಂಬಂಧಿ ತೊಂದರೆ, ಚರ್ಮ ಸಂಬಂಧಿ ವ್ಯಾಧಿಗಳು, ವಾತ ಶೂಲೆ, ತಲೆ ಸುತ್ತು, ಮಧುಮೇಹ ಇತ್ಯಾದಿ ರೋಗಗಳಿಗೆ ರಾಮಾಬಾಣವಂತೆ.

ಆಷಾಢದ ದಿನ ಮಾತ್ರ ಕಣ್ಣಿಗೆ ಕಾಣುವಂತೆ ಈ ಮರದ ರಸ ಕುಡಿಯುವುದು ವಾಡಿಕೆ. ಬೇವಿನ ಮರದಂತೆ ಪ್ರತಿಯೊಂದು ಭಾಗವು ಕಹಿಯಾದ ಈ ಮರದ ಸೊಪ್ಪನ್ನು ಬಿಸಿ ನೀರಿನಲ್ಲಿ ಕುದಿಸಿ ಸ್ನಾನ ಮಾಡಲು ಬಳಸುತ್ತಾರೆ. ಅಲ್ಲದೇ ಕಷಾಯ ಮಾಡಲು ಅರೆದು ಲೇಪನ ಮಾಡಲು ಬಳಸುವುದುಂಟು. ಈ ಮರದಿಂದ ಪೀಠೋಪಕರಣಗಳು ಮಾಡಿಕೊಳ್ಳುತ್ತಾರೆ. ಕರಾವಳಿ ಹಾಗೂ ಪಶ್ಚಿಮಘಟ್ಟದ ಇಳಿಜಾರು ಪ್ರದೇಶದಲ್ಲಿ ಈ ಮರಗಳು ಬೆಳೆಯುತ್ತವೆ.  ಬಯಲು ಸೀಮೆಯಲ್ಲಿ ಏಳೆಲೆ ಮರಗಳು ತುಂಬಾ ವಿರಳ. ಇಲ್ಲವೆಂದರೂ ಆಶ್ಚರ್ಯ ಪಡಬೇಕಾಗಿಲ್ಲ.