ಮದುವೆ ಶಾಸ್ತ್ರದಲ್ಲಿ ಒನಕೆ ಪೂಜೆ ಮುಖ್ಯವಾದ ವಿಧಿ. ಮದುವೆ ದಿನ ಐದು ಜನ ಮುತ್ತೈದೆಯರ ಸಮ್ಮುಖದಲ್ಲಿ ಈ ಶಾಸ್ತ್ರ ನಡೆಯುತ್ತದೆ. ಅಂದು ಒನಕೆಗೆ ಕೆಮ್ಮಣ್ಣು-ಸುಣ್ಣದಿಂದ ಪಟ್ಟಿ ಬರೆದು ‘ಐಧಾನ್ಯ’ ಗಂಟನ್ನು ಕಟ್ಟಲಾಗುತ್ತದೆ. ಒಂದು ಗೆರಸೆಯ ಮೇಲೆ ಬೀಸುವ ಕಲ್ಲು, ಅದರ ಬಾಯಿಗೆ ಐದು ಧಾನ್ಯ, ಫಲ ತಾಂಬೂಲ ಇಡುತ್ತಾರೆ. ಐದು ಜನ ಮುತ್ತೈದೆಯರು ಈ ಐಧಾನ್ಯವನ್ನು ಒನಕೆಯಿಂದ ಕುಟ್ಟುತ್ತಾರೆ. ಹೀಗೆ ಕುಟ್ಟಿ ಹಿಟ್ಟು ಮಾಡಿದ ಪುಡಿಯನ್ನು ತಂಬಿಟ್ಟು ಮಾಡುತ್ತಾರೆ. ಹಾಲು-ತುಪ್ಪ ಹೊಯ್ದದ ಮೇಲೆ ವಧೂವರರ ಕೈಗೆ ಹಚ್ಚಿಕೊಳ್ಳಲು ಆ ಹಿಟ್ಟನ್ನೇ ಕೊಡುತ್ತಾರೆ. ಅಲ್ಲದೇ ಆ ಹಿಟ್ಟಿನಿಂದಲೇ ಹಸೆ ಬರೆದು ವಧೂವರರನ್ನು ಕೂರಿಸಲಾಗುತ್ತದೆ.

ಕೃಷಿ ಸಮುದಾಯದವರಲ್ಲಿ ಒನಕೆ ಪೂಜೆ ಹೆಚ್ಚಾಗಿ ಬಳಕೆಯಲ್ಲಿದೆ. ಒನಕೆಯನ್ನು ಧಾನ್ಯಲಕ್ಷ್ಮಿ ಎಂದು ನಂಬಲಾಗಿದೆ. ದೀಪಾವಳಿ ಹಾಗೂ ಆಯುಧ ಪೂಜೆಗಳಲ್ಲಿ ಒನಕೆಯನ್ನು ಪೂಜಿಸುವ ಪದ್ಧತಿಯನ್ನು ಕಾಣಬಹುದು. ಮಲೆನಾಡಿನ ಕಡೆ ಗೋಪೂಜೆಯ ಸಂಜೆ ದನಕರುಗಳನ್ನು ಕೊಟ್ಟಿಗೆಗೆ ಬರಮಾಡಿಕೊಳ್ಳಲು ಬಾಗಿಲಿಗೆ ಅಡ್ಡ ಹಾಕುತ್ತಾರೆ. ಕಾಲ್ನಾಡಿಗಳು ಅದನ್ನು ದಾಟಿಯೇ ಒಳ ಬರಬೇಕೆಂಬ ನಿಯಮವಿದೆ. ಅಲ್ಲದೆ ಹೊಸದಾಗಿ ತಂದ ಎಮ್ಮೆ ಹಸುಗಳನ್ನು ಕೊಟ್ಟಿಗೆ ಒಳಗೆ ತರುವಾಗ ಬಾಗಿಲಿಗೆ ಒನಕೆ ಇಟ್ಟು ಹಸು ದಾಟಿಸಿ, ಒನಕೆ ತಕ್ಷಣ ತೆಗೆಯುತ್ತಾರೆ. ಹಸುಗಳು ಹಾಲು ಕೊಡಲು ತಂಟೆ ಮಾಡಿದಾಗ ಕೆಮ್ಮಣ್ಣು, ಸುಣ್ಣ ಒನಕೆಗೆ ಬಳಿದು ದಾಟಿಸುವುದರಿಂದ ತಂಟೆ ಮಾಡದೇ ಹಾಲು ಕೊಡುತ್ತವೆಂದು ಹೇಳುತ್ತಾರೆ. ಮಳೆಗಾಲದಲ್ಲಿ ಮಳೆ ಬಾರದೇ ಇದ್ದಾಗ ಒನಕೆಯ ಮಧ್ಯಭಾಗಕ್ಕೆ ಕಪ್ಪೆಯನ್ನು ಕಟ್ಟಿ ಹೂ, ಅಂಗುದಾರ, ಅರಿಶಿಣ, ಕುಂಕುಮವಿಟ್ಟು, ವಾದ್ಯದೊಂದಿಗೆ ಮನೆ ಮನೆಗೂ ಹೋಗಿ ಭಿಕ್ಷೆ ಬೇಡುತ್ತಾರೆ. ಸಂಗ್ರಹದಿಂದ ಅಡುಗೆ ಮಾಡಿ, ಆ ಕಪ್ಪೆಗೆ ಎಡೆಮಾಡಿ ನೀರಿಗೆ ವಿಸರ್ಜಿಸುವುದರಿಂದ ಮಳೆ ಬರುತ್ತದೆಂದು ನಂಬಿಕೆ ಇದೆ. ಗ್ರಹಣ ವೀಕ್ಷಣೆಯಲ್ಲೂ ಒನಕೆ ಬಳಸುತ್ತಾರೆ. ತಾಮ್ರದ ತಟ್ಟೆಗೆ ಸಗಣಿ ನೀರು ತುಂಬಿ ಅದರ ಮಧ್ಯೆ ಒನಕೆಯೊಂದನ್ನು ನಿಲ್ಲಿಸುತ್ತಾರೆ. ಗ್ರಹಣ ಬಿಡುವವರೆಗೂ ನೆಟ್ಟಗೆ ನಿಂತ ಒನಕೆ, ಗ್ರಹಣ ಬಿಟ್ಟ ಮೇಲೆ ಬೀಳುವುದೆಂದು ಹೇಳುತ್ತಾರೆ.

ಜನಪದ ಸಂಸ್ಕೃತಿಯಲ್ಲಿ ಒನಕೆಯ ಬಗೆಗೆ ಸಾಹಿತ್ಯ ಸೃಷ್ಠಿಯಾಗಿರುವಂತೆ ಶಿಷ್ಟ ಸಾಹಿತ್ಯದಲ್ಲಿಯೂ ರಚನೆಯಾಗಿರುವುದನ್ನು ಕಾಣಬಹುದು. ದುರ್ಗಸಿಂಹನ ಪಂಚತಂತ್ರದಲ್ಲಿ ‘ಸಮಸ್ತವನೀಯ ಜನಂ ಒನಕೆವಾಡಪ್ಪಿನೆಗೆ, ಸೆಲೆ ನುಡಿದ ನುಡಿಯಧಾರ್ಥಂ ನಿನ್ನೊಳ್’ ಎಂಬುದನ್ನು, ಎಂಟನೆಯ ಶತಮಾನದ ಗಂಗದೊರೆ ಶಿವಕುಮಾರನ ‘ಗಜಾಸ್ಟಕ’ದಲ್ಲಿ ಒನಕೆ ವಾಡಿನ ಪ್ರಸ್ತಾಪವಿದೆ. ಅಲ್ಲದೆ ನೇಮಿಚಂದ್ರನ ಲೀಲಾವತಿ ಕಾವ್ಯ, ಸೋಮೇಶ್ವರನ ಮಾನಸೋಲ್ಲಾಸಗಳಲ್ಲಿ ಕುಟ್ಟುವಾಗ ಹಾಗೂ ಶೃಂಗಾರ ವಿಪುಲಂಭಗಳನ್ನು ವರ್ಣಿಸುವಾಗ ಹಾಡುತ್ತಿದ್ದರೆಂದು ಉಲ್ಲೇಖವಿದೆ. ಸುರಂಗ, ಸೋಮರಾಜ, ಭೀಮಕವಿ, ಬಸವಪುರಾಣ, ಸಿದ್ಧನಂಜೇಶ, ಷಡಕ್ಷರಿ, ತಿರುಮಲಾಚಾರ್ಯ ಮುಂತಾದ ಕವಿಗಳು ತಮ್ಮ ಕಾವ್ಯಗಳಲ್ಲಿ ಒನಕೆವಾಡಿನ ಪ್ರಸ್ತಾಪ ತಂದಿರುವುದರಿಂದ ಒನಕೆ ಹಾಡು ಪ್ರಾಚೀನವಾಗಿಯೂ ಜನಪ್ರಿಯವೇ ಆಗಿತ್ತೆಂದು ತಿಳಿದುಬರುತ್ತದೆ.

ಅಕ್ಕಿ, ಭತ್ತ ಕುಟ್ಟಲು ಅನಿವಾರ್ಯವಾಗಿದ್ದ ಒನಕೆ, ಇಂದು ಅಟ್ಟದ ಮೇಲೆ ಧೂಳು ಹಿಡಿದು ಮಲಗಿದೆ. ಯಂತ್ರಶಕ್ತಿ ಒನಕೆಯ ಬಳಕೆಯನ್ನಲ್ಲದೆ ಅದರ ಹಾಡುಗಳನ್ನು ಮೂಲೆ ಗುಂಪು ಮಾಡಿದೆ. ಒನಕೆ ಜನಪದ ಸಂಸ್ಕೃತಿಯ ಅತಿ ಮುಖ್ಯ ಭಾಗವಾಗಿರುವುದರಿಂದ ಆಚರಣೆಯ ಮೂಲಕ ತನ್ನ ಉಪಯುಕ್ತತೆಯ ಬಗೆಗೆ ಬೆಳಕು ಚೆಲ್ಲಿದೆ.