ಕೊಡವರು ಆಯುಧ ಪೂಜೆಯನ್ನು  ‘ಕೈಲ್‌ಪೊಳ್ದ್ ’ ಎಂದು ಕರೆಯುತ್ತಾರೆ. ಆಯುಧ ಪೂಜೆಯನ್ನು ಕೊಡವರು ವಿಶೇಷವಾಗಿ ವರ್ಷಕ್ಕೊಂದು ಬಾರಿ ಸಂಭ್ರಮ, ಸಡಗರದಿಂದ ಆಚರಿಸುತ್ತಾರೆ. ಪ್ರಾಚೀನ ಕಾಲದಲ್ಲಿ ವರ್ಷವಿಡೀ ಬೇಟೆಯಾಡುವಾಗ ಕೋವಿ, ಕತ್ತಿಗಳನ್ನು ಉಪಯೋಗಿಸುವ ಇವರು ಸಿಂಹಮಾಸದಲ್ಲಿ ಅಂದರೆ ವ್ಯವಸಾಯ ಸಂದರ್ಭದಲ್ಲಿ ಆಯುಧಗಳನ್ನು ಮುಟ್ಟದೇ ಮನೆಯ  ‘ಕನ್ನಿಕೋಂಬರೆ ’ಯಲ್ಲಿ ಇಡುತ್ತಾರೆ. ಇದನ್ನು ಕೊಡವರು ಕೈಲ್‌ಪೊಳ್ದು ಕೆಟ್ಸ್ ಎಂದು ಕರೆಯುತ್ತಾರೆ. ಈ ಅವಧಿಯಲ್ಲಿ ಯಾರು ಯಾವುದೇ ಆಯುಧಗಳನ್ನು ಮುಟ್ಟುವಂತಿಲ್ಲ ಎಂಬ ನಿಷೇಧವಿದೆ.

ಕನ್ನಿಕೋಂಬರೆ ಅಥವಾ ನೆಲ್ಲಕ್ಕಿ ನಡುಬಾಣೆ ಯಲ್ಲಿರಿಸಿದ ಆಯುಧಗಳನ್ನು ನವರಾತ್ರಿಯಲ್ಲಿ  ಕೋವಿ, ಕತ್ತಿ, ನೇಗಿಲು, ನೊಗ, ಗುದ್ದಲಿ ಇತ್ಯಾದಿ ವ್ಯವಸಾಯ ಸಂಬಂಧೀ ಹಾಗೂ ಗೃಹಬಳಕೆಯ ಉಪಕರಣಗಳನ್ನು ತೊಳೆದು ಆಯುಧ ಪೂಜೆಯಲ್ಲಿ ದೀಪ, ಧೂಪಗಳಿಂದ ಬೆಳಗಿ, ಹಣ್ಣು ಹೂ, ಗಂಧ ತಿಲಕಗಳಿಂದ ಅಲಂಕರಿಸಿ, ಪೂಜಿಸಿ ಹೊರತೆಗೆ ಯುತ್ತಾರೆ. ಕೃಷಿ ಕಾರ್ಯಗಳು ಮುಗಿದ ಮೇಲೆ ಆಯುಧಗಳನ್ನು ಅಲ್ಲಿಯೇ ಇರಿಸುತ್ತಾರೆ. ಕೊಡವರು ಕೋವಿಯನ್ನು ವಿಶೇಷವಾಗಿ ಪೂಜಿಸುತ್ತಾರೆ. ಹೂವಿನಿಂದ ಅಲಂಕರಿಸಿ ದೀಪ, ಧೂಪಗಳಿಂದ ಪೂಜಿಸುತ್ತಾರೆ. ಗೌರಿ ಹೂವನ್ನು ಕೋವಿ ಹೂವೆಂದು ಕರೆಯುತ್ತಾರೆ. ಅಂದು ಉಳುಮೆ ಮಾಡುವ ಎತ್ತುಗಳ ಮೈತೊಳೆದು ಅವುಗಳನ್ನು ಗಂಧ-ಕುಂಕುಮ, ಗೆಜ್ಜೆ ಹೂ-ಹಾರಗಳಿಂದ ಅಲಂಕರಿಸಿ, ಪೂಜಿಸಿ, ಅರಿಶಿಣ, ಅಕ್ಕಿ ಬೆಲ್ಲದಿಂದ ಮಾಡಿದ ಪಾಯಸದ ನೈವೇದ್ಯವನ್ನು ತಿನ್ನಿಸುತ್ತಾರೆ. ಪೂಜೆಯ ಬಳಿಕ ಹಬ್ಬದ ಅಡುಗೆಯಾದ ಕಡಂಬಿಟ್ಟು ಹಾಗೂ ಪಂದಿಕರಿಯ ಊಟ ನಡೆಯುತ್ತದೆ. ಕೊಡವರ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಧರಿಸಿದ ಗಂಡಸರು ಹಾಗೂ ಮಹಿಳೆಯರು ಆಯುಧಗಳ ಮುಂದೆ ಬಂದು ನಿಲ್ಲುತ್ತಾರೆ. ಕುಟುಂಬದ ಹಿರಿಯನೊಬ್ಬ ಕೋವಿಯನ್ನು ಹಿಡಿದು ಈ ರೀತಿ ಹೇಳುತ್ತಾನೆ.  ‘ನರೀನೊ ಪಂದಿಗೋ ಬಟ್ಟೆ ಬುಟ್ಟ್ ಪಣಂಗ್, ಶತ್ತುರ್‌ನ ಎಣಂಗತೆ, ಶತ್ತುರ್‌ನ ಎಣಂಗುವೇಂಗಿ ಬಟ್ಟಿ ಕಟ್ಟಿ ಪಣಂಗ್ ಮಿತ್ತುರಕ್ ತೋಣೆಯಾಯಿತ್ ನಿಲ್‌ಲ್, ರಾಜಂಗ್ ಮಿನಿಯತೆ, ದೇವರ ಮರೆಯತೆ” (ಹುಲಿ-ಹಂದಿಗೆ ದಾರಿ ಬಿಟ್ಟು ನಿಲ್ಲು, ಶತ್ರುವನ್ನು ಕೆಣಕಬೇಡ, ಶತ್ರುವನ್ನು ಕೆಣಕಿದ್ದೇ ಆದರೆ ಅವರಿಗೆ ದಾರಿಯನ್ನು ಅಡ್ಡಗಟ್ಟಿ ನಿಲ್ಲು, ಸ್ನೇಹಿತನಿಗೆ ಬೆಂಬಲವಾಗಿ ನಿಲ್ಲು, ರಾಜನ ಮಾತನ್ನು ಮೀರಬೇಡ, ದೇವರನ್ನು ಮರೆಯಬೇಡ) ಎಂದು ಹೇಳಿ ಸಾಂಪ್ರದಾಯಿಕ ಉಡುಗೆ ತೊಟ್ಟವರಲ್ಲಿ ಹಿರಿಯವನಾದ ವ್ಯಕ್ತಿಗೆ ಕೋವಿಯನ್ನು ಕೊಡುತ್ತಾನೆ. ಕೋವಿಯನ್ನು ತೆಗೆದುಕೊಂಡು, ಕೋವಿಕೊಟ್ಟ ಹಿರಿಯಾತನ ಕಾಲಿಗೆ ನಮಸ್ಕರಿಸಿ, ಆತನ ಆಶೀರ್ವಾದ ಪಡೆಯುತ್ತಾನೆ.

ಹಿರಿಯರಿಂದ ಕೋವಿ ಪಡೆದವರು ಹಾಗೂ ಮನೆಯ ಸದಸ್ಯರು ಒಂದೆಡೆ ಸೇರುತ್ತಾರೆ. ಅಲ್ಲಿ ಅವರು ತಮ್ಮ ಕೋವಿಗಳಿಂದ ಆಕಾಶದತ್ತ ಗುಂಡು ಹಾರಿಸುತ್ತಾರೆ. ತಮ್ಮ ಗುರಿ ಪರೀಕ್ಷೆ ಮಾಡಿಕೊಳ್ಳಲು ಹತ್ತಾರು ಸ್ಪರ್ಧೆಗಳು ಅಂದು ನಡೆಯುತ್ತವೆ. ಮರವೊಂದಕ್ಕೆ ತೆಂಗಿನಕಾಯಿ ಕಟ್ಟಿ ಅದಕ್ಕೇ ಗುರಿಯಿಟ್ಟು ಗುಂಡು ಹೊಡೆಯುವುದು. ಈ ಬಗೆಯ ಆಚರಣೆಗಳು ‘ಊರು ತಕ್ಕರು’ ನೇತೃತ್ವದಲ್ಲಿ ನಡೆಯುತ್ತದೆ. ಪ್ರತಿ ಮನೆಯ ಒಬ್ಬ ಹಿರಿಯನೂ ಸೇರಿ ಐದಾರು ಗ್ರಾಮಗಳಿಗೊಬ್ಬ ಮುಖಂಡರನ್ನೊಳಗೊಂಡ ಸಮಿತಿಯನ್ನೇ ‘ಊರು ತಕ್ಕರು’ ಎಂದು ಕರೆಯುತ್ತಾರೆ. ತಮ್ಮ ಮನೆ ಮಂದಿ, ಊರಿಗೆ ಒಳಿತಾಗಲೆಂದು ಹಿರಿಯರು ದುಡಿಕಟ್ಟು ವಾದ್ಯವನ್ನು ಬಾರಿಸುತ್ತಾ ಊರಿನ ದೇವಾಲಯಕ್ಕೆ ಪ್ರದಕ್ಷಿಣೆ ಹಾಕುತ್ತಾ ಪ್ರಾರ್ಥಿಸುತ್ತಾರೆ. ಗುರಿ ಸ್ಪರ್ಧೆಯಾದ ಬಳಿಕ ಸಾಮೂಹಿಕ ಬೇಟೆಗೆ ಹೋಗುವ ದಿನವನ್ನು ಗೊತ್ತು ಮಾಡಿಕೊಳ್ಳುತ್ತಾರೆ. ಆದರೆ ಈಗ ಬೇಟೆಯಾಡುವುದನ್ನು ಬಿಟ್ಟು ಉಳಿದೆಲ್ಲ ಆಚರಣೆಗಳನ್ನು ಮಾಡುತ್ತಾರೆ. ಈ ಹಬ್ಬವನ್ನು ಕೊಡವರಲ್ಲದೆ ಕೊಡವ ಭಾಷೆ ಮಾತನಾಡುವವರೆಲ್ಲ ಆಚರಿಸುತ್ತಾರೆ. ಕೊಡವರು ಎಲ್ಲೇ ಇರಲಿ  ‘ಕೈಲ್‌ಪೊಳ್ದ್ ’ ಹಬ್ಬಕ್ಕೆ ಊರಿಗೆ ಬಂದು ತಮ್ಮ ಮನೆಯವರೊಂದಿಗೆ ಹಾಗೂ ಊರ ಜನರೊಂದಿಗೆ ಕೂಡಿ ಹಬ್ಬದ ಸಂತಸವನ್ನು ಹಂಚಿಕೊಂಡು ಸಂಭ್ರಮಿಸುತ್ತಾರೆ.