ಕುರುಬರು ಕುರಿಗಳನ್ನು ಲಕ್ಷ್ಮಿ ಎಂದೇ ಭಾವಿಸಿ, ಪೂಜಿಸುತ್ತಾರೆ. ದೀಪಾವಳಿ ಹಬ್ಬದ ಪಾಡ್ಯದಂದು ಕುರಿಗಳನ್ನು ಪೂಜಿಸಿ, ಓಡಿಸುತ್ತಾರೆ. ಇದನ್ನು ಕುರಿ ಬೆದರಿಸುವುದು ಎಂದು ಕರೆಯುತ್ತಾರೆ. ಅಂದು ಕುರಿದೊಡ್ಡಿಯನ್ನು ಕಬ್ಬು, ಜೋಳದ ದಂಟು, ಹೊನ್ನಾವರಿ ಹೂ, ಉತ್ತಾರಾಣಿ, ಚೆಂಡುಹೂ, ಮಾವಿನ ತೋರಣ ಮುಂತಾದವು ಗಳಿಂದ ಸಿಂಗರಿಸಿ, ದೊಡ್ಡಿಯ ಮಧ್ಯೆ ಕಂಬವನ್ನು ನೆಡುತ್ತಾರೆ. ಕಂಬದ ಸುತ್ತಲು ಸಗಣಿಯಿಂದ ಸಾರಿಸಿ, ಸಗಣಿಯಿಂದ ಮಾಡಿದ ಪಂಚಪಾಂಡವರನ್ನು ಮಾಡಿ, ಅರಿಶಿಣ, ಕುಂಕುಮ, ಹೂಗಳಿಂದ ಅಲಂಕರಿಸುತ್ತಾರೆ. ಅಲ್ಲದೇ ಟಗರುಗಳನ್ನು ಹಸಿರು ಹಾಗೂ ಕೆಂಪು ಬಣ್ಣಗಳಿಂದ ಸಿಂಗರಿ ಸುತ್ತಾರೆ.

ಸೂರ್ಯ ಮುಳುಗಿದ ನಂತರ ಆರತಿ ಹಿಡಿದ ಹೆಣ್ಣುಮಕ್ಕಳು, ಮನೆಯ ಸದಸ್ಯರು, ಬಂಧುಗ ಳೊಂದಿಗೆ ದೊಡ್ಡಿಗೆ ಹೋಗುತ್ತಾರೆ. ಕುರಿಗಳನ್ನೆಲ್ಲ ಒಂದೆಡೆ ನಿಲ್ಲಿಸಿ, ಕಂಬಳಿ ಹಾಸುತ್ತಾರೆ. ನೀರು ಕುಡಿಯುವ ಬೋಗಾಣಿ, ಕತ್ತರಿ, ಚಿಮ್ಮಟಿಗೆ, ಭಂಡಾರ ಇಟ್ಟುಕೊಳ್ಳುವ  ‘ಬಡಿ ಚೀಲ’ ಇಟ್ಟು ನಂತರ ಕುರಿದೊಡ್ಡಿ ಹಾಗೂ ಪಾಂಡವರ ಮೂರ್ತಿಗಳಿಗೆ ಪೂಜೆ ಸಲ್ಲಿಸುತ್ತಾರೆ. ಟಗರುಗಳನ್ನು ಓಡಿಸಲು ಐದು ಸಾಲನ್ನು ಮಾಡಿ, ಅದರಲ್ಲಿ ಜೋಳದ ಗರಿ, ಅರಿತಪ್ಪಲು, ಹೊನ್ನಾವರಿ ಹೂ ಹಾಕುತ್ತಾರೆ. ಟಗರುಗಳನ್ನು ಪೂಜಿಸಿ, ಹಣ್ಣುಕಾಯಿ ಅರ್ಪಿಸಿ, ಅವುಗಳನ್ನು ಸಾಲುಗಳ ನಡುವೆ ಓಡಿಸುತ್ತಾರೆ. ಹಾಗೆ ಓಡಿದ ಕುರಿಗಳನ್ನು ಆರತಿ ಮಾಡಿದ ಹೆಣ್ಣು ಮಕ್ಕಳು ಹಿಡಿದುಕೊಳ್ಳುವ ಪದ್ಧತಿ ಇದೆ. ಹೆಣ್ಣುಮಗಳು ಯಾವ ಕುರಿಯನ್ನು ಹಿಡಿಯುತ್ತಾಳೋ ಅದನ್ನು ಅವಳಿಗೆ ಕೊಡುತ್ತಾರೆ. ಹಬ್ಬದ ಕೊನೆಯಲ್ಲಿ ಟಗರಿನ ಕಾಳಗವಿರುತ್ತದೆ. ಸ್ಪರ್ಧೆಯಲ್ಲಿ ಅಕ್ಕಪಕ್ಕದ ಊರಿನ ಟಗರುಗಳು ಭಾಗವಹಿಸುತ್ತವೆ. ಗೆದ್ದ ಕುರಿಗಳಿಗೆ ಬಹುಮಾನ ನೀಡುವ ಪದ್ಧತಿ ಇದೆ. ದೀಪಾವಳಿಯಲ್ಲದೇ ಕುರುಬರು ಶ್ರಾವಣ ಮಾಸ ಹಾಗೂ ಉಣ್ಣೆ ಕತ್ತರಿಸುವಾಗಲೂ ಪೂಜಿಸುವ ರೂಢಿಯಿದೆ. ಸಾಮಾನ್ಯವಾಗಿ ಕುರಿಗಳಿಂದ ವರ್ಷಕ್ಕೆ ಎರಡು ಬಾರಿ ಉಣ್ಣೆ ಕತ್ತರಿಸುತ್ತಾರೆ. ಕುರಿಗಳನ್ನು ಚೆನ್ನಾಗಿ ಮೈತೊಳೆದು , ಮೈ ಆರಿದ ನಂತರ ಉಣ್ಣೆ ಕತ್ತರಿಸಿ, ಚೀಲ ತುಂಬುತ್ತಾರೆ. ಹಾಸಿದ ಕಂಬಳಿಯ ಮೇಲೆ ಕತ್ತರಿ, ಬಡಿ ಚೀಲ ಹಾಗೂ ಕತ್ತರಿಸಿ ಸಂಗ್ರಹಿಸಿದ ಉಣ್ಣೆ ಚೀಲಗಳನ್ನು ಇಟ್ಟು ಪೂಜಿಸಿ, ನೈವೇದ್ಯ ಅರ್ಪಿಸುತ್ತಾರೆ.

ಶ್ರಾವಣ ಮಾಸದ ದಿನಗಳಲ್ಲಿ ಕುರಿ ದೊಡ್ಡಿಯ ಸಮೀಪದಲ್ಲಿರುವ ಕೆರೆ, ಬಾವಿ, ಹೊಳೆ, ಹಳ್ಳಗಳನ್ನು ಪೂಜಿಸುತ್ತಾರೆ. ಮೊದಲೇ ಬಾಳೆ ದಿಂಡಿನಿಂದ ತಯಾರಿಸಿದ ತೆಪ್ಪದ ನಾಲ್ಕು ಮೂಲೆಗಳಲ್ಲಿಯು ದೀಪಗಳನ್ನಿಟ್ಟು ತೆಪ್ಪದ ಮಧ್ಯಭಾಗದಲ್ಲಿ ಒಂದು ದೀಪ ಇಡುತ್ತಾರೆ. ಎಲೆಯ ಮೇಲೆ ಐದು ಬಾಳೆಹಣ್ಣು, ಐದು ಹೋಳಿಗೆ, ಒಂದು ತೆಂಗಿನಕಾಯಿ, ಕುಪ್ಪಸ ಹಾಗೂ ಮಡಿಲು ತುಂಬುವ ವಸ್ತುಗಳ ಜೊತೆಗೆ ಐದು ರೂಪಾಯಿ ಇಟ್ಟು ಗಂಗೆಗೆ ಪೂಜಿಸಿ, ತೆಪ್ಪದ ಮೇಲಿಟ್ಟು ನೀರಿನಲ್ಲಿ ತೇಲಿ ಬಿಡುತ್ತಾರೆ.