ಕರ್ನಾಟಕದ ಹಲವು ಕಡೆ ದೈವವಾಗಿ ಪೂಜಿಸುವ ಕುಮಾರರಾಮ ಕುಮ್ಮಟದುರ್ಗದ ದೊರೆ ಕಂಪಿಲನ ಮಗ. ಚಾರಿತ್ರಿಕ ವ್ಯಕ್ತಿಯೊಬ್ಬ ದೈವವಾಗಿ ಪೂಜೆಗೊಳ್ಳುತ್ತಿರುವುದು ಅವನ ಜನೋಪಕಾರಿ ಮನೋಭಾವವೇ ಕಾರಣವಾಗಿದೆ. ಕುಮಾರರಾಮ ಮಲೆನಾಡಿನಲ್ಲಿ ಕೃಷಿ ಹಾಗೂ ಗ್ರಾಮರಕ್ಷಕ ದೈವವಾಗಿ ಪೂಜೆಗೊಳ್ಳುತ್ತಿದ್ದಾನೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕುಗಳಲ್ಲಿ ಕುಮಾರರಾಮನು ಗಾಮೇಶ್ವರ, ಕುಮಾರರಾಮಸ್ವಾಮಿ, ಗಾಮದೇವರು, ಗ್ರಾಮದೇವರು, ಹಸ್ರರಾಯ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುತ್ತಾನೆ. ನಿತ್ಯಪೂಜೆ ಇಲ್ಲದ ಈ ದೈವಕ್ಕೆ ಹರಕೆ, ಹಬ್ಬ, ಮದುವೆ ಹಾಗೂ ವಿಶಿಷ್ಟ ದಿನಗಳಲ್ಲಿ ಮಾತ್ರ ಪೂಜೆ ಸಲ್ಲಿಸಿ, ಹಣ್ಣುಕಾಯಿ ಅರ್ಪಿಸಿ, ನೈವೇದ್ಯ ಮಾಡುತ್ತಾರೆ. ಇನ್ನುಳಿದ ದಿನಗಳಲ್ಲಿ ದೇವಸ್ಥಾನ ಮುಚ್ಚಿರುತ್ತದೆ. ಕುಮಾರರಾಮನ ಆರಾಧನೆ ಕುಮ್ಮಟದುರ್ಗದಿಂದ ಪಶ್ಚಿಮಕ್ಕೆ ಕರಾವಳಿವರೆಗೆ ಕಂಡು ಬರುತ್ತದೆ.

ಮಲೆನಾಡಿನ ಅನೇಕ ಭಾಗದಲ್ಲಿ ಪೂಜಾರಿಗಳು ಒಕ್ಕಲಿಗ ಜನ ವರ್ಗಕ್ಕೆ ಸೇರಿದವರಾಗಿದ್ದಾರೆ. ನಾಗರಪಂಚಮಿಯಲ್ಲಿ ಹಣ್ಣು ಕಾಯಿ, ಹಾಲು ಸುರಿದು ಪೂಜೆ ಸಲ್ಲಿಸಿದರೆ, ದೀಪಾವಳಿಯಲ್ಲಿ ಕೋಲು ದೀಪ ಹಚ್ಚುವುದರ ಮೂಲಕ ಪೂಜೆ ಸಲ್ಲಿಸುತ್ತಾರೆ. ಹೊಸ ಬೆಳೆಯನ್ನು ಮನೆ ತುಂಬುವ ದಿನ ಬೆಳೆಯ ತುಂಬು ತೆನೆಯನ್ನು ಅರ್ಪಿಸಿ ಭಕ್ತಿ ತೋರುತ್ತಾರೆ. ನವದಂಪತಿಗಳು ಊರಿಗೆ ಪ್ರವೇಶ ಮಾಡುವ ಮೊದಲು ಕಡ್ಡಾಯವಾಗಿ ಪೂಜೆ ಸಲ್ಲಿಸಿ, ಸುಳಿಗಾಯಿ ಒಡೆದು ನಂತರ ತಮ್ಮ ಮನೆಗಳಿಗೆ ಹೋಗುತ್ತಾರೆ. ಊರಿನ ಯಾವುದೇ ಸಭೆ, ಸಮಾರಂಭ,  ಹಬ್ಬ, ಜಾತ್ರೆ ಹಾಗೂ ಮದುವೆ ಇತ್ಯಾದಿಗಳಲ್ಲಿ ದೇವಾಲಯದ ಬಾಗಿಲಿಗೆ ಮಾವಿನ ತೋರಣಗಳಿಂದ ಅಲಂಕರಿಸುತ್ತಾರೆ. ಈ ಅಲಂಕಾರ ಮಾಡುವವರು ಊರಿನ ಮಾದಿಗರಾಗಿದ್ದು, ಕೆಲಸಕ್ಕಾಗಿ ಅಕ್ಕಿ ಹಾಗೂ ಹಣವನ್ನು ಸಂಭಾವನೆಯಾಗಿ ಪಡೆಯುತ್ತಾರೆ. ಊರಿಗೆ ಬರುವ ಯಾವುದೇ ಕಲೆಗಳು ಮೊದಲು ಗುಡಿಯ ಎದುರು ಪ್ರದರ್ಶನ ನೀಡಿ ದೇವರಿಂದ ಸಾಂಕೇತಿಕ ಒಪ್ಪಿಗೆ ಪಡೆದು ನಂತರ ಊರನ್ನು ಪ್ರವೇಶ ಮಾಡಿ ಪ್ರದರ್ಶನ ನೀಡುತ್ತವೆ.

ತೀರ್ಥಹಳ್ಳಿ ಹಾಗೂ ಹೊಸನಗರ ಸುತ್ತಲಿನ ಊರುಗಳಲ್ಲಿ ಕುಮಾರರಾಮನ ಹಬ್ಬವನ್ನು ‘ದೊಂಬರ ಹಬ್ಬ’ವೆಂದು ಸಾಗರ ಹಾಗೂ ಸೊರಬ ಸುತ್ತಲ ಊರುಗಳಲ್ಲಿ ‘ದೊಡ್ಡಬಾಗಿಲು ಹಬ್ಬ’ವೆಂದು, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಹಾಗೂ ಅಂಕೋಲ ತಾಲೂಕುಗಳಲ್ಲಿ ‘ಕುಮಾರರಾಮನ ಹಬ್ಬ’ ಅಥವಾ ‘ಜಾತ್ರೆ’ ಎಂದು ಇನ್ನು ಕೆಲವು ಭಾಗಗಳಲ್ಲಿ ‘ಬಂಡಿಹಬ್ಬ’ವೆಂತಲೂ ಕರೆಯುತ್ತಾರೆ. ಈ ಹಬ್ಬಗಳು ಮೇಲ್ನೋಟಕ್ಕೆ ಒಂದೇ ಬಗೆಯಾಗಿ ಕಂಡರೂ, ಪ್ರದೇಶ ಹಾಗೂ ಭಿನ್ನ ಜನವರ್ಗಗಳ ಕಾರಣದಿಂದಾಗಿ ಅಲ್ಪಸ್ವಲ್ಪ ವ್ಯತ್ಯಾಸಗಳು ಕಂಡುಬರುತ್ತವೆ.

ಮಲೆನಾಡಿನ ಭಾಗಗಳಲ್ಲಿ ವರ್ಷಕ್ಕೆ ಒಂದು ಬಾರಿ ಆಚರಿಸುತ್ತಾರೆ. ಪ್ರತಿ ವರ್ಷ ಯುಗಾದಿ ಹಾಗೂ ಆರಿದ್ರೆ ಮಳೆಯ ನಡುವಿನ ಪ್ರಸಕ್ತ ಅನುಕೂಲ ದಿನಗಳಲ್ಲಿ ಆಚರಿಸುತ್ತಾರೆ. ಸುಗ್ಗಿಯ ಸಂದರ್ಭದಲ್ಲಿ ಬರುವ ಈ ಹಬ್ಬದ ಪ್ರಮುಖ ಅಂಗ ಬಲಿ ಅರ್ಪಣೆ. ಆದರೆ ವಿಶೇಷವೆಂದರೆ ಗುಡಿಯ ಒಳಗಿನ ಲಿಂಗಾಕಾರದ ಮೂರ್ತಿಗೆ ಮಾಂಸದ ಎಡೆ ನಿಷಿದ್ಧ. ಅದಕ್ಕಾಗಿಯೇ ಮಡಿಯಿಂದ ಇದ್ದ ಹೆಣ್ಣುಮಕ್ಕಳೇ ತಯಾರಿಸಿದ ಶಾಖಾಹಾರವನ್ನು ಎಡೆ ಅರ್ಪಿಸುತ್ತಾರೆ. ಈ ಎಡೆಗಳನ್ನು ಜೈನ ಎಡೆ ಎಂದು ಕರೆಯುತ್ತಾರೆ. ಕುಮಾರರಾಮನ ಹಬ್ಬವನ್ನು ಕೆಲವು ಊರುಗಳಲ್ಲಿ ಐದು ದಿನಗಳ ಆಚರಣೆ ಮತ್ತೆ ಕೆಲವು ಭಾಗಗಳಲ್ಲಿ ಮೂರು ದಿನ ಆಚರಿಸುತ್ತಾರೆ. ಈ ಹಬ್ಬಗಳನ್ನು ನೋನಿ ಹರಕೆ, ದೊಂಬರ ಹಬ್ಬ, ಹಸ್ರರಾಯನ ಹಬ್ಬ ಎಂಬುದಾಗಿ ಕರೆಯುತ್ತಾರೆ. ಈಗ ಬಹಳಷ್ಟು ಊರುಗಳಲ್ಲಿ ನೋನಿ ಹರಕೆ ಮಾತ್ರ ಹೆಚ್ಚು ಆಚರಣೆಯಲ್ಲಿದೆ. ದೊಂಬರ ಹಬ್ಬವು ಒಟ್ಟು ಮೂರು ದಿನಗಳು ಆಚರಣೆಗೊಳ್ಳಲಿದ್ದು, ಮೊದಲ ದಿನವನ್ನು ‘ನೋನಿ’ಯಂತಲೂ, ಎರಡನೆ ದಿನವನ್ನು ‘ಹರೆ’ಯಂತಲೂ  ಮೂರನೆ ದಿನವನ್ನು ಹಬ್ಬವೆಂತಲೂ ಕರೆಯುತ್ತಾರೆ. ಹಬ್ಬದಲ್ಲಿ ಕುದುರೆ ಮುಖ ಹಾಗೂ ಖಡ್ಗ, ಛತ್ರಿ, ಚಾಮರ, ಪಾದಗಳು, ಎರಡು ಮುಖವಾಡಗಳು ಹಾಗೂ ಬಂಗಾರದ ಆಭರಣಗಳನ್ನು ವಿಶೇಷವಾಗಿ ಪೂಜಿಸುತ್ತಾರೆ. ಹಬ್ಬದ ಆಚರಣೆ, ಕುಮಾರಾಮನ ವೀರಪ್ರಧಾನ ಜೀವನವನ್ನು ಮರುಸೃಷ್ಟಿಗೊಳಿಸುತ್ತದೆ.