ಕುಣಬಿಗಳು ಹೋಳಿ ಹಬ್ಬದ ಮುಂಚಿನ ನಾಲ್ಕು ದಿನಗಳ ಕಾಲ ಕುಣಿತದ ಮೂಲಕ ಸಲ್ಲಿಸುವ ದೇವರ ಸೇವೆ. ಇದನ್ನು ಕುಣಬಿಗಳ ಸುಗ್ಗಿ ಕುಣಿತವೆಂತಲೂ ಕರೆಯುತ್ತಾರೆ. ಕುಣಬಿಯರು ಬುಡಕಟ್ಟು ಜನವರ್ಗಕ್ಕೆ ಸೇರಿದವರಾಗಿದ್ದು ಯಲ್ಲಾಪುರ ತಾಲ್ಲೂಕಿನ ಕಟ್ಟಿಗೆ, ಕೋಟೆಮನೆ, ಮಣ್ಣುಮನೆ ಇತ್ಯಾದಿ ಊರುಗಳಲ್ಲಿ ವಾಸವಾಗಿದ್ದಾರೆ. ಗೋವಾದಿಂದ ವಲಸೆ ಬಂದು ನೆಲೆಸಿದ ಇವರು ಹೆಚ್ಚಾಗಿ ಅನಕ್ಷರಸ್ಥರೇ ಆಗಿದ್ದಾರೆ. ಇವರ ಕಸುಬು ಕೂಲಿ ಹಾಗೂ ಕಾಡು ಉತ್ಪನ್ನಗಳನ್ನು ಸಂಗ್ರಹಿಸುವುದು.

ಕುಣಬಿಯರ ಮುಖ್ಯಸ್ಥನನ್ನು ಮಿರಾಶಿ ಎಂದು ಕರೆಯುತ್ತಾರೆ. ಆತನ ಕರೆಯ ಮೇರೆಗೆ ಸುತ್ತಲ ಊರಿನ ಕುಣಬಿಯರು ಸುಗ್ಗಿಯ ಆಚರಣೆಗೆ ಬರುತ್ತಾರೆ. ವರ್ಷವಿಡೀ ಹೊಲ ಹಾಗೂ ಕಾಡಿನಲ್ಲಿ ದುಡಿದ ಕುಣಬಿಯರು ಸುಗ್ಗಿಯ ವೇಳೆ ಎಲ್ಲಿಲ್ಲದ ಸಂತಸ ಪಡುತ್ತಾರೆ. ಶಿವರಾತ್ರಿ ಬಳಿಕ ಬರುವ ಏಕಾದಶಿ ದಿನ ಸ್ಥಳೀಯ ಬ್ರಾಹ್ಮಣ ಜನವರ್ಗದವರು ಕಾಯಿ ಇಟ್ಟು ಸುಗ್ಗಿ ಆಚರಣೆಯನ್ನು ಉದ್ಘಾಟಿಸುತ್ತಾರೆ. ನಂತರ ಐದು ದಿನಗಳ ಕಾಲ ಹಾಡು ಮತ್ತು ನೃತ್ಯ ಮಾಡುವುದರ ಮೂಲಕ ದೇವರ ಸೇವೆ ಮಾಡುತ್ತಾರೆ. ದೇವರ ನೃತ್ಯ ಸೇವೆ ಹೋಳಿಹಬ್ಬದಂದು ಕೊನೆಗೊಳ್ಳುತ್ತದೆ.

ಮೇಳಗಳಲ್ಲಿ ೪೦ರಿಂದ ೫೦ ಕಲಾವಿದರಿರುತ್ತಾರೆ. ಹಿಂದೆ ೧೦೦ರಿಂದ ೨೦೦ ಜನ ಇರುತ್ತಿದ್ದರೆಂದು ಹೇಳುತ್ತಾರೆ. ಮಂಡ್ಯಾರನ ಪೂಜೆ ಮುಗಿಸಿದ ನಂತರ ಸಿದ್ಧಗೊಳ್ಳುವ ವೇಷ ತುಂಬಾ ವಿಶಿಷ್ಟವಾಗಿರುತ್ತದೆ. ಗಾಢ ಬಣ್ಣದ ಜರಿಸೀರೆಯೊಂದನ್ನು ಲಂಗದಂತೆ ಸೊಂಟದ ಸುತ್ತ ಕಟ್ಟಿ ಎದೆಯ ಮೇಲೆ ಪಟ್ಟಿ ಶಾಲೊಂದನ್ನು ಕತ್ತರಿಯಾಕಾರದಲ್ಲಿ ಹೊದೆದು ಕಟ್ಟುತ್ತಾರೆ. ಕಾಲಿಗೆ ಗೆಜ್ಜೆ ಕಟ್ಟಿ, ಬಿಳಿ ಮುಂಡಾಸನ್ನು ಸುತ್ತಿ, ಅದರ ಮೇಲೆ ಬಣ್ಣ ಬಣ್ಣದ ಬೆಂಡಿನ ಹೂ ಮಾಲೆ, ಮೊಗ್ಗಿನ ಜಡೆಗಳಿಂದ ಕೂಡಿದ ಬಾಸಿಂಗ ಸಿಕ್ಕಿಸಿದಾಗ ವೇಷಕ್ಕೆ ರಂಗು ಬರುತ್ತದೆ. ಹಣೆಗೆ ತಿಲಕವಿಟ್ಟು, ಕೈಯಲ್ಲೆರಡು ಕಾಡು ಸುರಟಗಿ ಮರದಿಂದ ಮಾಡಿದ ಬಣ್ಣದ ಕೋಲನ್ನು ಹಿಡಿದು ಹೊರಡುತ್ತಾರೆ.

ವೇಷ ಕಟ್ಟಿದವರು ಐದು ದಿನದ ಅವಧಿಯವರೆಗೆ ಕಟ್ಟುನಿಟ್ಟಾದ ಕ್ರಮವನ್ನು ಅನುಸರಿಸುತ್ತಾರೆ. ಮಾಂಸ ಮದ್ಯ ತೆಗೆದುಕೊಳ್ಳುವಂತಿಲ್ಲ. ಐದು ದಿನಗಳವರೆಗೆ ಸ್ನಾನ ಮಾಡುವಂತಿಲ್ಲ. ಮನೆಗಳಿಗೆ ಹೋಗುವಂತಿಲ್ಲ.  ಮನೆಗಳಲ್ಲಿ ಯಾರಾದರೂ ಸತ್ತರೂ ಹೋಗುವುದಿಲ್ಲ. ಐದು ದಿನಗಳು ವೇಷಧಾರಿಗಳು ಮನೆ ಮನೆಗೂ ಹೋಗಿ ಹಲವು ಬಗೆಯ ಕುಣಿತವನ್ನು ಪ್ರದರ್ಶಿಸುತ್ತಾರೆ. ಮನೆಯವರು ವೇಷಗಳಿಗೆ ಆರತಿ ಬೆಳಗಿ ಕುಂಕುಮವಿಡುತ್ತಾರೆ. ವೇಷಧಾರಿಗಳಿಗೆ ಎಳ್ಳಿನ ಪಾನಕ ನೀಡುತ್ತಾರೆ. ಅಕ್ಕಿ ಕಾಯಿ, ಹೂ ಪಡೆದು ಮುಂದಿನ ಮನೆಗೆ ಹೋಗುತ್ತಾರೆ.

ಕೊನೆಯ ದಿನವಾದ ಹೋಳಿ ಹುಣ್ಣಿಮೆಯಂದು ಊರ ಹೊರಗೆ ನಿಸರ್ಗದ ನಡುವೆ, ಒಂದು ತುಳಸಿ ಕಟ್ಟೆ ನಿರ್ಮಿಸಿ, ಮಂಡಲ ಹಾಕಿ ಅಲ್ಲಿ ಅಂತಿಮ ಪ್ರದರ್ಶನ ನೀಡುತ್ತಾರೆ. ಮೂರರಿಂದ ನಾಲ್ಕು ತಾಸುಗಳವರೆಗೆ ಬೇರೆ ಬೇರೆ ಗತ್ತುಗಳನ್ನೆಲ್ಲ ಆಡಿ, ಪೂಜೆ ಮುಗಿಸುತ್ತಾರೆ. ನದಿಯಲ್ಲಿ ಸ್ನಾನ ಮಾಡಿ, ಬೆಂಕಿಯನ್ನು ಹಾಯುವುದರ ಮೂಲಕ ಸುಗ್ಗಿ ಕುಣಿತ ಮತ್ತು ಆಚರಣೆ ಮುಗಿಸುತ್ತಾರೆ. ವೇಷದ ಪರಿಕರಗಳಿಗೆ ಕಾಯಿ ಒಡೆದು, ಆರತಿ ಮಾಡಿ, ಮನೆಯ ನಿಗದಿತ ಸ್ಥಳದಲ್ಲಿರಿಸುತ್ತಾರೆ. ಮುಂದಿನ ವರ್ಷದ ಹಬ್ಬದಲ್ಲಿ ಪೂಜಿಸಿ ಹೊರ ತೆಗೆದು ವೇಷ ಕಟ್ಟುತ್ತಾರೆ.