ಅಯ್ಯಪ್ಪ ಮತ್ತು ಭಗವತಿ ದೇವಿಯರನ್ನು ಬೈಯುವ ಹಬ್ಬ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ದೇವರಪುರದ ಅಯ್ಯಪ್ಪ ದೇವರ ಉತ್ಸವದಲ್ಲಿ ನಡೆಯುತ್ತದೆ. ಪನ್ನುವಂಡ ಕೊಡವ ಕುಟುಂಬಸ್ಥರು ಈ ಹಬ್ಬದ ಉಸ್ತುವಾರಿಗಳು. ಆದರೆ ಉತ್ಸವದಲ್ಲಿ ಭಾಗಿಗಳಾಗುವುದು ಪಾಲಿಬೆಟ್ಟ, ಪೊನ್ನಂಪೇಟೆ, ನಾಗರಹೊಳೆ ಮೊದಲಾದ ಕಾಡಿನ ಪ್ರದೇಶದಲ್ಲಿ ವಾಸಿಸುವ ಬುಡಕಟ್ಟು ಜನರು.

ಹಬ್ಬದ ದಿನ ದೇವರಪುರ ದೇವಾಲಯದ ದಾರಿಯುದ್ದಕ್ಕೂ ಚಿತ್ರವಿಚಿತ್ರ ವೇಷ-ಭೂಷಣ ತೊಟ್ಟ ವ್ಯಕ್ತಿಗಳು ಒಂದು ಕೈಯಲ್ಲಿ ಒಣಗಿದ ಸೋರೆಕಾಯಿ ಬರುಡೆ ಇನ್ನೊಂದು ಕೈಯಲ್ಲಿ ದಪ್ಪನೆಯ ಕೋಲನ್ನು ಹಿಡಿದು ಮೆರವಣಿಗೆ ಹೊರಡುತ್ತಾರೆ. ದಾರಿಯುದ್ದಕ್ಕೂ ಅಶ್ಲೀಲವಾಗಿ ಅಯ್ಯಪ್ಪ ಹಾಗೂ ಭಗವತಿಯನ್ನು ಬೈಯುತ್ತಾ ದೇವಾಲಯದ ಕಡೆ ನಡೆಯುತ್ತಾರೆ. ದಾರಿಯಲ್ಲಿ ಸಿಕ್ಕವರನ್ನು ಹಣ ಕೊಡುವಂತೆ ಕೇಳುತ್ತಾರೆ. ಹಣ ಕೊಡದಿದ್ದರೇ ಅಶ್ಲೀಲವಾಗಿ ಬೈಯುತ್ತಾರೆ. ಕುಂಡೆ….ಕುಂಡೆ… ಕರಿಕುಂಡೆ.. ಬಿಳಿಕುಂಡೆ… ಆ ಕುಂಡೆ… ಈ ಕುಂಡೆ ಇತ್ಯಾದಿಯಾಗಿ ಬೈಯುತ್ತಾರೆ. ಎಷ್ಟೇ ಕೆಟ್ಟದಾಗಿ ಬೈದರೂ ಯಾರೂ ಆ ದಿನ ನೊಂದುಕೊಳ್ಳದೇ ಅದನ್ನು ಖುಷಿಯಿಂದ ಸ್ವೀಕರಿಸುತ್ತಾರೆ. ಪೌರಾಣಿಕ ಹಿನ್ನೆಲೆಯ ಪ್ರಕಾರ ಹಿಂದೆ ಅಯ್ಯಪ್ಪ ಬೇಟೆಗೆ ಹೋಗುವಾಗ ಜನರನ್ನು ಕರೆದುಕೊಂಡು ಕಾಡಿನ ಮಧ್ಯಭಾಗಕ್ಕೆ ಬರುವಾಗ ಭಗವತಿಯನ್ನು ಕಂಡನಂತೆ. ಜನರನ್ನು ಬಿಟ್ಟು ಭಗವತಿಯ ಹಿಂದೆ ಅಯ್ಯಪ್ಪ ಕುಂಡೆ ತೋರಿಸುತ್ತಾ ಹೋಗಿದ್ದರಿಂದ, ಜನ ಬೇಸತ್ತು ಅಯ್ಯಪ್ಪ ಹಾಗೂ ಭಗವತಿಯನ್ನು ಬೈಯುತ್ತಾ ಹಿಂದಿರುಗಿದರಂತೆ. ಅದರ ನೆನಪಿಗಾಗಿ ಈ ಹಬ್ಬ ಆಚರಣೆಗೆ ಬಂದಿದೆ ಎನ್ನುತ್ತಾರೆ.

ಮೆರವಣಿಗೆಯಲ್ಲಿ ಹೊರಟ ಜನ ದೇವಾಲಯವನ್ನು ತಲುಪುವ ಹೊತ್ತಿಗೆ ಹಬ್ಬದ ಉಸ್ತುವಾರಿ ಹೊತ್ತವರು ಮೂಲ ದೇವಾಲಯದಿಂದ ಉತ್ಸವಮೂರ್ತಿಯನ್ನು ಅಲ್ಲಿಯೇ ದೂರವಿರುವ  ಗುಡಿಯಲ್ಲಿ ಇರಿಸಿ, ವಿವಿಧ ಬಗೆಯ ಹೂಗಳಿಂದ ಸಿಂಗರಿಸಿ ಪೂಜಿಸುತ್ತಾರೆ. ನಂತರ ಮೆರವಣಿಗೆಯಲ್ಲಿ ಬಂದ ಎಲ್ಲರೂ ದೇವಿಗೆ ಪೂಜೆಯನ್ನು ಅಕ್ಷತೆ ರೂಪದಲ್ಲಿ ಹಾಕಿ ಪ್ರಾರ್ಥನೆ ಸಲ್ಲಿಸುತ್ತಾರೆ. ಉತ್ಸವಮೂರ್ತಿಯನ್ನು ಹೊತ್ತವರು, ಕುದುರೆಮೂರ್ತಿ ಹೊತ್ತವರು ವಾದ್ಯಮೇಳದೊಂದಿಗೆ ನರ್ತಿಸುತ್ತಾ ಮೆರವಣಿಗೆಯಲ್ಲಿ ಸಾಗಿ ಮೂಲ ಗುಡಿ ತಲುಪುತ್ತಾರೆ. ಅಲ್ಲಿ ಪಕ್ಕದ ಭದ್ರಕಾಳಿಗೆ ಪೂಜೆ ಸಲ್ಲಿಸಿ ಕೋಳಿಗಳನ್ನು ಬಲಿ ಅರ್ಪಿಸಿ, ಅಲ್ಲಿಯವರೆಗೆ ದೇವರುಗಳಿಗೆ ಬೈದಿರುವುದಕ್ಕೆ ಕ್ಷಮೆಯಾಚಿಸಿ ಕುಂಡೆ ಹಬ್ಬ ಮುಗಿಸುತ್ತಾರೆ.