ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಮ್ಮಡ ಗ್ರಾಮದ ದೇವತೆ ಶ್ರೀ ಪ್ರಭುಲಿಂಗೇಶ್ವರ. ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ಶ್ರೀ ಪ್ರಭುಲಿಂಗೇಶ್ವರನ ಜಾತ್ರೆಯಲ್ಲಿ ಕಿಚಡಿ ನೈವೇದ್ಯ ಅರ್ಪಿಸಲಾಗುತ್ತದೆ. ಈ ಬೃಹತ್ ಜಾತ್ರೆಯನ್ನು ಕಿಚಡಿ ಜಾತ್ರೆಯೆಂದೇ ಕರೆಯುತ್ತಾರೆ. ಜಾತ್ರೆಗೆ ಎಲ್ಲ ಮತಧರ್ಮಿಯರು ಸೇರುತ್ತಾರೆ. ವಿಶಿಷ್ಟವೂ, ಆದರ್ಶವೂ ಆದ ಜಾತ್ರೆಯ ವಿಶೇಷವೆಂದರೆ ಎಲ್ಲರೂ ಸೇರಿ ಕಿಚಡಿ ಪ್ರಸಾದವನ್ನು ಸ್ವೀಕರಿಸುವುದು.

ಸಾವಿರಾರು ಜನ ಭಕ್ತರು ಸೇರುವ ಈ ಜಾತ್ರೆಯಲ್ಲಿ ಕಿಚಡಿ ಪ್ರಸಾದಕ್ಕಾಗಿ ಸುಮಾರು ನೂರಾರು ಕ್ವಿಂಟಾಲ್ ಅಕ್ಕಿ ಹಾಗೂ ಬೇಳೆ ಬಳಸಿ ವಿಶಿಷ್ಟ ರೀತಿಯ ಕಿಚಡಿ ಪ್ರಸಾದ ತಯಾರಿಸುತ್ತಾರೆ. ಕಿಚಡಿ ಪ್ರಸಾದದ ಜೊತೆಗೆ ವಿಶಿಷ್ಟ ರುಚಿಯ ‘ಸಾರು’ ಕೂಡಾ ತಯಾರಿಸುತ್ತಾರೆ. ಜಾತ್ರೆಗೆ ಭಕ್ತರ ಸಂಖ್ಯೆ ಹೆಚ್ಚಿದ ಕಾರಣ ಹಿಂದೆ ನಡೆಯತ್ತಿದ್ದ ಪಂಕ್ತಿಯ ಭೋಜನ ನಿಲ್ಲಿಸಲಾಗಿದ್ದು, ಈಗ ಸ್ವ­ಸಹಾಯ ಪದ್ಧತಿಯಲ್ಲಿ ಕಿಚಡಿಯನ್ನು ನೀಡುತ್ತಾರೆ. ಮಹಿಳೆಯರು ಮತ್ತು ಮಕ್ಕಳಿಗೆ ಪ್ರತ್ಯೇಕವಾದ ವ್ಯವಸ್ಥೆ ಮಾಡಲಾಗಿರುತ್ತದೆ. ಪ್ರಸಾದವನ್ನು ಬಡಿಸಲು ಸುತ್ತಲ ಗ್ರಾಮದ ನೂರಾರು ಯುವಕರು ಸೇರಿ ಸೇವೆ ಮಾಡುತ್ತಾರೆ.

ಕಿಚಡಿ ಪ್ರಸಾದಕ್ಕೆ ಬೇಕಾದ ಅಕ್ಕಿ, ದವಸ ಹಾಗೂ ಪಾತ್ರೆ ಇತ್ಯಾದಿಗಳು ಸುತ್ತಲಿನ ರೈತರಿಂದ, ಭಕ್ತಾದಿಗಳಿಂದ ದೇಣಿಗೆ ರೂಪದಲ್ಲಿಯು ಬರುತ್ತದೆ. ಜೊತೆಗೆ ದೇವಸ್ಥಾನದ ಸೇವಾ ಸಮಿತಿ ಉಳಿದ ಖರ್ಚು-ವೆಚ್ಚಗಳನ್ನು ನೋಡಿಕೊಳ್ಳುತ್ತದೆ. ದೇಣಿಗೆಯನ್ನು ಯಾರೊಂದಿಗೆ ಕೇಳುವುದಿಲ್ಲ. ಕಿಚಡಿಗೆ ಬೇಕಾದ ಎಲ್ಲಾ ಪರಿಕರಗಳನ್ನು ಸಂಗ್ರಹಿಸಿಕೊಂಡು ಜಾತ್ರೆಯ ದಿನ ಹನ್ನೆರಡು ಗಂಟೆಗೆ ಕಿಚಡಿ ತಯಾರಿಸಲು ಆರಂಭಿಸಿ, ಅದೇ ದಿನ ಸಂಜೆ ಆರು  ಗಂಟೆಗೆ ಮುಗಿಸುತ್ತಾರೆ.