ಕಾವೇರಿ ಕೊಡವರ ಮನೆ ದೇವತೆ. ವರ್ಷಕ್ಕೆ ಒಂದು ಬಾರಿ ತಲಕಾವೇರಿ ಕುಂಡಿಕೆಯಲ್ಲಿ  ತೀರ್ಥೋದ್ಭವ ಆಗುವ ದಿನವನ್ನು ಕೊಡಗಿನ ಉದ್ದಗಲಕ್ಕೂ ಹಬ್ಬವನ್ನಾಗಿ ಆಚರಿಸುತ್ತಾರೆ. ಒಟ್ಟು ಮೂರು ದಿನ ನಡೆಯುವ ಈ ಹಬ್ಬದ ಮೊದಲ ದಿನ ಗದ್ದೆಗಳಿಗೆ ‘ಬೊತ್ತ್’ ಹಾಕುತ್ತಾರೆ. ದಬ್ಬೆಯನ್ನು ಸೀಳಿ ಕತ್ತರಿ ಆಕಾರದಲ್ಲಿ ಬಳ್ಳಿಯಿಂದ ಕಟ್ಟಿ, ತುದಿಗೆ ಹೂಗಳಿಂದ ಶೃಂಗರಿಸಿ, ತಮ್ಮ ಗದ್ದೆಗಳಿಗೆ ಒಂದರಂತೆ ನೆಲದಲ್ಲಿ ನೆಡುತ್ತಾರೆ. ಅಂದು ಸಂಜೆ ನಡೆಯುವ ‘ಕಣಿ’ ಪೂಜೆಗೆ ವಿವಿಧ ಬಗೆಯ ಹೂಗಳನ್ನು ಸಂಗ್ರಹಿಸುತ್ತಾರೆ. ಹಬ್ಬದ ಮೊದಲೇ ಮನೆಯನ್ನು ಸುಣ್ಣ ಬಣ್ಣಗಳಿಂದ ಶೃಂಗರಿಸಿ, ಕಾವೇರಿ ದೇವತೆಯನ್ನು ಸ್ವಾಗತಿಸಲು ಸಿದ್ಧತೆ ನಡೆಸಿರುತ್ತಾರೆ.

ಮನೆಗೆ ಕನಿಷ್ಠ ಒಬ್ಬರಾದರೂ ತಲಕಾವೇರಿ ತೀರ್ಥೋದ್ಭವಕ್ಕೆ ಹೋಗುತ್ತಾರೆ. ಕುಂಡಿಕೆಯಲ್ಲಿ ಮಿಂದು, ಉದ್ಭವ ವಾದ ತೀರ್ಥವನ್ನು ಮನೆಗೆ ತರುತ್ತಾರೆ. ತಲಕಾವೇರಿಗೆ ಅನಿವಾರ್ಯ ಕಾರಣಗಳಿಂದ ಹೋಗಲು ಸಾಧ್ಯವಾಗದವರು ಕಾವೇರಿ ನದಿಯ ಉದ್ದಕ್ಕೂ ಇರುವ ಹರಿಶ್ಚಂದ್ರ, ಬಲಮುರಿ, ಗುಹ್ಯ ಮುಂತಾದ ಪುಣ್ಯ ಕ್ಷೇತ್ರಗಳಿಗೆ ಹೋಗಿ, ಭಕ್ತಿಯಿಂದ ಸ್ನಾನ ಮಾಡಿ ಅಲ್ಲಿಂದಲೇ ಕಾವೇರಿಯ ತೀರ್ಥವನ್ನು ತರುತ್ತಾರೆ.

ಹಬ್ಬದ ಕೊನೆಯ ದಿನ ಅಂದರೆ, ತೀರ್ಥ ಉದ್ಭವದ ಮರುದಿನ ನಸುಕಿನಲ್ಲಿಯೇ ಎದ್ದು ಮನೆ ಮಂದಿಯೆಲ್ಲ ಸ್ನಾನ ಮಾಡುತ್ತಾರೆ. ಹೊಸ ಬಟ್ಟೆ ಧರಿಸಿ, ಹಬ್ಬದ ಸಿದ್ಧತೆ ನಡೆಸುತ್ತಾರೆ. ತಲಕಾವೇರಿಯಿಂದ ತಂದ ತೀರ್ಥೋದ್ಭವದ ತೀರ್ಥವನ್ನು ಮನೆ, ಕಣ, ಕೊಟ್ಟಿಗೆ ಇತ್ಯಾದಿಗಳಿಗೆ ಪ್ರೋಮನೆಯ ಹಿರಿಯ ಮುತ್ತೈದೆಯೊಬ್ಬಳು ತಳಿಯಕ್ಕಿ ಬೊಳಕ್‌ನ್ನು ಸಿದ್ಧಗೊಳಿಸಿ ಅದರಲ್ಲಿ ರೇಷ್ಮೆ ವಸ್ತ್ರವೊಂದನ್ನು ಮಡಿಸಿಡುತ್ತಾಳೆ. ನಂತರ ಎಲ್ಲರೂ ಕಣಿ ಪೂಜೆಗೆ ಸಿದ್ಧತೆ ನಡೆಸುತ್ತಾರೆ. ದೊಡ್ಡದೊಂದು ಸೌತೆಕಾಯಿ, ಸೋರೆಕಾಯಿ ಅಥವಾ ಯಾವುದೇ ದೊಡ್ಡದಾದ ತರಕಾರಿಗೆ ಕಣ್ಣು ಮೂಗುಗಳನ್ನು ಬರೆದು, ವಿವಿಧ ಬಗೆಯ ಆಭರಣಗಳಿಂದ ಸಿಂಗರಿಸಿ, ತಟ್ಟೆಯೊಂದರಲ್ಲಿ ಇಟ್ಟು, ಮೂರು ವೀಳ್ಯದೆಲೆ ಹಾಗೂ ಮೂರು ಅಡಕೆಗಳನ್ನು ಇಡುತ್ತಾರೆ. ತಟ್ಟೆಯನ್ನು ನೆಲ್ಲಕ್ಕಿ ನಡುಬಾಡೆಯಲ್ಲಿ ಉನ್ನತ ಆಸನದ ಮೇಲಿಟ್ಟು, ತಳಿಯಕ್ಕಿ ಬೊಳಕ್‌ನ ಅಕ್ಕಿಯಿಂದ, ದೀಪವನ್ನು ಪೂಜಿಸಿ, ತರಕಾರಿ ಮೂರ್ತಿಗೆ ಹೂವಿನಿಂದ ಅರ್ಚಿಸಿ, ಆರತಿ ಎತ್ತಿ, ನೈವೇದ್ಯ ಸಲ್ಲಿಸಿ, ಮೂರ್ತಿಯನ್ನು ಮುಟ್ಟಿ, ತಮ್ಮ ಹಣೆ, ತಲೆಗಳನ್ನು  ಸವರಿಕೊಳ್ಳುತ್ತಾರೆ. ಸಂಜೆಯ ನಂತರ ಎಲ್ಲರೂ ಹಿರಿಯರ ಪಾದ ಮುಟ್ಟಿ ಮನಸ್ಕರಿಸಿ ಅವರಿಂದ ಆಶೀರ್ವಾದ ಪಡೆಯುತ್ತಾರೆ.

ಕಣಿ ಪೂಜೆಯ ನಂತರ ಮನೆಯ ಹಿರಿಯ ಮುತ್ತೈದೆ ಬಾವಿಗೆ ಗಂಗಾ ಪೂಜೆ ಮಾಡಿ, ದೋಸೆ ಮತ್ತು ತಂಬಿಟ್ಟನ್ನು ಬೊತ್ತ್ ಮೇಲಿಡುತ್ತಾಳೆ. ಅಂದು ಹೊಸ ನೀರು ತಂದು ಅಡುಗೆ ಮಾಡುತ್ತಾರೆ. ಮದುವೆಯಾಗಿ ಹೋದ ಹೆಣ್ಣುಮಕ್ಕಳು ಈ ಹಬ್ಬದಲ್ಲಿರಬೇಕೆಂಬ ನಿಯಮವಿದೆ. ಮೂರು ದಿನಗಳ ನಂತರ ತರಕಾರಿ ಮೂರ್ತಿಯನ್ನು ಪೂಜಿಸಿ, ನದಿ ಅಥವಾ ಹಾಲು ಬರುವ ಮರದ ಕೆಳಗೆ ಇಟ್ಟು ಬರುತ್ತಾರೆ.