ಹಾಲಿನ ಗಡಿಗೆಗಳನ್ನು ಪೂಜಿಸಿ, ಓಕುಳಿ ಆಡುವುದನ್ನು ‘ಕಾವಡಿ ಓಕುಳಿ’ ಎಂದು ಕರೆಯುತ್ತಾರೆ. ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ವೆಂಕಲಕುಂಟಪ್ಪ ದೇವರಿಗೆ ಜಾತ್ರೆಯ ಜೊತೆಯಲ್ಲಿ ‘ಹಾಲಿನ ಓಕುಳಿ’ ಹರಕೆ ಒಪ್ಪಿಸುತ್ತಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಚಿಕ್ಕವೆಂಕಲಕುಂಟೆ ಗ್ರಾಮ ದೈವ ವೆಂಕಲಕುಂಟೆಪ್ಪ. ಚಿಕ್ಕ ವೆಂಕಲ ಕುಂಟೆಯಲ್ಲೊಂದು ವೆಂಕಲ ಕುಂಟೆಪ್ಪನ ಗುಡಿ. ಅಂದರೆ ಹನುಮಪ್ಪನ ಗುಡಿ. ಗುಡಿಯ ಮುಂದೆ ಕಾಯಿ, ಕುಂಕುಮ, ಭಂಡಾರ, ಹೂವು, ಉತ್ತತ್ತಿಗಳ ರಾಶಿ. ಮಿಠಾಯಿ, ಚಹಾದಂಗಡಿ, ಬಳೆ, ಅಂಗಡಿಗಳ ಸಾಲೇಸಾಲು. ನಡುವೆ ಶೃಂಗರಿಸಿ ನಿಂತ ತೇರು. ಡೊಳ್ಳುಗಳ ಅರ್ಭಟ ಇರುತ್ತದೆ.

ಕಿಕ್ಕಿರಿದ ಜನ ಸಂದಣಿಯಲ್ಲೇನೋ ಗದ್ದಲ ಆರಂಭವಾಗುತ್ತದೆ. ಹೋಯ್ ಹೋಯ್ ಹೋಯ್ ಎಂಬ ಗಟ್ಟಿ ಧ್ವನಿ. ಇದನ್ನು ಕೇಳಿದ ಜಾತ್ರೆಯ ಜನ ಒಂದು ಕ್ಷಣ ಸ್ತಬ್ಧ. ಧ್ವನಿಯ ಜೊತೆ ಕೊಕ್ಕರೆಯ ಮೀಸೆ, ಕುರುಚಲು ಕೂದಲು, ಎಡ ಕಿವಿಗೆ ರಿಂಗು ಹಾಕಿ ಕಚ್ಚೆ ಪಂಚೆ ಧರಿಸಿದ ನೂರಾರು ಯುವಕರು. ಅವರೊಂದಿಗೆ ನೂರಾರು ಯುವತಿಯರು ಹೆಗಲ ಮೇಲೆ ಕಾವಡಿ ಹೊತ್ತು ಹಾಲು ಚೆಲ್ಲುತ್ತ ಬರುತ್ತಾರೆ. ಜನ ದಿಕ್ಕೆಟ್ಟು ಓಡುತ್ತಾರೆ. ಯುವಕರ ದಂಡು ಮಾತ್ರ ಹೋಯ್ ಹೋಯ್ ಎಂದು ಕೂಗುತ್ತಾ ಹಾಲು ಚೆಲ್ಲುತ್ತಾ, ಕುಣಿಯುತ್ತಾ ವೆಂಕಲಕುಂಟೆಪ್ಪನ ಗುಡಿ ಸುತ್ತು ಹಾಕುತ್ತಾರೆ. ಭಯದಿಂದ ಓಡಿದ ಜನರು ಮಾತ್ರ ದೂರದಲ್ಲಿ ನಿಂತು, ಗೊಲ್ಲರು ಕುಣಿಯುವುದನ್ನೇ ನೋಡುತ್ತಿರುತ್ತಾರೆ.

ವೆಂಕಲಕುಂಟೆಪ್ಪ ಸುತ್ತಲಿನ ಹಳ್ಳಿಗಳ ಆರಾಧ್ಯ ದೈವ. ತಮ್ಮ ಕಷ್ಟ ಪರಿಹಾರಕ್ಕಾಗಿ ಸುತ್ತಲಿನ ಜನರು ಹಾಲು ಓಕುಳಿಯ ಹರಕೆ ಹೊತ್ತು, ಹರಕೆ ತೀರಿಸಲು ಜಾತ್ರೆಗೆ ಬರುತ್ತಾರೆ. ಜಾತ್ರೆಗೆ ಒಂದು ವಾರವಿರುವಾಗಲೇ ಗೊಲ್ಲರು ತಮ್ಮ ದೊಡ್ಡಿಯ ಆಕಳು, ಆಡು, ಕುರಿಗಳ ಹಾಲನ್ನು ಶೇಖರಿಸಿ ಚಕ್ಕಡಿಯ ಮೂಲಕ ಜಾತ್ರೆಗೆ ತರುತ್ತಾರೆ. ಗಾಡಿ ಎಳೆಯುವ ಎತ್ತುಗಳಿಗೆ ಕೋಡಣಸು, ಜೂಲ ಸಿಂಗರಿಸಿರುತ್ತಾರೆ. ನೂರಾರು ಚಕ್ಕಡಿಗಳು ಜಾತ್ರೆಯ ಬಯಲಿಗೆ ಬಂದು ಸೇರುತ್ತವೆ.

ಜಾತ್ರೆ ಬೆಳಿಗ್ಗೆ ಆರಂಭವಾಗುತ್ತದೆ. ಹಾಲೋಕುಳಿ ಸಲ್ಲಿಸಲು ಗೊಲ್ಲರ ಯುವಕರು ಪಂಚೆ ಹಾಕಿ ಒಂದು ಬಗೆಯ ಕುಸ್ತಿಪಟುಗಳಂತೆ ಸಿದ್ಧರಾಗುತ್ತಾರೆ. ಹತ್ತು ಅಡಿ ಉದ್ದದ ಕಟ್ಟಿಗೆಗೆ ದಗಡಿ ಬಳ್ಳಿಯ ಸಿಂಬಿಯಿರುವ ನೆಲವು ಕಟ್ಟಿದ ಜೋಡು ಕಾವಡಿಗಳನ್ನು ತಂದಿಟ್ಟ ಸ್ತ್ರೀಯರು ಹಾಲಿನ ಗಡಿಗೆ, ತೆಂಗಿನಕಾಯಿಗಳನ್ನು ಇಡುತ್ತಾರೆ. ಕಾವಡಿ ಪೂಜೆ ಆದ ಮೇಲೆ ಗೊಲ್ಲರ ಹಾಲೋಕಳಿ ಆರಂಭವಾಗುತ್ತದೆ. ಕಾವಡಿಗಳನ್ನು ಹೆಗಲಿಗೇರಿಸಿಕೊಂಡು ಹೋಯ್ ಹೋಯ್ ಎಂದು ಹೇಳುತ್ತಾ ಮೆರವಣಿಗೆ ಹೊರಡುತ್ತಾರೆ.  ಜಾತ್ರೆಯ ಜನ ದಿಕ್ಕಾಪಾಲಾಗಿ ಓಡುತ್ತಾರೆ. ಗೊಲ್ಲರ ದಂಡು ಕುಂಟೆಪ್ಪನ ಗುಡಿ, ತೇರು, ವಾದಗಟ್ಟಿ ಇನ್ನಿತರ ಸ್ಥಳಗಳಲ್ಲಿ ಸಾವಿರಾರು ಲೀಟರ್ ಹಾಲನ್ನು ಓಕುಳಿ ಮಾಡುತ್ತದೆ. ಓಕುಳಿಯಾಡಿದ ಗೊಲ್ಲರು ಪಕ್ಕದ ಕೆರೆಯಲ್ಲಿ ಸ್ನಾನ ಮಾಡಿ ಶುಚಿಯಾಗುತ್ತಾರೆ. ನಂತರ ತೇರಿನ ಮೆರವಣಿಗೆ ಆರಂಭವಾಗುತ್ತದೆ. ತೇರಿಗೆ ಉತ್ತತ್ತಿ ಎಸೆದು ತಮ್ಮ ಭಕ್ತಿಯನ್ನು ತೋರುತ್ತಾರೆ. ಹಾಲೋಕುಳಿ ಮಾಡುವುದರಿಂದ ತಮ್ಮ ದನಕರು ಕುರಿಗಳಿಗೆ  ರೋಗ ರುಜಿನಗಳು ಬರುವುದಿಲ್ಲವೆಂದು ಜನ ನಂಬುತ್ತಾರೆ. ಹಾಲೋಕುಳಿಯಿಂದ ಆಗಬಹುದಾದ ಬಟ್ಟೆಯ ಕಲೆ ಹಾಗೂ ಅದರ ವಾಸನೆಗೆ ಜನ ಓಕುಳಿ ವೇಳೆ ಹತ್ತಿರ ಹೋಗಲು ಹೆದರುತ್ತಾರೆ.