ಉತ್ತರ ಕರ್ನಾಟಕ ಭಾಗದಲ್ಲಿ ಆಚರಿಸುವ ಕೃಷಿಸಂಬಂಧೀ ಹಬ್ಬವಾಗಿದೆ. ಜೂನ್ ತಿಂಗಳಲ್ಲಿ ಬರುವ  ಈ ಹಬ್ಬದಲ್ಲಿ ಹಲವಾರು ಸಾಹಸ ಪ್ರದರ್ಶನಗಳು ನಡೆಯುತ್ತವೆ. ಕಾರಹುಣ್ಣಿಮೆಯಲ್ಲಿ ಒಂದೊಂದು ಊರು ತನ್ನದೇ ಆದ ವೈಶಿಷ್ಟ್ಯ ಹಾಗೂ ಸೊಗಡುಗಳನ್ನು ಹೊಂದಿರುವುದು ಕಾಣಬಹುದು. ಮಳೆಯ ಆರಂಭಿಕ ದಿನಗಳಲ್ಲಿ ರೈತಮಕ್ಕಳು ತಮ್ಮ ದನಕರು, ಎತ್ತು, ಹೋರಿಗಳನ್ನು ಮೈತೊಳೆದು, ಆಭರಣಗಳಿಂದ ಅಲಂಕರಿಸಿ, ಜೂಲ ಹಣೆಪಟ್ಟಿ, ಗೆಜ್ಜೆ ಇತ್ಯಾದಿಗಳಿಂದ ಶೃಂಗರಿಸುತ್ತಾರೆ. ಶೃಂಗಾರಗೊಂಡ ದನಕರುಗಳಿಗೆ ಆರತಿ ಬೆಳಗಿ ಭಕ್ತಿ ಪ್ರದರ್ಶಿಸುತ್ತಾರೆ.

ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಎತ್ತುಗಳ ಮೆರವಣಿಗೆಯ ಮೂಲಕ ಊರ ಅಗಸೆ ಬಾಗಿಲ ಬಳಿ ಬಂದು ಸೇರುತ್ತಾರೆ. ಅಗಸೆ ಬಾಗಿಲಿನಲ್ಲಿ ಬೇವಿನ ಗೊಂಚಲುಗಳ ನಡುವೆ ಕೊಬ್ಬರಿ ಬಟ್ಟಲನ್ನು ಕಟ್ಟಿದ ಹಾರವನ್ನು ಅಡ್ಡಲಾಗಿ ಹಿಡಿದು ಊರಿನ ಅಂಬಿಗರು ನಿಂತಿರುತ್ತಾರೆ. ಬೇವಿನ ತೊಪ್ಪಲು ಹಾಗೂ ಕೊಬ್ಬರಿಯಿಂದ ಮಾಡಿದ ಹಾರವನ್ನೇ ‘ಕರಿ’ ಎಂದು ಕರೆಯುತ್ತಾರೆ. ಮೆರವಣಿಗೆಯಲ್ಲಿ ಬಂದ ಎತ್ತುಗಳು ಹಾಗೂ ಅವುಗಳನ್ನು ಓಡಿಸುವ ಮಾಲೀಕರು, ಹಿರೀಕನೊಬ್ಬನ ಸೂಚನೆಯ ಮೇರೆಗೆ, ಒಮ್ಮೆಗೆ ‘ಕರಿ’ಯನ್ನು ಕೀಳಲು ಓಡುತ್ತಾರೆ. ಯಾರು ಮೊದಲು ಆ ‘ಕರಿ’ಯನ್ನು ಕೀಳುತ್ತಾರೋ ಅವರು ವಿಜಯಿಯಾಗುತ್ತಾರೆ. ಯಾವ ಬಣ್ಣದ ಎತ್ತು ಕರಿಯನ್ನು ಹರಿಯುತ್ತವೋ ಆ ಬಣ್ಣ ಆ ವರ್ಷದ ಫಸಲಿನ ಭವಿಷ್ಯವನ್ನು ನಿರ್ಣಯಿಸುತ್ತದೆ. ಬಿಳಿ ಬಣ್ಣದ ಎತ್ತು ಇತರ ಎತ್ತುಗಳಿಂದ ಮುಂದೆ ದೌಡಾಯಿಸಿ ಕರಿ ಹರಿದರೆ ಆ ವರ್ಷ ಬಿಳಿ ಜೋಳದ ಬೆಳೆ ಧಾರಾಳ. ಕಂದು ಎತ್ತು ಕರಿ ಹರಿದರೆ ಮಳೆಯಾಗಿ ಸಮೃದ್ದಿಯಾಗುತ್ತದೆ ಎಂಬುದು ಅವರ ಪರಂಪರಾಗತ ಲೆಕ್ಕಾಚಾರವಾಗಿದೆ. ಇನ್ನು ಕೆಲ ಭಾಗಗಳಲ್ಲಿ ಎತ್ತುಗಳನ್ನು ಓಡಿಸುವುದಿಲ್ಲ, ಬದಲಾಗಿ ಅವುಗಳೊಂದಿಗೆ ಕಾದಾಡುತ್ತಾರೆ. ಅಲ್ಲದೆ ಕಾರಹುಣ್ಣಿಮೆಯಲ್ಲಿ ವಿವಿಧ ಬಗೆಯ ಬಹುಮಾನ ನೀಡಿ ಗೌರವಿಸುತ್ತಾರೆ.