ಪ್ರತಿ ವರ್ಷದ ಡಿಸೆಂಬರ್ ತಿಂಗಳ ಕೊನೆಯ ಗುರುವಾರ ನಡೆಯುವ ಸಾಂಕೇತಿಕ ಬೇಟೆ. ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಗ್ರಾಮದ  ಜನರು ಪ್ರಾಣಿ, ಪಕ್ಷಿ ಇತ್ಯಾದಿ ಪ್ರಾಣಿಗಳನ್ನು ಬೇಟೆಯಾಡದೇ ಸಾಂಕೇತಿಕವಾಗಿ ಬೇಟೆ ಹಬ್ಬವನ್ನು ಆಚರಿಸುತ್ತಾರೆ. ಕಟಾವಿನ  ಸಂದರ್ಭದಲ್ಲಿ ಹೊಲಗಳಲ್ಲಿ ಧಾನ್ಯಗಳನ್ನು ಸಂಗ್ರಹಿಸಿಡುವ ಪದ್ಧತಿ ಸಾಮಾನ್ಯ. ಹೀಗೆ ಸಂಗ್ರಹಿಸಿದ ಧಾನ್ಯಗಳನ್ನು ತಿನ್ನಲು ಬರುವ ಪ್ರಾಣಿಗಳನ್ನು ಬೇಟೆಯಾಡಿ ಕೊಲ್ಲುವ ಹಿಂದಿನ ಪದ್ಧತಿಯೇ ಈ ಆಚರಣೆಗೆ ಕಾರಣವಾಗಿದೆಂದು ಹೇಳುತ್ತಾರೆ.

ಬೇಟೆ ರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನು ಪಲ್ಲಕಿಯಲ್ಲಿ ಇರಿಸಿ, ಪೂಜಿಸುತ್ತಾರೆ. ನಂತರ ಬೇಟೆ ಕೊಡುವ ದಿನ್ನೆಗೆ ಊರಿನ ದಾಸಪ್ಪಗಳು ಪಲ್ಲಕ್ಕಿ ಹೊತ್ತು ತರುತ್ತಾರೆ. ಆಗಲೇ ಹುಲಿಕುಂಟೆ ಹಾಗೂ ಸುತ್ತಲಿನ ಜನ ತಮ್ಮ ಪೂರ್ವಿಕರು ಉಪಯೋಗಿಸುತ್ತಿದ್ದ ಹಳೆಯ ಆಯುಧಗಳನ್ನು ಹಿಡಿದು ಬೇಟೆಗೆ ಹೊರಡಲು ಸಿದ್ಧರಾಗಿರುತ್ತಾರೆ. ಬೇಟೆ ದಿನ್ನೆಯಲ್ಲಿ ಪಲ್ಲಕ್ಕಿಯಲ್ಲಿನ ರಂಗನಾಥ ಸ್ವಾಮಿಗೆ ಸಾಂಕೇತಿಕವಾಗಿ ಬೇಟೆ ಅರ್ಪಿಸಿ, ಪೂಜಿಸುತ್ತಾರೆ. ಅಂದು ಮನೆ ಮನೆಗಳಲ್ಲಿ ಹಿಸುಕಿದ ಅವರೆ ಕಾಳು ಸಾರು ಮತ್ತು ಮುದ್ದೆ ಊಟ ವಿಶೇಷವಾಗಿರುತ್ತದೆ. ಮರುದಿನ ಕೋಳಿ, ಕುರಿಗಳ ಮಾಂಸಾಹಾರದ ಊಟದ ಪದ್ಧತಿ ರೂಢಿಯಲ್ಲಿದೆ.