ಮುಳಬಾಗಿಲು ತಾಲ್ಲೂಕು ಉತ್ತನೂರು ಗ್ರಾಮದ ದೈವಗಳಾದ ಶ್ರೀ ಸಿದ್ದೇಶ್ವರ ಸ್ವಾಮಿ, ಬೀರೇಶ್ವರ ಸ್ವಾಮಿಗಳ ಜಾತ್ರೆ ಹತ್ತು ವರ್ಷಗಳಿಗೊಮ್ಮೆ ಐದು ದಿನಗಳವರೆಗೆ ನಡೆಯುತ್ತದೆ. ಆ ವರ್ಷದ ಮಾರ್ಚ್ ತಿಂಗಳಲ್ಲಿ ಜಾತ್ರೆ ಜರುಗುತ್ತದೆ. ಜಾತ್ರೆಯಲ್ಲಿ ಭಕ್ತರು ತಮ್ಮ ಕಷ್ಟ ಪರಿಹಾರಕ್ಕಾಗಿ ಹೊತ್ತ ಹರಕೆಗಳನ್ನು ತೀರಿಸುತ್ತಾರೆ. ಜಾತ್ರೆಯಲ್ಲಿ ತಮ್ಮ ತಲೆಯ ಮೇಲೆ ತೆಂಗಿನಕಾಯಿಗಳನ್ನು ಒಡೆಸಿಕೊಳ್ಳುತ್ತಾರೆ. ಜಾತ್ರೆಯಲ್ಲಿ ಹರಕೆ ಸಲ್ಲಿಸಲು ಆಂಧ್ರ ಹಾಗೂ ತಮಿಳುನಾಡಿನಿಂದ ಭಕ್ತರು ಬರುತ್ತಾರೆ.

ಜಾತ್ರೆಯ ಕೊನೆಯ ದಿನ ತಲೆಗೆ ತೆಂಗಿನಕಾಯಿ ಹೊಡೆಯುವ ಹರಕೆ ಸಲ್ಲುತ್ತದೆ. ಇದನ್ನು ಕಾಯಿ ನಡೆಸೋ ಕಾರ್ಯಕ್ರಮ ಎಂದು ಕರೆಯುತ್ತಾರೆ. ಹರಕೆ ಹೊತ್ತವರು ಅಂದು ತಣ್ಣೀರು ಸ್ನಾನ ಮಾಡಿ ಬರಬೇಕೆಂಬ ನಿಯಮವಿದೆ. ಪೂಜಾರಿ ಮೊದಲು ದೇವರ ಎತ್ತಿನ ತಲೆಯ ಮೇಲೆ ತೆಂಗಿನ ಕಾಯಿಯನ್ನು ಕುಟ್ಟಿ ಒಡೆಯುವುದರ ಮೂಲಕ ಹರಕೆಯನ್ನು ಆರಂಭಿಸುತ್ತಾನೆ. ನಂತರ ಮೊದಲು ಬಂದ ಭಕ್ತನ ಹಣೆಗೆ ತಿಲಕ ಇಟ್ಟು, ತಲೆಯ ಮೇಲೆ ಪಾದವನ್ನು ಇಟ್ಟು, ನಂತರ ತೆಂಗಿನಕಾಯಿಯನ್ನು ಹೊಡೆಯುತ್ತಾರೆ. ತೆಂಗಿನ ಕಾಯಿ ಒಂದೇ ಏಟಿಗೆ ಸಿಡಿದು ಹೋಗುತ್ತದೆ. ಹರಕೆ ಸಲ್ಲಿಸುವ ಭಕ್ತರು ಒದ್ದೆ ಪಂಚೆ ಧರಿಸಿ, ದೇವರ ಪೀಠದ ಎದುರು ಮಂಡಿಯೂರಿ ಕೂರುತ್ತಾರೆ. ಹೀಗೆ ಸರದಿಯಂತೆ ಹರಕೆ ಹೊತ್ತವರು ತಲೆಯ ಮೇಲೆ ಪೂಜಾರಿಯಿಂದ ತೆಂಗಿನಕಾಯಿ ಒಡೆಸಿಕೊಳ್ಳುತ್ತಾರೆ.