ಮುತ್ತತ್ತಿಯ ಹುಲಿವಾಹನ ಉತ್ಸವದಲ್ಲಿ ನಡೆಯುವ ಕಾಯಿ ಚಚ್ಚುವ ಹರಕೆ. ಮುತ್ತತಿ, ಪದ್ದಾರೆ, ಸಂಬಾಪುರದ ಕದಂಬರಾಯನ ಉತ್ಸವಗಳಲ್ಲಿ ಕಾಣಬಹುದು. ಹಾಲರಬಿ ಸೇವೆಯ ನಂತರ ಕಾಯಿಬುಡೊ ಸೇವೆ ಜರಗುತ್ತದೆ. ನಾರಿನಿಂದ ಮಾಡಿದ ಹೆಣಿಗೆ ಚೀಲದಲ್ಲಿ ಬಲಿತ ಸಿಪ್ಪೆ ಸಹಿತ ಹಸಿರು ತೆಂಗಿನಕಾಯಿಯನ್ನು ಹಾಕಿ, ಹಗ್ಗದಿಂದ ಕಟ್ಟುತ್ತಾರೆ. ತಮ್ಮಡಿಯೊಬ್ಬನು ಹಿಡಿದುಕೊಂಡು ಹಗ್ಗದ ಇನ್ನೊಂದು ತುದಿಯನ್ನು ಬಲಗೈಲಿ ಹಿಡಿದು ಹಗ್ಗವನ್ನು ಸುರುಳಿಯಾಗಿ ಸುತ್ತಿಕೊಂಡಿ ರುತ್ತಾನೆ. ಕಾಯಿಯನ್ನು ಚಚ್ಚಲು ಭಕ್ತರು ಎರಡೂ ಬದಿಯಲ್ಲಿ ದಂಡ ಹಿಡಿದು ನಿಲ್ಲುತ್ತಾರೆ. ತಮ್ಮಡಿ ಬಲಗೈಲಿ ಹಿಡಿದ ಕಾಯಿಯನ್ನು ದಂಡಧಾರಿಗಳ ನಡುವೆ ಹಿಂದು ಮುಂದಕ್ಕೆ ನಾಲ್ಕು ಸಾರಿ ತೂಗಾಡಿಸಿ, ಕಾಯಿ ಬಿಡುತ್ತಾನೆ. ಹಗ್ಗ ಕುಣಿಕೆಯನ್ನು ಎಡಗೈಲಿ ಬಲವಾಗಿ ಹಿಡಿದ ಆತ, “ಹಗ್ಗ ಹದಿನಾರು ಮೂರು, ಕುಣಿಕೆ ನನ್ನ ಕೈಲಿ” ಎಂದು ಹೇಳಿ ಕಾಯಿ ಬಿಟ್ಟ ರಭಸದಲ್ಲೆ ಅದನ್ನು ಹಿಂದಕ್ಕೆ ಎಳೆದುಕೊಳ್ಳುತ್ತಾನೆ. ದಂಡಧಾರಿಗಳು ತಮ್ಮ ಬಡಿಗೆಗಳಿಂದ ಕಾಯಿ ಚಚ್ಚಲು ಪ್ರಯತ್ನಿಸುತ್ತಾರೆ. ಹೀಗೆ ಹತ್ತಾರು ಬಾರಿ ಪ್ರಯತ್ನದ ನಂತರ ಕಾಯಿಯನ್ನು ಚಚ್ಚುತ್ತಾರೆ. ಭಕ್ತರು ಏಳು ಕಾಯಿಗಳನ್ನು ದೇವಾಲಯದಿಂದ ನದಿಯವರೆಗೆ ನಡೆದ ಮೆರವಣಿಗೆಯಲ್ಲಿ ಚಚ್ಚುವ ಸಂಪ್ರದಾಯವಿದೆ. ಏಳನೇ ಕಾಯಿಯನ್ನು ಚಚ್ಚಿದ ನಂತರ ಎಲ್ಲರೂ ಬಡಿಗೆಯಿಂದ ಹೊಳೆಯ ನೀರನ್ನೆ ಬಡಿಯುತ್ತಾರೆ.

ಸೇವೆಗೆ ಸಿದ್ಧಪಡಿಸಿದ ಕಾಯಿಗಳನ್ನು ಭಕ್ತರು ಹೂ-ಹಾರಗಳಿಂದ ಅಲಂಕರಿಸುತ್ತಾರೆ. ದೇವಾಲಯದ ತಮ್ಮಡಿ ಕಾಯಿಗಳಿಗೆ ಕುಂಕುಮ ಲೇಪಿಸಿ, ತೀರ್ಥ ಚಿಮುಕಿಸಿ ಪೂಜಿಸುತ್ತಾನೆ. ನಂತರ ಕಾಯಿಗಳು ಸೇವೆಗೆ ಸಿದ್ಧವಾದಂತೆಯೇ. ಕಾಯಿ ಚಚ್ಚುವ ಬಡಿಗೆಗಳನ್ನು ಭಕ್ತರು ಮಡಿ ಮತ್ತು ಭಕ್ತಿಯಿಂದ ಕಡಿದು ತರುತ್ತಾರೆ. ಕಡಿದ ದೊಣ್ಣೆಗಳನ್ನು ತುದಿಯಲ್ಲಿ ಚೂಪಾಗಿಸಿ, ಹದ ಮಾಡಿ ಅವುಗಳನ್ನು ಅರಿಶಿಣ, ಕುಂಕುಮಗಳಿಂದ ಪೂಜಿಸಿ, ಕಾಯಿ ಸೇವೆ ಮಾಡಲು ಬರುತ್ತಾರೆ. ದೇವತೆಗಳು ದಾನವರ ತಲೆಗಳನ್ನು ಜಜ್ಜಿ ನಾಶಪಡಿಸಿದುದರ ವಿಜಯದ ಸಂಕೇತ ಎಂಬುದು ಅವರ ನಂಬಿಕೆ.

ಪ್ರಚಲಿತ ಕಥೆಯೊಂದು ಹೀಗೆ ಹೇಳುತ್ತದೆ. ರಾವಣನನ್ನು ಕೊಂದು ಶ್ರೀರಾಮ, ಸೀತೆ, ಲಕ್ಷ್ಮಣ, ಆಂಜನೇಯರು ಬರುತ್ತಿರುವಾಗ ಲಂಕೆಯಲ್ಲಿ ಅಳಿದುಳಿದ ರಾಕ್ಷಸರು ಅವರನ್ನು ಹಿಂಬಾಲಿಸಿದರಂತೆ. ಅವರನ್ನು ಗುರುತಿಸಿದ ಶ್ರೀರಾಮ, ಲಕ್ಷ್ಮಣ, ಆಂಜನೇಯರು ಅವರ ತಲೆಗಳನ್ನು ಹೊಡೆದು ಜಜ್ಜಿದರು. ಹೀಗೆ ರಾಕ್ಷಸರ ತಲೆಗಳನ್ನು ಜಜ್ಜಿದ ಸಂಕೇತ ಈ ಕಾಯಿ ಸೇವೆಯಾಗಿದೆ.