ತವರಿನವರು ಹೆಣ್ಣು ಮಕ್ಕಳಿಗೆ ಶಾಸ್ತ್ರೋಕ್ತವಾಗಿ ನೀಡುವ ಕಾಯಿ. ಹೆಣ್ಣಿಗೆ ತವರಿನ ಸಂಬಂಧ ಇರಲೆಂದು ಮಾಡುವ ಶಾಸ್ತ್ರ. ಕಾಯಿ ಕೊಡುವ ಶಾಸ್ತ್ರವನ್ನು ಮದುವೆಯಲ್ಲಿ, ಶ್ರಾವಣದಲ್ಲಿ, ನಾಗರ ಪಂಚಮಿ ಹಾಗೂ ಗೌರಿಹಬ್ಬದಲ್ಲಿ ಕಾಣಬಹುದು. ಮೇಲಿನ ಪ್ರತಿ ಸಂದರ್ಭದಲ್ಲಿಯೂ ತವರಿಗೆ ಬಂದ ಹೆಣ್ಣುಮಕ್ಕಳಿಗೆ ಕಾಯಿ ಅರ್ಪಿಸುವುದು ಕಡ್ಡಾಯ. ಒಂದು ವೇಳೆ ಮಗಳು ತವರಿಗೆ ಬಾರದೆ ಇದ್ದಾಗ ಅವಳಿಗೆ ನೀಡಬೇಕಾದ ಎಲ್ಲಾ ವಸ್ತುಗಳನ್ನು ಹೆಡಿಗೆ ತುಂಬಿ ಕಳುಹಿಸುತ್ತಾರೆ. ಹೆಡಿಗೆಯಲ್ಲಿ ತೆಂಗಿನ ಕಾಯಿ, ಗೋಧಿ, ಅಕ್ಕಿ, ಹತ್ತಾರು ಬಗೆಯ ಉಂಡೆಗಳು, ಸೀರೆ, ಕುಪ್ಪಸ, ಮಕ್ಕಳ ಬಟ್ಟೆಗಳು, ಹೊಲಿಗೆಗೆ ತಗಲುವ ಖರ್ಚು ಇತ್ಯಾದಿ ವಸ್ತುಗಳು ತುಂಬಿರುತ್ತವೆ. ಹುಟ್ಟಿದ ಮನೆಯ ಆಸ್ತಿಪಾಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಭಾಗ ಇರದ ಕಾಲದಲ್ಲಿ, ಅವರ ಸಮಾಧಾನಕ್ಕಾಗಿ ಈ ಪದ್ಧತಿ ರೂಪುಗೊಂಡಿರಬೇಕು. ಅಲ್ಲದೇ ಮಿಗಿಲಾಗಿ ಅಣ್ಣ ತಂಗಿ, ಅಕ್ಕ, ತಮ್ಮ ಇವರುಗಳ ನಡುವೆ ಮಧುರ ಬಾಂಧವ್ಯ ಏರ್ಪಡಲು ಈ ಆಚರಣೆ ಸಹಕಾರಿಯಾಗಿದೆ.

ಹೆಣ್ಣನ್ನು ಕರೆತರುವಾಗ ಗಂಡಿನ ಮನೆಯವರು ಕಾಯಿಕೊಟ್ಟು ಕರೆ ತರಬೇಕೆಂದು ನಿಯಮವಿದೆ. ಹೆಣ್ಣನ್ನು ಕರೆತರುವಾಗ ‘ಹೆಡಿಗೆ’ ಮಾಡಿಕೊಂಡು ಹೋಗಬೇಕು. ಹೆಡಿಗೆಯಲ್ಲಿ, ಲೆಕ್ಕದ ಪ್ರಕಾರ ಅಡಿಕೆ, ಎಲೆ, ಕೈ ಹೋಳಿಗೆ ಎನ್ನುವ ಪುಟ್ಟ ಹೋಳಿಗೆ, ಉಂಡೆಗಳು, ದಿನಸಿವಸ್ತುಗಳು, ಬಗೆ ಬಗೆಯ ಹಣ್ಣುಗಳು, ಕುಪ್ಪಸ, ಸೀರೆ ಇತ್ಯಾದಿಗಳನ್ನು ತುಂಬಿರುತ್ತದೆ. ಮೇಲಿನ ಎಲ್ಲಾ ವಸ್ತುಗಳನ್ನು ಜೋಡಿಯಾಗಿ ಇರಿಸಲಾಗಿರುತ್ತದೆ. ಒಂದನ್ನು ಹೆಣ್ಣಿನ ಮನೆಯವರಿಗೆ ನೀಡಿ, ಇನ್ನೊಂದು ಗಂಟನ್ನು ತಾವು ತರುತ್ತಾರೆ. ಇದು ಕೇವಲ ಗುರುತಿಗಾಗಿ ಮಾಡುವ ಪದ್ಧತಿ. ಈ ಪದ್ಧತಿ ಮದುವೆಯಾದ ಮೊದಲ ವರ್ಷದಲ್ಲಿ ನಡೆಯುತ್ತದೆ. ಹೆಡಿಗೆ ತುಂಬಿ ಬಂದ ಹೋಳಿಗೆ ಇಲ್ಲವೆ ಕರಿಗಡುಬನ್ನು ಊರಿನ ಪ್ರತಿ ಮನೆಗೆ ಹಂಚುವ ಪದ್ಧತಿ ಇದೆ. ಗಂಡನ ಮನೆಯಿಂದ ಹೆಣ್ಣನ್ನು ತವರಿಗೆ ಕರೆದುಕೊಂಡು ಹೋಗುವಾಗಲೂ ಹೆಣ್ಣಿನವರು ಪೆಟ್ಟಿಗೆ ನೀಡಿ ಕರೆದುಕೊಂಡು ಹೋಗಬೇಕು. ಗೌರಿ ಹಬ್ಬಕ್ಕೆ ಮೊದಲೇ ಗಂಡಿನ ಮನೆಯಲ್ಲಿರುವ ಹೆಣ್ಣನ್ನು ಕರೆ ತರುವಾಗ ಈ ಪದ್ಧತಿಯನ್ನು ಮಾಡುತ್ತಾರೆ. ಅಂದು ಹುಡುಗಿಯಿಂದ ಕೊಡ ಹೊರಿಸುವ ಶಾಸ್ತ್ರ ಮಾಡಿಸಿ, ತವರಿಗೆ ಕರೆದುಕೊಂಡು ಬರುತ್ತಾರೆ. ಪೆಟ್ಟಿಗೆಯಲ್ಲಿ ಚಕ್ಕುಲಿ, ಕರ್ಜಿಕಾಯಿ, ಗಂಧ, ಹಂಗಿನೂಲು, ಅಕ್ಕಿಕಾಳು, ನೆನೆಸಿದ ಕಡ್ಲೆಕಾಳು, ಪೂಜಾವಸ್ತುಗಳು, ಎಲೆ, ಅಡಿಕೆ, ಹತ್ತಾರು ಬಗೆಯ ಉಂಡೆಗಳು, ಉಡಿ ತುಂಬುವ ಹೊತ್ತಿನಲ್ಲಿ ಇರುವವರಿಗೆ ನೀಡಲು ಬೇಕಾಗುವ ಬಾಳೆಹಣ್ಣುಗಳು, ಸೀರೆ, ಕುಪ್ಪಸ, ಇತ್ಯಾದಿಗಳೆಲ್ಲ ತುಂಬಿಕೊಂಡಿರುತ್ತವೆ.