ಹೋಳಿ ಹಬ್ಬದಲ್ಲಿ ವಿಕೃತ ರಾಕ್ಷಸ ವೇಷ ಧರಿಸುವ ವ್ಯಕ್ತಿಯನ್ನು ಕಳಬೇಡ ಎಂದು ಕರೆಯಲಾಗಿದೆ. ಇದು ಒಂದು ಆಚರಣಾತ್ಮಕ ಕುಣಿತವಾಗಿ ನಡೆಯುತ್ತದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಪ್ರತಿ ವರ್ಷ ಕಾಮನ ಹಬ್ಬದಂದು ಕಳಬೇಡ ನೃತ್ಯವನ್ನು ಕಾಣಬಹುದು.

ಕೆಂಪು ಬಣ್ಣದ ಮುಖ, ದಪ್ಪನೆಯ ಮೀಸೆ, ದಪ್ಪನೆ ತೀಡಿದ ಹುಬ್ಬು, ಕಣ್ಣಿನ ಸುತ್ತ ಬಣ್ಣದಿಂದ ಅಲಂಕರಿಸುತ್ತಾರೆ. ಸೊಂಟ ಹಾಗೂ ಕಾಲಿಗೆ ಗೆಜ್ಜೆಯನ್ನು ಕಟ್ಟಿಕೊಂಡ ಆತನನ್ನು ನಾಲ್ಕು ಜನ ಹಗ್ಗದಿಂದ ಕಟ್ಟಿ ಹಗ್ಗದ ತುದಿಯನ್ನು ಹಿಡಿದು ನಿಯಂತ್ರಿಸುತ್ತಿ ರುತ್ತಾರೆ. ಕಳಬೇಡನ ತಲೆಗೆ ನಾರಿನಿಂದ ಮಾಡಿದ ಜಡೆಯನ್ನು ಕಟ್ಟಿರುತ್ತಾರೆ. ಕೆಂಪು ಹಾಳೆಯ ಉದ್ದನೆಯ ನಾಲಿಗೆ, ಕೈಯಲ್ಲಿ ಕಟ್ಟಿಗೆ ಖಡ್ಗ ಹಿಡಿದು ಭಯಂಕರನಾಗಿ ಕಾಣುತ್ತಾನೆ. ಆವೇಶ, ಆರ್ಭಟದಿಂದ ಕಳಬೇಡ ಮುನ್ನುಗ್ಗುತ್ತಾನೆ. ಜನಸಂದಣಿ ಯಲ್ಲಿ ನಡೆಯುವ ಕಳಬೇಡ ಬಾಗಿದವರ ಬೆನ್ನ ಮೇಲೆ ಹೆಜ್ಜೆ ಇಟ್ಟು ನಡೆಯುತ್ತಾನೆ. ಕಳಬೇಡ ವೇಷಧಾರಿ ಪ್ರತಿಯೊಂದು ಕಾಮನ ಕಟ್ಟೆಗೆ ಭೇಟಿ ನೀಡುವುದು ಸಂಪ್ರದಾಯ. ಕಾಮದಹನದ ಹಿಂದಿನ ದಿನ ರಾತ್ರಿಯೆಲ್ಲಾ ಕಳಬೇಡನ ಕುಣಿತವಿರುತ್ತದೆ. ಅಲ್ಲದೆ  ಅಂದು ನಗೆ ತರಿಸುವ ಹತ್ತಾರು ಸೋಗುಗಳು ಪ್ರದರ್ಶನಗೊಳ್ಳುತ್ತವೆ.

ಕಾಮದಹನ ನಡೆದ ನಂತರ ಧಗಧಗಿಸುವ ಕೆಂಡವನ್ನು ಸಂಗ್ರಹಿಸುತ್ತಾರೆ. ಈ ಕೆಲಸದಲ್ಲಿ ಹುಡುಗರು ಮತ್ತು ಗೃಹಿಣಿಯರು ನಿರತರಾಗಿರುತ್ತಾರೆ. ಸಂಗ್ರಹಿಸಿ ತಂದ ಕೆಂಡದಿಂದ ಮನೆಯ ಅಂಗಳದಲ್ಲಿ ಕಡಲೆ ಸುಟ್ಟು ತಿಂದರೆ ಒಳಿತೆಂದು ನಂಬುತ್ತಾರೆ. ಅಲ್ಲದೆ ಅದೇ ಬೆಂಕಿಯಿಂದ ಮನೆಯೊಳಗೆ ಒಲೆ ಹೊತ್ತಿಸಿ ಹೋಳಿಗೆ ಮಾಡಿ ತಿನ್ನುತ್ತಾರೆ. ಕಾಮದಹನದ ಬೂದಿಯನ್ನು ಸಂಗ್ರಹಿಸಿ ರೈತರು ತಮ್ಮ ಹೊಲಗಳಿಗೆ ಹಾಕುತ್ತಾರೆ. ಕಾಮಬೂದಿಯನ್ನು ಹೊಲಕ್ಕೆ ಹಾಕುವುದರಿಂದ ಉತ್ತಮ ಫಸಲು ಬರುತ್ತದೆಂದು ನಂಬುತ್ತಾರೆ.