ಕರಡಿಕಾನು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದಿಂದ ಜೋಗ್‌ಫಾಲ್ಸ್‌ಗೆ ಹೋಗುವ ದಾರಿಯ ನಡುವೆ ಇರುವ ಸ್ಥಳ. ಕರಡಿಕಾನು ಭೂತಪ್ಪನೆಂದೇ ಹೆಸರಾಗಿರುವ ದೈವಕ್ಕೆ ಕಲ್ಲಿನದೇ ನೈವೇದ್ಯ. ನಿತ್ಯವೂ ಪೂಜೆಗೆ ಒಳಗಾಗುವ ಈ ದೈವಕ್ಕೆ ಯಾವುದೇ ಜಾತ್ರೆ ನಡೆಯುವುದಿಲ್ಲ. ಹೆದ್ದಾರಿಯ ಪಕ್ಕದಲ್ಲಿರುವ ದೈವಕ್ಕೆ ಗುಡಿಯು ಇಲ್ಲ. ಎರಡು ಕಲ್ಲು ಕಂಬಗಳ ಮೇಲೆ ಕಲ್ಲಿನ ತೊಲೆ ಇದ್ದು, ಆ ತೊಲೆಗೆ ಗಂಟೆಗಳನ್ನು ಭಕ್ತರು ನೇತು ಹಾಕಿದ್ದಾರೆ. ದಿನವೂ ಸಿದ್ಧಾಪುರದಿಂದ ಜೋಗ್‌ಫಾಲ್ಸ್‌ಗೆ ಹೋಗಿ ಬರುವ ವಾಹನಗಳ ಚಾಲಕರು ಹಾಗೂ ನಿರ್ವಾಹಕರು ಕೈಮುಗಿದು ಮುಂದುವರೆಯುವುದು ವಾಡಿಕೆ. ಕಲ್ಲು ಮತ್ತು ಇಟ್ಟಿಗೆ ಸಾಗಿಸುವ ವಾಹನಗಳು ದೈವಕ್ಕೆ ಕಲ್ಲು ಅಥವಾ ಇಟ್ಟಿಗೆಯನ್ನು ಕಾಣಿಕೆ ನೀಡಿಯೇ ಮುಂದುವರಿಯಬೇಕು.

ಕಲ್ಲು ಅಥವಾ ಇಟ್ಟಿಗೆ ಸಾಗಿಸುವ ಮಾಲೀಕರು ಮಾರ್ಗ ಮಧ್ಯೆ ತಮ್ಮ ವಾಹನ ಹಾಗೂ ಸಿಬ್ಬಂದಿಗೆ ತೊಂದರೆಯಾಗದಂತೆ ಹರಕೆ ಹೊತ್ತುಕೊಳ್ಳುತ್ತಾರೆ. ಹರಕೆಯಂತೆ ಕಲ್ಲನ್ನೋ ಇಟ್ಟಿಗೆಯನ್ನೋ ಕಾಣಿಕೆಯಾಗಿ ಅರ್ಪಿಸಿ ಮುಂದು ವರೆಯುತ್ತಾರೆ. ಈ ಮಾರ್ಗದಲ್ಲಿ ಚಲಿಸುವ ಅಕ್ಕಿ, ಕಾಯಿ, ಬೇಳೆ ಇತ್ಯಾದಿ ಸರಕು ತುಂಬಿದ ವಾಹನ ಚಾಲಕರು ದೈವಕ್ಕೆ ಏನನ್ನೂ ಅರ್ಪಿಸು ುದಿಲ್ಲ. ಅವರು ದೈವಕ್ಕೆ ಕೈಮುಗಿದು ಕಾಪಾಡಪ್ಪ ಎಂದು ಹೇಳಿ ಕೊಳ್ಳುತ್ತಾರೆ.