ದಕ್ಷಿಣ ಕರ್ನಾಟಕದ ಕೃಷಿಸಂಬಂಧೀ ಆಚರಣೆ. ಬೆಳೆಯನ್ನು ರೋಗರುಜಿನಗಳಿಂದ ರಕ್ಷಿಸಿಕೊಂಡು ಉತ್ತಮ ಇಳುವರಿ ಬರುವಂತೆ ಪ್ರಾರ್ಥಿಸಲು ಕರಿಭಂಟನ ಮೊರೆಹೋಗುತ್ತಾರೆ. ಪ್ರತಿವರ್ಷ ಶ್ರಾವಣಮಾಸದ ಹುಬ್ಬೇ – ಉತ್ತರೆ ಮಳೆಗಳ ನಡುವೆ ಈ ಆಚರಣೆಯನ್ನು ಮಾಡುತ್ತಾರೆ. ಇದೊಂದು ಊರೊಟ್ಟಿನ ಆಚರಣೆ. ಹುಬ್ಬೇ ಮಳೆ ಆರಂಭದ ಮುನ್ನ ಊರಿನ ರೈತರೆಲ್ಲ ಸೇರಿ ‘ಕರಿಭಂಟ’ ಆಚರಣೆಯ ದಿನವನ್ನು ಗೊತ್ತುಮಾಡುತ್ತಾರೆ. ಕರಿಭಂಟ ಹೇಗೆ ಕೃಷಿ ದೈವವಾಗಿ ಆರಾಧನೆಗೊಳ್ಳುತ್ತಿದ್ದಾನೆ ಎನ್ನುವುದಕ್ಕೆ ಮೌಖಿಕ ಇತಿಹಾಸವಿದೆ.

ಮಾರಭೂಪ ಮತ್ತು ಬಲವಂತ ದೇವಿಯ ಒಬ್ಬನೇ ಮಗ ಕರಿಭಂಟ. ತಂದೆಯು ತೀರಿದ ನಂತರ ತಾಯಿಯ ಆರೈಕೆಯಲ್ಲಿ ಬೆಳೆಯುತ್ತಾನೆ. ಮಾವನಾದ ಬಲ್ಲಾಳನು ತನ್ನ ಮಗಳನ್ನು ಮದುವೆ ಮಾಡಿಕೊಡುತ್ತೇನೆಂದು ಕರೆಕಳುಹಿಸುತ್ತಾನೆ. ಆ ಸಂದರ್ಭದಲ್ಲಿ ತಾಯಿ ಅನೇಕ ಕೆಟ್ಟ ಸ್ವಪ್ನಗಳನ್ನು ಕಂಡು, ಮಗನನ್ನು ಪ್ರಯಾಣ ಹೊರಡದಂತೆ ತಡೆಯುತ್ತಾಳೆ. ಆದರೆ ಧೈರ್ಯ ಮಾಡಿ  ಮಗ ತಾಯಿಯನ್ನು ಒಪ್ಪಿಸಿ, ತಾನೊಬ್ಬನೇ ಪ್ರಯಾಣ ಹೊರಡುತ್ತಾನೆ. ದಾರಿಯಲ್ಲಿ ಆದ ಅಪಶಕುನಗಳನ್ನು ಲೆಕ್ಕಿಸದೇ ಕಾಡಿನಲ್ಲಿ ಮುನ್ನಡೆಯುತ್ತಾನೆ. ಹಾಗೆ ಮುಂದೆ ಹೋಗುತ್ತಿದ್ದ ಕರಿಭಂಟನ ರೂಪಕ್ಕೆ ಮಾರುಹೋದ ಉದ್ದಂಡಿ ರಾಕ್ಷಿಸಿಯ ಮಗಳಾದ ಪುಂಡರೀಕಾಕ್ಷಿ ಆತನನ್ನು ಮೋಹಿಸಿ, ತನ್ನ ಪ್ರೇಮಪಾಶದಲ್ಲಿ ಸೆರೆಹಿಡಿದು, ಆತನೊಂದಿಗೆ ಸೇರುತ್ತಾಳೆ. ಈ ವಿಚಾರ ತಾಯಿಗೆ ತಿಳಿದು ಆರಾಧ್ಯ ಕರಿಭಂಟನನ್ನು ಮುಗಿಸಲು ಹೊರಡುತ್ತಾಳೆ. ಅದನ್ನು ತಿಳಿದ ಪುಂಡರೀಕಾಕ್ಷಿ ಕರಿಭಂಟನನ್ನು ಹಲ್ಲಿಯನ್ನಾಗಿಸಿ ರಕ್ಷಿಸುತ್ತಾಳೆ. ಉಂಡು ಸುಖವಾಗಿ ನಿದ್ರಿಸುತ್ತಿದ್ದ ತನ್ನ ತಮ್ಮ ಬೊಮ್ಮನನ್ನೇ ಕರಿಭಂಟನೆಂದು ಭಾವಿಸಿದ ಉದ್ದಂಡಿ, ಆತನ ಎದೆ ಬಗೆದು ರಕ್ತ ಕುಡಿಯುತ್ತಾಳೆ. ಹೇಗಾದರೂ ಮಾಡಿ ತನ್ನ ಪ್ರಿಯಕರನನ್ನು ತನ್ನ ತಾಯಿಯಿಂದ ರಕ್ಷಿಸಬೇಕೆಂದು ಪುಂಡರೀಕಾಕ್ಷಿ ಆತನಿಗೆ ಮೂರು ಮಂತ್ರಿಸಿದ ಉಂಡೆಗಳನ್ನು ಕೊಟ್ಟು, ಅವುಗಳಿಂದ ಹೇಗೆ ಮುಂದಿನ ಗಂಡಾಂತರಗಳಿಂದ ಪಾರಾಗುವುದನ್ನು ತಿಳಿಸಿ, ಕಳುಹಿಸುತ್ತಾಳೆ.

ಇದನ್ನೆಲ್ಲ ತಿಳಿದ ಉದ್ದಂಡಿ ಕರಿಭಂಟನನ್ನು ಬೆನ್ನು ಹತ್ತುತ್ತಾಳೆ. ಆಗ ಮಂತ್ರದ ಉಂಡೆಗಳನ್ನು ಅವಳ ಕಡೆ ಎಸೆದಾಗ ದೊಡ್ಡ ಬಯಲಾಗುತ್ತದೆ. ಇನ್ನೊಂದು ನದಿಯಾಗುತ್ತದೆ. ಹಾಗಾಗಿ ಮೂರನೆಯದು ಉರಿವ ಬೆಂಕಿಯಾಗಿಯೂ ಸೃಷ್ಟಿಯಾಗಿ ಅವನನ್ನು ರಾಕ್ಷಿಸಿಯಿಂದ ರಕ್ಷಿಸುತ್ತವೆ. ನಂತರ ಪಕ್ಕದ ಹಳ್ಳಿಯತ್ತ ಬರುತ್ತಾನೆ. ಅದೇ ಸಮಯದಲ್ಲಿ ಯಾವುದೋ  ನ್ಯಾಯ ಮಾಡಲು ಏಳೂರಿನ ಜನ ಮತ್ತು ಪಂಚರು ಸೇರಿರುತ್ತಾರೆ. ಅದನ್ನೇ ಉಪಯೋಗಿಸಿಕೊಂಡ ಉದ್ದಂಡಿ ಬಾಣಂತಿಯ  ರೂಪ ತಾಳುತ್ತಾಳೆ. ಮಗುವನ್ನು ಎತ್ತಿಕೊಂಡು ‘ಗಂಡ ನನ್ನನ್ನು ಈ ಸ್ಥಿತಿಯಲ್ಲಿ ಬಿಟ್ಟು ಹೋಗುತ್ತಿದ್ದಾನೆ’ ಎಂದು ಪಂಚರಿಗೆ ದೂರು ಸಲ್ಲಿಸುತ್ತಾಳೆ. ಮಾಯಾವಿ, ಮೋಸಗಾರ್ತಿ ಇವಳ ಮಾತನ್ನು ನಂಬಿ ನನ್ನ ಜೀವ ತೆಗೆಯಬೇಡಿ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ. ಕರಿಭಂಟನ ಮಾತನ್ನು ಗಂಭೀರವಾಗಿ  ಪರಿಗಣಿಸದೇ ನಿನ್ನ ಜೀವಕ್ಕೆ ನಾವೇ ಜವಾಬ್ದಾರರು ಎಂದು ಭರವಸೆ ನೀಡಿ ಅಂದು ರಾತ್ರಿ ಗುಡಿಯಲ್ಲಿಯೇ ವಾಸ್ತವ್ಯಕ್ಕೆ ಅನುವು ಮಾಡಿಕೊಡುತ್ತಾರೆ.

ಊರೆಲ್ಲ ಮಲಗಿ ನಿದ್ರಿಸುವಾಗ ಬಾಣಂತಿ ರೂಪದಲ್ಲಿದ್ದ ಉದ್ದಂಡಿ ಕರಿಭಂಟನ ಎದೆ ಬಗೆದು ರಕ್ತ ಕುಡಿಯುತ್ತಾಳೆ. ಕರಿಭಂಟನ ದೇಹವನ್ನು ಏಳುಪಾಲು ಮಾಡಿ, ಪಂಚರಿಗೆ ಅದನ್ನು ತಿನ್ನಬೇಕೆಂದೂ ತಿನ್ನದಿದ್ದರೆ ನಿಮ್ಮ ಪೈರುಗಳನ್ನು ನಾಶ ಮಾಡುವೆನೆಂದು ಕೂಗಿ ಹೇಳಿ ಅಲ್ಲಿಂದ ಮಾಯವಾಗುತ್ತಾಳೆ. ಕರಿಭಂಟನ ಮಾತನ್ನು ನಂಬದೇ ಆದ ಅನಾಹುತಕ್ಕೆ ಮರುಗಿದ ಏಳೂರಿನ ಪಂಚರು ಅಗ್ನಿ ಕೊಂಡವನ್ನು ನಿರ್ಮಿಸುತ್ತಾರೆ. ಕರಿಭಂಟನ ದೇಹದ ಏಳುಪಾಲನ್ನು ಕೊಂಡಕ್ಕೆ ಹಾಕಿದ ಏಳೂರಿನ ಪಂಚರು ತಾವು ಅಗ್ನಿ ಪ್ರವೇಶ ಮಾಡುತ್ತಾರೆ.

ಪುಂಡರೀಕಾಕ್ಷಿ ಕೊಂಡಕ್ಕೆ ಹಾರಿ ಪ್ರಾಣಬಿಡುತ್ತಾಳೆ. ವಿಷಯ ತಿಳಿದ ಕರಿಭಂಟನ ಮಾವನ ಮಗಳು ಧರಣೀ ಮೋಹಿನಿ ಅಗ್ನಿ ಪ್ರವೇಶಕ್ಕೆ ಸಿದ್ಧತೆ ನಡೆಸುವಾಗ ಶಿವ ಪ್ರತ್ಯಕ್ಷನಾಗಿ ಎಲ್ಲರನ್ನೂ ಬದುಕಿಸುತ್ತಾನೆ. ರಾಕ್ಷಸಿ ನಿಮ್ಮ ಪೈರು ಪಚ್ಚೆಗಳನ್ನು ಹಾಳು ಮಾಡಿದ್ದಾಳೆ. ನಾನು ಕರಿಭಂಟನ ಗಿಡವಾಗಿ ನಿಮ್ಮ ಬೆಳೆಗಳನ್ನು ರಕ್ಷಿಸುತ್ತೇನೆ ಎಂದು ಕರಿಭಂಟ ಅಭಯ ನೀಡುತ್ತಾನೆ. ಹಬ್ಬದಂದು ಊರಿನ ರೈತರೆಲ್ಲ ಸೇರಿ ಊರಿನ ಕುಂಬಾರ, ಕಮ್ಮಾರ ಹಾಗೂ ಅಗಸರ ಮನೆಗಳ ಬೂದಿಯನ್ನು ಸಂಗ್ರಹಿಸಿ ಊರಿನ ಮಧ್ಯೆ ಪಚ್ಚಾಡಿ ಎಂಬ ಸಸ್ಯದ ಕೊಂಬೆಗಳಿಂದ ಚಪ್ಪರವನ್ನು ಪೂರ್ವ ದಿಕ್ಕಿಗೆ ಬಾಗಿಲಲ್ಲಿ ಇರುವಂತೆ ನಿರ್ಮಿಸುತ್ತಾರೆ. ಚಪ್ಪರ ಕೆಳಗೆ ಬೂದಿಯಿಂದ ರಾಕ್ಷಸಿಯ ಚಿತ್ರ ಬರೆಯುತ್ತಾರೆ. ಮಿಶ್ರ ಮಾಡಿದ ನವಧಾನ್ಯಗಳ ನಾಲ್ಕು ಗಂಟುಗಳನ್ನು ಅರಿಶಿಣ ಬಟ್ಟೆಯಲ್ಲಿ ಚಪ್ಪರದ ನಾಲ್ಕು ಕಾಲಿಗೂ ಕಟ್ಟುತ್ತಾರೆ. ರಾಕ್ಷಸಿಯ ಹೊಟ್ಟೆ ಭಾಗವನ್ನು ರಂಧ್ರ ಮಾಡಿ ಪಚ್ಚಾಡಿ ಕೊಂಬೆಯನ್ನು ನೆಡುತ್ತಾರೆ. ಪಚ್ಚಾಡಿ ಮರದ ಔಷಧೀ ಗುಣವೇ ಅದನ್ನು ದೈವಕ್ಕೇರಿಸಿದೆ. ಚಪ್ಪರದಲ್ಲಿ ನೆಟ್ಟ ಪಚ್ಚಾಡಿ ಕೊಂಬೆಗೆ ತಾಗಿದಂತೆ ಕಾಡುಕಲ್ಲುಗಳನ್ನು ಇಟ್ಟು, ಹೂ,ಹಾರಗಳಿಂದ ಶೃಂಗರಿಸಿ, ಹಳದಿ, ಕುಂಕುಮಗಳನ್ನು ಬಳಿದು, ಕುರಿ ಅಥವಾ ಕೋಳಿಗಳನ್ನು ಬಲಿ ನೀಡುತ್ತಾರೆ. ಆಗಲೇ ಕತ್ತರಿಸಿ ಸಂಗ್ರಹಿಸಿದ ಬೆಳೆಯ ರಾಗಿಯ ಪೈರಿನೊಂದಿಗೆ ವೀಳ್ಯ ಮಾಡಿದ ಫಲಗಳು ಅನ್ನದ ರಾಶಿ, ಅಸರ, ಕಮ್ಮಾರರ ಹಾಗೂ ಕುಂಬಾರರ ಮನೆಗಳ ಮಿಶ್ರ ಮಾಡಿದ ಬೂದಿರಾಶಿ ಹಾಗೂ ಪಚ್ಚಾಡಿ ಮರದಿಂದ ಕತ್ತರಿಸಿ ತಂದ ಕೊಂಬೆಗಳ ರಾಶಿಗಳ ಮೇಲೆ ಬಲಿಯಾದ ಪ್ರಾಣಿಗಳ ರಕ್ತವನ್ನು ಸಿಂಪಡಿಸುತ್ತಾರೆ.

ಪೂಜೆ ಮುಗಿಸಿ ನಂತರ ಒಬ್ಬೊಬ್ಬರು ಒಂದೊಂದು ರಾಶಿಯಿಂದ ವಸ್ತುಗಳನ್ನು ಹಿಡಿದು ಹೊಲದ ಕಡೆ ಬಲಿಯೇ ಬಲಿ ಒಂದು ಕೂಗುತ್ತಾ ಬಿಡುತ್ತಾರೆ. ಹೊಲದ ಮಧ್ಯೆ ಪಚ್ಚಾಡಿ ಕೊಂಬೆಯನ್ನು ನೆಟ್ಟು, ರಕ್ತಮಿಶ್ರಿತ ರಾಗಿ ಹುಲ್ಲನ್ನು ಎರಚಿ, ಮೂರು ದಾರಿ  ಸಂಧಿಸುವಲ್ಲಿ ಬೂದಿಯಿಂದ ರಾಕ್ಷಸಿಯ ಚಿತ್ರ ಬಿಡಿಸುತ್ತಾರೆ. ನಂತರ ರೈತರು ತಮ್ಮ ತಮ್ಮ ಹೊಲಗಳಿಗೆ ಪಚ್ಚಾಡಿ ಕೊಂಬೆಗಳನ್ನು ನೆಟ್ಟು ಬರುತ್ತಾರೆ.

ಕರಿಭಂಟನ ಆಚರಣೆಯನ್ನು ಹೋಲುವ ಬೆರ್ಚಪ್ಪನ ಪೂಜೆ ತುಮಕೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಣಬಹುದು. ಅಲ್ಲದೆ ‘ಹಸಿರು ಬಲಿ’ ಎನ್ನುವ ಆಚರಣೆಯ ಕನಕಪುರ ತಾಲೂಕಿನ  ಅಂಚಿನ ಭಾಗಗಳಲ್ಲಿ ಪ್ರಚಲಿತವಿದೆ. ಈ ಆಚರಣೆಯಲ್ಲಿ ಕೀಟ ನಿಯಂತ್ರಣದ ಆಶಯವಿದೆ. ಈ ಹಿನ್ನೆಲೆಯಲ್ಲಿ ಕರಿಭಂಟ ಮೌಖಿಕ ಸಾಹಿತ್ಯದಲ್ಲಿ ಧೀರ ಹಾಗೂ ಆದರ್ಶವೀರನಾಗಿ ಚಿತ್ರಿಸಲಾಗಿದೆ. ಹೊಲಗದ್ದೆಗಳನ್ನು ರೋಗರುಜಿನಾದಿಗಳಿಂದ ರಕ್ಷಿಸುತ್ತಾನೆಂದು ಕೃಷಿಕರು ನಂಬುತ್ತಾರೆ.