ಕುಂಬಾರ ಮನೆಯ ಕರಿಬೂದಿಯಿಂದ ರಚಿಸಿದ ‘ದೀಪಸ್ತಂಭ’ದ ಆಕಾರದ ರಂಗೋಲಿ. ದೀಪಾವಳಿ ಅಮವಾಸ್ಯೆಯಂದು ಉತ್ತರ ಕರ್ನಾಟಕದ ಕೊಪ್ಪಳ ಹಾಗೂ ಸುತ್ತಲಿನ ಭಾಗಗಳಲ್ಲಿ ಆಚರಣೆಗೊಳ್ಳುತ್ತದೆ. ಜೋಳ, ನವಣೆ, ಸಜ್ಜೆ ಇತ್ಯಾದಿ ಧಾನ್ಯಗಳನ್ನು ತುಂಬಿಕೊಂಡು ಕುಂಬಾರರ ಮನೆಗೆ ಹೋಗುತ್ತಾರೆ. ಧಾನ್ಯಗಳನ್ನು ಕುಂಬಾರ ಹೆಂಗಸರ ಉಡಿಗೆ ಹಾಕುತ್ತಾರೆ. ಅದಕ್ಕೆ ಪ್ರತಿಯಾಗಿ ಕುಂಬಾರರ ಹೆಂಗಸು ಮನೆಯ ಕರಿಬೂದಿಯನ್ನು ಬುಟ್ಟಿಗೆ ಹಾಕುತ್ತಾಳೆ. ಕರಿಬೂದಿಯನ್ನು ತುಂಬಿಸಿಕೊಂಡು ಆಗಲೇ ಸಾರಿಸಿ ಶುಚಿಗೊಳಿಸಿದ ಎಲ್ಲಾ ಮನೆ ಅಂಗಳದಲ್ಲಿಯೂ ಕರಿಮಣ್ಣಿನಿಂದ ದೀಪಸ್ತಂಭದ ರಂಗೋಲಿ ಬರೆಯುತ್ತಾರೆ. ಅಲ್ಲದೆ ದೇವಸ್ಥಾನ, ಮನೆಯ ಬಾಗಿಲು, ಶಾಲೆ ಇತ್ಯಾದಿ ಕಡೆಗಳಲ್ಲಿ ರಂಗೋಲಿ ಹಾಕುತ್ತಾರೆ. ರಂಗೋಲಿಗಳನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಿ, ಅರಿಶಿಣ-ಕುಂಕುಮಗಳ ತಿಲಕವಿರಿಸಿ, ಆರತಿ ಮಾಡುತ್ತಾರೆ.

ಸಂಜೆಯ ವೇಳೆ ರಂಗೋಲಿಯ ಕರಿಮಣ್ಣನ್ನು ಸಂಗ್ರಹಿಸಿ ಹೊಲಗಳಿಗೆ ಹಾಕುತ್ತಾರೆ. ಹೀಗೆ ಮಾಡುವುದರಿಂದ ಬೆಳೆ ಚೆನ್ನಾಗಿ ಬೆಳೆಯುತ್ತದೆಂದು ನಂಬುತ್ತಾರೆ. ಕರಿಮಣ್ಣಿನಲ್ಲಿ ಬೆರೆತ ಅರಿಶಿಣ, ಕುಂಕುಮ, ಬಿಲ್ವಪತ್ರೆ ಇತ್ಯಾದಿ ಕ್ರಿಮಿನಾಶಕ ಶಕ್ತಿಯುಳ್ಳ ವಸ್ತುಗಳಿಂದ ಬೆಳೆಗೆ ಕೀಟ ಬಾಧೆ ಇಲ್ಲವಾಗಿ, ಬೆಳೆ ಹುಲುಸಾಗಿ ಬೆಳೆದು, ಒಳ್ಳೆಯ ಫಲ ಬರುವುದು ಸತ್ಯಕ್ಕೆ ಹತ್ತಿರವಾದ ವಿಚಾರವಾಗಿದೆ.

ಕಥೆಯೊಂದರ ಪ್ರಕಾರ ದೀಪಾವಳಿ ಅಮವಾಸ್ಯೆಯ ದಿನ ಪತಿವ್ರತೆಯೊಬ್ಬಳು ಮನೆ ಒಳಗೆ ಲಕ್ಷ್ಮಿ ಪೂಜೆ ಮಾಡುತ್ತಿದ್ದಳಂತೆ. ಪೂಜೆಗೆ ಯಾವುದೇ ಬಗೆಯ ವಿಘ್ನ ಬರಬಾರದೆಂದು ಬಾಗಿಲು ಮುಂದೆ  ‘ಕರಿ’ಯ ಹಾಗೂ ‘ಮಂಠ’ ಎಂಬ ದೂತರನ್ನು ನಿಲ್ಲಿಸಿ, ಬಾಗಿಲು ಕಾಯಲು ನೇಮಿಸಿದಳಂತೆ. ಲಕ್ಷ್ಮಿ ಪೂಜೆಯನ್ನು ನೋಡಲು ಸಾಕ್ಷಾತ್ ಲಕ್ಷ್ಮೀಯೆ ಬಂದಳಂತೆ. ಆದರೆ ಲಕ್ಷ್ಮೀಯನ್ನು ದೂತರು ತಡೆದರಂತೆ. ಅದಕ್ಕೆ ಕೋಪಗೊಂಡ ಲಕ್ಷ್ಮೀ, ಅವರ ತಲೆ ಕಡಿದು, ಶಾಪ ಕೊಟ್ಟಳಂತೆ. ಅದನ್ನು ತಿಳಿದ ಪತಿವ್ರತೆಯೂ ಕಣ್ಣೀರು ಹಾಕಿದಳಂತೆ. ಗಣಪತಿಯ ತಲೆಯನ್ನು ಶಿವ ಕಡಿದ ಕಥೆಯನ್ನು ನೆನಪಿಗೆ ತರುತ್ತದೆ. ಈ ಹಿನ್ನೆಲೆಯಲ್ಲಿ ಕರಿಮಂಠ ಪೂಜೆ ಹುಟ್ಟಿದೆ ಎಂದು ಹೇಳಲಾಗಿದೆ. ಲಕ್ಷ್ಮಿದೇವಿ ಪೂಜೆಯ ದಿನ ಕರಿಮಂಠದ ರಂಗೋಲಿ ಇದ್ದರೆ ಪೂಜೆಗೆ ವಿಘ್ನ ಬರುವುದಿಲ್ಲವೆಂದು ನಂಬಲಾಗುತ್ತದೆ.