ವಹ್ನಿ ಕುಲದವರು ಕಳಸ ಹೊತ್ತು ನೃತ್ಯ ಮಾಡುತ್ತಾ ದೇವರ ಹರಕೆ ಒಪ್ಪಿಸುವ ಆಚರಣೆ. ಪ್ರತಿ ವರ್ಷದ ಏಪ್ರಿಲ್ ತಿಂಗಳ ಚೈತ್ರ ಹುಣ್ಣಿಮೆಯಂದು ಕರಗ ಆಚರಣೆ ನಡೆಯುತ್ತದೆ. ವಹ್ನಿ ಕುಲ ಕ್ಷತ್ರಿಯರ ವಿವಿಧ ಪಂಗಡಗಳು ದ್ರೌಪದಿಯನ್ನು ಕುಲದೇವತೆಯಾಗಿ ಆರಾಧಿಸುತ್ತಾರೆ. ದ್ರೌಪದಿ ಅವರಿಗೆ ಆದಿಶಕ್ತಿ. ಅವಳ ಹೆಸರಿನಲ್ಲಿಯೇ ಕರಗ ನಡೆಸುತ್ತಾರೆ. ಬೆಂಗಳೂರಿನಲ್ಲಿ ತಿಗಳರ ಪೇಟೆಯಲ್ಲಿ ದ್ರೌಪದಿ ಹಾಗೂ ಧರ್ಮರಾಯ ಸ್ವಾಮಿ ದೇಗುಲಗಳಿವೆ. ಹಾಗೆಯೇ ವಹ್ನಿ ಕುಲ ಕ್ಷತ್ರಿಯರು ಹೆಚ್ಚಾಗಿ ವಾಸ ಮಾಡುವ ಸ್ಥಳಗಳಲ್ಲಿ ಮೇಲಿನ ಎರಡೂ ದೇವಾಲಯಗಳಿರುವುದನ್ನು ಕಾಣಬಹುದು.

ಕರಗದ ಹಿನ್ನೆಲೆಯನ್ನು ಈ ಕಥೆ ದಾಖಲಿಸಿದೆ. ಅಜ್ಞಾತವಾಸದಲ್ಲಿದ್ದ ಪಂಚ ಪಾಂಡವರು ದ್ರೌಪದಿಯನ್ನು ಗೆದ್ದಾಗ ದ್ರೌಪದಿ ತಲೆಯ ಮೇಲೆ ಕಳಸ ಧರಿಸಿದ್ದರಿಂದ ಈ ಕರಗ ಆಚರಣೆಗೆ ಬಂದಿತ್ತೆಂದು ಹೇಳಲಾಗುತ್ತದೆ. ಇನ್ನೊಂದು ಕಥೆಯ ಪ್ರಕಾರ, ಪಾಂಡವರು ರಾಜ್ಯಭಾರ ಮುಗಿಸಿ ಸ್ವರ್ಗಾರೋಹಣದ ಪಯಣ ಪ್ರಾರಂಭಿಸಿದಾಗ ದ್ರೌಪದಿ ಮಾರ್ಗ ಮಧ್ಯೆ ಎಚ್ಚರ ತಪ್ಪಿ ಬಿದ್ದಳು. ದ್ರೌಪದಿ ಸತ್ತಳೆಂದು ಭಾವಿಸಿದ ಪಾಂಡವರು ಮುಂದೆ ನಡೆದರು. ಆದರೆ ಆಕೆ ಸತ್ತಿರದೆ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಆಕೆಗೆ ಎಚ್ಚರ ಬಂದು ನೋಡಿದಾಗ ತಿಮಿರಾಸುರ ಎಂಬ ರಾಕ್ಷಸ ದೂರದಲ್ಲಿ ನಿಂತಿದ್ದ. ಆದಿಶಕ್ತಿಯ ಅವತಾರ ತಾಳಿದ ದ್ರೌಪದಿ ಆತನನ್ನು ಸಂಹರಿಸಿದಳು. ಇದರ ನೆನಪಿಗೆ ಕರಗ ನಡೆಯುತ್ತದೆಂದು ಕಥೆ ದಾಖಲಿಸಿದೆ.  ಕರಗ ಹೊರುವ ವೀರ ಕುಮಾರರು ಎಲ್ಲ ಬಗೆಯಲ್ಲಿ ಶುಚಿತ್ವವನ್ನು ಕಾಪಾಡಿಕೊಂಡಿರುತ್ತಾರೆ. ಹುಣ್ಣಿಮೆಗೆ ಒಂಭತ್ತು ದಿನ ಇರುವಾಗ ಕರಗದ ಧಾರ್ಮಿಕ ಆಚರಣೆಗಳು ಆರಂಭವಾಗುತ್ತವೆ. ಮೊದಲು ಧರ್ಮರಾಯನ ಮಂದಿರದ ಮುಂದೆ ದ್ವಜಾರೋಹಣ, ದೀಪಾರತಿ ಉತ್ಸವ, ಹಸಿ ಕರಗ, ಪೊಂಗಲು ಸೇವೆ, ಹೂವಿನ ಕರಗ, ವಸಂತೋತ್ಸವ, ಗಾವುಸೇವೆ ಇತ್ಯಾದಿಗಳು ನಡೆಯುತ್ತದೆ. ಈ ಎಲ್ಲ ವಿಧಿ ವಿಧಾನಗಳಲ್ಲಿಯ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತಾರೆ.

ಕರಗದ ಹಿಂದಿನ ದಿನದಿಂದಲೇ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಅತ್ಯಂತ ವಿಧಿವತ್ತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದ ನಂತರ ನಡುರಾತ್ರಿಯ ವೇಳೆಗೆ ಕಳಸದ ಆಕೃತಿಯ ಮಲ್ಲಿಗೆ ಹೂವಿನ ಕರಗವನ್ನು ಮುಖ ಮುಚ್ಚುವಂತೆ ತಲೆಯ ಮೇಲೆ ಹೊತ್ತ ಪೂಜಾರಿ ನರ್ತಿಸುತ್ತಾ ಗುಡಿಯಿಂದ ಹೊರಬರುತ್ತಾರೆ. ಧಾರ್ಮಿಕವಾಗಿ ಇವರು ಸಾಕ್ಷಾತ್ ಆದಿಶಕ್ತಿಯ ರೂಪ. ಖಡ್ಗವನ್ನು ಹಿಡಿದ ವೀರಕುಮಾರರು ಪೂಜಾರಿಯನ್ನು ಅನುಸರಿಸುತ್ತಾರೆ. ಆಧಿಶಕ್ತಿ ದುಷ್ಟಶಕ್ತಿಯನ್ನು ಸಂಹರಿಸಿದ ಸಂಕೇತವಾಗಿ ಕರಗ ಆಚರಣೆ ನಡೆಯುತ್ತದೆ.

ಬೆಂಗಳೂರಿನ ತಿಗಳರ ಪೇಟೆ, ಬಳೆಪೇಟೆ, ಚಿಕ್ಕಪೇಟೆ, ಅಣ್ಣಮ್ಮ ಇತ್ಯಾದಿ ದೇವಸ್ಥಾನಗಳಲ್ಲಿ ಕರಗಧಾರಿಗಳು ಸಂಚರಿಸಿ ಸೂರ್ಯೋದಯದ ವೇಳೆಗೆ ಧರ್ಮರಾಯಸ್ವಾಮಿ ಗುಡಿಗೆ ಬರುತ್ತಾರೆ. ಇಲ್ಲಿಯ ಒಂದು ವಿಶೇಷವೆಂದರೆ ಭಾವೈಕ್ಯದ ಸಂಕೇತವೆಂಬಂತೆ ಕರಗದಾರಿಗಳು ಮೊದಲು ಮಸ್ತಾನ್ ಸಾಬ್ ದರ್ಗಾಕ್ಕೆ ತೆರಳಿ, ಅಲ್ಲಿ ಧೂಪಾರತಿ ಸ್ವೀಕರಿಸಿ ನಂತರ ನಗರದ ಪ್ರದಕ್ಷಿಣೆ ಹೊರಡುತ್ತಾರೆ. ಕರಗಧಾರಿಗಳ ಸ್ವಾಗತಕ್ಕೆ ಮನೆಗಳ ಮುಂದೆ ರಂಗೋಲಿ, ತಳಿರು ತೋರಣಗಳಿಂದ ಅಲಂಕೃತಗೊಂಡಿರುತ್ತದೆ. ಕರಗವನ್ನು ಸಾವಿರಾರು ಜನ ರಾತ್ರಿ ಇಡೀ ರಸ್ತೆಯ ಇಕ್ಕೆಲಗಳಲ್ಲಿ ನಿಂತು ನೋಡುತ್ತಾರೆ.