ಹುಡುಗನೊಬ್ಬ ಮಾರಮ್ಮನ ಮೂರ್ತಿಗೆ ತಾಳಿಕಟ್ಟಿ ಮದುವೆ ಮಾಡಿಕೊಳ್ಳುವುದು. ಪ್ರತಿವರ್ಷ ಮೇ ತಿಂಗಳಲ್ಲಿ ಬರುವ ಜಾತ್ರೆಯಂದು ಮಂಗಳವಾರ ವಿಶಿಷ್ಟವು, ವಿಚಿತ್ರವಾದ ಮದುವೆ ಮಧ್ಯರಾತ್ರಿ ನಡೆಯುತ್ತದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕಡದಕಟ್ಟೆ ಕಣಿವೆ ಮಾರಮ್ಮನ ಜಾತ್ರೆಯಲ್ಲಿ ಮಾರಮ್ಮನ ಉತ್ಸವಮೂರ್ತಿಗೆ ತಾಳಿ ಕಟ್ಟಿಸಲಾಗುತ್ತದೆ.

ಸೋಮವಾರ ಬೆಳಿಗ್ಗೆ ದೇವಸ್ಥಾನದ ಎದುರು ಧ್ವಜಾರೋಹಣ ಮಾಡಲಾಗುತ್ತದೆ. ಕಡದಕಟ್ಟೆಯಿಂದ ಮೂರು ಕಿ.ಮೀ. ದೂರದಲ್ಲಿರುವ ಹೆಬ್ಬಂಡಿ ಎಂಬ ಊರಿಗೆ ದೇವತೆಯನ್ನು ಪಲ್ಲಕ್ಕಿಯಲ್ಲಿ ಹೊತ್ತೊಯ್ಯುತ್ತಾರೆ. ವಂಶಪಾರಂಪರ್ಯವಾಗಿ ನಿಶ್ಚಿತ ಕುಟುಂಬವೊಂದು ಮಾರಿಯ ತವರಿನವರಾಗಿ, ಮಾರಮ್ಮನನ್ನು ವಧುಶಾಸ್ತ್ರ ಇತ್ಯಾದಿ ಅಲಂಕಾರ ಮಾಡುತ್ತಾರೆ. ನಂತರ ದೇವಿಯ ಅಲಂಕೃತ ಪಲ್ಲಕ್ಕಿಯು ಕಡದಕಟ್ಟೆಗೆ ಮೆರವಣಿಗೆ ಮೂಲಕ ಬರುತ್ತದೆ. ಕಡದಕಟ್ಟೆಯ ಗ್ರಾಮಸ್ಥರು ಹಾಗೂ ವಂಶಪಾರಂಪರ್ಯವಾಗಿ ಮದುವೆಯನ್ನು ನಡೆಸಿಕೊಡುವ ಮನೆಯವರು ಬೀಗರನ್ನು ಎದುರುಗೊಂಡ ಹಾಗೆ ಬರಮಾಡಿಕೊಳ್ಳುತ್ತಾರೆ. ನಂತರ ಹಸೆ, ಬಾಸಿಂಗಶಾಸ್ತ್ರ, ಚಪ್ಪರಪೂಜೆ ಇತ್ಯಾದಿ ಮದುವೆ ಸಂಪ್ರದಾಯಗಳನ್ನು ಮಾಡುತ್ತಾರೆ.

ರಾತ್ರಿ ಸುಮಾರು ಹನ್ನೆರಡು ಗಂಟೆಯ ವೇಳೆಗೆ ಮದುಮಗನ ಹುಡುಕಾಟದ ಶಾಸ್ತ್ರ ನಡೆಸಿ, ಕೋರಿ ಹುಡುಗನನ್ನು ಆಯ್ಕೆ ಮಾಡುತ್ತಾರೆ. ಪೂಜಾರಿಗಳ ಸಮ್ಮುಖದಲ್ಲಿ ಕೋರಿ ಹುಡುಗನು ದೇವತೆ ಕಣಿವೆ ಮಾರಮ್ಮನ ಬೆಳ್ಳಿ ವಿಗ್ರಹಕ್ಕೆ ತಾಳಿ ಕಟ್ಟುತ್ತಾನೆ. ಗಟ್ಟಿಮೇಳದೊಂದಿಗೆ ಅಕ್ಷತೆ ಹಾಕಿ ಮದುವೆ ಶಾಸ್ತ್ರ ಮುಗಿಸುತ್ತಾರೆ. ಹೀಗೆ ದೇವಿಯನ್ನು ಮದುವೆಯಾದ ಹುಡುಗನಿಗೆ, ಮುಂದಿನ ಜಾತ್ರೆಯ ಮೊದಲೇ ಲೌಕಿಕವಾಗಿ ವಿವಾಹವಾಗುತ್ತದೆ. ಕಂಕಣ ಬಲಕ್ಕಾಗಿ ಹರಕೆ ಹೊತ್ತ ಯುವಕ, ಯುವತಿಯರು ದೇವಿಗೆ ಕಾಣಿಕೆಯಾಗಿ ತಾಳಿ ಅರ್ಪಿಸುತ್ತಾರೆ. ಹೀಗೆ ಅರ್ಪಿಸಿದ ತಾಳಿಯನ್ನು ದೇವಿಯ ಕೊರಳಿಗೆ ಕೋರಿ ಹುಡುಗ ಕಟ್ಟುತ್ತಾನೆ. ಜಾತ್ರೆಯ ಸಂದರ್ಭದಲ್ಲಿ, ಮದುವೆಯಾಗಿ ಹೋದ ಹೆಣ್ಣುಮಕ್ಕಳೆಲ್ಲ ಬಂದು ಸೇರಿರುತ್ತಾರೆ.

ಕೋರಿ ಹುಡುಗನೊಂದಿಗೆ ಮಾರಮ್ಮನನ್ನೂ ಊರು ಬೀದಿ ಬೀದಿಗಳಲ್ಲಿ ತೇರಿನ ಮೂಲಕ ಮೆರವಣಿಗೆ ಮಾಡಿ ಭಕ್ತಿ, ಗೌರವ ಸಲ್ಲಿಸುತ್ತಾರೆ. ಮೆರವಣಿಗೆಯಲ್ಲಿ ಕಡದಕಟ್ಟೆ, ಹೆಬ್ಬಂಡಿ ಗ್ರಾಮದವರಲ್ಲದೇ, ಸುತ್ತಲಿನ ಭಂಡಾರಹಳ್ಳಿ, ಕವಲುಗುಂದಿ, ಜೇಡಿಕಟ್ಟೆ, ಶಿವರಾಂ ನಗರ, ಬಿಳರೆ, ಸಿರಿಯೂರು, ವಿಶ್ವೇಶ್ವರ ನಗರ ಮುಂತಾದ ಕಡೆಗಳಿಂದ ಆರು ಸಾವಿರಕ್ಕೂ ಹೆಚ್ಚಿನ ಜನ ಸೇರಿರುತ್ತಾರೆ. ಮದುವೆಯ ಸಾಂಪ್ರದಾಯಿಕ ಆಚರಣೆಗಳೆಲ್ಲ ನಡೆದ ನಂತರ ಮಾಂಗಲ್ಯಧಾರಿ ಮಾರಮ್ಮ ಮತ್ತೆ ಮದುವೆ ಏರ್ಪಡಿಸಿಕೊಟ್ಟ ಯಜಮಾನರ ಮನೆಯಲ್ಲಿ ನೆಲೆಯಾಗುತ್ತಾಳೆ. ಅಲ್ಲಿ ಅತ್ತೆ-ಸೊಸೆ, ಮಾವಂದಿರ ಪೂಜೆ ಇತ್ಯಾದಿ ಶಾಸ್ತ್ರಗಳೆಲ್ಲ ನಡೆಯುತ್ತವೆ.

ಮಾನವರಾದವರು ದೇವತೆಗಳ ಜೊತೆಗೆ ಮದುವೆಯಾಗುವುದನ್ನು ಮಹಾಭಾರತ, ರಾಮಾಯಣ, ಭಾಗವತಗಳಲ್ಲಿ ಕಾಣುತ್ತೇವೆ. ಅದರ ಮುಂದುವರೆದ ಭಾಗವಾಗಿ, ಅದನ್ನೇ ಸಂಕೇತಿಸುವ ಕೋರಿ ಹುಡುಗನ ಮದುವೆಯಲ್ಲಿ ನೋಡಬಹುದು.