ಕೃಷಿಸಂಬಂಧಿ ಆಚರಣೆ. ಮಲೆನಾಡಿನ ಭಾಗಗಳಲ್ಲಿ ಆಚರಣೆಯಲ್ಲಿದೆ. ಭತ್ತದ ನಾಟಿ ಮುಗಿದ ನಂತರ ಊರಿನವರೆಲ್ಲ ಒಂದೆಡೆ ಸೇರಿ, ಹಂದಿಯೊಂದನ್ನು ಬಲಿಕೊಟ್ಟು ಅದರ ರಕ್ತವನ್ನು ಸಂಗ್ರಹಿಸಿ ತಾವು ಮನೆಯಿಂದ ತಂದ ಅನ್ನದೊಂದಿಗೆ ಬೆರೆಸಿ, ಅವರವರ  ಗದ್ದೆ, ತೋಟಗಳಿಗೆ ಎರಚುವ  ಪದ್ಧತಿ. ಬೇರೆ ಬೇರೆ ಪ್ರದೇಶಗಳಲ್ಲಿ ಅಜ್ಜಿ ಹಬ್ಬ, ಕಟ್ಟಜ್ಜಿ, ಕಣಬ್ಬ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಹಬ್ಬದ ದಿವಸ ಮನೆಮಾರು ಸಾರಿಸಿ, ಗ್ರಾಮದೇವತೆಯನ್ನು ಪೂಜಿಸುತ್ತಾರೆ. ಅಂದು ‘ಸಿಳ್ಳಂಗಿ’ ಒಂದು ಜಾತಿಯ ಗಿಡದ ಟೊಂಗೆ, ಮಡಕೆ ಹಾಗೂ ಹುಲ್ಲಿನ (ಸಿಕ್ಕ) ನೆಲವು ಜೊತೆ ಸೇರಿಸಿ, ಮಡಕೆಯಲ್ಲಿ ಹಾಲು, ಮೊಸರು ಬುತ್ತಿ ಇಟ್ಟು ತಮ್ಮ ತಮ್ಮ ಜಮೀನುಗಳನ್ನು ಸುತ್ತಿಸಿ, ಹೊಲದ ಮಧ್ಯದಲ್ಲಿ ನೆಟ್ಟು ಬರುತ್ತಾರೆ. ಒಂದು ವಾರದ ನಂತರ ಬರುವ ಮಂಗಳವಾರ ಅಥವಾ ಶುಕ್ರವಾರ ಹಂದಿ, ಕುರಿ ಅಥವಾ ಕೋಳಿಗಳನ್ನಾಗಲೀ ಜಮೀನಿನ ಸುತ್ತ ಸುತ್ತಿಸಿ, ಸಿಕ್ಕ ಇಟ್ಟ ಸ್ಥಳಕ್ಕೆ ತರುತ್ತಾರೆ. ಇದು ಊರೊಟ್ಟಿನ ಆಚರಣೆಯಾದರೆ ಒಂದು ನಿರ್ದಿಷ್ಟ ಸ್ಥಳವನ್ನು ಗೊತ್ತು ಮಾಡಿರುತ್ತಾರೆ. ಸಿಕ್ಕವನ್ನು ಅರಿಶಿಣ ಕುಂಕುಮ ಹಚ್ಚಿ ಪೂಜೆ ಮಾಡಿ, ಹಂದಿಯನ್ನು ಮೂಡಣ ದಿಕ್ಕಿಗೆ ಮುಖ ಮಾಡಿ ನಿಲ್ಲಿಸಿ, ತಲೆಯ ಮೇಲೆ ನೀರು ಹಾಕಿ, ಒಂದೇ ಏಟಿಗೆ ಕತ್ತರಿಸುತ್ತಾನೆ. ಕತ್ತರಿಸಿದ ತಲೆಯನ್ನಿಟ್ಟು ಅದರ ಬಾಯಿಗೆ ನೀರು ಹಾಕಿ, ಹೂವನ್ನಿಟ್ಟು ನೈವೇದ್ಯ ಮಾಡುತ್ತಾನೆ. ಅಲ್ಲಿಯೇ ಮಾಂಸದ ಅಡುಗೆ ಮಾಡಿ, ಎಡೆ ಇಟ್ಟು ಪೂಜಿಸಿ, ಊಟ ಮಾಡುತ್ತಾರೆ.  ಈಚಿನ ದಿನಗಳಲ್ಲಿ ಮನೆಯಿಂದಲೇ ಎಡೆಗೆ ಬೇಕಾದ ಅಡುಗೆಯನ್ನು ತರುವ ಪದ್ಧತಿ ಇದೆ. ಎಡೆ ಅರ್ಪಿಸಿದ ವೇಳೆ ನೋಡಬಾರದೆಂಬ ನಿಷೇಧವಿದೆ. ಈ ಕಾರಣದಿಂದ ಎಲ್ಲರೂ ಸ್ವಲ್ಪ ಹೊತ್ತು ತಿರುಗಿ ನಿಲ್ಲುತ್ತಾರೆ. ನಂತರ ಎಡೆಯನ್ನು, ಸಿಕ್ಕವನ್ನು ಕೈಯಲ್ಲಿ ಹಿಡಿದು ಹಲಿಯೋ, ಹೆಚ್ಚಲಿ, ಹಲಿಯೋ, ಹೆಚ್ಚಲಿ ಎಂದು ಕಾಕು ಹಾಕುತ್ತಾ ಅವರ ಗದ್ದೆಯ ಗಡಿಯಿಂದ ಆಚೆ ಇರುವ ಹುತ್ತದ ಬಳಿ ತಂದು ಇಡುತ್ತಾರೆ. ಆ ಎಡೆಯನ್ನು ಯಾರು ತಿನ್ನುವಂತಿಲ್ಲ. ಆ ಬಳಿಕ ತಮ್ಮ ಬೆಳೆಗೆ ಬಂದ ರೋಗ ಕಳೆಯಿತೆಂದು ಭಾವಿಸುತ್ತಾರೆ.

ಬೆಳಗಿನ ಹೊತ್ತು ಆಚರಿಸುವ ಈ ಹಬ್ಬವನ್ನು ಬಯಲು ಸೀಮೆಯ ರೈತರು ಹುಣ್ಣಿಮೆ ರಾತ್ರಿಯ ವೇಳೆ ಆಚರಿಸುತ್ತಾರೆ. ‘ಕಣಬ್ಬ’ ಎಂದು ಕರೆಯುವ ಈ ಹಬ್ಬದಲ್ಲಿ  ರಾತ್ರಿಯೆಲ್ಲ ಮನರಂಜನೆ ಇರುತ್ತದೆ. ಹಬ್ಬದ ದಿನ ಮೂರು ಕವಲಿರುವ ಕಾರೆ ಮುಳ್ಳಿನ ಹರೆಯನ್ನು  ತಂದು, ಉತ್ರಾಣಿಕಡ್ಡಿ, ಎಕ್ಕೆ ಹೂ, ಕಣಗಲ ಹೂ, ಕರಿಕದಳ, ಮಲ್ಲಿಗೆ ಹೂ, ಮಾವಿನ ಸೊಪ್ಪು, ಬಿಲ್ಪತ್ರೆ, ಬನ್ನಿ ಪತ್ರೆ, ತುಂಬೆ ಹೂಗಳನ್ನೆಲ್ಲ ಮುಡಿಸಿ, ಅಲಂಕರಿಸುತ್ತಾರೆ. ಹಬ್ಬಕ್ಕೆ ಒಂಬತ್ತು ದಿನ ಮೊದಲೇ ಮಣ್ಣು ಮತ್ತು ಗೊಬ್ಬರ ತುಂಬಿದ ತೆಂಗಿನ ಚಿಪ್ಪಿನೊಳಗೆ ರಾಗಿ, ಜೋಳ, ಸೀಮೆಭತ್ತಗಳನ್ನು ಬೆರೆಸಿ ಹಾಕುತ್ತಾರೆ. ದಿನವೂ ನೀರು ಹಾಕಿ ಆರೈಕೆ ಮಾಡುತ್ತಾರೆ. ಒಮ್ಮೆ ಬೆಳೆದ ಸಸಿ, ಹಬ್ಬ ಮುಗಿಯುವ ಮೊದಲೇ ನಾಶವಾದರೆ, ಯಾವ ಬೆಳೆಯು ಕೈ ಸೇರಲಾರದು ಎಂದು ನಂಬುತ್ತಾರೆ. ಇಲ್ಲಿ ಅವರೆ, ಹುರುಳಿ ಬೀಜಗಳನ್ನು ಬಿತ್ತುವುದಿಲ್ಲ. ಅವು ಅಡ್ಡಲಾಗಿ ಬೆಳೆಯುವುದರಿಂದ ತಮ್ಮ ಬದುಕಿನ ದಾರಿಯ ಬೇರೆಡೆಗೆ ಹೋಗಿ ನಾಶಕ್ಕೆ ಎಡೆ ಮಾಡಿಕೊಡುತ್ತದೆಂದು ಹೇಳುತ್ತಾರೆ.

ಚೆನ್ನಾಗಿ ಬೆಳೆದ ಧಾನ್ಯಗಳ ಚಿಪ್ಪನ್ನು ಕೈಯಲ್ಲಿ ಹಿಡಿದು, ಎಡೆಗೆ ಸಿದ್ಧಪಡಿಸಿದ ಅಡುಗೆಯನ್ನು ಹೊತ್ತು, ಮೊದಲೇ ಸಾರಿಸಿ, ಸಿದ್ಧಪಡಿಸಿಟ್ಟ ಸ್ಥಳಕ್ಕೆ ಬರುತ್ತಾರೆ. ಗಂಡಸರು ಕೊಡದಲ್ಲಿ ನೀರು ಹೊತ್ತು ಹೆಣ್ಣುಮಕ್ಕಳೊಂದಿಗೆ ಬರುತ್ತಾರೆ. ಅಲ್ಲಿ ಸಪ್ಪೆದಂಟಿನ ಮೂರು ಸಿವುಡು, ರೈತಾಪಿ ಬದುಕಿನ ವಸ್ತುಗಳನ್ನು ಓರಣವಾಗಿ ಜೋಡಿಸಿ, ಹಣತೆ ಹಚ್ಚಿ, ಗೇರು ಹಣ್ಣಿನ ಬೆನಕನಿರಿಸಿ, ಶೃಂಗರಿಸಿದ  ಕಾರೆಕಂಟಿ ಇಟ್ಟು ಪೂಜಿಸುತ್ತಾರೆ. ಈರುಳ್ಳಿ ಮುದ್ದೆ, ಕಾಯಿಹಾಲು ಹಾಕಿ ಎಡೆ ಅರ್ಪಿಸುತ್ತಾರೆ. ಮೂರು ಬಾರಿ ಕಾರೆಕಂಟಿಯ ಮೇಲೆ ಹಾಲು ತುಪ್ಪ ಬಿಡುತ್ತಾ ‘ಹೆಚ್ಚಿಸವ್ವ ಭೂಮಿತಾಯಿ, ಹೆಚ್ಚಿಸವ್ವ ಭೂಮಿತಾಯಿ’ ಎಂದು ಹೇಳುತ್ತಾರೆ. ನಂತರ ಎಲ್ಲರೂ ಕುಳಿತು ಬೆಳಂದಿಂಗಳ ಬೆಳಕಿನಲ್ಲಿ ಊಟ ಮಾಡುತ್ತಾರೆ. ಹೀಗೆ ಮನೆ ಮನೆಯವರು ಊಟ ಮುಗಿಸಿ ಊರಿನ ಬಯಲಿಗೆ ಬಂದು ಸೇರುತ್ತಾರೆ.

ಆ ರಾತ್ರಿ ಹತ್ತರಿಂದ ಬೆಳಗಿನವರೆಗೆ ಕೋಲಾಟ, ಡೋಲು, ಭಜನೆ ಮುಂತಾದ ಮನರಂಜನೆ ನಡೆಯುತ್ತವೆ. ಈ ಹಬ್ಬವನ್ನು ಮತ್ತೊಂದು ರೀತಿಯಲ್ಲಿಯೂ ಆಚರಣೆ ಮಾಡುವುದನ್ನು ಕಾಣಬಹುದು. ನಾಟಿಯಾದ ಎರಡು ತಿಂಗಳಾದ ಮೇಲೆ ಮನೆಯ ಹಿರಿಯ ಹೊಳೆಯಲ್ಲಿ ಬೆಳಗಿನ ಜಾವ ಯಾರೂ ಕಾಣದಂತೆ ಸ್ನಾನಮಾಡಿ, ಬರಿ ಮೈಯಲ್ಲಿ ಹೊನ್ನೆ ಗೂಟಗಳನ್ನು ಹಿಡಿದು ಜಮೀನಿನ ಕಡೆಗೆ ಹೋಗುತ್ತಾನೆ. ಹೊನ್ನೆಗೂಟಗಳನ್ನು ತನ್ನ ಜಮೀನಿನಲ್ಲಿ ಅಲ್ಲಲ್ಲಿ ನೆಟ್ಟು ಬರುತ್ತಾನೆ. ಇದನ್ನು ‘ಮುಷ್ಠ’ ಮಾಡುವುದೆಂದು ಹೇಳುತ್ತಾರೆ. ಇದು ಮಲೆನಾಡಿನ ಭಾಗದಲ್ಲಿ ಆಚರಣೆಗೊಳ್ಳುವ ‘ಮಗೆ ಮುಂಡುಗ’ವನ್ನು ಹೋಲುತ್ತದೆ. ಯಾರ ಕಣ್ಣಿಗೂ ಬೀಳಬಾರದೆಂದು ಕಂಬಳಿಕೊಪ್ಪೆಯನ್ನು ಹಾಕಿಕೊಳ್ಳುತ್ತಾರೆ. ಆ ದಿನ ಎಡೆಗಾಗಿ ಹುಣಿಸೆ ತಂಬಳೆ ಸಾರು, ಅನ್ನ, ಕಿಚಿಡಿ, ಕಾಯಾಲು, ಬಾಳೆಹಣ್ಣು, ಹಲಸಿನಕಾಯಿನ ಪಲ್ಯ, ಬಾಳೆದಿಂಡಿನ ಪಚ್ಚಿಡಿ ಇತ್ಯಾದಿಗಳನ್ನು ಮಾಡುತ್ತಾರೆ. ತಾವು ನಡೆದುಕೊಳ್ಳುವ ಎಲ್ಲ ದೇವರುಗಳಿಗೂ ಎಡೆ ಅರ್ಪಿಸಿ ಪೂಜಿಸುತ್ತಾರೆ. ನಂತರ ಎಲ್ಲರೂ ಹಬ್ಬದೂಟವನ್ನು ಸವಿಯುತ್ತಾರೆ.