ಕಾಳಮ್ಮ ಕಂಪ್ಲಿ ಮೀನುಗಾರರ ದೈವ, ಮೀನುಗಾರರು ದೇವಿಗೆ ಹರಕೆ ಸಲ್ಲಿಸುವ ಆಚರಣೆ ವಿಚಿತ್ರ. ಕೆಲ ಭಕ್ತರು ಬೆನ್ನಿಗೆ ಕಬ್ಬಿಣದ ಹುಕ್ಕುಗಳನ್ನು ಸಿಕ್ಕಿಸಿಕೊಂಡು ಕಾರನ್ನು ಎಳೆಯುತ್ತಾರೆ. ಮತ್ತೆ ಕೆಲವರು ಆಟೋ, ಇನ್ನೊಬ್ಬರು ಚಿಕ್ಕ ರಥವನ್ನು ಎಳೆಯುತ್ತಾರೆ. ಹೆಣ್ಣುಮಕ್ಕಳು ಕೆನ್ನೆಗೆ ಮಾರುದ್ದದ ಶಸ್ತ್ರ ಹಾಕಿಕೊಂಡು ಹರಕೆಯನ್ನು ತೀರಿಸುತ್ತಾರೆ. ಕೋಟೆ ಆಂಜನೇಯ ದೇವಸ್ಥಾನದಿಂದ ಸುಂಕಲಮ್ಮ ಗುಡಿಯವರೆಗೂ ಭಕ್ತರು ಮೆರವಣಿಗೆಯಲ್ಲಿ ಹಲವು ಬಗೆಯ ಹರಕೆಗಳನ್ನು ದೇವಿಗೆ ಸಲ್ಲಿಸುತ್ತಾರೆ. ಮೆರವಣಿಗೆಯಲ್ಲಿ ಮೀನುಗಾರರ ಕುಟುಂಬದವರು ಹರಕೆ ತೀರಿಸುವರು. ಕರಗ ಹಾಗೂ ವಿವಿಧ ಬಗೆಯ ಮಂಗಳವಾದ್ಯಮೇಳಗಳು ಇರುತ್ತವೆ. ವಿಶೇಷವಾಗಿ ಕಳಸ, ಕನ್ನಡಿ ಹಿಡಿದ ಮಹಿಳೆಯರು ಜನರ ಗಮನವನ್ನು ಸೆಳೆಯುತ್ತಾರೆ. ಈ ಉತ್ಸವ ಪ್ರತಿ ವರ್ಷ ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ಅವಧಿಯಲ್ಲಿ ಜರುಗುತ್ತದೆ.