ಹರಕೆ ಹೊತ್ತವರು ತಮ್ಮ ದನಕರು, ಕೋಣಗಳನ್ನು ಕೆಸರು ಗದ್ದೆಯಲ್ಲಿ ಓಡಿಸುವುದು ಕೋರಿ ಹರಕೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡದ ಗ್ರಾಮದೇವತೆ ವೈದ್ಯನಾಥೇಶ್ವರ. ಈ ದೇವಾಲಯದ ಪಕ್ಕದಲ್ಲಿ ವಿಷ್ಣುಮೂರ್ತಿ ಗುಡಿ ಇದ್ದು ಅದರ ಪಕ್ಕದಲ್ಲಿ ಕಲ್ಯಾಣಿಯೂ ಇದೆ. ಹರಿಹರರು ಹಾಗೂ ಮಧ್ವಾಚಾರ್ಯರೂ ಇಲ್ಲಿ ನೆಲೆಸಿದ್ದರು ಎಂಬ ಪ್ರತೀತಿ ಇದೆ. ದೇಗುಲದಿಂದ ಉತ್ತರಕ್ಕೆ ಸ್ವಲ್ಪ ದೂರದಲ್ಲಿ ದೇವರ ಆಸ್ತಿಯದ ಸುಮಾರು ಮೂರೆಕರೆ ವಿಸ್ತೀರ್ಣವಿರುವ ಗದ್ದೆಯಲ್ಲಿ ಪ್ರತಿವರ್ಷ  ಧನುಸಂಕ್ರಮಣದ ಮರುದಿನ ಕೋರಿ ಜಾತ್ರೆಯ ಹರಕೆ ನಡೆಯುತ್ತದೆ. ದೇವರು-ದೈವಗಳ ಭಕ್ತಿ ನಂಬಿಕೆಯಿಂದಲೇ ಈ ಜಾತ್ರೆಗೆ ಜಾತಿ-ಮತ ಭೇದವಿಲ್ಲದೇ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ.

ಹರಕೆ ಒಪ್ಪಿಸುವುದಕ್ಕಾಗಿ ದೇವಾಲಯದ ಗದ್ದೆಯನ್ನು ಉಳುಮೆ ಮಾಡಿ, ಹದಗೊಳಿಸಿ, ಮಟ್ಟ ಮಾಡಲಾಗುತ್ತದೆ. ಕೆಸರು ತುಂಬಿದ ಗದ್ದೆಯಲ್ಲಿ ಹರಕೆ ಹೊತ್ತ ರೈತಾಪಿ ಜನ ತಮ್ಮ ದನಕರು, ಎತ್ತು, ಎಮ್ಮೆ, ಕೋಣಗಳನ್ನು ಓಡಿಸಿ ಹರಕೆ ತೀರಿಸುತ್ತಾರೆ. ದನಕರುಗಳಿಗೆ ಕಾಯಿಲೆ-ಕಸಾಲೆ ಬಂದಾಗ ಕೊಕ್ಕಡ ಕೋರಿ ಗದ್ದೆಗೆ ಹರಕೆ ಹೇಳಿಕೊಳ್ಳುವುದು ವಾಡಿಕೆ. ತಮ್ಮ ಬಯಕೆ ಈಡೇರಿದ್ದಲ್ಲಿ ಸ್ವತಃ ಎತ್ತನ್ನೋ ಕೋಣವನ್ನೋ ಕೋರಿಗದ್ದೆಗೆ ಇಳಿಸುತ್ತೇನೆಂದೋ ಅಥವಾ ಗದ್ದೆಗೆ ಹಿಡಿ ಹಸಿರು ಸೊಪ್ಪನ್ನು ಹಾಕುವೆನೆಂದೋ ಬೇಡಿಕೊಳ್ಳುತ್ತಾರೆ. ಅಲ್ಲದೆ ಮನುಷ್ಯಸಂಬಂಧಿ ಕಾಯಿಲೆಗಳ ನಿವಾರಣೆಗಾಗಿ ಹರಕೆ ಹೇಳಿಕೊಳ್ಳುವುದುಂಟು. ಚರ್ಮ ರೋಗ, ತಲೆಸಿಡಿತ ಇತ್ಯಾದಿಗಳು ವಾಸಿಯಾಗುತ್ತವೆಂದು ಹೇಳುತ್ತಾರೆ. ಹರಕೆ ಹೊತ್ತವರು ತಲೆಯ ಮೇಲೆ ಹಿಡಿಸೊಪ್ಪನ್ನು ಹೊತ್ತು ಕೋರಿಗದ್ದೆಗೆ ಹಾಕಿ ಹರಕೆ ತೀರಿಸುತ್ತಾರೆ. ಭೂತ ಕಟ್ಟಿಕೊಂಡ ಕೊರಗರು ‘ತೆಂಬರೆ’ ಬಡಿಯುತ್ತಾ ಊರೂರು ಸುತ್ತಿ, ಕೋರಿ ಜಾತ್ರೆ ದಿನವನ್ನು ಮನೆ ಮನೆಗೂ ತಿಳಿಸುತ್ತಾರೆ. ಪ್ರತಿ ಮನೆ ಮುಂದೆ ನೃತ್ಯ ಮಾಡಿದ ಕೊರಗರಿಗೆ ಅಕ್ಕಿ, ತೆಂಗಿನಕಾಯಿ, ಎಣ್ಣೆ, ದುಡ್ಡು ಕೊಟ್ಟು ಕಳುಹಿಸುತ್ತಾರೆ.

ಅಂದು ಹರಕೆಯ ಗದ್ದೆಯು ಹರಕೆ ಜಾನುವಾರುಗಳಿಂದ ತುಂಬಿರುತ್ತದೆ. ದೈವಕ್ಕೆ ವಿಶೇಷ ಪೂಜಾ, ವಿಧಿಗಳು ಹಾಗೂ ಭೂತ ನೇಮದೊಂದಿಗೆ ಕೋರಿ ಜಾತ್ರೆ ಆರಂಭವಾಗುತ್ತದೆ. ಹರಕೆ ತೀರಿಸಲು ಬಂದ ರಾಸುಗಳನ್ನು ಗ್ರಾಮದೇವರ ದರ್ಶನ ಮಾಡಿಸಿ ಹರಕೆ ಗದ್ದೆಗಳಿಗಿಳಿಸಿ, ಚಡಿ ಏಟು ಹಾಕುತ್ತಾ ಓಡಿಸುತ್ತಾರೆ. ಸಂಜೆ ದೇವರ ಉತ್ಸವವು ವಿಶೇಷ ನಡಿಗೆಯಲ್ಲಿ  ಹರಕೆ ಗದ್ದೆಯ ಬಳಿ ಬಂದು ‘ಪೂಕರೆ’ ನಿಲ್ಲಿಸುವುದರೊಂದಿಗೆ ಜಾತ್ರೆ ಮುಗಿಯುತ್ತದೆ.